ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ವರಾಹವತಾರ
ವರಾಹ ಎಂದರೆ ಹಂದಿ. ಹಿರಣ್ಯಾಕ್ಷನೆಂಬ ರಾಕ್ಷಸನಿಂದ ಭೂದೇವಿಯನ್ನು ರಕ್ಷಿಸುವುದಕ್ಕಾಗಿ ತಾಳಿದ ಅವತಾರ. ತಾತ್ತ್ವಿಕವಾಗಿ ಹಿರಣ್ಯಾಕ್ಷನೆಂದರೆ, ಬಂಗಾರದ ಮೇಲೆ ದೃಷ್ಟಿಯಿರುವವರು ಎಂದರ್ಥ. ಕೆಲವರಿಗೆ ದೇವರೇ ಬಂಗಾರ. ಇನ್ನು ಕೆಲವರಿಗೆ ಬಂಗಾರವೇ ದೇವರು! ದೇವರೇ ಬಂಗಾರವೆನ್ನುವವರು ಊರ್ಧ್ವಮುಖಿಗಳಾಗಿ ಶ್ರೇಷ್ಠತೆಯನ್ನು ಪಡೆಯುವರು. ಆದರೆ, ಬಂಗಾರವೇ ದೇವರೆಂದು ಈ ಸಂಸಾರ ಸಾಗರದಡಿಯಲ್ಲಿ ಸಿಕ್ಕಿಹಾಕಿಕೊಂಡವರನ್ನು ಮೇಲಕ್ಕೆ ತರುವವನೇ ವಿಷ್ಣುವರಾಹಿ! ವರಾಹ ಎಂದರೆ ಮೋಡ ಎಂದೂ ಅರ್ಥವಿದೆ. ಸಮುದ್ರದಿಂದ ಆವಿಯಾದ ಜಲವು ಆಕಾಶಕ್ಕೆ ಹೋಗಿ ಗಾಳಿಯಿಂದ ತಣ್ಣಗಾಗಿ ಘನೀಕೃತವಾದ ಮೋಡವಾಗುವಂತೆ, ಲೌಕಿಕ ಮೋಹದಿಂದ ಈ ಶರೀರವೆಂಬ ಭೂಮಿಯು ಅಜ್ಞಾನದಿಂದ ಘನೀಕೃತವಾದಾಗ, ಮೋಡವನ್ನು ಕರಗಿಸುವಂತೆ, ಜ್ಞಾನಾಗ್ನಿ ಸ್ವರೂಪನಾದ ಭಗವಂತನು, ಜಡತ್ವವನ್ನು ಕರಗಿಸಿ ನೀರಿನ ಸ್ವರೂಪವನ್ನಿತ್ತು, ನದಿಯಂತೆ ಪ್ರವಹಿಸಿ, ನಾಲ್ಕು ಜನರಿಗೆ ಉಪಕಾರಿಯಾಗಿ ಮತ್ತೆ ತನ್ನನ್ನು ಸೇರುವಂತೆ ಮಾಡುವವನು ನಾರಾಯಣ. ನಮ್ಮನ್ನು ಸಂಸಾರ ಸಾಗರದಿಂದ ಮೇಲೆತ್ತುವವನು ವಿಷ್ಣುವರಾಹಿ. ಕಕ್ಷೆಯ ತಪ್ಪಿದ ಮಾನವರನ್ನು ಮೇಲಕ್ಕೆತ್ತಿ ಮತ್ತೆ ಸುಸ್ಥಿತಿಯಲ್ಲಿರಿಸುವವನು ವಿಷ್ಣುವರಾಹಿ.
ವರಾಹ ಎಂಬ ಶಬ್ದದ ಅಕ್ಷರಾರ್ಥ ಅತ್ಯುತ್ತಮವಾದ್ದು ಎಂಬುದು. ಭೂಮಿಯ ಮೇಲೆ ವಾಸಿಸಲು ಆರಂಭಿಸಿದ ಆರಂಭಿಕ ಸಸ್ತನಿಗಳಲ್ಲಿ ಹಂದಿಯು ಬಲಿಷ್ಠವಾದದ್ದರಿಂದ ಇದು ಸೃಷ್ಟಿಯ ಮೂರನೇ ಹಂತವನ್ನು ಪ್ರತಿನಿಧಿಸುತ್ತದೆ.
ನೃಸಿಂಹಾವತಾರ
ಹಿರಣ್ಯಕಶಿಪು ಎಂಬ ರಾಕ್ಷಸನನ್ನು ಸಂಹಾರ ಮಾಡಲು ಕಂಬದಿಂದ ಹೊರಬಂದವನು ನೃಸಿಂಹ. ಹಿರಣ್ಯವೆಂದರೆ ಬಂಗಾರ. ಕಶಿಪು ಎಂದರೆ ಅನ್ನ. ಇಲ್ಲಿಯೂ ಇದೇ ತತ್ತ್ವ. ಬಂಗಾರವೇ ಕೆಲವರಿಗೆ ಅನ್ನವಾದರೆ, ಇನ್ನು ಕೆಲವರಿಗೆ ಅನ್ನವೇ ಬಂಗಾರ! ಬಂಗಾರವೇ ಅನ್ನವಾದವರು ಬದುಕುವುದಾದರೂ ಹೇಗೆ? ಇದು ಅಜ್ಞಾನದ ಪರಮಾವಧಿ!! ಈ ಶರೀರವೇ ಒಂದು ಕಂಬದಂತಿರಲು ಬಿಂಬ ಸ್ವರೂಪನಾಗಿರುವ ಪರಮಾತ್ಮನು ಒಳಗಿನಿಂದಲೇ ಪ್ರತ್ಯಕ್ಷನಾಗಿ, ದೇಹಭಾವನೆಯನ್ನು ಒಡೆದುಹಾಕಿ, ಆತ್ಮಜ್ಞಾನವನ್ನಿತ್ತು, ನಾನು ಸಾಯಬಾರದು, ಸಾಯಬಾರದು ಎನ್ನುತ್ತೀಯಲ್ಲಾ! ಹುಟ್ಟಿದ್ದು ಶರೀರ, ಬೆಳೆಯುವುದು ಶರೀರ. ಆಮೇಲೆ ಅಳಿಯುವುದೂ ಶರೀರವೇ! ನೀನು ಹುಟ್ಟಿಯೇ ಇಲ್ಲದಿದ್ದಾಗ ಸಾವಿನ ಮಾತೆಲ್ಲಿ ಎಂದು ನಿಜ ಸ್ವರೂಪ ದರ್ಶನವನ್ನು ಮಾಡಿಸಿ, ಪ್ರ-ಆಹ್ಲಾದವನ್ನು ನೀಡಿದವನು ನೃಸಿಂಹ.
ವಿಷ್ಣುವಿನ ಮಹಾ ಭಕ್ತನಾದ ಪ್ರಹ್ಲಾದನನ್ನು ಅವನ ತಂದೆಯಾದ ಹಿರಣ್ಯಕಶಪು ಹಿಂಸಿಸುತ್ತಿದ್ದಾಗ ನರಸಿಂಹನು ಕಂಬದಿಂದ ಒಡೆದು ಬಂದು ಹಿರಣ್ಯಕಶಪುನನ್ನು ಕೊಂದನು. ನರನು(ಉನ್ನತ ಜೀವಿಗಳಲ್ಲಿನ ಅತ್ಯುನ್ನತ ಜೀವಿ) ಮತ್ತು ಸಿಂಹ (ಕೆಳವರ್ಗದ ಜೀವಿಗಳಲ್ಲಿನ ಉನ್ನತ ಜೀವಿ) ಇವುಗಳ ಸಂಯೋಗ. ಇದು ಮಾನವ ಪ್ರಾಣಿಸ್ಥಿತಿಯಿಂದ ಅಗತಾನೇ ಮೇಲೇರುತ್ತಿದ್ದ ವಿಕಾಸದ ಮೊದಲಮೆಟ್ಟಿಲನ್ನು ಸೂಚಿಸುತ್ತದೆ. ಇಲ್ಲಿಂದ ಮುಂದಿನ ಆರು ಅವತಾರಗಳು ಮನುಷ್ಯ ರೂಪಿನವು ಎಂಬುದನ್ನು ಎಚ್ಚರಿಕೆಯಿಂದ ಈ ಹಂತದಲ್ಲಿ ಗಮನಿಸಬೇಕು.
(ನಾಳೆ: ವಾಮನಾವತಾರ ಹಾಗೂ ಪರಶುರಾಮಾವತಾರ)
Get in Touch With Us info@kalpa.news Whatsapp: 9481252093
Discussion about this post