ಕರ್ನಾಟಕ ಸರ್ಕಾರದ ವ್ಯಾಪ್ತಿಗೆ ಬರುವ ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಕಂಪನಿಗಳ ಹುದ್ದೆಗಳಿಗೆ ಉದ್ಯೋಗಿಗಳನ್ನು ನೇಮಿಸುವಾಗ ಶೇ.75ರಷ್ಟು ಅವಕಾಶವನ್ನು ಕರ್ನಾಟಕದವರಿಗೆ ನೀಡುವಂತಹ ಕಾನೂನನ್ನು ಮಾನ್ಯ ಮುಖ್ಯಮಂತ್ರಿಯವರು ಜಾರಿಗೆ ತರಬೇಕಾಗಿ ಕರ್ನಾಟಕದ ಸಮಸ್ತ ನಾಗರಿಕರ ಪರವಾಗಿ ಕೇಳಿಕೊಳ್ಳುತ್ತೇನೆ.
ಇಂಥದ್ದೊಂದು ಅದ್ಭುತವಾದ ಕಾನೂನನ್ನು ಕರ್ನಾಟಕದಲ್ಲಿ ಜಾರಿಗೆ ತರುವುದರಿಂದ ಆಗುವ ಪ್ರಯೋಜನಗಳನ್ನು ಎಳೆಎಳೆಯಾಗಿ ಬಿಡಿಸಿ ಹೇಳುತ್ತೇನೆ ಕೇಳಿ.
1) ಉದ್ಯೋಗಾಕಾಂಕ್ಷಿಗಳು ಕಡ್ಡಾಯವಾಗಿ ಕನಿಷ್ಠ ಹತ್ತನೆಯ ತರಗತಿವರೆಗೆ ಕನ್ನಡ ಮಾಧ್ಯಮದಲ್ಲಿ ವಿದ್ಯಾಭ್ಯಾಸವನ್ನು ಮಾಡಿರಬೇಕು. ಹೀಗೆ ಮಾಡುವುದರಿಂದ ಕನ್ನಡ ಮಾಧ್ಯಮ ಶಿಕ್ಷಣ ಸಂಸ್ಥೆಗಳಿಗೆ ಹೊಸ ಚೈತನ್ಯವನ್ನು ನೀಡಿದ ಹಾಗೆ ಆಗುತ್ತದೆ. ಕನ್ನಡ ಮಾಧ್ಯಮದಲ್ಲಿ ಕಲಿತ ವಿದ್ಯಾರ್ಥಿಗಳ ಭವಿಷ್ಯತ್ತನ್ನು ರೂಪಿಸಿದ ಶ್ರೇಯಸ್ಸು ಕರ್ನಾಟಕ ಸರ್ಕಾರಕ್ಕೆ ಸಲ್ಲುತ್ತದೆ.
2) ಶೇ.75ರಷ್ಟು ಹುದ್ದೆಗಳನ್ನು ಕರ್ನಾಟಕದವರಿಗೆ ಕಲ್ಪಿಸಿ ಕೊಡುವುದರಿಂದ ಕರ್ನಾಟಕದ ವಿದ್ಯಾವಂತ ಯುವಜನತೆಗೆ ಉದ್ಯೋಗ ದೊರಕುತ್ತದೆ. ಇದರಿಂದ ನಿರುದ್ಯೋಗ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ.
3) ಕರ್ನಾಟಕದ ಪ್ರತಿಯೊಂದು ಕಚೇರಿಗಳಲ್ಲೂ ಕನ್ನಡ ಮಾತನಾಡುವವರ ಸಂಖ್ಯೆ ಹೆಚ್ಚಾಗುತ್ತದೆ. ಈ ರೀತಿ ಕಾನೂನನ್ನು ಜಾರಿಗೆ ತರುವುದರಿಂದ ಕರ್ನಾಟಕದಲ್ಲಿ ಕನ್ನಡ ಭಾಷೆಗೆ ಸರ್ಕಾರ ಕೊಡುವ ಬಹುದೊಡ್ಡ ಬೆಂಬಲ ಎನ್ನುವುದು ನನ್ನ ಭಾವನೆ.
4) ಕರ್ನಾಟಕದಲ್ಲಿರುವ ಕನ್ನಡಿಗರಿಗೆ ಉದ್ಯೋಗದಲ್ಲಿ ಹೆಚ್ಚಿನ ಅವಕಾಶವನ್ನು ಒದಗಿಸುವುದರಿಂದ ನೆರೆಯ ರಾಜ್ಯಗಳಿಂದ ಕರ್ನಾಟಕಕ್ಕೆ ಉದ್ಯೋಗ ಅರಸಿ ಬರುವವರ ಸಂಖ್ಯೆ ಕಡಿಮೆಯಾಗುತ್ತದೆ. ಇದರಿಂದ ಬೆಂಗಳೂರಿನಂಥ ಮಹಾನಗರಗಳಲ್ಲಿ ಜನರ ಜೀವನ ಮಟ್ಟ ಸುಧಾರಣೆ ಕಾಣುತ್ತದೆ.
5) ಆಂಧ್ರದ ನೂತನ ಮುಖ್ಯಮಂತ್ರಿಗಳು ಆಂಧ್ರ ಸರ್ಕಾರ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಉದ್ಯೋಗದ ಹುದ್ದೆಗಳಿಗೆ ನೇಮಕಾತಿ ಮಾಡುವಾಗ ಆಂಧ್ರ ಮೂಲದವರಿಗೆ ಶೇ.75ರಷ್ಟು ಮೀಸಲಾತಿ ನೀಡುವ ಕಾನೂನು ಜಾರಿಗೆ ತರುವ ಕುರಿತು ಚಿಂತನೆ ಮಾಡುತ್ತಿದ್ದಾರೆ. ಕರ್ನಾಟಕ ಸರ್ಕಾರ ಕೂಡ ಆಂಧ್ರಪ್ರದೇಶದ ಹಾಗೆಯೇ ಉದ್ಯೋಗಿಗಳ ನೇಮಕಾತಿಯಲ್ಲಿ ಬದಲಾವಣೆಯನ್ನು ಮಾಡಿಕೊಳ್ಳಬೇಕು ಎನ್ನುವುದು ಕರ್ನಾಟಕದ ಮಹಾಜನತೆಯ ಒಕ್ಕೊರಲ ಆಗ್ರಹ.
ಬದಲಾವಣೆ ನಮ್ಮಿಂದಲೇ ಆಗಲಿ, ಸಮೃದ್ಧ ಕರ್ನಾಟಕವನ್ನು ಕಟ್ಟೋಣ, ಎಲ್ಲರೂ ಸಂಪ್ರೀತಿಯಿಂದ ಬಾಳನ್ನು ನಡೆಸೋಣ. ನಿಮ್ಮ ಸರ್ಕಾರದ ಮೂಲಕವಾದರೂ ಕರ್ನಾಟಕದಲ್ಲಿ ಬೆಳೆದ ಮಕ್ಕಳ ಬದುಕನ್ನು ರೂಪಿಸಿ. ನಾವು ಬೆಳೆಯೋಣ ಕರ್ನಾಟಕದಲ್ಲಿ ಕನ್ನಡವನ್ನು ಬೆಳೆಸೋಣ. ಮಾನ್ಯ ಮುಖ್ಯಮಂತ್ರಿಗಳಾದ ಯಡಿಯೂರಪ್ಪ ಜೀ ಇದು ಕೇವಲ ನನ್ನೊಬ್ಬನ ಕೂಗಲ್ಲ ಇದು ಕರ್ನಾಟಕದ ಸಮಸ್ತ ಕನ್ನಡಿಗರ ಕೂಗು.
ಕರ್ನಾಟಕದ ಯುವಜನತೆಯ ಏಳಿಗೆಗಾಗಿ ಜಾತಿ ಬೇಧವನ್ನು ಮರೆತು, ಪಕ್ಷಬೇಧವನ್ನು ಬದಿಗಿಟ್ಟು ಕರ್ನಾಟಕದಾದ್ಯಂತ ಒಕ್ಕೊರಳ ಹೋರಾಟವನ್ನು ಮಾಡೋಣ.
ಲೇಖನ: ಗೌರೀಶ ಆವರ್ಸೆ
Discussion about this post