ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಂಗಳೂರು: ತಂತ್ರಜ್ಞಾನ ಬಳಸಿಕೊಂಡು ಆಡಳಿತದಲ್ಲಿ ತ್ವರಿತ ಸುಧಾರಣೆಗಳನ್ನು ತರಬಹುದು ಎಂಬುದನ್ನು ಕೋವಿಡ್19 ನಮಗೆ ಹೇಳಿಕೊಟ್ಟಿದೆ. ನಮ್ಮ ಈ ಅನುಭವ ಮುಂದಿನ ಹತ್ತು ವರ್ಷದಲ್ಲಿ ಜಾಗತಿಕ ಮಟ್ಟದಲ್ಲಿ ಭಾರತವನ್ನು ಬಹು ಎತ್ತರಕ್ಕೆ ಕೊಂಡೊಯ್ಯಲಿದೆ ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದ್ದಾರೆ.
ಅಮೆರಿಕ ಕನ್ನಡ ಕೂಟಗಳ ಆಗರ (ಅಕ್ಕ ಸಂಘಟನೆ) ಆಯೋಜಿಸಿದ್ದ ವೀಡಿಯೋ ಸಂವಾದದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. “ಕೋವಿಡ್19ನಿಂದಾಗಿ ಆರೋಗ್ಯ ಸಮಸ್ಯೆ, ಸಾವು-ನೋವು ಸಂಭವಿಸಿದೆ. ಇದೊಂದು ಹಿನ್ನಡೆಯೂ ಹೌದು. ಇದಕ್ಕೆ ಯಾವ ಸಿದ್ಧತೆಯನ್ನೂ ಮಾಡಿಕೊಂಡಿರಲಿಲ್ಲ ಎಂಬುದೂ ಸತ್ಯ. ಆದರೆ, ಈ ಸಮಸ್ಯೆಯನ್ನು ಒಂದು ಅವಕಾಶವಾಗಿ ಬಳಸಿಕೊಂಡು ಅತ್ಯಂತ ವೇಗವಾಗಿ ಬದಲಾವಣೆಗಳಿಗೆ ಒಗ್ಗಿಕೊಂಡು ಹೊಸ ಕಾರ್ಯಕ್ರಮಗಳನ್ನು ಅಳವಡಿಸಿಕೊಂಡೆವು. ತಂತ್ರಜ್ಞಾನದ ಮೂಲಕ ಎಲ್ಲವೂ ಸಾಧ್ಯ ಎಂಬುದನ್ನು ತೋರಿಸಿದ್ದೇವೆ,” ಎಂದರು.
“ನಾವು ಬದಲಾವಣೆಗೆ ಎಷ್ಟೊಂದು ತ್ವರಿತವಾಗಿ ಮತ್ತು ಪರಿಣಾಮಕಾರಿಯಾಗಿ ಹೊಂದಿಕೊಂಡಿದ್ದೇವೆ ಎಂದರೆ ಕೆಲವೊಂದು ವಿಭಾಗಗಳಲ್ಲಿ ಮಾತ್ರ ಲಾಕ್‌ಡೌನ್ ನಿಂದ ತೊಂದರೆಯಾಗಿದೆಯೇ ಹೊರತು ಬಹುತೇಕ ಕ್ಷೇತ್ರಗಳಲ್ಲಿ ಹೆಚ್ಚಿನ ದುಷ್ಪರಿಣಾಮ ಆಗಲಿಲ್ಲ. ಟೆಲಿಮೆಡಿಸಿನ್, ಟೆಲಿ ಕನ್ಸಲ್ಟಿಂಗ್ ಮೂಲಕ ಜನರ ಮನೆ ಬಾಗಿಲಿಗೆ ವೈದ್ಯಕೀಯ ಸೇವೆ ತಲುಪಿಸಿದ್ದೇವೆ. ಜನರಿಗೆ ಪಡಿತರ, ಔಷಧ ಸೇರಿದಂತೆ ಸರ್ಕಾರದ ಎಲ್ಲಾ ಸೌಲಭ್ಯಗಳನ್ನು ತಲುಪಿಸಲಾಗಿದೆ. ಪಡಿತರ ವಿತರಣೆಯಲ್ಲಿ ಭಾರತ, ಅದರಲ್ಲೂ ಕರ್ನಾಟಕ ಮಾಡಿರುವ ಸಾಧನೆ ವಿಶ್ವಕ್ಕೆ ಮಾದರಿ ಎಂದರೆ ಅತಿಶಯೋಕ್ತಿಯಲ್ಲ,” ಎಂದು ತಿಳಿಸಿದರು.
ಮೋದಿಯೇ ದೊಡ್ಡ ನಂಬಿಕೆ
“ಇಂತಹ ಸಮಸ್ಯೆಗಳು ಎದುರಾದಾಗ ರಾತ್ರೋರಾತ್ರಿ ಎಲ್ಲವೂ ಬಗೆಹರಿಯಬೇಕು ಎಂದು ಬಯಸುತ್ತಾರಾದರೂ ಅದು ಸಾಧ್ಯವಾಗುವುದಿಲ್ಲ. ಆದರೆ, ಭಾರತೀಯರಲ್ಲಿ ನಂಬಿಕೆಯೇ ಅತಿ ದೊಡ್ಡ ಶಕ್ತಿ. ಅದರಂತೆ ಪ್ರಧಾನಿ ನರೇಂದ್ರ ಮೋದಿ ಅವರು ಜನರ ಪಾಲಿಗೆ ನಂಬಿಕೆಯಾಗಿದ್ದು, ಈ ನಂಬಿಕೆ ನಮ್ಮನ್ನು ಸಮಸ್ಯೆಯಿಂದ ಕಾಪಾಡಿದೆ. ಕೆಲವು ದುಷ್ಟ ಶಕ್ತಿಗಳು ಈ ಪರಿಸ್ಥಿತಿಯ ದುರ್ಲಾಭ ಪಡೆದು ಏನೆೇನೋ ಮಾಡಬೇಕು ಎಂದು ಪ್ರಯತ್ನಿಸಿದರೂ ಅದು ಸಾಧ್ಯವಾಗಲಿಲ್ಲ,” ಎಂದು ಹೇಳಿದರು.
“ಕೋವಿಡ್ ಸಮಸ್ಯೆಯನ್ನು ದೇಶ ಒಗ್ಗಟ್ಟಿನಿಂದ ಎದುರಿಸಿದೆ. ಜನ ಭಾವನಾತ್ಮಕವಾಗಿಯೂ ಸರ್ಕಾರದ ಜತೆ ಕೈಜೋಡಿಸಿದ್ದಾರೆ ಎಂಬುದಕ್ಕೆ ಕೊರೊನಾ ವಾರಿಯರ್ಸ್‌ಗೆ ದೇಶದ ಜನ ಸಲ್ಲಿಸಿದ ಗೌರವವೇ ಸಾಕ್ಷಿ. ಅದೇ ರೀತಿ ಅಮೆರಿಕದಲ್ಲಿ ಭಾರತೀಯ ಮೂಲದ ಡಾ.ಉಮಾರಾಣಿ ಅವರ ಸೇವೆಗೆ ಸಂದ ಗೌರವ ಭಾರತೀಯರು ಯಾವ ರೀತಿ ಸೇವಾ ಮನೋಭಾವ ಹೊಂದಿದ್ದಾರೆ ಎಂಬುದಕ್ಕೆ ಸಾಕ್ಷಿ,” ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಮುಂಚೂಣಿಯಲ್ಲಿ ಕರ್ನಾಟಕ
“ಕೋವಿಡ್ ಕಾಣಿಸಿಕೊಂಡ ಸಂದರ್ಭದಲ್ಲಿ ಕರ್ನಾಟಕದಲ್ಲಿ 2 ಪ್ರಯೋಗಾಲಯಗಳಲ್ಲಿ ಮಾತ್ರ ಪರೀಕ್ಷೆ ನಡೆಸಲು ಅವಕಾಶವಿತ್ತು. ಟೆಸ್ಟ್ ಕಿಟ್, ನಿರ್ದಿಷ್ಟ ಆಸ್ಪತ್ರೆ, ಪಿಪಿಇ ಕಿಟ್, ಎನ್ 95 ಮಾಸ್ಕ್ ಯಾವುದೂ ಇರಲಿಲ್ಲ. ಆದರೆ, ತ್ವರಿತಗತಿಯಲ್ಲಿ ಈ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಿಕೊಂಡೆವು. ಪ್ರಸ್ತುತ ರಾಜ್ಯದಲ್ಲಿ 35 ಪ್ರಯೋಗಾಲಯಗಳಿದ್ದು, ನಿತ್ಯ 35 ಸಾವಿರ ಟೆಸ್ಟ್ ಮಾಡುವ ಸಾಮರ್ಥ್ಯ ಬೆಳೆಸಿಕೊಂಡಿದ್ದೇವೆ. ಕೋವಿಡ್ ಚಿಕಿತ್ಸೆಗಾಗಿ 39 ಸಾವಿರ ಹಾಸಿಗೆ ಮೀಸಲಿಡಲಾಗಿದ್ದು, ಜಿಲ್ಲಾ, ತಾಲೂಕು ಮಟ್ಟದ ಆಸ್ಪತ್ರೆಗಳಲ್ಲೂ ಆಕ್ಸಿಜನ್ ಸೌಲಭ್ಯ ಒದಗಿಸಲಾಗಿದೆ. ಟೆಲಿ ಐಸಿಯೂ ಘಟಕಗಳಿವೆ. ಪಿಪಿಇ ಕಿಟ್‌ನಲ್ಲಿ ಸ್ವಾವಂಬನೆ ಸಾಧಿಸಿದ್ದೇವೆ. ಹೊಸ ವೆಂಟಿಲೇಟರ್ಸ್ ಸಂಖ್ಯೆ ಲಕ್ಷಕ್ಕೆ ಹೆಚ್ಚಿದೆ,” ಎಂದು ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ವಿವರಿಸಿದರು.
“ಕೋವಿಡ್ ವಿಚಾರದಲ್ಲಿ ನಮಗೆ ಸವಾಲಾಗಿದ್ದು ವಲಸೆ ಕಾರ್ಮಿಕರು. ಅವರಿಗೆ ಊಟ, ವಸತಿ ಕಲ್ಪಿಸುವುದು ಕಷ್ಟ. ಅಲ್ಲದೆ, ರಾಜ್ಯಕ್ಕೆ ಬರುವವರು ಹೋಗುವವರು ಸಂಖ್ಯೆಯೂ ಹೆಚ್ಚು. ಇನ್ನೊಂದಡೆ ಹೊರರಾಜ್ಯದಿಂದ ಬಂದ ವಲಸೆ ಕಾರ್ಮಿಕರನ್ನು ಕ್ವಾರಂಟೈನ್ ಮಾಡುವುದು ಕೂಡ ಕಷ್ಟಸಾದ್ಯವಾಗಿತ್ತು. ಆದರೆ, ಎಎದೆಲ್ಲವನ್ನೂ ಯಶಸ್ವಿಯಾಗಿ ನಿಭಾಯಿಸಿದ್ದೇವೆ. ಯಾವುದೇ ಕೊರತೆಯಾಗದಂತೆ ನೋಡಿಕೊಂಡಿದ್ದೇವೆ,” ಎಂದು ತಿಳಿಸಿದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಡಾ.ಅಶ್ವತ್ಥನಾರಾಯಣ, “ಕೋವಿಡ್ ಚಿಕಿತ್ಸೆಗೆ ಅಗತ್ಯ ಮಾದರಿ ಸಂಗ್ರಹಿಸಲು ಮೊಬೈಲ್ ವಾಹನ ವ್ಯವಸ್ಥೆ ಮಾಡಲಾಗಿದೆ. ಮನೆ ಮನೆಗೂ ಯೂನಿವರ್ಸಲ್ ಸ್ಕ್ರೀನಿಂಗ್, ಮನೆ ಮನೆಗೆ ತೆರಳಿ ಆರೋಗ್ಯ ಸಮೀಕ್ಷೆ ಮುಂತಾದ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ತಂತ್ರಜ್ಞಾನವನ್ನು ಸಂಪೂರ್ಣ ಬಳಕೆಮಾಡಿಕೊಂಡು ಜನರ ಆರೋಗ್ಯ ಮಾಹಿತಿ ಸಂಗ್ರಹಿಸುವ ಮೂಲಕ ಭವಿಷ್ಯದಲ್ಲಿ ಆರೋಗ್ಯ ಸಮಸ್ಯೆ ಎದುರಾದರೆ ಆಗ ಮಾಹಿತಿಗೆ ತೊಂದರೆಯಾಗದಂತೆ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ,” ಎಂದು ಹೇಳಿದರು.
ಕರ್ನಾಟಕದ ಬಗ್ಗೆ ವೈದ್ಯರ ಮೆಚ್ಚುಗೆ
ಕೋವಿಡ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಭಾರತ ಸರ್ಕಾರ ಅದರಲ್ಲೂ ಮುಖ್ಯವಾಗಿ ಕರ್ನಾಟಕದ ಸಾಧನೆ ಬಗ್ಗೆ ಅಮೆರಿಕದಲ್ಲಿ ಕೊರೊನಾಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಹಾಗೂ ಅಕ್ಕ ಬಳಗದವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಸಾಧನೆಗಾಗಿ ಸರ್ಕಾರ ಮತ್ತು ರಾಜ್ಯದ ಜನತೆಗೆ ಡಾ.ಅಶ್ವತ್ಥನಾರಾಯಣ ಅವರ ಮೂಲಕ ಅಭಿನಂದಿಸಿದರು.
ಸಂವಾದದಲ್ಲಿ ಅಮೆರಿಕದಲ್ಲಿ ಕೋವಿಡ್19 ಚಿಕಿತ್ಸೆ ನೀಡುತ್ತಿರುವ ಕರ್ನಾಟಕ ಮೂಲದ ವೈದ್ಯರಾದ ಡಾ.ಅನುರಾಧ ತಾವರೇಕೆರೆ, ಡಾ.ಕಲ್ಪನಾ ಉದಯ್, ಡಾ.ಉಮಾರಾಣಿ ಮಧುಸೂಧನ್, ಭಾರತದ ಜತೆಗಿನ ಸಮನ್ವಯಕಾರರಾದ ಡಾ.ಶಾಲಿನಿ ನಲ್ವಾಡ್ ತಮ್ಮ ಅನುಭವ ಹಂಚಿಕೊಂಡರಲ್ಲದೇ, ಹಲವು ಸಲಹೆಗಳನ್ನು ನೀಡಿದರು. ಅಕ್ಕ ಸಂಘಟನೆ ಅಧ್ಯಕ್ಷ ಅಮರನಾಥ ಗೌಡ, ದಯಾನಂದ್ ತುಮಕೂರು, ಸುರೇಶ್ ಕೃಷ್ಣಪ್ಪ ಸೇರಿದಂತೆ ಸಂಘಟನೆ ಪದಾಧಿಕಾರಿಗಳು ಹಾಜರಿದ್ದರು.
(ವರದಿ: ಡಿ.ಎಲ್. ಹರೀಶ್, ಬೆಂಗಳೂರು)
Get in Touch With Us info@kalpa.news Whatsapp: 9481252093
Discussion about this post