ಮಂಗಳೂರು: ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ಇಂದು ಪ್ರಕಟಗೊಂಡಿದ್ದು, ದಕ್ಷಿಣ ಕನ್ನಡ ಹಾಗೂ ಕರಾವಳಿ ಭಾಗದಲ್ಲಿ ಬಿಜೆಪಿ ತನ್ನ ಕೋಟೆಯನ್ನು ಮತ್ತಷ್ಟು ಭದ್ರ ಮಾಡಿಕೊಂಡಿದ್ದು, ಕಾಂಗ್ರೆಸ್ ಅಕ್ಷರಶಃ ಅಡ್ಡಡ್ಡ ಮಲಗಿದೆ.
ಉಡುಪಿ ನಗರಸಭೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದು, ಕಾಂಗ್ರೆಸ್ ನಿಂದ ಅಧಿಕಾರವನ್ನು ಕಸಿದುಕೊಂಡಿದೆ. ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಗೆ ಭಾರೀ ಮುಖಭಂಗವಾಗಿದ್ದು, ಸ್ವತಃ ಅವರ ವಾರ್ಡ್ ನಲ್ಲೂ ಬಿಜೆಪಿ ಗೆಲುವು ಸಾಧಿಸಿದೆ.
ನಗರಸಭಾ ಮಾಜಿ ಅಧ್ಯಕ್ಷೆ ಮೀನಾಕ್ಷಿ ಬನ್ನಂಜೆಗೆ ಸೋಲಾಗಿದ್ದರೆ, ಈ ನಗರ ಸಭೆಯಲ್ಲಿ ಬಿಜೆಪಿ 31 ಮತ್ತು ಕಾಂಗ್ರೆಸ್ 4 ಸ್ಥಾನಗಳನ್ನು ಮಾತ್ರ ಗಳಿಸಿದೆ. ಸಾಲಿಗ್ರಾಮ ಪಟ್ಟಣ ಪಂಚಾಯತ್ ನಲ್ಲಿ ಬಿಜೆಪಿ 10, ಕಾಂಗ್ರೆಸ್ 5 ಹಾಗೂ ಪಕ್ಷೇತರ 1 ಸ್ಥಾನವನ್ನು ಗಳಿಸಿದೆ.
ಕಳೆದ ಮೂರು ದಶಕಗಳಲ್ಲಿ ಇದೇ ಮೊದಲ ಬಾರಿಗೆ ಕಾಂಗ್ರೆಸ್ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಹುಮತ ಸಾಬೀತು ಪಡಿಸಲು ವಿಫಲವಾಗಿದೆ. ಸಚಿವ ಯು.ಟಿ. ಖಾದರ್ ಅವರಿಗೆ ಇದು ಆಘಾತ ತಂದಿದ್ದು, ಅವರ ಕೆಲವೊಬ್ಬ ಆಪ್ತರು ಜಯ ಸಾಧಿಸುವಲ್ಲಿ ವಿಫಲರಾಗಿದ್ದಾರೆ. 1 ವಾರ್ಡ್ ಗಳಲ್ಲಿ ಬಿಜೆಪಿ 6, ಕಾಂಗ್ರೆಸ್ 13, ಜೆಡಿಎಸ್ 4 ಹಾಗೂ ಪಕ್ಷೇತರರು 8 ವಾರ್ಡ್ ಗಳಲ್ಲಿ ಜಯಗಳಿಸಿದ್ದಾರೆ.
ಇನ್ನು 31 ವಾರ್ಡ್‌ಗಳು ಇರುವ ಪುತ್ತೂರು ನಗರ ಸಭೆಯಲ್ಲಿ ಬಿಜೆಪಿ 25 ಸ್ಥಾನಗಳನ್ನು ಬಾಚಿಕೊಂಡಿದ್ದರೆ, ಓರ್ವ ಪಕ್ಷೇತರ ಅಭ್ಯರ್ಥಿ ಮಾತ್ರ ಜಯ ಸಾಧಿಸಿದ್ದಾರೆ.
ಇನ್ನು ಬಂಟ್ವಾಳ ಪುರಸಭೆ ಫಲಿತಾಂಶ ನೋಡುವುದಾದರೆ, ಮಾಜಿ ಸಚಿವ ರಮಾನಾಥ ರೈ ಹಾಗೂ ಹಾಲಿ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರ ಜಿದ್ದಾಜಿದ್ದಿನ ಬಂಟ್ವಾಳ ಕ್ಷೇತ್ರದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಫಲಿತಾಂಶ ಹೊರಬಿದ್ದಿದ್ದು, ಕಾಂಗ್ರೆಸ್, ಬಿಜೆಪಿ ಸ್ಪಷ್ಪ ವ್ಯಾಜಿಕ್ ಸಂಖ್ಯೆ ಪಡೆದಿಲ್ಲ. 27 ವಾರ್ಡ್ ಗಳ ಬಂಟ್ವಾಳ ಪುರಸಭೆಯಲ್ಲಿ ಬಿಜೆಪಿ 11, ಕಾಂಗ್ರೆಸ್ 12, ಎಸ್ ಡಿಪಿಐ 4 ವಾರ್ಡ್ ಗಳಲ್ಲಿ ಗೆಲುವು ಸಾಧಿಸಿದೆ.
Discussion about this post