ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಕಲಬುರಗಿ: ಸಾವು ಎಲ್ಲ ಸಮಸ್ಯೆಗಳಿಗೆ ಪರಿಹಾರವಲ್ಲ. ಬದುಕಿ ಸಾಧಿಸಬೇಕು ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಪ್ರೇರಣಾದಾಯಕ ಮಾತುಗಳನ್ನಾಡಿದ್ದಾರೆ.
ಇಂದು ಕೃಷಿ ಸಚಿವ ಬಿ.ಸಿ.ಪಾಟೀಲರು ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡಿದ್ದ ರೈತ ಚಂದ್ರಕಾಂತ್ ಬಿರಾದರ್ ಅವರ ಕಲಬುರಗಿಯ ಲಾಡ್ ಚಿಂಚೋಳಿ ನಿವಾಸಕ್ಕೆ ಭೇಟಿ ನೀಡಿ ಸರ್ಕಾರದಿಂದ 5 ಲಕ್ಷ ರೂ. ಪರಿಹಾರದ ಚೆಕ್, ಹಾಗೂ ವೈಯಕ್ತಿಕವಾಗಿ 1 ಲಕ್ಷ ಪರಿಹಾರ, 2 ವಿಧವಾ ವೇತನದ ಆದೇಶದ ಪ್ರತಿ, ಅಂತ್ಯ ಸಂಸ್ಕಾರದ 5 ಸಾವಿರ ರೂ.ಗಳ ಚೆಕ್ ನೀಡಿ ಮೃತರ ಕುಟುಂಬಕ್ಕೆ ಧೈರ್ಯ ತುಂಬಿದರು. ಧೈರ್ಯವಾಗಿರಿ, ಚಿಂತೆ ಮಾಡಿ ಏನೂ ಪ್ರಯೋಜನವಿಲ್ಲ. ಸರ್ಕಾರ ನಿಮ್ಮ ನೆರವಿಗಿದೆ ಎಂದು ಮೃತ ರೈತನ ಪತ್ನಿಗೆ ಸಚಿವರು ಆತ್ಮಸ್ಥೈರ್ಯ ತುಂಬಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಲಾಕ್‌ಡೌನ್‌ನಿಂದಾಗಿ ಕಲ್ಲಂಗಡಿ ಮಾರಾಟಕ್ಕೆ ತೊಂದರೆಯಾಗಿದ್ದರಿಂದ ಚಂದ್ರಕಾಂತ್ ಬಿರಾದಾರ್ ಆತ್ಮಹತ್ಯೆ ಮಾಡಿಕೊಂಡಿದ್ದನ್ನು ಗಮನಿಸಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಕ್ಷಣವೇ ಈ ಸಂಬಂಧ ಸಭೆ ನಡೆಸಿ ರೈತರ ಉತ್ಪನ್ನಗಳ ಮಾರಾಟಕ್ಕೆ ಲಾಕ್‌ಡೌನ್‌ನಿಂದ ತೊಂದರೆಯಾಗಬಾರದೆಂದು ಮಹತ್ತರ ತೀರ್ಮಾನ ಕೈಗೊಂಡರು.ಅದರಂತೆ ಕೃಷಿ ಉತ್ಪನ್ನಗಳಿಗೆ ರೈತರಿಗೆ ಯಾವುದೇ ತೊಂದರೆಯಾಗದಂತೆ ಹಲವು ಮಹತ್ತರ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.
ಸಾಗಾಣಿಕೆದಾರರಾಗಲೀ ಕೂಲಿಕಾರ್ಮಿಕರಾಗಲೀ ಖರೀದಿದಾರರಾಗಲೀ ಎಲ್ಲರಿಗೂ ಜೀವಭಯ ಇರುವುದು ಸಹಜ. ಸಾಮಾಜಿಕ ಅಂತರ ಕಾಯ್ದುಕೊಂಡು ಎಚ್ಚರಿಕೆಯಿಂದ ಕೆಲಸ ಮಾಡಬೇಕು. ಖರೀದಿದಾರರ ಮನವೊಲಿಸಿ ಉತ್ಪನ್ನಗಳನ್ನು ಮಾರಾಟ ಮಾಡಬೇಕು ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಸಚಿವರು ಉತ್ತರಿಸಿದರು.
ಅತ್ಯವಶ್ಯಕ ವಸ್ತುಗಳ ಮಾರಾಟಕ್ಕೂ ನಿರ್ಬಂಧವಿಲ್ಲ
ಬಳ್ಳಾರಿ, ಹೊಸಪೇಟೆ, ಗಂಗಾವತಿ, ರಾಯಚೂರು ಈ ಭಾಗಗಳಲ್ಲಿ ಆಂದ್ರದಿಂದ ಕೃಷಿ ಪರಿಕರ ಉಪಕರಣಗಳನ್ನು ತರುವುದಕ್ಕೆ ಅನುಮತಿ ನೀಡುವಂತೆ ರೈತರು ಮನವಿ ಮಾಡಿದ್ದರ ಮೇರೆಗೆ ಹೊರರಾಜ್ಯದಿಂದ ರೈತರಿಗೆ ಕೃಷಿ ಯಂತ್ರೋಪಕರಣಗಳನ್ನು ತರಲು ಅವಕಾಶ ಕಲ್ಪಿಸಲಾಗಿದೆ. ಇಲಾಖೆ ನೀಡುವ ಗ್ರೀನ್ ಪಾಸ್ ಪಡೆದು ರೈತರು ವಾಹನಗಳಿಗೆ ಮಾರಾಟಕ್ಕೆ ಮುಂದಾಗಬಹುದು.ಆದರೆ ಯಾವುದೇ ಕಾರಣಕ್ಕೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಯಮ ಮುರಿಯಬಾರದು ಎಂದು ಸಚಿವರು ಸೂಚಿಸಿದರು.
ಈ ವೇಳೆ ಡಾ.ಉಮೇಶ್ ಜಾಧವ್, ಶಾಸಕರಾದ ಅಪ್ಪಯ್ಯಗೌಡ ಪಾಟೀಲ್, ಎಂ ವೈ ಪಾಟೀಲ್, ಡಾ.ಅವಿನಾಶ್ ಜಾಧವ್, ಕನಿಷ್ಕಾ ಫಾತೀಮಾ,ಎಂಎಲ್ ಸಿ ಸಿ ಪಾಟೀಲ್ ಉಪಸ್ಥಿತರಿದ್ದರು.
ಸುದ್ದಿಗೋಷ್ಠಿಗೂ ಮುನ್ನ ಜಿಲ್ಲಾಧಿಕಾರಿ ಸಭಾಭವನದಲ್ಲಿ ಕೊರೊನಾ ಲಾಕ್‌ಡೌನ್‌ನಿಂದ ಕೃಷಿ ಚಟುವಟಿಕೆಗಳ ಮೇಲೆ ಪರಿಣಾಮ ಸ್ಥಿತಿಗತಿ ಕುರಿತು ಜಿಲ್ಲೆಯ ಕೃಷಿ,ತೋಟಗಾರಿಕಾ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳ ಜೊತೆ ಸಮಾಲೋಚನಾ ಸಭೆ ನಡೆಸಿದರು.
ಕಲಬುರಗಿ ಜಿಲ್ಲೆಯಲ್ಲಿ ಜೂನ್ 7 ಕ್ಕೆ ಮುಂಗಾರು ಆರಂಭ ಆಗುವುದರಿಂದ ಜಿಲ್ಲೆಯಲ್ಲಿ 7 ವರೆ ಲಕ್ಷ ಹೆಕ್ಟೇರ್ ಮುಂಗಾರು ಬೆಳೆ ಕ್ಷೇತ್ರ ಇದ್ದು, ಅವುಗಳಲ್ಲಿ ಐದುವರೆ ಲಕ್ಷ ಹೆಕ್ಟೇರ್ ತೊಗರಿ ಕ್ಷೇತ್ರ ಇದ್ದು,ಒಟ್ಟು ಮುಂಗಾರು ಹಂಗಾಮಿಗೆ 24 ಸಾವಿರ ಕ್ವಿಂಟಲ್ ಬೀಜ ಅವಶ್ಯಕತೆ ಇದ್ದು, ಬೀಜಗಳ ಕೊರತೆ ಆಗದಂತೆ, ಹಾಗೂ ಜಿಲ್ಲೆಯ ಎಲ್ಲಾ ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜಗಳು ಅವಶ್ಯಕತೆ ಅನುಗುಣವಾಗಿ ರೈತರಿಗೆ ತಲುಪಿಸಲು ಜಂಟಿ ನಿರ್ದೇಶಕರಿಗೆ ಸಭೆಯಲ್ಲಿ ಸೂಚಿಸಲಾಯಿತು.
ಜಿಲ್ಲೆಯಲ್ಲಿ 319 ಗೊಬ್ಬರದ ವ್ಯಾಪಾರಸ್ಥರು ಇದ್ದು,ಇಗಾಗಲೇ ಎಲ್ಲಾ ಕೃಷಿ ಬೆಳೆ ಕಟಾವ್ ಆಗಿದರಿಂದ ಆರು ಸಾವಿರ ಹೆಕ್ಟೇರ್ ತೋಟಗಾರಿಕೆ ಕ್ಷೇತ್ರಕ್ಕೆ ಬೇಕಾಗುವ ರಸಗೊಬ್ಬರ ಪೂರೈಸಲು 87 ರಸಗೊಬ್ಬರ ವ್ಯಾಪಾರಸ್ಥರಿಗೆ ಹಸಿರು ಪಾಸ್ ನೀಡಿ ಅಂಗಡಿ ತೆರೆಯಲಾಗಿದೆ.
ಜಿಲ್ಲೆಯಲ್ಲಿ 28 ಬಾಡಿಗೆ ಯಂತ್ರ ಪೂರೈಸುವ ಘಟಕಗಳು ಇದ್ದು ಎಲ್ಲವೂ ಕಾರ್ಯನಿರ್ವಹಿಸಲು ಕೊರೊನಾ ನಿರ್ಬಂಧಿತ ಅವಧಿಯಲ್ಲಿ ಅವಕಾಶ ನೀಡಲಾಗಿದೆ.
ಇದಲ್ಲದೇ ಮೂವತ್ತು ಕೃಷಿ ಯಂತ್ರೋಪಕರಣಗಳನ್ನು ದುರಸ್ತಿ ಮಾಡುವ ಅಂಗಡಿಗಳಿಗೆ ಹಸಿರು ಪಾಸ್ ನೀಡಿ ಕರೊನಾ ನಿರ್ಬಂಧಿತ ಅವಧಿಯಲ್ಲಿ ಕಾರ್ಯನಿವಹಿಸಲು ಅನುವು ಮಾಡಿಕೊಡಲಾಗಿದೆ.ಇನ್ನು ತೋಟಗಾರಿಕೆ ಕ್ಷೇತ್ರದಲ್ಲಿ ಮೂರು ಹಾಪ್ ಕಾಮ್ಸ್ ಮೂಲಕ ಹಾಗೂ ಮುನ್ಸಿಪಲ್ ಕಾರ್ಪೊರೇಶನ್ ಆಯ್ತುಕ್ತರ ಸಹಯೋಗದೊಂದಿಗೆ 155 ಟಾಟಾ ಏಸ್ ಗಾಡಿಗಳನ್ನು ನಗರ ಮತ್ತು ಗ್ರಾಮಾಂತರ ಪ್ರದೇಶಗಳಿಗೆ ಹೋಗಿ ಹಣ್ಣು ಮತ್ತು ತರಕಾರಿ ಪೂರೈಕೆ ಮಾಡುವ ಕೆಲಸ ಮಾಡಲಾಗಿದೆ.155 ಕೈ ಗಾಡಿಗೆ ಪಾಸ್ ನೀಡಿ ಓಣಿಗಳಿಗೆ ತರಕಾರಿ ಮಾರಲು ಅನುಮತಿ ನೀಡಲಾಗಿದೆ ಎಂದು ಸಭೆಯಲ್ಲಿ ಮಾಹಿತಿ ನೀಡಿದರು.
600 ಎಕರೆಯಲ್ಲಿ ಬೆಳೆದ ಕಲ್ಲಂಗಡಿ ಬೆಳೆ ಕಟವ್ ಮಾಡಲಾಗಿದ್ದು, ಇನ್ನೂ 650,ಎಕರೆ ಕಲ್ಲಂಗಡಿ ಕಟಾವ್ ಹಂತದಲ್ಲಿ ಇದ್ದು.ಈ ಬೆಳೆಗಾರರ ಹಾಗೂ ಖರೀದಿದಾರರ ಮೊಬೈಲ್ ನಂಬರ್ ಕ್ರೂಢಿಕರಿಸಿ ವಾಟ್ಸಪ್ ಗ್ರೂಪ್ ಮಾಡಿ ಅನುಕೂಲ ಮಾಡಲಾಗಿದೆ.ಜಿಲ್ಲೆಯಲ್ಲಿ 37 ಹಣ್ಣು ಮತ್ತು ತರಕಾರಿ ವ್ಯಾಪಾರಸ್ಥರಿಗೆ ಹಾಗೂ 334 ಅಧಿಕೃತ ನೋಂದಾಯಿತ ವ್ಯಾಪಾರಸ್ಥರಿಗೆ ಪಾಸ್ ಗಳನ್ನು ನೀಡಿ ಗ್ರಾಹಕರಿಗೆ ತೊಂದರೆ ಆಗದಂತೆ ತರಕಾರಿ ಹಣ್ಣು ಪೂರೈಸಲಾಗುತ್ತಿದೆ.ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುವ ರೈತ ಉತ್ಪಾದಕರ ಸಂಸ್ಥೆಗಳು ಶೇಕಡಾ ಒಂದುವರೆಯಷ್ಟು ಮಾರುಕಟ್ಟೆ ಸೆಸ್ ಕಟ್ಟಬೇಕಾದರಿಂದ ಖರೀದಿಸಿದ ತರಕಾರಿ ಹಣ್ಣು ಗಳ ಬೆಲೆ ಹೆಚ್ಚಾಗುವುದರಿಂದ ರೈತ ಉತ್ಪಾದಕ ಸಂಸ್ಥೆಗಳಿಗೆ ಮಾರುಕಟ್ಟೆ ಸೆಸ್ ವಿನಾಯಿತಿ ನೀಡುವ ಬಗ್ಗೆ ಚರ್ಚಿಸಲಾಯಿತು.
ವರದಿ: ಕೃಷಿ ಸಚಿವರ ಮಾಧ್ಯಮ ಕಾರ್ಯದರ್ಶಿ
Get in Touch With Us info@kalpa.news Whatsapp: 9481252093
Discussion about this post