ಕಲ್ಲಿಕೋಟೆ: ಪರಸ್ಪರ ಪ್ರೀತಿಸಿ, ಅನುರಾಗದಲ್ಲಿದ್ದ ರಾಜ್ಯದ ಇಬ್ಬರು ಐಎಎಸ್ ಅಧಿಕಾರಿಗಳು ಪ್ರೇಮಿಗಳ ದಿನದಂದೇ ದಾಂಪತ್ಯಕ್ಕೆ ಕಾಲಿಟ್ಟ ಅಪರೂಪದ ಘಟನೆ ನಡೆದಿದೆ.
ದಾವಣಗೆರೆ ಜಿಲ್ಲಾಧಿಕಾರಿ ಡಾ.ಗೌತಮ್ ಬಗಾದಿ ಹಾಗೂ ದಾವಣಗೆರೆ ಜಿಲ್ಲಾ ಪಂಚಾಯ್ತಿ ಸಿಇಒ ಅಶ್ವಾಥಿ ಅವರುಗಳು ಇಂದು ಕೇರಳದ ಕಲ್ಲಿಕೋಟೆಯಲ್ಲಿ ಕುಟುಂಬಸ್ಥರ ಸಮ್ಮುಖದಲ್ಲಿ ಸತಿ-ಪತಿಗಳಾದರು.
ಈ ಶುಭ ಸಮಾರಂಭಕ್ಕೆ ಅವರ ಆಪ್ತರು, ನೆಂಟರು, ಬಂಧು ಬಳಗ ಸೇರಿದಂತೆ ದಾವಣಗೆರೆಯ ಅನೇಕ ಹಿರಿಯ ಹಾಗೂ ಕಿರಿಯ ಅಧಿಕಾರಿಗಳು ಸಾಕ್ಷಿಯಾಗಿದ್ದಾರೆ.ಇಬ್ಬರೂ ಅಧಿಕಾರಿಗಳು ಆಂಧ್ರ ಹಾಗೂ ಕೇರಳ ಶೈಲಿಯಲ್ಲಿ ಮದುವೆಯಾಗಿ ನವಜೀವನಕ್ಕೆ ಮುನ್ನುಡಿ ಬರೆದಿದ್ದಾರೆ.
ಜಿಲ್ಲಾಧಿಕಾರಿ ಗೌತಮ್ ಬಗಾದಿ ಮತ್ತು ಜಿಲ್ಲಾ ಪಂಚಾಯಿತಿ ಸಿಇಒ ಅಶ್ವಾಥಿ ಅವರು ಪ್ರತಿ ಸೋಮವಾರ ಜನಸ್ಪಂದನ ಕಾರ್ಯಕ್ರಮ ನಡೆಸಿ ಜನರ ಸಮಸ್ಯೆಗಳನ್ನು ಅಧಿಕಾರಿಗಳು ಬಗೆಹರಿಸುತ್ತಿದ್ದಾರೆ.
2018ರ, ಸೆಪ್ಟೆಂಬರ್ 7ರಿಂದ ದಾವಣಗೆರೆ ಜಿಲ್ಲಾಧಿಕಾರಿಯಾಗಿ ಗೌತಮ್ ಬಗಾದಿ ಅವರು ಕಾರ್ಯ ನಿರ್ವಹಿಸುತ್ತಿದ್ದಾರೆ. ಕೇರಳ ಮೂಲದ ಅಶ್ವಾಥಿ ಅವರು 2016ರ ನವೆಂಬರ್ 24ರಿಂದ ದಾವಣಗೆರೆ ಜಿಲ್ಲಾ ಪಂಚಾಯಿತಿ ಸಿಇಓ ಆಗಿ ಕೆಲಸ ಮಾಡುತ್ತಿದ್ದಾರೆ.
ಆಂಧ್ರಪ್ರದೇಶ ಮೂಲದ ಗೌತಮ್ ಬಗಾದಿ ಅವರು 2009 ಬ್ಯಾಚ್ ಐಎಎಸ್ ಅಧಿಕಾರಿ. ರಂಗರಾಯ ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ವ್ಯಾಸಂಗ ಮಾಡಿದ್ದಾರೆ. ಕಾರವಾರದಲ್ಲಿ ಉಪ ವಿಭಾಗಾಧಿಕಾರಿಯಾಗಿ, ಬೆಂಗಳೂರಿನ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಉಪ ಕಾರ್ಯದರ್ಶಿಯಾಗಿ, ಬೆಳಗಾವಿ ಜಿಲ್ಲಾ ಪಂಚಾಯಿತಿ ಸಿಇಓ ಆಗಿ, ರಾಜಕೀಯ ಜಿಲ್ಲಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದಾರೆ.
ಕೇರಳ ಮೂಲದ ಎಸ್. ಅಶ್ವಾಥಿ ಅವರು 2013ನೇ ಬ್ಯಾಚ್ ಐಎಎಸ್ ಅಧಿಕಾರಿ. ಕುಂದಾಪುರದ ಎಸಿಯಾಗಿ ಕೆಲಸ ಮಾಡಿದ್ದಾರೆ. ಸ್ವಚ್ಛ ಭಾರತ್ ಅಭಿಯಾನದಡಿ ಗ್ರಾಮೀಣ ಪ್ರದೇಶದಲ್ಲಿ ಶೌಚಾಲಯ ನಿರ್ಮಾಣ, ಶೌಚಾಲಯ ನಿರ್ಮಿಸಿಕೊಂಡ ಗರ್ಭಿಣಿಯರಿಗೆ ಸೀಮಂತ ಕಾರ್ಯ, ಬಾಣಂತಿಯರಿಗೆ ಉಡಿ ತುಂಬುವ ಶಾಸ್ತ್ರ ಮುಂತಾದ ಕಾರ್ಯಗಳ ಮೂಲಕ ಜನರ ಮೆಚ್ಚುಗೆ ಗಳಿಸಿದ್ದಾರೆ.
Discussion about this post