ಚನ್ನಗಿರಿ: ಬ್ರಾಹ್ಮಣ ಸಮುದಾಯಕ್ಕೆ ಸೂಕ್ತ ಅವಕಾಶ ಸಿಕ್ಕರೆ ಯಾರೂ ದೇಶಬಿಟ್ಟು ಹೋಗುವುದಿಲ್ಲ. ತಮ್ಮ ಪ್ರತಿಭೆಯಿಂದ ಸ್ವದೇಶದಲ್ಲೇ ಸೇವೆಗೈಯುತ್ತಾರೆ. ಅವಕಾಶ ವಂಚನೆಯಿಂದ ಬ್ರಾಹ್ಮಣರು ದೇಶ ತೊರೆಯುತ್ತಿದ್ದಾರೆ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಕೆ.ಎನ್. ವೆಂಕಟನಾರಾಯಣ ಅಭಿಪ್ರಾಯಪಟ್ಟರು.
ಚನ್ನಗಿರಿ ತಾಲೂಕು ಬ್ರಾಹ್ಮಣ ಮಹಾಸಭಾ ಘಟಕ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹಿಂದಿನ ಮತ್ತು ಪ್ರಸ್ತುತ ಸರ್ಕಾರ ಬ್ರಾಹ್ಮಣ ಸಮುದಾಯದ ಕಲ್ಯಾಣಕ್ಕೆ 25 ಕೋಟಿ ರೂಪಾಯಿಗಳ ನೆರವನ್ನು ಘೋಷಿಸಿದೆ. ಸರ್ಕಾರ ಅದನ್ನು ಶೀಘ್ರ ಬಿಡುಗಡೆ ಮಾಡುವಂತೆ ತಾವು ಪ್ರಯತ್ನಿಸುತ್ತಿರುವುದಾಗಿ ಅವರು ತಿಳಿಸಿದರು.
ರಾಜ್ಯ ಮಹಾಸಭಾದ ಉಪಾಧ್ಯಕ್ಷ ಅಬಸೆ ದಿನೇಶ್ ಮಾತನಾಡಿ, ಈಗಿನ ವಿಪ್ರ ಸಮುದಾಯದ ಹೀನ ಸ್ಥಿತಿಗೆ ರಾಜಕೀಯವಾಗಿ ದೇಶಮಟ್ಟದಲ್ಲಿ ಉನ್ನತ ಸ್ಥಾನದಲ್ಲಿದ್ದ ವಿಪ್ರರು ಸರಿಯಾಗಿ ನಮ್ಮ ಸಮಸ್ಯೆಗಳಿಗೆ ಸ್ಪಂದಿಸದೇ ಇರುವುದೂ ಒಂದು ಮುಖ್ಯ ಕಾರಣ ಎಂದರು.
ಪ್ರಧಾನ ವಕ್ತಾರ ಮ.ಸ. ನಂಜುಂಡಸ್ವಾಮಿ ಮಾತನಾಡಿ, ಚನ್ನಗಿರಿ ವಿಪ್ರ ಸಮುದಾಯ ಅತ್ಯಂತ ಶಿಸ್ತಿನಿಂದ ಈ ಸಮಾರಂಭ ಏರ್ಪಡಿಸಿದೆ. ಬಹಳಷ್ಟು ವಿಪ್ರ ಸಂಘಟನೆಗಳ ಸಮಾರಂಭದಲ್ಲಿ ಯುವಜನತೆ ಭಾಗವಹಿಸದೇ ವಯಸ್ಸಾದವರನ್ನೇ ಹೆಚ್ಚು ಕಾಣುತ್ತಿದ್ದೆ. ಆದರೆ ಇಲ್ಲಿನ ಸಂಘಟನೆಯಲ್ಲಿ ಯುವಜನತೆ ಸಕ್ರೀಯವಾಗಿ ಪಾಲ್ಗೊಂಡಿರುವುದು ಹೆಮ್ಮೆಯ ಸಂಗತಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ದಾವಣಗೆರೆ ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಾ. ಆರ್.ಎಸ್. ಹೆಗಡೆ ಮಾತನಾಡಿ, ಉದ್ಘಾಟನೆ ಕೇವಲ ಇಂದಿಗೇ ನಿಲ್ಲದೆ ಕಾರ್ಯಶೀಲವಾಗಿ ಮುಂದಡಿಯಿಡಬೇಕು ಎಂದು ಆಶಿಸಿದರು.
ಸಮಾರಂಭದ ಅಧ್ಯಕ್ಷ ಪಿ. ರಂಗನಾಥ ರಾವ್ ಮಾತನಾಡಿ, ಇಂದಿನ ವಿಪ್ರ ಕುಟುಂಬದ ಯುವತಿಯರನ್ನು ತಮ್ಮತ್ತ ಸೆಳೆಯಲು ವಿಪ್ರ ಯುವಕರು ಸೋತಿದ್ದಾರೆ ಎಂದರು. ಸಮಾರಂಭದ ಯಶಸ್ಸಿಗೆ ಎಲ್ಲರ ಶ್ರಮಕಾರಣ ಎಂದು ಶ್ಲಾಘಿಸಿದರು.
ಮಹಾಸಭಾದ ಉಪಾಧ್ಯಕ್ಷ ಸಂತೇಬೆನ್ನೂರು ಸುಮತೀಂದ್ರ ನಾಡಿಗ್ ಅವರು ತಮ್ಮ ಪ್ರಸ್ತಾವನಾ ನುಡಿಗಳಲ್ಲಿ ಚನ್ನಗಿರಿ ತಾಲೂಕಿನ ದೇವಾಲಯಗಳು, ಶಾಸನಸ್ಥ ಕವಿಗಳು ಮತ್ತು ಪ್ರಸ್ತುತ ಸಾಹಿತ್ಯ, ಸಾಂಸ್ಕೃತಿಕ ಹಾಗೂ ಕಲಾಕ್ಷೇತ್ರಗಳಲ್ಲಿ ಕೊಡುಗೆ ನೀಡಿದ ವಿಪ್ರ ಮಹನೀಯರ ಬಗ್ಗೆ ಸೋದಾಹರಣವಾಗಿ ನಿರೂಪಿಸಿದರು.
ಮೊದಲಿಗೆ ಚನ್ನಗಿರಿ ತಾಲೂಕು ಬ್ರಾಹ್ಮಣ ಮಹಾಸಭಾದ ಉಪಾಧ್ಯಕ್ಷ ಚಿದಂಬರ ದೀಕ್ಷಿತ್ ಸ್ವಾಗತ ಕೋರಿ, ಖಜಾಂಚಿ ಎನ್.ವಿ. ರಮೇಶ್ ಸಂದೇಶ ವಾಚನ ಮಾಡಿದರು. ಡಾ.ಚನ್ನಗಿರಿ ಸುಧೀಂದ್ರ ಮತ್ತು ಶಿಕ್ಷಕ ವಾದಿರಾಜ್ ಕಾರ್ಯಕ್ರಮ ನಿರೂಪಿಸಿದರು.
ಬೆಳಿಗ್ಗೆ ಚನ್ನಗಿರಿ ಶ್ರೀರಾಘವೇಂದ್ರ ಸ್ವಾಮಿಗಳ ಮಠದಿಂದ ಆರಂಭಗೊಂಡ ಶೋಭಾಯಾತ್ರೆಯಲ್ಲಿ ವಿಪ್ರ ಮಹಿಳೆಯರು ಮಹನೀಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಕಾರ್ಯಕ್ರಮದ ಆರಂಭದಲ್ಲಿ ಶ್ರೀಯುತರಾದ ಜಯಶಂಕರ ಶಾಸ್ತ್ರಿ, ಮಂಜುನಾಥ ಶಾಸ್ತ್ರಿ, ನರಸಿಂಹ ಭಟ್, ಕಾಶೀನಾಥ ಜೊಯಿಸ್, ಬಿ.ಎಸ್. ಸುದರ್ಶನ, ಸಿ.ಜಿ. ಪ್ರಾಣೇಶಾ ಚಾರ್ ಅವರಿಂದ ವೇದಘೋಷ ಪ್ರಸ್ತುತಿ ನಡೆಯಿತು.
(ವರದಿ: ಡಾ. ಸುಧೀಂದ್ರ)
Discussion about this post