ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮುಂದುವರೆದ ತಂತ್ರಜ್ಞಾನದ ಯುಗದಲ್ಲಿ ಇನ್ನಿಲ್ಲದಂತೆ ಕಾಡುತ್ತಿರುವ ಸಮಸ್ಯೆಗಳಲ್ಲಿ ಒಂದು ಸೈಬರ್ ವಂಚನೆ. ಈ ಸೈಬರ್ ವಂಚನೆ ಎನ್ನುವುದು ದಿನಕ್ಕೊಂದು ರೂಪದಲ್ಲಿ ಬರುತ್ತಿದ್ದು, ಸಾಮಾನ್ಯ ವ್ಯಕ್ತಿಯಿಂದ ಹಿಡಿದು ಗಣ್ಯರಿಗೂ ಸಹ ಕಾಡುತ್ತಿದೆ. ಅದೇ ಸಮಸ್ಯೆ, ಶಿವಮೊಗ್ಗ ಜಿಲ್ಲಾಧಿಕಾರಿಗಳಿಗೂ ಸಹ ತಟ್ಟಿದೆ.
ಹೌದು… ಜಿಲ್ಲೆಗೆ ನೂತನವಾಗಿ ಆಗಮಿಸಿರುವ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅವರ ಹೆಸರು ಹಾಗೂ ಭಾವಚಿತ್ರ ಬಳಸಿಕೊಂಡು ವಿದೇಶಿ ವಾಟ್ಸಪ್ ನಂಬರ್ ಮೂಲಕ ನಕಲಿ ಸಂದೇಶ ಕಳುಹಿಸುತ್ತಿರುವ ಘಟನೆ ನಡೆದಿದೆ.
ಈ ಕುರಿತಂತೆ ಜಿಲ್ಲಾಧಿಕಾರಿಗಳು ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ನನ್ನ ಹೆಸರು ಹಾಗೂ ಭಾವಚಿತ್ರ ಸೈಬರ್ ವಂಚಕರು ಬಳಸಿಕೊಂಡು +84 56 455 2858 ವಾಟ್ಸಪ್ ಸಂಖ್ಯೆಯ ಮೂಲಕ ಸಾರ್ವಜನಿಕರಿಗೆ ಹಾಗೂ ಅಧಿಕಾರಿಗಳಿಗೆ ನಕಲಿ ಸಂದೇಶ ಕಳುಹಿಸುತ್ತಿರುವುದು ನನ್ನ ಗಮನಕ್ಕೆ ಬಂದಿರುತ್ತದೆ ಎಂದಿದ್ದಾರೆ.
ಈ ರೀತಿ ಬರುತ್ತಿರುವ ಸಂದೇಶಗಳು ಸೈಬರ್ ವಂಚಕರ ಕೃತ್ಯವಾಗಿರುತ್ತದೆ. ಆದ್ದರಿಂದ ಸಾರ್ವಜನಿಕರು, ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಈ ನಕಲಿ ವಾಟ್ಸಪ್ ಸಂದೇಶಕ್ಕೆ ದಯವಿಟ್ಟು ಪ್ರತಿಕ್ರಿಯೆ ನೀಡಬಾರದು ಎಂದು ಸ್ಪಷ್ಟಪಡಿಸಿದ್ದಾರೆ.
ಅಲ್ಲದೇ, ಇಂತಹ ಸಂಖ್ಯೆಯಿಂದ ಯಾವುದೇ ರೀತಿಯಲ್ಲಿ ಹಣದ ಬೇಡಿಕೆ, ತಪ್ಪು ಸಂದೇಶ ಹಾಗೂ ಸಹಾಯ ಕೋರಿ ನಕಲಿ ಸಂದೇಶಗಳು ಸಾಮಾಜಿಕ ಜಾಲತಾಣದ ವೇದಿಕೆಗಳಲ್ಲಿ, ಮೊಬೈಲ್ ವಾಟ್ಸಪ್ ಮುಖಾಂತರ ಸ್ವೀಕರಿಸಿದಲ್ಲಿ, ಅವುಗಳನ್ನು ನಿರ್ಲಕ್ಷಿಸಲು ತಿಳಿಸುತ್ತಾ, ಇಂತಹ ಸಂಖ್ಯೆಗಳನ್ನು ಬ್ಲಾಕ್ ಮಾಡಲು ಕೋರಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 



















