ಕಲ್ಪ ಮೀಡಿಯಾ ಹೌಸ್ | ದಾವಣಗೆರೆ |
ಅಂಗವೈಕಲ್ಯ ಕೇವಲ ದೇಹಕ್ಕೆ ಹೊರತು, ಮನಸ್ಸಿಗಲ್ಲ. ಸಾಧಿಸುವ ಛಲ ಹಾಗೂ ಪರಿಶ್ರಮವಿದ್ದರೆ ವಿಕಲಚೇತನರೂ ಕೂಡ ಸಾಮಾನ್ಯರಂತೆ ಉತ್ತಮ ಬದುಕು ಕಟ್ಟಿಕೊಳ್ಳಲು ಸಾಧ್ಯ ಎಂದು ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿಯ ತುಂಗಾಭದ್ರ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿ.ಪಂ., ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಹಾಗೂ ವಿಕಲಚೇತನರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಿರುವ ವಿವಿಧ ಸ್ವಯಂ ಸೇವಾ ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಲಾದ ವಿಶ್ವ ವಿಕಲಚೇತನರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸರ್ಕಾರದ ಸೌಲಭ್ಯ ಪಡೆಯುತ್ತಿರುವ ವಿಕಲಚೇತನರು, ಇತರರಿಗೂ ಯೋಜನೆಯ ಸವಲತ್ತು ತಲುಪುವಂತೆ ಮಾಡಬೇಕು. ಸರ್ಕಾರಿ ವ್ಯವಸ್ಥೆಯಲ್ಲಿ ಅಧಿಕಾರಿಗಳು ವಿಕಲಚೇತನರ ಹಿತಕ್ಕಾಗಿ ಮಾಡುವ ಸೇವೆ ಶ್ರೇಷ್ಠ ಮಟ್ಟದ್ದಾಗಿದ್ದು, ನಿಜಕ್ಕೂ ಖುಷಿ ನೀಡುತ್ತದೆ. ವಿಕಲತೆಯನ್ನು ಶಾಪ ಎಂದು ಚಿಂತಿಸಬಾರದು. ಒಂದೇ ಕಾಲಿನಲ್ಲಿ ಮೌಂಟ್‍ಎವೆರೆಸ್ಟ್ ಶಿಖರ ಏರಿ ಸಾಧನೆ ಮಾಡಿದ ಮಹಿಳೆಯರಿದ್ದಾರೆ. ಅಂತಹವರ ಸಾಧನೆಯನ್ನು ಸ್ಪೂತಿಯಾಗಿ ತೆಗೆದುಕೊಳ್ಳಬೇಕು. ವಿಶೇಷ ಸಾಧನೆ ಮಾಡಿರುವ ವಿಕಲಚೇತರನ್ನು ಮಾದರಿಯನ್ನಾಗಿಟ್ಟುಕೊಂಡು ಜೀವನ ನಡೆಸಬೇಕು ಎಂದು ಕರೆ ನೀಡಿದರು.

Also read: ಶೂಟಿಂಗ್ ವೇಳೆ ಅವಘಡ: ಸ್ಟಂಟ್ ಮಾಸ್ಟರ್ ಸುರೇಶ್ ದುರ್ಮರಣ
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಪ್ರವೀಣ ನಾಯಕ್ ಮಾತನಾಡಿ, ಜಗತ್ತಿನ ಅದ್ಭುತ ಪ್ರತಿಭೆಗಳೆಂದರೆ ವಿಶೇಷಚೇತನರು. ಅವರು ಪ್ರತಿಭೆಗಳ ನಿಧಿಯೇ ಆಗಿದ್ದಾರೆ. ಎಲ್ಲ ಕ್ಷೇತ್ರಗಳಲ್ಲಿ ಅವರು ತಮ್ಮ ಪ್ರತಿಭೆಯನ್ನು ಹೊರ ಹಾಕುವುದನ್ನು ನೋಡುತ್ತಿದ್ದೇವೆ ಎಂದರು.

ಕಾರ್ಯಕ್ರಮದಲ್ಲಿ ಜಿ.ಪಂ ಸಿಇಓ ಡಾ.ಎ ಚೆನ್ನಪ್ಪ, ಅಪರ ಜಿಲ್ಲಾಧಿಕಾರಿ ಪಿ.ಎನ್ ಲೋಕೇಶ್, ನಗರದ ಯೋಜನಾ ಅಧಿಕಾರಿ ಡಾ.ಮಹಾಂತೇಶ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಮಗೊಂಡ ಬಸರಗಿ, ಮ.ಮ.ಅ.ಇ.ಯ ಉಪನಿರ್ದೇಶಕ ಧರಣಿಕುಮಾರ್ ಸೇರಿದಂತೆ ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.












Discussion about this post