ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ತೀರ್ಥಹಳ್ಳಿ: ವಾರದ ಹಿಂದೆ ದುಡ್ಡು ಬಿದ್ದಿದೆ ಎಂದು ಗಮನ ಬೇರೆಡೆ ಸೆಳೆದು ಅಗ್ರಹಾರದ ವ್ಯಕ್ತಿಯೊಬ್ಬರ ದುಡ್ಡಿನ ಬ್ಯಾಗ್ ದರೋಡೆ ಮಾಡಿದ ಘಟನೆ ಕುರುವಳ್ಳಿಯ ಅಗ್ರಹಾರದ ರಸ್ತೆಯಲ್ಲಿ ನಡೆದಿದ್ದು ಅದು ಮಾಸುವ ಮುನ್ನವೇ ಇಂದು ಪಟ್ಟಣದ ಆಗುಂಬೆ ರಸ್ತೆಯಲ್ಲಿ ಕ್ಷಣ ಮಾತ್ರದಲ್ಲಿ ನಾಲ್ಕು ಲಕ್ಷ ರೂಪಾಯಿ ದೋಚಿರುವ ಘಟನೆ ನಡೆದಿದೆ.
ಆಗುಂಬೆ ರಸ್ತೆಯ ರವಿ ಎಂಟರ್ಪ್ರೈಸಸ್ ಎದುರು ಬೈಕಿನಲ್ಲಿ ಬಂದ ದರೋಡೆಕೋರರು ದ್ವಿಚಕ್ರ ವಾಹನದಲ್ಲಿದ್ದ ಸುಮಾರು ನಾಲ್ಕು ಲಕ್ಷ ರೂಪಾಯಿ ಹಣವನ್ನು ಕ್ಷಣಮಾತ್ರದಲ್ಲಿ ಕದ್ದು ಪರಾರಿಯಾಗಿದ್ದಾರೆ.
ಇಂದು ಮಧ್ಯಾಹ್ನ 1:10 ರ ಸಮಯದಲ್ಲಿ ಮಲೆನಾಡು ಕ್ಲಬ್ ಮ್ಯಾನೇಜರ್ ಶರತ್ ಎಂಬುವವರು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ನಾಲ್ಕು ಲಕ್ಷ ರೂಪಾಯಿ ಡ್ರಾ ಮಾಡಿಕೊಂಡು ಆಗುಂಬೆ ರಸ್ತೆಯ ರವಿ ಎಂಟರ್ಪ್ರೈಸಸ್‌ನ ತಪಸ್ವಿಯವರ ಅಂಗಡಿಗೆ ಹೋಗಿದ್ದರು. ಬೈಕ್ ನಿಲ್ಲಿಸಿ ಹಾರ್ಡ್‌ವೇರ್ ಶಾಪ್‌ಗೆ ಹೋಗಿ ಚೆಕ್ ಕೊಟ್ಟು ವಾಪಾಸ್ಸು ಮರಳುವಾಗ ಕ್ಷಣಮಾತ್ರದಲ್ಲಿ ಕಳ್ಳರು ಹೊಂಚು ಹಾಕಿ ಬೈಕ್ ಬ್ಯಾಗಿನಿಂದ ಹಣ ಲಪಟಾಯಿಸಿಕೊಂಡು ಒನ್‌ವೇಯಲ್ಲಿಯೇ ಹಿಂದಿರುಗಿ ಬೈಕ್’ನಲ್ಲಿ ಪರಾರಿಯಾಗಿದ್ದಾರೆ.
ಈ ನಾಲ್ಕು ಲಕ್ಷ ರೂಪಾಯಿ ಹಣ ಅರಮನೆಕೇರಿಯ ರವಿಶಂಕರ್ ಎಂಬುವವರದ್ದಾಗಿದೆ ಎಂದು ತಿಳಿದುಬಂದಿದೆ.
ಇತ್ತೀಚೆಗೆ ಪಟ್ಟಣದಲ್ಲಿ ಆಗುಂಬೆ ಭಾಗದ ಹಳ್ಳಿಗಳಲ್ಲಿ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಹೊಂಚು ಹಾಕಿ ಹಣ ದರೋಡೆ ಮಾಡುವ ಪ್ರಕರಣಗಳು ನಡೆಯುತ್ತಿವೆ. ಈಗಾಗಲೇ ಹಳ್ಳಿಗಳಲ್ಲಿ ಅಡಿಕೆ ಕೊಯ್ಲಿನ ಸಮಯವಾಗಿದ್ದು ರೈತರು ಬ್ಯಾಂಕಿನಲ್ಲಿ ಹಣವನ್ನು ಡ್ರಾ ಮಾಡುತ್ತಿರುತ್ತಾರೆ. ಇದನ್ನೇ ಅಸ್ತ್ರವನ್ನಾಗಿಸಿಕೊಂಡು ಕಳ್ಳರು ಹೊಂಚು ಹಾಕಿ ಕಾದು ಕುಳಿತು ದರೋಡೆ ಮಾಡುವಂತಹ ಘಟನೆಗಳೂ ಕೂಡ ನಡೆಯಬಹುದಾಗಿದೆ.
ಮಂಡಗದ್ದೆ ಬಳಿಯಲ್ಲೂ ದರೋಡೆ ಯತ್ನ
ಇಲ್ಲಿ ತೆರಳುತ್ತಿದ್ದ ಓಮ್ನಿ ಕಾರನ್ನು ಅಡ್ಡಗಟ್ಟಿದ ದರೋಡೆಕೋರರು ಕಾರಿನ ಟೈರನ್ನು ಕತ್ತರಿಸಿದ್ದಾರೆ. ಆದರೆ, ಇದರಿಂದ ಹೆದರದ ಓಮ್ನಿ ಚಾಲಕ ವೇಗವಾಗಿ ಕಾರನ್ನು ಚಲಾಯಿಸಿ, ಸುಮಾರು ದೂರದವರೆಗೂ ತೆರಳಿ, ಅದೇ ದಾರಿಯಲ್ಲಿ ಹೋಗುತ್ತಿದ್ದ ಬಸ್’ನ್ನು ನಿಲ್ಲಿಸಿ, ಪರಿಸ್ಥಿತಿಯನ್ನು ತಿಳಿಸಿದ್ದಾರೆ. ಆದರೆ, ಘಟನೆಯ ಕುರಿತಾಗಿ ಸಾರ್ವಜನಿಕರು ಪೊಲೀಸ್ ಇಲಾಖೆಯ ಗಮನಕ್ಕೆ ತಂದರೂ ಅಧಿಕಾರಿಗಳು ಮಾತ್ರ ತಾತ್ಸಾರ ಧೋರಣೆ ತೋರಿದ್ದಾರೆ ಎಂದು ಸ್ಥಳೀಯರು ಆರೋಪಿಸುತ್ತಾರೆ.
ಇನ್ನು, ಇಂತಹುದ್ದೇ ಘಟನೆಗಳು ಹೊಸನಗರ ಭಾಗದ ಗ್ರಾಮೀಣ ಭಾಗಗಳಲ್ಲೂ ಸಹ ನಡೆದಿದೆ ಎಂದು ವರದಿಯಾಗಿದ್ದು, ಈ ಕುರಿತ ಎಚ್ಚರಿಕೆ ಸಂದೇಶಗಳು ವಾಟ್ಸಪ್’ನಲ್ಲಿ ಹರಿದಾಡಿತ್ತು.
ಅಲ್ಲದೇ ಇತ್ತೀಚಿಗೆ ತೀರ್ಥಹಳ್ಳಿ, ಆಗುಂಬೆ ಭಾಗದ ಗ್ರಾಮೀಣ ಪ್ರದೇಶಗಳಲ್ಲಿ ಇಂತಹ ಪ್ರಕರಣಗಳು ನಡೆಯುತ್ತಲೇ ಇವೆ. ಈ ಹಿನ್ನೆಲೆಯಲ್ಲಿ ಪೋಲೀಸರು ಇಂತಹ ಪ್ರಕರಣಗಳನ್ನು ಗಂಭೀರವಾಗಿ ತೆಗೆದುಕೊಳ್ಳದಿದ್ದರೆ ಜನ ಓಡಾಡಲು ಭಯ ಪಡುವ ಸ್ಥಿತಿ ನಿರ್ಮಾಣವಾಗಲಿದೆ ಎಂಬುದು ಅನೇಕ ಸಾರ್ವಜನಿಕರ ಅಭಿಪ್ರಾಯವಾಗಿದೆ.
ಈ ವಿಚಾರದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರು ತತಕ್ಷಣ ಕ್ರಮ ಕೈಗೊಳ್ಳಬೇಕಿದೆ.
ವರದಿ: ಶ್ರೀಕಾಂತ್ ವಿ. ನಾಯಕ್, ಪತ್ರಕರ್ತರು, ತೀರ್ಥಹಳ್ಳಿ
Get in Touch With Us info@kalpa.news Whatsapp: 9481252093
Discussion about this post