ಕಲ್ಪ ಮೀಡಿಯಾ ಹೌಸ್ | ದಾವಣಗೆರೆ |
ಅಭಿವೃದ್ಧಿಗೆ ರಾಜ್ಯ ಸರ್ಕಾರದ ಬಳಿ ಹಣ ಇಲ್ಲ ಎನ್ನುವ ಬಿಜೆಪಿಯ ಹಸಿ ಸುಳ್ಳುಗಳಿಗೆ ತಕ್ಕ ಉತ್ತರ ನೀಡುವ ರೀತಿಯಲ್ಲಿ ಒಂದೇ ದಿನ 1350 ಕೋಟಿ ವಚ್ಚದ ಅಭಿವೃದ್ಧಿ ಕಾರ್ಯಗಳನ್ನು ಉದ್ಘಾಟಿಸಿ, ಶಂಕುಸ್ಥಾಪನೆ ನೆರವೇರಿಸಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ #CM Siddaramaiah ಅವರು ನುಡಿದರು.
ದಾವಣಗೆರೆ ಜಿಲ್ಲೆಯ 1350 ಕೋಟಿ ವಿವಿಧ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ, ಶಂಕುಸ್ಥಾಪನೆ ನೆರವೇರಿಸಿ ಹಲವು ಇಲಾಖೆಗಳ ಫಲಾನುಭವಿಗಳಿಗೆ ಸವಲತ್ತುಗಳನ್ನು ವಿತರಿಸಿ ಮಾತನಾಡಿದರು.

ಸರ್ಕಾರದ ಬಳಿ ಹಣ ಇಲ್ಲ ಎನ್ನುವ ಬಿಜೆಪಿಯ ಕುರುಡು ಕಣ್ಣುಗಳಿಗೆ ಅಭಿವೃದ್ಧಿ ಕಾಣುತ್ತಿಲ್ಲ. ಜನರ ಮನೆ ಬಾಗಿಲಿಗೆ ನಮ್ಮ ಸರ್ಕಾರದ ಅಭಿವೃದ್ಧಿ ಕಾರ್ಯಗಳು ತಲುಪುತ್ತಿವೆ. ನಮ್ಮ ಬಳಿ ಹಣ ಇಲ್ಲದೇ ಹೋಗಿದ್ದರೆ ಒಂದೇ ದಿನ 1350 ಕೋಟಿ ಮೊತ್ತದ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ ಸಾಧ್ಯವಿತ್ತೇ ಎಂದು ಪ್ರಶ್ನಿಸಿದರು.
ನಾವು ಗ್ಯಾರಂಟಿಗಳನ್ನು ಘೋಷಿಸಿದಾಗ ಬಿಜೆಪಿಯ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಂದ ಹಿಡಿದು ಸ್ಥಳೀಯ ಬಿಜೆಪಿ ನಾಯಕರವರೆಗೂ, “ಗ್ಯಾರಂಟಿಗಳು ಜಾರಿಯೇ ಆಗುವುದಿಲ್ಲ” ಎಂದು ಹಸಿ ಹಸಿ ಸುಳ್ಳು ಹೇಳಿದ್ದರು. ಈಗ ಐದೂ ಗ್ಯಾರಂಟಿಗಳೂ ಜಾರಿ ಆಗಿವೆ. ಬಿಜೆಪಿಯ ಮತದಾರರೂ ಸೇರಿ ಇಡೀ ರಾಜ್ಯದ ಜನತೆ ಗ್ಯಾರಂಟಿಗಳ ಫಲಾನುಭವಿಗಳಾಗಿದ್ದಾರೆ ಎಂದರು.
ರಾಜ್ಯದ ಬಜೆಟ್ ಗಾತ್ರ ಹೆಚ್ಚಾಗಿರುವುದು ಮಾತ್ರವಲ್ಲದೆ, ಜಿಎಸ್ ಟಿ ಸಂಗ್ರಹದಲ್ಲೂ ರಾಜ್ಯ ದೇಶದಲ್ಲೇ ಎರಡನೇ ಸ್ಥಾನದಲ್ಲಿದೆ. ಇದು ರಾಜ್ಯದ ಆರ್ಥಿಕತೆ ಏರುಮುಖದಲ್ಲಿ, ಪ್ರಗತಿ ಪಥದಲ್ಲಿ ಇರುವುದಕ್ಕೆ ಸಾಕ್ಷಿ ಎಂದರು.

ಸಮಾಜದ ಎಲ್ಲಾ ಜಾತಿ, ವರ್ಗ ಮತ್ತು ಸಮುದಾಯಗಳಿಗೆ ಆರ್ಥಿಕ ಶಕ್ತಿ ನೀಡುವುದು ನಮ್ಮ ಸರ್ಕಾರದ ಜವಾಬ್ದಾರಿ. ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಆಶಯದಂತೆ ನಾವು ಸಾಮಾಜಿಕ ನ್ಯಾಯದ ಕಾರ್ಯಗಳನ್ನು ಜಾರಿಗೊಳಿಸುತ್ತಾ ಸಮ ಸಮಾಜದ ಆಶಯವನ್ನು ಈಡೇರಿಸುತ್ತಿದ್ದೇವೆ ಎಂದರು.
ಮೋದಿಯವರ ಅಚ್ಚೇ ದಿನ್ ಆಯೆಗಾ ಬರೀ ಡೈಲಾಗ್. ಯಾರ ಕಣ್ಣಿಗಾದರೂ ಅಚ್ಚೆ ದಿನ ಕಂಡಿದೆಯಾ ? ಮೋದಿ ಪ್ರಧಾನಿ ಆಗುವ ಮೊದಲು ಪೆಟ್ರೋಲ್, ಡೀಸೆಲ್, ಚಿನ್ನ, ರಸಗೊಬ್ಬರ ಬೆಲೆ ಎಷ್ಟಿತ್ತು. ಈಗ ಎಷ್ಟಿದೆ ಮೋದಿಯವರೇ ಎಂದು ಪ್ರಶ್ನಿಸಿದ ಸಿಎಂ, ಬೆಲೆ ಏರಿಕೆಯ ಕಾರಣಕರ್ತ ಪ್ರಧಾನಿ ಮೋದಿಯವರೇ ಆಗಿದ್ದಾರೆ ಎಂದರು.
ಹೀಗಾಗಿ ಬಿಜೆಪಿಯವರ ಸುಳ್ಳುಗಳಿಗೆ ರಾಜ್ಯದ ಜನತೆ ಸೊಪ್ಪು ಹಾಕುತ್ತಿಲ್ಲ. ಉಪ ಚುನಾವಣೆಯಲ್ಲಿ ಶಿಗ್ಗಾಂವ್, ಚನ್ನಪಟ್ಟಣದಲ್ಲಿ ಮಾಜಿ ಮುಖ್ಯಮಂತ್ರಿಗಳ ಮಕ್ಕಳನ್ನೇ ಜನ ಸೋಲಿಸಿ ಕಾಂಗ್ರೆಸ್ ಗೆ ಶಕ್ತಿ ತುಂಬಿದರು. ಸಂಡೂರಿನಲ್ಲೂ ನಾವೇ ಗೆದ್ದೆವು. ಮುಂದಿನ ಚುನಾವಣೆಯಲ್ಲೂ ನಾವೇ ಮತ್ತೆ ಗೆದ್ದು ಬರ್ತೀವಿ ಎಂದು ಭರವಸೆ ವ್ಯಕ್ತಪಡಿಸಿದರು.
ರಾಜ್ಯಕ್ಕೆ 15 ನೇ ಹಣಕಾಸು ಆಯೋಗದಲ್ಲೂ ಅನ್ಯಾಯ ಆಯಿತು. 11500 ಕೋಟಿ ರೂಪಾಯಿ 15 ನೇ ಆಯೋಗದಿಂದ ಅನ್ಯಾಯವಾಯಿತು. ಭದ್ರಾ ಮೇಲ್ದಂಡೆ ಯೋಜನೆಗೆ ಘೋಷಿಸಿದ್ದ 5000 ಕೋಟಿಯಲ್ಲಿ ಒಂದು ರೂಪಾಯಿಯನ್ನೂ ನೀಡಲಿಲ್ಲ ಎಂದು

ಅಭಿವೃದ್ಧಿ ವಿಚಾರದಲ್ಲಿ ನಾವು ಜಾತಿ, ಧರ್ಮ, ಪಕ್ಷ ನೋಡುವುದಿಲ್ಲ. ಎಲ್ಲಾ ಪಕ್ಷದವರೂ ನಮ್ಮ ಗ್ಯಾರಂಟಿಗಳ ಫಲಾನುಭವಿಗಳು. ಅಭಿವೃದ್ಧಿ ವಿಚಾರದಲ್ಲಿ, ಕೇಂದ್ರ ಸರ್ಕಾರ ನಮಗೆ ಮಾಡಿದ ದ್ರೋಹದ ವಿಚಾರದಲ್ಲಿ ನಾನು ಸುಳ್ಳು ಹೇಳಿದ್ದರೆ ಮತ್ತೆ ಸಾರ್ವಜನಿಕವಾಗಿ ವೇದಿಕೆ ಹತ್ತೋದಿಲ್ಲ, ಭಾಷಣ ಮಾಡುವುದಿಲ್ಲ ಎಂದು ಸವಾಲು ಹಾಕಿದರು.
ಅಶೋಕ್- ವಿಜಯೇಂದ್ರ ಸಾರ್ವಜನಿಕ ಚರ್ಚಗೆ ಬನ್ನಿ
ರಾಜ್ಯದ ಆರ್ಥಿಕತೆ ಮತ್ತು ಅಭಿವೃದ್ಧಿ ವಿಚಾರದಲ್ಲಿ ಸಾರ್ವಜನಿಕವಾಗಿ ಬಹಿರಂಗ ಚರ್ಚೆಗೆ ಬನ್ನಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮತ್ತು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸವಾಲು ಹಾಕಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post