ಕಲ್ಪ ಮೀಡಿಯಾ ಹೌಸ್
ದಾವಣಗೆರೆ: ಕೋವಿಡ್ -19 ವಿಶ್ವದಾದ್ಯಂತ ತನ್ನ ಕದಂಬ ಬಾಹುವನ್ನು ಚಾಚಿ ಸ್ವಯಂ ಪ್ರೇರಿತವಾಗಿ ಎಲ್ಲಾ ವ್ಯಾಪಾರ ವಹಿವಾಟು ಸ್ಥಬ್ದ ಮಾಡಿ ಪ್ರತಿಯೊಬ್ಬರು ತಮ್ಮ ಜೀವ ಉಳಿಸಿಕೊಳ್ಳಲು ಮನೆಯಲ್ಲಿ ಕುಳಿತ ಸಂದರ್ಭದಲ್ಲಿ, ಯಾವುದೇ ವೈರಾಣುವಿಗೆ ಹೆದರದೇ ದೇಶದ ಏಳಿಗೆಗೆ, ಜನ ಸಾಮಾನ್ಯರಿಗೆ ಯಾವುದೇ ರೀತಿಯಲ್ಲಿ ತೊಂದರೆ ಆಗಬಾರದು ಎಂಬ ಉದ್ದೇಶದಿಂದ ತಮ್ಮ ಜೀವದ ಹಂಗು ತೊರೆದು ಎದೆ ಕೊಟ್ಟು ನಿಂತು ತಮ್ಮ ತಮ್ಮ ಜಮೀನುಗಳಲ್ಲಿ ನಿತ್ಯ ಕೆಲಸ ಮಾಡಿದ ಏಕೈಕ ವರ್ಗವೇ ರೈತಾಪಿ ವರ್ಗ ಅಂತಹ ವರ್ಗಕ್ಕೆ ಮುಂಚೂಣಿ ಕೊರೋನ ಯೋಧರು ಎಂದು ಘೋಷಿಸಬೇಕೆಂದು ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪವಿತ್ರ ರಾಮಯ್ಯ ಆಗ್ರಹಿಸಿದರು.
ದಾವಣಗೆರೆ ತಾಲ್ಲೂಕು ಅಣಬೇರು ಗ್ರಾಮದ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ನಡೆದ ರೈತರ ಅಹವಾಲು ಸ್ವೀಕಾರ ಸಮಯದಲ್ಲಿ ಮಾತನಾಡಿದ ಅವರು, ದೇಶದಲ್ಲಿ ಎಲ್ಲಾ ರಂಗಗಳಿಗೆ ಅನುದಾನ ಒದಗಿಸುವ ಮೂಲಕ ಅಭಿವೃದ್ದಿಗೆ ತಾರ್ಕಿಕ ಅಂತ್ಯ ಹಾಕಬಹುದು. ಆದರೆ ಕೃಷಿ ವರ್ಗಕ್ಕೆ ಎಷ್ಟೇ ಸಾವಿರ ಕೋಟಿ ಅನುದಾನ ನೀಡಿದರು ಅವರ ಬವಣೆ ತೀರಿಸಲಾರದಷ್ಟು ಅನಾನುಕೂಲತೆ ರೈತಾಪಿ ವರ್ಗದವರು ಎದುರಿಸುತ್ತಿದ್ದಾರೆ ಈ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನೂರಾರು ಯೋಜನೆಗಳು ಜಾರಿಗೆ ತರುವ ಮೂಲಕ ಅವರ ಬವಣೆಯನ್ನು ನೀಗಿಸಲು ಪ್ರಯತ್ನಿಸುತ್ತಿದೆ ಎಂದರು.
ರೈತ ಕುಟುಂಬದಿಂದ ಬಂದಂತಹ ಮುಖ್ಯಮಂತ್ರಿಗಳಿಗೆ ರೈತರ ಬಗ್ಗೆ ಅಪಾರವಾದ ಕಾಳಜಿ ಇದೆ. ಹಗಲು ರಾತ್ರಿ ಕಷ್ಟ ಪಡುವ ನಿಸ್ವಾರ್ಥದಿಂದ ಸೇವೆ ಸಲ್ಲಿಸುವ ಈ ವರ್ಗಕ್ಕೆ ಕೋವಿಡ್ -19 ಸಂಕಷ್ಟದ ಸಮಯದಲ್ಲಿಯೂ ಕೂಡ ಹಲವಾರು ಯೋಜನೆಗಳನ್ನು ನೀಡುತ್ತಿದ್ದಾರೆ, ಅಧಿಕಾರಿಗಳು ಯೋಜನೆಯ ಮಾಹಿತಿಯನ್ನು ರೈತಾಪಿ ವರ್ಗದವರಿಗೆ ನೀಡಿ ರೈತರನ್ನು ಸ್ವಾವಲಂಬಿಗಳಾಗಿ ಜೊತೆಗೆ ಯೋಜನೆಯ ಫಲಾನುಭವಿಗಳಾಗಿ ಮಾಡುವ ಜವಾಬ್ದಾರಿ ನಮ್ಮ ನಿಮ್ಮೆಲ್ಲರ ಮೇಲಿದೆ ಇದಕ್ಕೆ ಪ್ರತಿಯೊಬ್ಬರು ಕೈಜೋಡಿಸಬೇಕು ಎಂದು ಸಲಹೆ ನೀಡಿದರು.
ಗ್ರಾಮದ ರೈತರಾದ ಶಿವಣ್ಣ ಮಾತನಾಡಿ, ನಮ್ಮ ಭಾಗದಲ್ಲಿ ನಾಲೆ ಆಧುನೀಕರಣ ಆದ ದಿನದಿಂದ ನಾಲೆಯಲ್ಲಿ ತುಂಬಿರುವ ಹೂಳು ಮತ್ತು ಜಂಗಲ್ ಸ್ವಚ್ಛಗೊಳಿಸದೆ ಹಾಗೂ ಜಾಲಿ ಗಿಡಗಳು ಬೆಳೆದಿರುವ ಕಾರಣ ತೊಂದರೆಯಾಗಿದೆ. ಈ ಸಂಬಂಧ ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಸಮಸ್ಯೆ ಬಗೆಹರಿಸಲು ನಿರ್ದೇಶನ ನೀಡಬೇಕು ಎಂದು ಒತ್ತಾಯಿಸಿದರು.
ಜೊತೆಗೆ ಈ ಭಾಗದಲ್ಲಿ ಭದ್ರಾ ಕಾಡಾ ಪ್ರಾಧಿಕಾರದಿಂದ ಅಚ್ಚುಕಟ್ಟು ರಸ್ತೆಗಳು, ಹೊಲಗಾಲುವೆ ಅಭಿವೃದ್ದಿ ಆಗಬೇಕು ಇದಕ್ಕೆ ಮುಂದಿನ ದಿನಗಳಲ್ಲಿ ಅನುದಾನ ನೀಡುವಂತೆ ಮನವಿ ಮಾಡಿದರು .
ಈ ಸಮಯದಲ್ಲಿ ಸ್ಥಳದಲ್ಲಿದ್ದ ಪಿಡಿಓ ಅವರಿಗೆ ನರೇಗಾ ಯೋಜನೆಯಲ್ಲಿ ನೂರಾರು ಕೋಟಿ ಅನುದಾನ ಬಿಡುಗಡೆಯಾಗಿದ್ದು ಅದನ್ನು ಬಳಸಿಕೊಂಡು ನಾಲೆಗಳನ್ನು ಸ್ವಚ್ಛ ಮಾಡಿಸುವಂತೆ ಸೂಚನೆ ನೀಡಲಾಯಿತು. ಇದಕ್ಕೆ ಉತ್ತರಿಸಿದ ಪಿಡಿಒ, ನರೇಗಾ ಕೆಲಸ ಮಾಡಲು ಕಾರ್ಮಿಕರು ಸಿಗುವುದಿಲ್ಲ ಎಂದಾಗ ಊರಿನಲ್ಲಿ ಹಲಗೆ ಹೊಡೆಸುವಂತೆ ಹೇಳಿದರು. ಹೀಗೆ ಮಾಡುವುದರಿಂದ ಕಾರ್ಮಿಕರು ಕೆಲಸಕ್ಕೆ ಬರುತ್ತಾರೆ ಜೊತೆಗೆ ಅವರಿಗೆ ಕೋವಿಡ್ ಸಂಕಷ್ಟದ ಸಮಯದಲ್ಲಿ ಹಾಗೂ ಗ್ರಾಮದಲ್ಲಿ ಜಮೀನಿನ ಕೆಲಸ ಕಡಿಮೆ ಇರುವ ಈ ಬಿಡುವಿನ ಅವಧಿಯಲ್ಲಿ ಅವರಿಗೆ ಕೆಲಸ ನೀಡಿದಂತಾಗುತ್ತದೆ ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಕುವೆಂಪು ವಿಶ್ವವಿದ್ಯಾಲಯ ಸಿಂಡಿಕೇಟ್ ಸದಸ್ಯರಾದ ಬಳ್ಳೇಕೆರೆ ಸಂತೋಷ್, ಕಾಡಾ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ನಾರಾಯಣ ಸ್ವಾಮಿ, ನೀರಾವರಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಚಂದ್ರಶೇಖರ್ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post