ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಹರಿಹರ: ದೇಶದಾದ್ಯಂತ ಕೊರೋನಾ ವೈರಸ್ ವಿರುದ್ಧ ಹೋರಾಡುತ್ತಿರುವ ಕೊರೋನಾ ವಾರಿಯರ್ಸ್‌ಗಳು ದೇವರ ಪ್ರತಿರೂಪದಂತೆ ಎಂದು ವನಶ್ರೀ ಸಂಸ್ಥೆ ಅಧ್ಯಕ್ಷೆ ಗೀತಾ ನಾಗರಾಜ್ ಅಭಿಪ್ರಾಯಪಟ್ಟರು.
ಬೆಳ್ಳೂಡಿಯ ತಮ್ಮ ಕಚೇರಿ ಆವರಣದಲ್ಲಿ ಕೊರೋನಾ ವಾರಿಯರ್ಸ್‌ಗಳಿಗೆ ಅಗತ್ಯ ಆಹಾರ ವಸ್ತುಗಳ ಕಿಟ್ ವಿತರಿಸಿ ಅವರು ಮಾತನಾಡಿದರು.
ಕೊರೋನಾ ವೈರಸ್ ಶೀಘ್ರಗತಿಯಲ್ಲಿ ಹರಡುತ್ತಿದ್ದು ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ದೇಶದ ಜನರ ಪ್ರಾಣ ರಕ್ಷಣೆಗಾಗಿ ಕೊರೋನಾ ವಾರಿಯರ್ಸ್‌ಗಳಾದ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಪೊಲೀಸ್ ಹಾಗೂ ವೈದ್ಯ ಸಿಬ್ಬಂದಿಗಳು, ಆರೋಗ್ಯ ಸಹಾಯಕಿಯರು, ಗ್ರಾಮ ಪಂಚಾಯ್ತಿ ಪೌರ ನೌಕರರು ತಮ್ಮ ಪ್ರಾಣವನ್ನು ಲೆಕ್ಕಿಸದೇ ನಮ್ಮಗಳ ರಕ್ಷಣೆಗಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಇವರು ದೇವರ ಪ್ರತಿರೂಪವಿದ್ದಂತೆ. ಅವರಿಗೆ ನಾವು ಎಲ್ಲ ರೀತಿಯ ಸಹಕಾರ ನೀಡಿ ಕೊರೋನಾ ವೈರಸ್ ನಿಯಂತ್ರಣದಲ್ಲಿ ನಮ್ಮ ಜವಾಬ್ದಾರಿಯನ್ನು ಮೆರೆಯಬೇಕು ಎಂದರು.
ನಮ್ಮ ಈ ಸೇವೆ ಯಾವುದೇ ಪ್ರಚಾರಕ್ಕಾಗಿ ಅಲ್ಲ. ಕೊರೋನಾ ವಾರಿಯರ್ಸ್‌ಗಳಿಗೆ ನೈತಿಕವಾಗಿ ಧೈರ್ಯ ನೀಡುವುದು, ಅವರೊಂದಿಗೆ ನಾವೂ ಇದ್ದೇವೆ ಎಂಬ ಆತ್ಮಸ್ಥೈರ್ಯ ತುಂಬುವುದು ಹಾಗೂ ಅವರಿಗೆ ನಮ್ಮಿಂದಾಗುವ ಎಲ್ಲ ಸಹಕಾರ ನೀಡುವ ಉದ್ದೇಶದಿಂದ ಇಂದು ನಮ್ಮ ಸಂಸ್ಥೆಯ ವತಿಯಿಂದ ಅಗತ್ಯ ವಸ್ತುಗಳ ಆಹಾರದ ಕಿಟ್ ನೀಡುತ್ತಿದ್ದೇವೆ ಎಂದರು.
ಇನ್ನೆರಡು ದಿನದಲ್ಲಿ ನಮ್ಮ ಸಂಸ್ಥೆಯ ವತಿಯಿಂದ ಬೆಳ್ಳೊಡಿ ಗ್ರಾಮದ ಬಡತನ ರೇಖೆಗಿಂತ ಕೆಳಗಿರುವ ಜನತೆಗೆ ಆಹಾರದ ಕಿಟ್ ನೀಡಲಿದ್ದೇವೆ. ಇಂತಹ ಕಷ್ಟಕರ ಸನ್ನಿವೇಶದಲ್ಲಿ ಒಬ್ಬರಿಗೊಬ್ಬರು ಹೆಗಲು ಕೊಟ್ಟು ಸಹಕಾರ ನೀಡಿ, ಮಾನವೀಯತೆ ಮೆರೆಯಬೇಕು ಎಂದು ಕರೆ ನೀಡಿದರು.
ಆರೋಗ್ಯ ಸಹಾಯಕರಾದ ಸುರೇಶ್ ಅವರು ಕೊರೋನಾ ವಾರಿಯರ್ಸ್‌ಗಳ ಆರೋಗ್ಯ ತಪಾಸಣೆ ನಡೆಸಿದರು. ವನಶ್ರೀ ಸಂಸ್ಥೆಯ ಎಲ್ಲ ಪದಾಧಿಕಾರಿಗಳು, ಗ್ರಾಮ ಪಂಚಾಯ್ತಿ ಸಿಬ್ಬಂದಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.
(ವರದಿ: ಪ್ರಕಾಶ್ ಮಂದಾರ, ಹರಿಹರ)
Get in Touch With Us info@kalpa.news Whatsapp: 9481252093
Discussion about this post