ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ’ತುತ್ತು ಅನ್ನಕ್ಕೂ ಪರದಾಟ… ಹಸಿವು ಇಂಗಿಸಿಕೊಳ್ಳಲು ಎಲ್ಲೆಂದರಲ್ಲಿ ಅಲೆದಾಟ… ನಿದ್ರಿಸಲು ಸಿಗುತ್ತಿಲ್ಲ ಅವಕಾಶ… ಎಲ್ಲದಕ್ಕಿಂತ ಮುಖ್ಯವಾಗಿ ಕೊರೋನಾ ವೈರಸ್ ಬಗ್ಗೆ ಇವರಿಗಿಲ್ಲ ಯಾವುದೇ ಮಾಹಿತಿ…!’
ಇದು, ನಿರ್ಗತಿಕರು-ಭಿಕ್ಷುಕರ ದುಃಸ್ಥಿತಿಯ ಪ್ರಮುಖಾಂಶಗಳು! ಒಂದೆಡೆ ಕೊರೋನಾ ಮಹಾಮಾರಿ ನಿಯಂತ್ರಣಕ್ಕೆ, ಕೇಂದ್ರ-ರಾಜ್ಯ ಸರ್ಕಾರಗಳು ಹರಸಾಹಸ ನಡೆಸುತ್ತಿವೆ. ದೇಶಾದ್ಯಂತ ಏಪ್ರಿಲ್ 14 ರವರೆಗೆ ’ಲಾಕ್ ಡೌನ್’ ಆದೇಶ ಹೊರಡಿಸಲಾಗಿದೆ. ನಾಗರಿಕರ ರಕ್ಷಣೆಗೆ ಆಡಳಿತ ಯಂತ್ರವು ಹಗಲಿರುಳು ಶ್ರಮಮೀರಿ ಪ್ರಯತ್ನಿಸುತ್ತಿದೆ. ಸಾರ್ವಜನಿಕರಿಗೆ ಆರೋಗ್ಯ ಸಂರಕ್ಷಣೆಯ ಮಹತ್ವದ ಬಗ್ಗೆ ತಿಳಿ ಹೇಳುತ್ತಿದೆ.
ಇನ್ನೊಂದೆಡೆ ಬಸ್ ನಿಲ್ದಾಣಗಳು, ಫುಟ್’ಪಾತ್’ಗಳನ್ನೇ ಆಶ್ರಯ-ಆವಾಸ ತಾಣವನ್ನಾಗಿಸಿಕೊಂಡಿರುವ ಅದೆಷ್ಟೋ ನಿರ್ಗತಿಕರು-ಭಿಕ್ಷುಕರಿಗೆ ಕೊರೋನಾ ವೈರಸ್ ಬಗ್ಗೆ ಕಿಂಚಿತ್ತೂ ಮಾಹಿತಿಯೇ ಇಲ್ಲವಾಗಿದೆ! ಹೌದು. ಹಸಿವು ಇಂಗಿಸಿಕೊಳ್ಳಲು ಇವರು ಅಕ್ಷರಶಃ ಹರಸಾಹಸ ನಡೆಸುತ್ತಿದ್ದಾರೆ. ಅನ್ನದಾನಿಗಳಿಗಾಗಿ ಕಾತರಿಸುತ್ತಿದ್ದಾರೆ.
ಹೋಟೆಲ್ ಹಾಗೂ ಅಂಗಡಿ ಮುಂಗಟ್ಟುಗಳು ಬಂದ್ ಆಗಿರುವುದು ಮತ್ತು ನಾಗರಿಕರ ಓಡಾಟ ಇಲ್ಲದಿರುವುದರಿಂದ, ಹಸಿವು ತಣಿಸಿಕೊಳ್ಳುವುದೇಗೆ ಹಾಗೂ ನಿದ್ರಿಸಲು ಸ್ಥಳವಾಕಾಶ ಸಿಗುವುದೇ-ಇಲ್ಲವೇ? ಎಂಬುವುದೇ ಸದ್ಯ ಇವರಿಗಿರುವ ದೊಡ್ಡ ಸಮಸ್ಯೆಯಾಗಿದೆ!

ಹಾಗೆಯೇ ನಿಷೇಧಾಜ್ಞೆ ವಿಧಿಸಿರುವುದರಿಂದ, ಸಾರ್ವಜನಿಕ ಸ್ಥಳಗಳಲ್ಲಿ ನಿದ್ರಿಸಲು ಪೊಲೀಸರು ಅವಕಾಶ ಕೊಡುತ್ತಿಲ್ಲ. ಇದೇ ಇವರಿಗೆ ಸಮಸ್ಯೆಯಾಗಿದೆ. ಕೊರೋನಾ ವೈರಸ್ ಬಗ್ಗೆ ಇವರಿಗೆ ಕಿಂಚಿತ್ತೂ ಚಿಂತೆಯಿಲ್ಲವಾಗಿದೆ. ಅನ್ನ-ಆಶಯದತ್ತಲೇ ಇವರ ಗಮನವಾಗಿದೆ. ಇವರ ಬಗ್ಗೆ ಆಡಳಿತ ವ್ಯವಸ್ಥೆ ಅಗತ್ಯ ಗಮನಹರಿಸಬೇಕು. ಸೂಕ್ತ ಪುನರ್ವಸತಿ ವ್ಯವಸ್ಥೆ ಹಾಗೂ ಜಾಗೃತಿ ಮೂಡಿಸುವ ಕಾರ್ಯ ನಡೆಸಬೇಕಾಗಿದೆ ಎಂದು ನಾಗರೀಕರು ಹೇಳುತ್ತಾರೆ.
ಪುನರ್ವಸತಿ ಕೇಂದ್ರಗಳಿಗೆ ಕಳುಹಿಸಿ
ನಿರ್ಗತಿಕರು ಭಿಕ್ಷುಕರಿಗೆ ಸರ್ಕಾರಿ ಪುನರ್ವಸತಿ ಕೇಂದ್ರಗಳಿವೆ. ಇಂತಹ ಕೇಂದ್ರಗಳಿಗೆ ಇವರನ್ನು ತತಕ್ಷಣವೇ ಕರೆದೊಯ್ಯಬೇಕಾಗಿದೆ. ನಾನಾ ಅನಾರೋಗ್ಯದಿಂದ ಬಳಲುತ್ತಿರುವ ಇವರಿಗೆ ಸೂಕ್ತ ಔಷೋಧಪಚಾರ ನಡೆಸಬೇಕಾಗಿದೆ. ಎಲ್ಲದಕ್ಕಿಂತ ಮುಖ್ಯವಾಗಿ, ಮಹಾಮಾರಿ ಕೊರೋನಾಕ್ಕೆ ತುತ್ತಾಗದಂತೆ ಇವರನ್ನು ರಕ್ಷಿಸಬೇಕಾಗಿದೆ. ಈ ನಿಟ್ಟಿನಲ್ಲಿ ಆಡಳಿತ ವ್ಯವಸ್ಥೆ ಅಗತ್ಯ ಕ್ರಮಕೈಗೊಳ್ಳಬೇಕಾಗಿದೆ.
ಮಾನವೀಯತೆ ಮೆರೆದ ಯುವಕರು
ಶಿವಮೊಗ್ಗ ನಗರದ ಖಾಸಗಿ – ಸರ್ಕಾರಿ ಬಸ್ ನಿಲ್ದಾಣ ಸುತ್ತಮುತ್ತ ಬೀಡುಬಿಟ್ಟಿರುವ ನಿರ್ಗತಿಕರು ಹಾಗೂ ಭಿಕ್ಷುಕರಿಗೆ, ನಗರದ ಗಾಂಧಿಬಜಾರ್ ರಸ್ತೆಯ ಬಟ್ಟೆ ಅಂಗಡಿಯೊಂದರ ಇಬ್ಬರು ಸಹೃದಯಿ ಯುವಕರು, ಉಪಹಾರ ವಿತರಿಸುವ ಮೂಲಕ ಮಾನವೀಯತೆ ಮೆರೆದರು. ಲಾಕ್’ಡೌನ್ ಘೋಷಣೆಯಿಂದ ಅದೆಷ್ಟೋ ಅಶಕ್ತರು ಹಸಿವಿನಿಂದ ಬಳಲುತ್ತಿದ್ದಾರೆ ಎಂಬ ಮಾಹಿತಿ ಗಮನಕ್ಕೆ ಬಂದಿತು.

ವರದಿ: ಬಿ. ರೇಣುಕೇಶ್, ಶಿವಮೊಗ್ಗ
Get in Touch With Us info@kalpa.news Whatsapp: 9481252093






Discussion about this post