ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಗೌರಿಬಿದನೂರು: ತಾಲೂಕಿನ ಧಾರ್ಮಿಕ ಕ್ಷೇತ್ರವಾದ ಮುದುಗಾನಕುಂಟೆಯ ಶ್ರೀಗಂಗಾ ಭಾಗೀರಥಿ ದೇವಾಲಯವು ಕೊರೋನಾ ವೈರಸ್ ಸೋಂಕಿನ ಭೀತಿಯಿಂದ ಇದೇ ಮೊದಲ ಬಾರಿಗೆ ಸೋಮವಾರ ಭಕ್ತಾಧಿಗಳಿಗೆ ನಿಷೇಧ ಹೇರಿ ತಾತ್ಕಾಲಿಕವಾಗಿ ತಾಲೂಕು ಆಡಳಿತವು ದಿಘ್ಬಂಧನ ವಿಧಿಸಿತ್ತು.
ಪ್ರತೀ ಸೋಮವಾರ ತಾಲೂಕು, ಜಿಲ್ಲೆ ಹಾಗೂ ರಾಜ್ಯದ ವಿವಿದೆಢೆಗಳಿಂದ ಭಕ್ತಾದಿಗಳು ಈ ಪುಣ್ಯ ಕ್ಷೇತ್ರಕ್ಕೆ ಆಗಮಿಸಿ ಮಹಿಳೆಯರು ಮಡಿಸ್ನಾನ ಮಾಡಿ ವಿಶೇಷ ಗಂಗೆ ಪೂಜೆ ನೆರವೇರಿಸಿ ತಮ್ಮ ಹರಕೆಗಳನ್ನು ಸಲ್ಲಿಸಿ, ಇಷ್ಟಾರ್ಥಗಳನ್ನು ದೇವರಲ್ಲಿ ನೆನೆದು ಪ್ರಸಾದ ಸ್ವೀಕರಿಸಿ ಬರುತ್ತಿದ್ದರು. ಇದು ಅನಾದಿಕಾಲದಿಂದಲೂ ನಿರಂತರವಾಗಿ ನಡೆದುಕೊಂಡು ಬರುತ್ತಿದೆ. ಆದರೆ ದೇಶದೆಲ್ಲೆಡೆ ವ್ಯಾಪಕವಾಗಿ ಹರಡುತ್ತಿರುವ ಕೊರೊನಾ ವೈರಸ್ ಸೋಂಕಿನ ಭೀತಿಯಿಂದ ಈಗಾಗಲೇ ರಾಜ್ಯ ಸರ್ಕಾರ ನೀಡಿರುವ ಆದೇಶದ ಮೇರೆಗೆ ಯಾವುದೇ ಜನದಟ್ಟಣಿ ಪ್ರದೇಶಗಳನ್ನು ಹಾಗೂ ದತ್ತಿ ದೇವಾಲಯಗಳನ್ನು ನಿರ್ಬಂಧಿಸಲಾಗಿದೆ. ಇದರಂತೆ ಜಿಲ್ಲಾಧಿಕಾರಿಗಳ ಆದೇಶದಂತೆ ತಹಸೀಲ್ದಾರ್ ಎಂ. ರಾಜಣ್ಣ ನವರು ತಮ್ಮ ಕಂದಾಯ ಇಲಾಖೆಯ ಅಧಿಕಾರಿಗಳ ಸಹಾಯದಿಂದ ಶ್ರೀಗಂಗಾಭಾಗೀರಥಿ ದೇವಾಲಯದ ಆವರಣಕ್ಕೆ ಯಾರೂ ಪ್ರವೇಶಿಸದಂತೆ ಎಚ್ಚರಿಕೆ ವಹಿಸಿದ್ದರು.
ಪ್ರತೀ ಸೋಮವಾರ ಕ್ಷೇತ್ರದಲ್ಲಿ 6-8 ಸಾವಿರ ಮಂದಿ ಭಕ್ತಾದಿಗಳು ಸೇರುತ್ತಾರೆ. ಇವರಿಂದ ಸಂಗ್ರಹವಾಗುವ ಕಾಣಿಕೆ ಹುಂಡಿ, ಪೂಜಾ ವಿಧಾನದ ರಸೀದಿ ಹಣ, ವಾಹನ ನಿಲ್ದಾಣದ ಸುಂಕ ಸೇರಿದಂತೆ ಇನ್ನಿತರ ಮೂಲಗಳಿಂದ ಕನಿಷ್ಟ 80-90 ಸಾವಿರ ರೂ.ಗಳ ಹಣ ಸಂಗ್ರಹವಾಗಿ ಧಾರ್ಮಿಕ ದತ್ತಿ ಇಲಾಖೆಗೆ ಸೇರುತ್ತಿತ್ತು. ಆದರೆ ಈ ವಾರ ಕ್ಷೇತ್ರದಲ್ಲಿ ನಿರ್ಬಂಧ ಹೇರಿರುವ ಕಾರಣ ಇಷ್ಟೂ ಹಣ ಇಲಾಖೆಗೆ ನಷ್ಟವಾಗಿದೆ ಎಂಬುವುದು ಇಲ್ಲಿನ ಪಾರುಪತ್ತೆದಾರರ ಮಾತಾಗಿದೆ. ಆದರೂ ಕೂಡ ಇಲಾಖೆಯ ಆದೇಶಗಳಿಗೆ ತಲೆ ಬಾಗಲೇಬೇಕು, ಜೊತೆಗೆ ಸಾರ್ವಜನಿಕರು ಹಾಗೂ ಭಕ್ತಾದಿಗಳ ಹಿದೃಷ್ಟಿಯಿಂದ ಮೇಲಿನ ಅಧಿಕಾರಿಗಳು ನೀಡಿರುವ ಆದೇಶವನ್ನು ಪಾಲಿಸಬೇಕಾಗಿರುವುದು ನಮ್ಮೆಲ್ಲರ ಕರ್ತ್ಯವಾಗಿದೆ ಎನ್ನುತ್ತಾರೆ ಇಲ್ಲಿನ ವ್ಯವಸ್ಥಾಪಕರು.
ಈ ಕ್ಷೇತ್ರದ ಮಹಾತ್ಮೆ ಇಡೀ ರಾಜ್ಯದ ಉದ್ದಗಲಕ್ಕೂ ಪಸರಿಸಿದೆ. ಇದರಿಂದ ಪ್ರತೀ ಸೋಮವಾರ ಬೆಳಗಿನ ಜಾವ 3 ಗಂಟೆಯಿಂದಲೇ ಭಕ್ತಾದಿಗಳು ಆಗಮಿಸಿ ಪ್ರಾತಃಕಾಲದಲ್ಲಿ ಮಡಿಸ್ನಾನ ಹಾಗೂ ಪೂಜಾ ಕೈಂಕಾರ್ಯಗಳನ್ನು ಆರಂಭವಾಗಿ ಸಂಜೆ 5 ಗಂಟೆಯವರೆಗೆ ನಡೆಯುತ್ತಿದ್ದವು. ಆದರೆ ಈ ಸೋಮವಾರ ಮಾತ್ರ ಇಡೀ ಕ್ಷೇತ್ರ ಅಕ್ಷರಶಃ ಮೌನವಾಗಿತ್ತು. ಸ್ಥಳೀಯರು ಮತ್ತು ಭಕ್ತಾಧಿಗಳು ಅಧಿಕಾರಿಗಳ ಮನವಿಗೆ ಸ್ಪಂದಿಸಿ ದೇವರ ದರ್ಶನಕ್ಕೆ ಬಂದಿದ್ದವರು ಪುನಃ ವಾಪಸ್ಸಾಗಿದ್ದಾರೆ.
ಎಲ್ಲೆಡೆ ಕೊರೊನಾ ವೈರಸ್ ಹರಡುವ ಭೀತಿ ಇರುವ ಕಾರಣ ಜನದಟ್ಟಣೆಯನ್ನು ತಪ್ಪಿಸಲು ಈ ಬಾರಿ ಮುದುಗಾನಕುಂಟೆಯಲ್ಲಿ ಸೋಮವಾರದ ಶ್ರೀಗಂಗಾಭಾಗೀರಥಿ ದೇವಾಲಯದ ಪ್ರವೇಶವನ್ನು ಸಂಪೂರ್ಣವಾಗಿ ನಿಷೇದಿಸಲಾಗಿತ್ತು. ನಾಗರಿಕರು ಮತ್ತು ಭಕ್ತಾಧಿಗಳು ಉತ್ತಮ ರೀತಿಯಲ್ಲಿ ಇಲಾಖೆಯ ಅಧಿಕಾರಿಗಳಿಗೆ ಸಹಕಾರ ನೀಡಿರುವುದು ನಿಜಕ್ಕೂ ಸಂತಸದ ವಿಚಾರವಾಗಿದೆ. ಸಾಧ್ಯವಾದಷ್ಟು ಹೆಚ್ಚಿನ ಜನಜಂಗುಳಿ ಇರುವ ಪ್ರದೇಶಗಳಲ್ಲಿ ಸಂಪರ್ಕ ಹೊಂದದೆ ಕೊರೊನಾ ಬಗ್ಗೆ ಜಾಗೃತಿ ವಹಿಸುವುದು ಸೂಕ್ತವಾಗಿದೆ. ಇದಕ್ಕಾಗಿ ತಾಲೂಕು ಆಡಳಿತ ಎಲ್ಲಾ ರೀತಿಯಲ್ಲಿ ಸಿದ್ಧತೆಗಳನ್ನು ಮಾಡಿಕೊಂಡು ಸನ್ನದ್ಧವಾಗಿದೆ. ಜಿಲ್ಲಾಧಿಕಾರಿಗಳ ಮುಂದಿನ ಆದೇಶದ ಮೇರೆಗೆ ಮುಂಬರುವ ಸೋಮವಾರ ಕ್ಷೇತ್ರದ ಪ್ರವೇಶವನ್ನು ತೀರ್ಮಾನಿಸಲಾಗುವುದು ಎಂದು ತಹಸೀಲ್ದಾರ್ ಎಂ. ರಾಜಣ್ಣ ತಿಳಿಸಿದ್ದಾರೆ.
ಬೆಳಗಿನ ಜಾವದಿಂದಲೇ ಅಧಿಕಾರಿಗಳು ಮತ್ತು ದೇವಾಲಯದ ಆಡಳಿತ ಮಂಡಳಿಯ ಪದಾಧಿಕಾರಿಗಳು ಸೇರಿ ದೇವಾಲಯಕ್ಕೆ ಬರುವ ಭಕ್ತಾಧಿಗಳಲ್ಲಿ ಕೊರೊನಾ ವೈರಸ್ ಸೋಂಕಿನ ಬಗ್ಗೆ ಜಾಗೃತಿ ಮೂಡಿಸಿ ವಾಪಸ್ಸು ಕಳಿಸಲಾಗಿದೆ. ಮೇಲಿನ ಅಧಿಕಾರಿಗಳ ಸೂಚನೆಯ ಮೇರೆಗೆ ದೇವಾಲಯದ ಆವರಣದಲ್ಲಿ ಯಾವುದೇ ಧಾರ್ಮಿಕ ಕಾರ್ಯಚಟುವಟಿಕೆಗಳು ನಡೆಯದಂತೆ ಶಿಸ್ತಿನ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಯಾವುದೇ ಅಹಿತಕರ ಘಟನೆಗೆ ಅವಕಾಶ ನೀಡದೆ ಸಹಕಾರ ನೀಡಿದ ಎಲ್ಲ ಭಕ್ತಾಧಿಗಳಿಗೆ ಇಲಾಖೆಯ ವತಿಯಿಂದ ಕೃತಜ್ಞತೆಗಳನ್ನು ಸಲ್ಲಿಸುತ್ತೇವೆ ಎಂದು ರಾಜಸ್ವ ನಿರೀಕ್ಷಕರಾದ ಎಚ್. ರವಿಕುಮಾರ್ ತಿಳಿಸಿದರು.
ಮುಂದಿನ ಸೋಮವಾರ ಮಾಹಿತಿ ಪಡೆಯಿರಿ
ಪ್ರತೀ ಸೋಮವಾರ ಸಾವಿರಾರು ಭಕ್ತಾಧಿಗಳು ಈ ಕ್ಷೇತ್ರಕ್ಕೆ ಆಗಮಿಸುತ್ತಾರೆ. ಈ ವಾರ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಮುಂದಿನ ವಾರ ಅಧಿಕಾರಿಗಳ ಆದೇಶದ ಮೇರೆಗೆ ಕ್ರಮ ಕೈಗೊಳ್ಳಲಾಗುವುದು. ಭಕ್ತಾದಿಗಳು ಮತ್ತು ನಾಗರಿಕರು ಒಂದೆರಡು ದಿನಗಳ ಮುಂಚಿತವಾಗಿಯೇ ಮಾಹಿತಿ ಪಡೆಯಬೇಕಾಗಿದೆ. ಈಗಲೇ ಯಾವುದೇ ನಿರ್ಧಾರವನ್ನು ತಿಳಿಸಲು ಸಾಧ್ಯವಿಲ್ಲ ಎಂದು ರಾಜಸ್ವ ನಿರೀಕ್ಷಕರಾದ ಎಚ್. ರವಿಕುಮಾರ್ ತಿಳಿಸಿದ್ದಾರೆ.
(ವರದಿ: ಬಿ.ಎಂ.ಅಜಯ್, ಗೌರಿಬಿದನೂರು)
Get in Touch With Us info@kalpa.news Whatsapp: 9481252093
Discussion about this post