ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಹರಿದಾಸ ಸಾಹಿತ್ಯ ಸಂಘಟನೆಯಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುತ್ತ ಜನಾನುರಾಗಿಯಾಗಿರುವ ಶ್ರೀ ವಾದಿರಾಜ್ ತಾಯಲೂರು ಮೂಲತಃ ಮುಳಬಾಗಿಲುನವರು. ಬಾಲ್ಯದಿಂದಲೂ ತಮ್ಮ ಒಡನಾಡಿಗಳೊಂದಿಗೆ ಧಾರ್ಮಿಕ ಚಟುವಟಿಕೆಗಳೊಡನೆ ಎನ್ ಸಿಸಿ, ಆರ್ ಎಸ್ ಎಸ್, ಸ್ಕೌಟ್ಸ್ ಗಳಲ್ಲೂ ಮುಂಚೂಣಿಯಲ್ಲಿದ್ದು ತಮ್ಮ ವ್ಯಕ್ತಿತ್ವವನ್ನು ಬೆಳೆಸಿಕೊಂಡಿರುತ್ತಾರೆ. ಸ್ವಭಾವತಃ ಧರ್ಮ-ದೈವಭೀರುಗಳಾದ ವಾದಿರಾಜ್ ನಾಡಿನ ಧಾರ್ಮಿಕ ಕ್ಷೇತ್ರದಲ್ಲಿ ನಡೆಸಿರುವ ಕೈಂಕರ್ಯ ಪ್ರಶಂಸನೀಯ.
ತಿರುಮಲ ತಿರುಪತಿ ದೇವಸ್ಥಾನದ ದಾಸಸಾಹಿತ್ಯ ಪ್ರಾಜಕ್ಟ್ ನ ಕರ್ನಾಟಕ ವಲಯದ ಸಂಚಾಲಕರಾಗಿ ನಿರ್ವಹಿಸಿದ ಕಾರ್ಯ ಸದಾ ಸರ್ವದಾ ಅಭಿನಂದನೀಯ. ನಾಡಿನಾದ್ಯಂತ ಸುಮಾರು ಎರಡು ಸಾವಿರಕ್ಕೂ ಹೆಚ್ಚು ಸಂಖ್ಯೆಯ ಭಜನಾಮಂಡಳಿಗಳು ಜನ್ಮತಳೆದಿರುವುದರಲ್ಲಿ ಇವರ ಪಾತ್ರ ಪ್ರಮುಖವಾಗಿದೆ.
ಕನ್ನಡ ಸಾಹಿತ್ಯ ಭಂಡಾರವನ್ನು ಸಿರಿವಂತಗೊಳಿಸಿದ ದಾಸ ಸಾಹಿತ್ಯದ ಪ್ರಚಾರವನ್ನು ಧ್ಯೇಯವಾಗಿಸಿಕೊಂಡು 2012ರಲ್ಲಿ ಶ್ರೀ ಶ್ರೀನಿವಾಸ ಉತ್ಸವ ಬಳಗವನ್ನು ಸ್ಥಾಪಿಸಿದ್ದು ಇವರ ಜೀವನದ ಮಹತ್ವದ ಮಜಲು. ಬಳಗದ ಸಹವರ್ತಿಗಳೊಂದಿಗೆ ನೂರಾರು ಮನೆಮನೆಗಳಲ್ಲಿ, ಸಾರ್ವಜನಿಕ ವೇದಿಕೆಗಳಲ್ಲಿ ವೇದಮಂತ್ರ, ದಾಸರಪದಗಳ ಸುಮಧುರ ಸಂಗಮದೊಂದಿಗೆ ನಡೆಸಿಕೊಡುವ ಶ್ರೀ ಶ್ರೀನಿವಾಸ ಕಲ್ಯಾಣ ಮಹೋತ್ಸವವು ಕರ್ಣಾನಂದ-ನಯನಾನಂದಕರ.

ಸನಾತನ ಧರ್ಮ ಸಂರಕ್ಷಣೆ, ಯುಗಯಾತ್ರಿಯಾದ ಅವಿನಾಶೀ ಭಾರತೀಯ ಸಂಸ್ಕೃತಿಯ ಪ್ರತೀಕವಾದ ಹರಿದಾಸ ಸಾಹಿತ್ಯ ಪ್ರಚಾರವನ್ನು ಜೀವನೋದ್ದೇಶವಾಗಿಸಿಕೊಂಡು ಬಳಲಿಕೆಯಿಲ್ಲದೆ ಅಹರ್ನಿಶಿ ಶ್ರಮಿಸುತ್ತಿರುವ ಶ್ರೀ ವಾದಿರಾಜ್ ತಾಯಲೂರು ಅವರ ನಿಸ್ವಾರ್ಥಸೇವೆಯನ್ನು ಗುರುತಿಸಿ ಕೇಂದ್ರ ಸರ್ಕಾರದ ನೀತಿ ಆಯೋಗದಿಂದ ಮಾನ್ಯತೆ ಪಡೆದ ಗ್ಲೋಬಲ್ ವರ್ಚುಯಲ್ ಅಕಾಡೆಮಿ ಫಾರ್ ಪೀಸ್ ಅಂಡ್ ಎಜುಕೇಷನ್ ವತಿಯಿಂದ ಈ ಸಾಲಿನ ಗೌರವ ಡಾಕ್ಟರೇಟ್ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.
Get In Touch With Us info@kalpa.news Whatsapp: 9481252093
.







Discussion about this post