ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ದಶಾವತಾರಗಳೋ, ದ್ವಾದಶಾವತಾರಗಳೋ, ಶತಾವತಾರಗಳೋ ಅಥವಾ ಸಹಸ್ರ ವಿರಾಟ್ ರೂಪಗಳೊ ಎಂಬುದು ಮುಖ್ಯವಲ್ಲ. ಈ ಅವತಾರಗಳ ಮೂಲಕ ನಮ್ಮ ಜೀವನಕ್ಕೆ ದೊರಕುವ ದಿವ್ಯ ಸಂದೇಶವೇನು? ಅದನ್ನು ನಾವೆಷ್ಟರ ಮಟ್ಟಿಗೆ ಅನುಷ್ಠಾನಕ್ಕೆ ತಂದುಕೊಳ್ಳುತ್ತೇವೆ ಎಂಬುದಷ್ಟೇ ಮುಖ್ಯವಾಗುತ್ತದೆ. ಆದಿ ಪೌರುಷವೇ ಪುರುಷ. ಅದೇ ಆದಿಶಕ್ತಿ ಕೂಡಾ. ನಾರಾ ಎಂದರೆ ನೀರು. ಅಯಣ ಎಂದರೆ ಆಶ್ರಯ. ಸಕಲ ಜೀವಿಗಳೂ ನೀರನ್ನೇ ಆಶ್ರಯಿಸಿವೆ. ಭಗವಂತನ ಅಭಿವ್ಯಕ್ತತೆಯೂ ನೀರಿನಿಂದಲೇ ಆಗಿದೆ. ಆದ್ದರಿಂದಲೇ, ದಶಾವತಾರಗಳು ಅಭಿವ್ಯಕ್ತ ಸ್ವರೂಪವಾಗಿವೆ.
ಮತ್ಸ್ಯಾವತಾರ
ನೀರಿನಲ್ಲಿ ಮೊದಲು ಜಲಚರವಾಗಿ ಪರಮಾತ್ಮನ ಅವತಾರ. ಹಾಗೆಯೇ ಮಾನವ ಶರೀರದಲ್ಲೂ, ಜ್ಞಾನಗಂಗೆಯ ರೂಪದಲ್ಲಿ ಜೀವವಿಕಾಸವಾಗಿ, ವಿಚಾರಮಂಥನಕ್ಕೆ ಅವಕಾಶವಾದುದು ಮತ್ಸ್ಯಾವತಾರ. ಮತ್ಸ್ಯಾವತಾರದಲ್ಲಿ ಮೀನೊಂದು ಅನೇಕ ಜನರನ್ನು ಪ್ರಳಯದಿಂದ ಸಂರಕ್ಷಣೆಯನ್ನು ಮಾಡಿದಂತೆಯೇ, ಜ್ಞಾನೋದಯವು ನಮ್ಮ ಜೀವನದಲ್ಲಿ ಒಮ್ಮೊಮ್ಮೆ ಏಳುವ ಬಿರುಗಾಳಿ ಹಾಗೂ ಪ್ರಳಯದಿಂದ ನಮ್ಮನ್ನು ಸಂರಕ್ಷಿಸುತ್ತದೆ.
ಈ ಅವತಾರದಲ್ಲಿ ಮಾನವ ಜನಾಂಗದ ಮೂಲ ಪುರುಷನಾದ ಮನು ಮತ್ತು ಬ್ರಹ್ಮನ ಮಾನಸ ಪುತ್ರರಾದ ಮಹರ್ಷಿಗಳು ಮತ್ತು ಅವರ ಪತ್ನಿಯರನ್ನು ಪ್ರಳಯದಲ್ಲಿ ವಿಷ್ಣುವು ಮೀನಿನ ರೂಪ ಧರಿಸಿ ಕಾಪಾಡುತ್ತಾನೆ. ಸೃಷ್ಟಿ ಕ್ರಿಯೆ ಪ್ರಪಂಚದಲ್ಲಿ ಆರಂಭವಾದಾಗ ಎಲ್ಲೆಲ್ಲೂ ನೀರು ತುಂಬಿ ಕೇವಲ ಜಲಚರಗಳು ಮಾತ್ರ ವಾಸಿಸುತ್ತಿದ್ದವು ಎಂಬುದನ್ನು ವಿಜ್ಞಾನವೇ ಒಪ್ಪಿದೆ. ಈ ಸೃಷ್ಟಿಕ್ರಿಯೆಯ ಆರಂಭಿಕ ಹಂತವನ್ನು ಮತ್ಸ್ಯಾವತಾರ ಸಂಕೇತಿಸುತ್ತದೆ.
ಕೂರ್ಮಾವತಾರ
ಕೂರ್ವೆಂದರೆ ಆಮೆ. ಅಮೆಯ ಬೆನ್ನು ಬಹಳ ಗಟ್ಟಿಯಾದುದು. ಸಮುದ್ರಮಂಥನದ ಸಂದರ್ಭದಲ್ಲಿ ಪರಮಾತ್ಮನು ಕೂರ್ಮಾವತರಿಯಾಗಿ ಬಂದನು. ನಮ್ಮ ಅಂತರಂಗದಲ್ಲೂ ಹೃದಯಸಾಗರದಲ್ಲಿ ಪ್ರಜ್ಞಾನವೆಂಬ ಶ್ರೇಷ್ಠವಾದ ಮತ್ತು ಎತ್ತರವಾದ ಪರ್ವತವನ್ನು ಇರಿಸಿ, ಕುಂಡಲಿನೀ ಎಂಬ ಸರ್ಪವನ್ನೇ ಸುತ್ತಿ, ಇಂದ್ರಿಯಗಳೆಂಬ ದೇವ-ದಾನವರ ಸಹಕಾರದಿಂದ, ವಿಚಾರಮಂಥನವನ್ನು ಕೈಗೊಂಡಾಗ, ಯಾವುದೇ ರೀತಿಯಲ್ಲಿ ಕುಸಿಯಬಾರದೆಂಬ ದೃಷ್ಟಿಯಿಂದ ಭಗವಂತನಲ್ಲಿ ಭಕ್ತಿ ಎಂಬ ಕೂರ್ಮನ ಸಹಾಯವನ್ನು ಪಡೆಯಬೇಕು. ಆಮೆಯು ತನ್ನ ಕಾಲುಗಳನ್ನು ಒಳಗೆ ಸೇರಿಸಿಕೊಂಡಂತೆ, ನಾವು ನಮ್ಮ ಇಂದ್ರಿಯಗಳನ್ನು ಒಳಮುಖವಾಗಿಸಿಕೊಳ್ಳುವುದೇ ಕೂರ್ಮಾವತಾರದ ಸಂಕೇತ.
ಈ ಅವತಾರದಲ್ಲಿ ವಿಷ್ಣುವು ಸಮುದ್ರ ಮಥನ ಕಾಲದಲ್ಲಿ ಮಂದರ ಪರ್ವತಕ್ಕೆ ಆಮೆಯ ರೂಪಿಯಾಗಿ ಆಧಾರವಾಗಿದ್ದನ್ನು ಎಂಬುದು ಕತೆ. ಸೃಷ್ಟಿಕ್ರಿಯೆಯಲ್ಲಿ ಜಲಚರಗಳ ಮುಂದಿನ ಸ್ಥಿತಿ ನೀರು ಮತ್ತು ಭೂಮಿಗಳೆರಡರಲ್ಲೂ ವಾಸಿಸುವ ಉಭಯ ವಾಸಿಗಳದ್ದು. ಆಮೆ ಇಂತಹ ಉಭಯ ವಾಸಿಯಾಗಿದ್ದು ಈ ಅವತಾರ ಸೃಷ್ಟಿ ಮುಂದಿನ ಹಂತವನ್ನು ಸೂಚಿಸುತ್ತದೆ.
(ನಾಳೆ: ವರಾಹವತಾರ ಹಾಗೂ ನೃಸಿಂಹಾವತಾರ)
Get in Touch With Us info@kalpa.news Whatsapp: 9481252093
Discussion about this post