ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ನವದೆಹಲಿ: ಸಾಂಕ್ರಾಮಿಕ ಕೊರೋನಾ ವೈರಾಣು ಜಗತ್ತಿನಾದ್ಯಂತ ಕಾಳ್ಗಿಚ್ಚಿನಂತೆ ಹರಡತೊಡಗಿದಾಗ ಹೆಚ್ಚು ಆತಂಕಕೊಳ್ಳಬೇಕಾದ ದೇಶ ಯಾವುದಾದರು ಇದ್ದರೆ ಅದು ಭಾರತವಾಗಿತ್ತು. ಹೇಳಿಕೇಳಿ ಹೊಸ ವೈರಾಣು. ಇನ್ನೂವರೆಗೆ ಮದ್ದು ಅಭಿವೃದ್ಧಿಯಾಗಿಲ್ಲ.
ನೋಡನೋಡತ್ತಿರುವಂತೆಯೇ ಕೊರೊನಾ ಭಾರತಕ್ಕೂ ಕಾಲಿಟ್ಟಾಗಿತ್ತು. ಯೋಚನೆಮಾಡಿ ನೋಡಿ. 130 ಕೋಟಿಗೂ ಹೆಚ್ಚು ಜನಸಂಖ್ಯೆ ಇರುವ ಭಾರತದಲ್ಲೇನಾದರೂ ಕೊರೊನಾ ಸೋಂಕು ಸಾಂಕ್ರಾಮಿಕವಾಗಿ ಹಬ್ಬಿತು ಎಂದಾದರೆ ಪರಿಸ್ಥಿತಿಯನ್ನು ಊಹಿಸಿಕೊಳ್ಳಲೂ ಸಾಧ್ಯವಿರಲಿಲ್ಲ. ಹಾಗೆಯೇ ಇಡೀ ದೇಶದ ಸಾಮಾಜಿಕ ಆರ್ಥಿಕ ಚಟುವಟಿಕೆಯನ್ನು ಏಕಾಏಕಿ ಸ್ಥಬ್ಧಗೊಳಿಸುವುದೂ ಸುಲಭದ ಮಾತಾಗಿರಲಿಲ್ಲ. ದೇಶದ ಮುಂದಿದ್ದ ಆಯ್ಕೆ ಸೀಮಿತವಾಗಿತ್ತು. ಆದರೆ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರದ್ದು ನಿರ್ಣಾಯಕ ನಾಯಕತ್ವ. ಜನತಾ ಕರ್ಫ್ಯೂವಿಗೆ ಅಭೂತಪೂರ್ವ ಬೆಂಬಲ ದೊರೆತ ಬೆನ್ನಲ್ಲೇ ಮೋದಿಯವರು ಲಾಕ್ ಡೌನ್’ನಂತಹ ಕಠಿಣ ನಿರ್ಧಾರ ಕೈಗೊಂಡರು.
ಈಗಿನ ವ್ಯವಸ್ಥೆಯನ್ನು ಸ್ಥಬ್ಧಗೊಳಿಸಿ ಜನಜೀವನಕ್ಕೆ ತೊಂದರೆಯಾಗದಂತೆ ದಿನಬೆಳಗಾಗುವುದರೊಳಗೆ ಹೊಸ ವ್ಯವಸ್ಥೆಯನ್ನು ಸೃಷ್ಟಿಸುವುದು ಸವಾಲಾಗಿತ್ತು. ಸಂಪುಟ ಸಹೋದ್ಯೋಗಿಗಳಿಗೆ ಮೋದಿಯವರ ವೇಗಕ್ಕೆ ಹೆಜ್ಜೆ ಹಾಕುವುದು ಸುಲಭವಾಗಿರಲಿಲ್ಲ. ಎಲ್ಲವೂ ಚಕಚಕನೆ ನಿರ್ಧಾರವಾಗುತ್ತಿದ್ದವು. ತ್ವರಿತ ನಿರ್ಣಯಗಳನ್ನು ಕೈಗೊಳ್ಳಲು ಅನೇಕ ಉನ್ನತಾಧಿಕಾರದ ಕಾರ್ಯದಳಗಳನ್ನು ರಚಿಸಲಾಯಿತು. ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರ ಅಧ್ಯಕ್ಷತೆಯಲ್ಲಿ ಹಿರಿಯ ಸಚಿವರ ತಂಡ ರಚಿಸಲಾಯಿತು. ಲಾಕ್’ಡೌನ್’ನಿಂದ ಕೆಲಸ ಕಳೆದುಕೊಂಡು ನಿರುದ್ಯೋಗಿಗಳಾಗುವವರು ಉಪವಾಸ ಬೀಳದಂತೆ ನೋಡಿಕೊಳ್ಳುವುದು, ಜೀವನಾವಶ್ಯಕ ವಸ್ತುಗಳ ಸರಬರಾಜು ಮುಂದುವರಿಸುವುದು ಸಾಮಾನ್ಯವಾದ ಕೆಲಸವಾಗಿರಲಿಲ್ಲ. 1.75 ಲಕ್ಷ ಕೋಟಿ ರೂಪಾಯಿಷ್ಟು ಬೃಹತ್ ಮೊತ್ತದ ಪ್ರಧಾನಮಂತ್ರಿ ಬಡವರ ಕಲ್ಯಾಣ ಯೋಜನೆ ಸೇರಿದಂತೆ ಹಲವು ಪರಿಹಾರ ಯೋಜನೆಗಳನ್ನು ಜಾರಿಗೊಳಿಸಲಾಯತು.
ಔದ್ಯೋಗಿಕವಾಗಿ, ಆರ್ಥಿಕವಾಗಿ, ವೈದ್ಯಕೀಯ ಸೌಕರ್ಯಗಳ ದೃಷ್ಟಿಯಿಂದ ಭಾರತಕ್ಕಿಂತ ಬಹಳಷ್ಟು ಮುಂದುವರೆದಿರುವ ಹಾಗೂ ಜನಸಂಖ್ಯೆ ಕಡಿಮೆ ಇರುವ ಅಮೆರಿಕ ಹಾಗೂ ಇಟಲಿ, ಫ್ರಾನ್ಸ್, ಜರ್ಮನಿ, ಸ್ಪೇನ್ ಮುಂತಾದ ಔರೋಪ್ಯ ದೇಶಗಳಲ್ಲಿ ಲಕ್ಷಾಂತರ ಜನ ಕೊರೊನಾಕ್ಕೆ ಬಲಿಯಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಭಾರತವು ಕಳೆದ 6 ವಾರಗಳಲ್ಲಿ ಕೊರೋನಾ ಸೋಂಕು ಹಾಗೂ ಲಾಕ್’ಡೌನ್ ಪರಿಣಾಮಗಳನ್ನು ನಿರ್ವಹಿಸಿದ ರೀತಿಗೆ ಇಡೀ ವಿಶ್ವವೇ ತಲೆದೂಗಿದೆ.
ಕೊರೋನಾ ಸೋಂಕಿತರ ಸಂಖ್ಯೆಯನ್ನು ನಿರ್ವಹಿಸಬಹುದಾದ ಮಿತಿಯಲ್ಲಿ ಇಡುವಲ್ಲಿ ಲಾಕ್’ಡೌನ್ ಯಶಸ್ವಿಯಾಗಿದೆ. ಬಹುತೇಕ ಜನ ಲಾಕ್’ಡೌನ್ ನಿಯಮಗಳನ್ನು ಪಾಲಿಸಿ ಕೊರೋನಾ ವಿರುದ್ಧ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಡೆಸುತ್ತಿರುವ ಹೋರಾಟದಲ್ಲಿ ಕೈಜೋಡಿಸಿದ್ದಾರೆ. ಉಳಿದವರೂ ಸಹಕರಿಸಿದ್ದರೆ ಕೊರೋನಾ ಮಹಾಮಾರಿ ಇಷ್ಟೊತ್ತಿಗೆ ಬಹುಶಃ ದೇಶದಿಂದಲೇ ಮಾಯವಾಗಿರುತ್ತಿತ್ತೇನೋ.
ದೇಶವು ಲಾಕ್’ಡೌನ್ 3ನೆಯ ಹಂತವನ್ನು ಪ್ರವೇಶಿಸಿಯಾಗಿದೆ. ಮೊದಲೆರಡು ಹಂತದಲ್ಲಿ ಕೈಗೊಳ್ಳಲಾದ ಕ್ರಮಗಳ ಪರಾಮರ್ಶೆ ನಡೆದಿದೆ. ಪ್ರಮುಖ ಇಲಾಖೆಗಳೆಲ್ಲ ತಮ್ಮ ಜವಾಬ್ಧಾರಿಯನ್ನು ಹೇಗೆ ನಿಭಾಯಿಸಿವೆ? ಒಂದು ರೀತಿಯಲ್ಲಿ ಕೊರೋನಾ ಪರೀಕ್ಷೆಯ ಮೌಲ್ಯಮಾಪನ ಎನ್ನಬಹುದು. ಗಮನಾರ್ಹ ಸಂಗತಿಯೆಂದರೆ ಬಹುತೇಕ ಇಲಾಖೆಗಳು ತಮ್ಮ ಕರ್ತವ್ಯ ನಿರ್ವಹಣೆಯಲ್ಲಿ ಕೇಂದ್ರ ನಾಯಕತ್ವದಿಂದ ಸೈ ಅನಿಸಿಕೊಂಡಿವೆ. ಹೀಗೆ ಕೊರೊನಾ ಪರೀಕ್ಷೆಯಲ್ಲಿ ಉತ್ತಮ ಅಂಕಗಳೊಂದಿಗೆ ಉತ್ತೀರ್ಣವಾದ ಇಲಾಖೆಗಳ ಪೈಕಿ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅವರು ನಿರ್ವಹಿಸುವ ರಾಸಾಯನಿಕ ಹಾಗೂ ರಸಗೊಬ್ಬರ ಇಲಾಖೆಯೂ ಒಂದು.
ಸಾಂಕ್ರಾಮಿಕ ರೋಗದಿಂದ ಉಂಟಾಗಿರುವ ವಿಷಮ ಸ್ಥಿತಿ ಹಿನ್ನೆಲೆಯಲ್ಲಿ ರಾಸಾಯನಿಕ ಹಾಗೂ ರಸಗೊಬ್ಬರ ಇಲಾಖೆಗೆ ಸಹಜವಾಗಿಯೇ ಮಹತ್ವ ಹೆಚ್ಚಿದೆ. ಯಾಕೆಂದರೆ, ಜೀವರಕ್ಷಕ ಔಷಧ ಉದ್ಪಾದನೆ ಮತ್ತು ಸರಬರಾಜಿನ ಜವಾಬ್ಧಾರಿ ಇಲಾಖೆಯದ್ದೇ. ಕೊರೊನಾ ರೋಗಕ್ಕೆ ಸದ್ಯಕ್ಕೆ ಲಭ್ಯವಿರುವ ಸಂಜೀವಿನಿ ಅಂದರೆ ಹೈಡ್ರೋಕ್ಸಿಕ್ಲೋರೋಕ್ವಿನ್ (Hydroxychloroquine-HCQ), ಪೆರಾಸಿಟೊಮೊಲ್ (Paracetamol))ನಂತಹ ಮಾತ್ರೆಗಳೇ. ಇವುಗಳನ್ನು ಉತ್ಪಾದಿಸುವ ಜಗತ್ತಿನ ಪ್ರಮುಖ ರಾಷ್ಟ್ರ ಭಾರತ. ಹಾಗಾಗಿ ಅಮೆರಿಕ, ಬ್ರೆಜಿಲ್, ಇಂಗ್ಲೆಂಡ್, ಇಟಲಿ, ಫ್ರಾನ್ಸ್, ಜರ್ಮನಿ, ಸ್ಪೇನ್ ಮುಂತಾದ ದೇಶಗಳಿಂದ ಈ ಎರಡು ಔಷಧಗಳಿಗಾಗಿ ಭಾರಿ ಬೇಡಿಕೆಯಿತ್ತು. ಹಾಗೆಯೇ ದೇಶದ ಆಂತರಿಕ ಬೇಡಿಕೆಯನ್ನೂ ಆದ್ಯತೆ ಮೇರೆಗೆ ಪೂರೈಸಬೇಕಿತ್ತು.
ಜೊತೆಗೇ ದೇಶದಾದ್ಯಂತ ಇರುವ ಸುಮಾರು ಆರು ಸಾವಿರ ಜನೌಷಧ ಕೇಂದ್ರಗಳಿಗೆ ರಿಯಾಯ್ತಿ ದರದಲ್ಲಿ ಔಷಧಗಳ ಪೂರೈಕೆ ನಿರಂತರವಾಗಿರುವಂತೆ ನೋಡಿಕೋಳ್ಳಬೇಕು. ಮತ್ತೆ, ರಸಗೊಬ್ಬರ – ಕೃಷಿ ಚಟುವಟಿಕೆಯ ಅವಿಭಾಜ್ಯ ಅಂಗ, ರೈತರ ಜೀವನಾಡಿ. ಹೀಗಾಗಿ ಎಲ್ಲರ ಗಮನ ರಾಸಾಯನಿಕ ಹಾಗೂ ರಸಗೊಬ್ಬರ ಇಲಾಖೆಯ ಕಡೆಯಿತ್ತು.
ಲಾಕ್’ಡೌನ್ ಘೋಷಣೆಯಾದಾಗ ರಸಗೊಬ್ಬರ ವಿಚಾರವಾಗಿ ಹೆಚ್ಚು ಆತಂಕಕ್ಕೊಳಗಾದವರು ಬಹುಶಃ ರಾಜ್ಯದ ಚುಕ್ಕಾಣಿ ಹಿಡಿದವರು. ಸಾಗಣೆಯಲ್ಲಿ ಉಂಟಾಗಿರುವ ಅಡಚಣೆ, ಕೂಲಿಗಳ ಕೊರತೆಯಿಂದ ಮುಂಗಾರು ಹಂಗಾಮಿಗೆ ರಸಗೊಬ್ಬರ ಕೊರತೆ ಉಂಟಾಗಬಹುದು ಎಂಬುದು ಅವರ ಆತಂಕವಾಗಿತ್ತು. ಆದರೆ ರಸಗೊಬ್ಬರ ಇಲಾಖೆಯು ಈ ಎಲ್ಲ ಲೆಕ್ಕಾಚಾರವನ್ನು ತಲೆಕೆಳಗಾಗಿಸಿದೆ. ಬಹುತೇಕ ಅಡಚಣೆಗಳನ್ನು ನಿವಾರಿಸಿಕೊಂಡು ದೇಶದ ಮೂಲಮೂಲೆಗೂ ಸಾಕಷ್ಟು ರಸಗೊಬ್ಬರವನ್ನು ಸಾಗಣೆ ಮಾಡುವಲ್ಲಿ ಇಲಾಖೆ ಯಶ ಕಂಡಿದೆ. ಸದ್ಯ ಎಲ್ಲ ರಾಜ್ಯಗಳ ಗೋದಾಮುಗಳಲ್ಲಿ, ಸಗಟು ಮಳಿಗೆಗಳಲ್ಲಿ ಅಗತ್ಯಕ್ಕಿಂತ ಹೆಚ್ಚೇ ರಸಗೊಬ್ಬರ ಸಂಗ್ರಹವಾಗಿದೆ. ಇಂತಹ ಸಂದಿಗ್ಧ ಕಾಲದಲ್ಲಿಯೂ ಸಚಿವಾಲಯ ಕಾರ್ಯನಿರ್ವಹಿಸಿದ ರೀತಿಗೆ ರಾಜ್ಯ ಸರ್ಕಾರಗಳಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ಕೆಲ ರಾಜ್ಯಗಳ ಮುಖ್ಯಮಂತ್ರಿಗಳು ಖುದ್ದು ಕರೆಮಾಡಿ ಸಚಿವರಿಗೆ ಧನ್ಯವಾದ ಹೇಳಿದ್ದಾರೆ.
ಕೊರೋನಾ ಸೋಂಕಿನ ಋಣಾತ್ಮಕ ಸುದ್ದಿಯನ್ನು ಕೇಳಿಕೇಳಿ ಬೇಸತ್ತಿರುವ ದೇಶದ ಜನ ಸಂಭ್ರಮಿಸುವ ವಿಚಾರವೊಂದಿದೆ. ಬಂಪರ್ ಮುಂಗಾರು ಬೆಳೆಯ ಮುನ್ಸೂಚನೆ ಸಿಕ್ಕಿದೆ. ರೈತರು ಮುಂಗಾರು ಬಿತ್ತನೆಗೆ ಭರ್ಜರಿ ತಯಾರಿ ನಡೆಸಿದ್ದಾರೆ. ಕಳೆದ ಏಪ್ರಿಲ್ ತಿಂಗಳಲ್ಲಿ ರೈತರು ಖರೀದಿಸಿದ ರಸಗೊಬ್ಬರ ಪ್ರಮಾಣಲ್ಲಿ 2019ರ ಏಪ್ರಿಲ್ ತಿಂಗಳಿಗೆ ಹೋಲಿಸಿದರೆ ಶೇಕಡಾ 49ರಷ್ಟು ಭಾರೀ ಏರಿಕೆ ಕಂಡುಬಂದಿರುವುದೇ ಇದಕ್ಕೆ ಸಾಕ್ಷಿ. ರೈತರು 2019ರ ಏಪ್ರಿಲ್ ತಿಂಗಳಲ್ಲಿ 11.93 ಲಕ್ಷ ಟನ್ ರಸಗೊಬ್ಬರ (ಯೂರಿಯಾ, ಡಿಎಪಿ ಹಾಗೂ ಕಾಂಪ್ಲೆಕ್ಸ್ ಸೇರಿ) ಖರೀದಿಸಿದ್ದರು. ಅದೇ ರೈತರು ಮೊನ್ನೆ ಮುಗಿದ ಏಪ್ರಿಲ್‌ನಲ್ಲಿ 17.82 ಲಕ್ಷ ಟನ್ ರಸಗೊಬ್ಬರ ಖರೀದಿಸಿದ್ದಾರೆ. ಇನ್ನು, ಉತ್ಪಾದಕರು (ಕಾರ್ಖಾನೆಗಳು) ಸಗಟು ಡೀಲರುಗಳಿಗೆ ಪೂರೈಸಿದ ರಸಗೊಬ್ಬರ ಪ್ರಮಾಣದಲ್ಲಿಯೂ ಶೇಕಡಾ 47ರಷ್ಟು ಹೆಚ್ಚಳವಾಗಿದೆ. ಕಾರ್ಖಾನೆಗಳು 2019ರ ಏಪ್ರಿಲ್‌ನಲ್ಲಿ ಡೀಲರುಗಳಿಗೆ 22.43 ಲಕ್ಷ ಟನ್ ರಸಗೊಬ್ಬರ ಪೂರೈಸಿದ್ದವು. ಅದು ಈ ಸಲ (2020 ಏಪ್ರಿಲ್) 32.9 ಲಕ್ಷ ಟನ್ ತಲುಪಿದೆ.
ಹಾಗಾದರೆ ಇವೆಲ್ಲ ಸಾಧ್ಯವಾಗಿದ್ದು ಹೇಗೆ? ಸಚಿವ ಶ್ರೀ ಸದಾನಂದ ಗೌಡ ಅವರ ಮಾತಲ್ಲೇ ಕೇಳಿ:
ಮುಂಗಾರು ಬಿತ್ತನೆಗೆ ತಯಾರಿ ನಡೆದಿತ್ತು. ಸ್ವಲ್ಪವೇ ಮೈಮರೆತರೂ ಹಾಹಾಕಾರ ಏಳುತ್ತಿತ್ತು. ಪ್ರತಿನಿತ್ಯ 1 ಲಕ್ಷ ಟನ್ (10 ಲಕ್ಷ ಕ್ವಿಂಟಲ್) ಮೇಲ್ಪಟ್ಟು ರಸಗೊಬ್ಬರವನ್ನು ಕಾರ್ಖಾನೆಗಳಿಂದ, ಬಂದರುಗಳಿಂದ ಬೇರೆಬೇರೆ ರಾಜ್ಯಗಳಲ್ಲಿನ ಗೋದಾಮುಗಳಿಗೆ, ಗೂಡ್ಸ್’ಶೆಡ್ಡುಗಳಿಗೆ ಸಾಗಣೆ ಮಾಡಬೇಕಿತ್ತು. ಸುಮಾರು ಅಷ್ಟೇ ಪ್ರಮಾಣದಲ್ಲಿ ಕಾರ್ಖಾನೆಗಳಿಗೆ ಕಚ್ಚಾವಸ್ತುಗಳ ಪೂರೈಕೆ ನಿರಂತರವಾಗಿ ನಡೆಯುತ್ತಿರುವಂತೆ ವ್ಯವಸ್ಥೆ ಮಾಡಬೇಕು. ಈ ಸರಕುಗಳ ಲೋಡಿಂಗ್, ಅನ್’ಲೋಡಿಂಗ್ ಆಗಬೇಕು. ರೇಲ್ವೆ ಸಚಿವಾಲಯದ ಸಹಯೋಗದಿಂದ ಅಗತ್ಯವಿರುವಷ್ಟು ರೇಕ್‌ಗಳನ್ನು (ಗೂಡ್ಸ್ ಟ್ರೇನುಗಳು) ದೊರೆಕಿಸಿಕೊಂಡಿದ್ದಾಯಿತು. ಆದರೆ ಕೂಲಿಗಳನ್ನು ಹೊಂದಿಸುವುದು ದೊಡ್ಡ ಸವಾಲಾಯಿತು. ಉನ್ನತಾಧಿಕಾರಿಗಳ ಕಾರ್ಯದಳವೊಂದನ್ನು ರಚಿಸಿ ರಾಜ್ಯ ಸರ್ಕಾರಗಳು, ಜಿಲ್ಲಾಡಳಿತಗಳು ಹಾಗೂ ಭದ್ರತಾ ಅಧಿಕಾರಿಗಳ ಜೊತೆ ನಿರಂತರವಾಗಿ ಚರ್ಚಿಸಿ ಬಹುತೇಕ ಅಡಚಣೆಗಳನ್ನೆಲ್ಲ ನಿವಾರಿಸಲಾಯಿತು.
ಆರಂಭದ ದಿನಗಳಲ್ಲಿ ರಸಗೊಬ್ಬರ ಹೊತ್ತ ಟ್ರೇನುಗಳು ಗೂಡ್ಸ್‌ಶೆಡ್‌ಗಳಲ್ಲಿ ಕೂಲಿಗಳ ಕೊರತೆಯಿಂದ ಅನ್‌ಲೋಡ್ ಮಾಡಲಾಗದೆ ಮೂರ್ನಾಲ್ಕು ದಿನಗಳ ಕಾಲ ಕಾಯುವ ದುಃಸ್ಥಿತಿ ಇತ್ತು. ಆದರೆ ಬರಬರುತ್ತ ಪರಿಸ್ಥಿತಿ ಸುಧಾರಿಸುತ್ತ ಬಂತು. ಮಾರ್ಚ್ 22ರಿಂದ ಏಪ್ರಿಲ್ 30ರವರೆಗೆ 40 ದಿನಗಳ ಅವಧಿಯಲ್ಲಿ 1251 ರೇಕ್‌ಗಳಷ್ಟು ರಸಗೊಬ್ಬರ (ಅಂದಾಜು 40 ಲಕ್ಷ ಟನ್) ದೇಶದ ಬೇರೆಬೇರೆ ಭಾಗಗಳಿಗೆ ಸಾಗಣೆಯಾಗಿದೆ. ರೈತರು ಹೆಚ್ಚಿನ ಪ್ರಮಾಣದಲ್ಲಿ ರಸಗೊಬ್ಬರ ಖರೀದಿಸುತ್ತಿದ್ದಾರೆ. ಇಂದು ಎಲ್ಲ ರಾಜ್ಯಗಳಲ್ಲಿಯೂ ತಿಂಗಳ ಸರಾಸರಿ ಬೇಡಿಕೆಗಿಂತ 2ರಿಂದ 3 ಪಟ್ಟು ಜಾಸ್ತಿ ರಸಗೊಬ್ಬರ ದಾಸ್ತಾನಿದೆ.
ಇದಕ್ಕೆ ಒಂದೆರಡು ಅಂಶಗಳು ಪೂರಕವಾಗಿ ಕೆಲಸ ಮಾಡಿವೆ. ಒಂದನೆಯದಾಗಿ ಸರಕುಸಾಗಣೆ ವ್ಯವಸ್ಥೆಯನ್ನು ತ್ವರಿತವಾಗಿ ಮರುಸ್ಥಾಪನೆ ಮಾಡಿ ಅಗತ್ಯ ಕಾರ್ಮಿಕ ವೃಂದವನ್ನು ಹೊಂದಿಸಿದ್ದು. ಇದಕ್ಕೆ ಎಲ್ಲ ಇಲಾಖೆಗಳು ವಿಶೇಷವಾಗಿ ರೇಲ್ವೆ ಇಲಾಖೆ ಹಾಗೂ ರಾಜ್ಯ ಸರ್ಕಾರಗಳು ಪೂರ್ಣ ಸಹಕಾರ ನೀಡಿವೆ.
ಇನ್ನೊಂದು ಪ್ರಮುಖ ಕಾರಣ – ನಮ್ಮ ಇಲಾಖೆಯು ಮುಂಗಾರು ಹಂಗಾಮಿನ ಸಬ್ಸಡಿ ಹಣವನ್ನು ಪೂರ್ತಿಯಾಗಿ ಹಣಕಾಸು ವರ್ಷದ ಆರಂಭದಲ್ಲಿಯೇ ವರ್ಗಾವಣೆ ಮಾಡಿದ್ದು. ಕಳೆದ ತಿಂಗಳು ಒಟ್ಟು 21,115.48 ಕೋಟಿ ರೂಪಾಯಿ ಸಬ್ಸಿಡಿ ಹಣವನ್ನು ಬಿಡುಗಡೆ ಮಾಡಲಾಗಿದೆ. ಇದೊಂದು ದಾಖಲೆ. ಯಾಕೆಂದರೆ ಇಲಾಖೆಯ ಇತಿಹಾಸದಲ್ಲಿ ಇದೇ ಮೊದಲಬಾರಿಗೆ ಏಪ್ರಿಲ್ ತಿಂಗಳಲ್ಲಿ ಇಷ್ಟೊಂದು ಬೃಹತ್ ಮೊತ್ತದ ಸಬ್ಸಿಡಿ ಬಿಡುಗಡೆ ಮಾಡಲಾಯಿತು. ಇದರಿಂದ ಸಹಜವಾಗಿಯೇ ಉತ್ಪಾದನೆ ಮತ್ತು ಸರಬರಾಜು ಸೇರಿದಂತೆ ಈ ವಲಯದ ಒಟ್ಟಾರೆ ಆರ್ಥಿಕ ಚಟುವಟಿಕೆಗೆ ಉತ್ತೇಜನ ದೊರೆಯಿತು. ಉದಾಹರಣೆಗೆ ನಮ್ಮದೇ ಇಲಾಖೆಯಡಿ ಕೆಲಸ ಮಾಡುವ ರಾಷ್ಟ್ರೀಯ ರಸಗೊಬ್ಬರ ಕಾರ್ಖಾನೆಯನ್ನು (ಎನ್’ಎಫ್’ಎಲ್) ತೆಗೆದುಕೊಳ್ಳಿ. ಅದಕ್ಕೆ ವಾರ್ಷಿಕವಾಗಿ 37.43 ಲಕ್ಷ ಟನ್ ಯೂರಿಯಾ ಉತ್ಪಾದನೆಯ ಗುರಿ ನೀಡಲಾಗಿದೆ. ಅಂದರೆ ತಿಂಗಳಿಗೆ ಸರಾಸರಿ 3.12 ಲಕ್ಷ ಟನ್ ಉತ್ಪಾದನೆ ಮಾಡಬೇಕು. ಆದರೆ ಸಕಾಲದಲ್ಲಿ ಹಣ ಲಭ್ಯವಾದ್ದರಿಂದ ಎನ್’ಎಫ್’ಎಲ್ ಕಳೆದ ಏಪ್ರಿಲ್ ತಿಂಗಳಲ್ಲಿ 3.22 ಲಕ್ಷ ಟನ್ ಯೂರಿಯಾ ಉತ್ಪಾದನೆ ಮಾಡಲು ಸಾಧ್ಯವಾಯಿತು.
ಲಾಕ್’ಡೌನ್ ಅಡಚಣೆಯ ಮಧ್ಯೆಯೇ ನಾವು ಔಷಧ ಉತ್ಪಾದನೆಯಲ್ಲೂ ಗುರುತರ ಸಾಧನೆ ಮಾಡಿದ್ದೇವೆ. ಜಗತ್ತಿನ ಎಲ್ಲ ದೇಶಗಳಿಂದ ಬೇಡಿಕೆಯಲ್ಲಿರುವ ಹೈಡ್ರಾಕ್ಸಿಕ್ಲೊರೊಕ್ವಿನ್ ಮಾತ್ರೆ ಉತ್ಪಾದನೆ ದ್ವಿಗುಣಗೊಳಿಸಲಾಗಿದೆ. ಕಳೆದ ಏಪ್ರಿಲ್ ತಿಂಗಳಲ್ಲಿ 30 ಕೋಟಿ ಮಾತ್ರೆಗಳನ್ನು ಉತ್ಪಾದಿಸಿದ್ದೇವೆ. ಇದು ಮಾಮೂಲಿ ಉತ್ಪಾದನೆಗಿಂತ ಎರಡುಪಟ್ಟು ಜಾಸ್ತಿ. 15 ಕೋಟಿ ಮಾತ್ರೆಗಳನ್ನು ದೇಶದ ಆಂತರಿಕ ಉಪಯೋಗಕ್ಕೆ ಇಟ್ಟುಕೊಂಡು ಉಳಿದದ್ದನ್ನು (15 ಕೋಟಿ) ರಫ್ತು ಮಾಡಲು ಅವಕಾಶ ನೀಡಲಾಗಿದೆ. ಪೆರಾಸೆಟೊಮೊಲ್ ಮಾತ್ರೆ ಉತ್ಪಾದನೆಯೂ ಗಣನೀಯವಾಗಿ ಹೆಚ್ಚಳವಾಗಿದೆ. ಅದೇ ರೀತಿ ಅಜಿತ್ರೋಮೈಸಿನ್ (Azithromycin) ಉತ್ಪಾದನೆಯನ್ನೂ ಹೆಚ್ಚಿಸಲಾಗಿದೆ. ಏಪ್ರಿಲ್ ತಿಂಗಳಲ್ಲಿ 500 ಎಂಜಿಯ 15 ಕೋಟಿ ಅಜಿತ್ರೋಮೈಸಿನ್ ಮಾತ್ರೆ ಉತ್ಪಾದನೆಗೊಂಡಿದೆ.
ಔಷಧ ಕೊರತೆ, ಹೆಚ್ಚುವರಿ ದರ ವಸೂಲಿ ಇವೇ ಮುಂತಾದ ವಿಷಯಗಳಿಗೆ ಸಂಬಂಧಿಸಿದಂತೆ ಏನಾದರೂ ದೂರುಗಳಿದ್ದರೆ ಅದನ್ನು ಬಗೆಹರಿಸಲು ದಿನದ 24 ತಾಸೂ ಕಾರ್ಯನಿರ್ವಹಿಸುವ ನಿಯಂತ್ರಣ ಕೇಂದ್ರ ಸ್ಥಾಪಿಸಿದ್ದೇವೆ. ಸಾರ್ವಜನಿಕರು, ಅಂಗಡಿಕಾರರು ದೂರವಾಣಿ ಸಂಖ್ಯೆ 1800111255 ಕ್ಕೆ ಉಚಿತ ಕರೆ ಮಾಡಬಹುದು. ಇನ್ನು, ಲಾಕ್’ಡೌನ್ ಅಡಚಣೆಯಿಂದ ಅಸ್ತವ್ಯಸ್ತಗೊಂಡಿದ್ದ ಔಷಧ ಸರಬರಾಜು ವ್ಯವಸ್ಥೆಯನ್ನು ಬಹುತೇಕ ಮರುಸ್ಥಾಪಿಸಿದ್ದೇವೆ. ಲಾಕ್‌ಡೌನ್’ನಿನ ಆರಂಭದಲ್ಲಿ ಸರಕು ಸಾಗಣೆ ಹಾಗೂ ಕೊರಿಯರ್ ಸೇವೆಗಳು ಬಂದಾಗಿದ್ದರಿಂದ ನಮ್ಮ ಜನೌಷಧ ಕೇಂದ್ರಗಳಿಗೆ ವಿಶೇಷವಾಗಿ ಒಳನಾಡಿನ ಕೇಂದ್ರಗಳಿಗೆ ಔಷಧಗಳ ಸರಬರಾಜು ವ್ಯತ್ಯಯಗೊಂಡಿತ್ತು. ಆದರೆ ಎರಡನೇ ವಾರದ ವೇಳೆಗೆ ಬದಲಿ ವ್ಯವಸ್ಥೆಯ ಮೂಲಕ ಸರಬರಾಜನ್ನು ಬಹುತೇಕ ಸರಿಪಡಿಸಲಾಯಿತು. ಈಗ ಇಂಡಿಯಾ ಪೋಸ್ಟ್ ಜೊತೆಗೂ ಒಡಂಬಡಿಕೆ ಮಾಡಿಕೊಂಡಿದ್ದೇವೆ. ಈಚಿನ ವಾರಗಳಲ್ಲಿ ಜನೌಷಧ ಕೇಂದ್ರಗಳಿಗೆ ಸುಮಾರು 1.8 ಕೋಟಿ ಹೈಡ್ರೊಕ್ಸಿಕ್ಲೋರೋಕ್ವಿನ್ ಮಾತ್ರೆಗಳನ್ನು ಸರಬರಾಜು ಮಾಡಲಾಗಿದೆ.
ಸದ್ಯ 745 ಮಾದರಿಯ ಔಷಧಗಳು ಹಾಗೂ 108 ನಮೂನೆಯ ಶಸ್ತ್ರಚಿಕಿತ್ಸಾ ಉಪಕರಣಗಳು ಜನೌಷಧಿ ಕೇಂದ್ರಗಳಲ್ಲಿ ಲಭ್ಯ ಇವೆ. ನಿಜ ಹೇಳಬೇಕೆಂದರೆ ನಮ್ಮ ಜನೌಷಧಿ ಕೇಂದ್ರಗಳು ಲಾಕ್’ಡೌನ್ ಅವಧಿಯಲ್ಲಿ ದಾಖಲೆ ವಹಿವಾಟು ನಡೆಸಿವೆ. ಏಪ್ರಿಲ್ ತಿಂಗಳಲ್ಲಿ 52 ಕೋಟಿ ರೂಪಾಯಿ ಔಷಧ ಮಾರಾಟವಾಗಿದೆ. ಇದು ಕಳೆದ ವರ್ಷದ ಇದೇ ಸಮಯಕ್ಕೆ ಹೋಲಿಸಿದರೆ ಸುಮಾರು ಎರಡೂವರೆ ಪಟ್ಟು ಜಾಸ್ತಿ.
ಒಟ್ಟಿನಲ್ಲಿ, ಇಲ್ಲಿತನಕ ಎಲ್ಲವೂ ಸುಸೂತ್ರವಾಗಿ ನಡೆದಿವೆ. ಕೊರೊನೋತ್ತರ ಅವಧಿಯಲ್ಲಿ ಆಗಬೇಕಾದ ಕೆಲಸಗಳ ಬಗ್ಗೆಯೂ ಯೋಚಿಸಿದ್ದೇವೆ. ಅದು ಯಾವುದೇ ಆಟವಿರಲಿ. ಆಟಗಾರರು ಉತ್ತಮವಾಗಿದ್ದರಷ್ಟೇ ಸಾಲದು. ಒಬ್ಬ ಉತ್ತಮ ನಾಯಕ ಬೇಕು. ನಮಗೆ ಅಂತಹ ನಾಯಕ ಇದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ಮಾರ್ಗದರ್ಶನದಲ್ಲಿ ನಾವೆಲ್ಲ ಒಂದು ತಂಡವಾಗಿ ಕಾರ್ಯನಿರ್ವಹಿಸುತ್ತಿದ್ದೇವೆ. ಅವರ ನಾಯಕತ್ವದಲ್ಲಿ ದೇಶವು ಇದುವರೆಗೂ ಕೊರೋನಾ ಮಹಾಮಾರಿಯನ್ನು ಸಮರ್ಥವಾಗಿ ಎದುರಿಸಿದೆ.
ಆದರೆ ಈ ಜೈವಿಕ ಯುದ್ಧ ಇನ್ನೂ ಮುಗಿದಿಲ್ಲ. ನಾವ್ಯಾರೂ ಮೈಮರೆಯುವುದು ಬೇಡ. ಇನ್ನಷ್ಟು ಕಾಲ ಖಡ್ಡಾಯವಾಗಿ ಮುಖಗವಸು ಧರಿಸೋಣ. ಸೋಂಕು ನಿವಾರಕ ದ್ರಾವಣ ಬಳಸೋಣ. ನಾಲ್ಕುಜನ ಸೇರುವ ಸ್ಥಳಗಳಲ್ಲಿ ಕನಿಷ್ಠ ನಾಲ್ಕು ಅಡಿ ಭೌತಿಕ ಅಂತರವನ್ನು ಕಾಪಾಡಿಕೊಳ್ಳುವ ಸಂಕಲ್ಪ ಮಾಡೋಣ. ಜವಾಬ್ಧಾರಿಯುತ ನಾಗರಿಕರಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಆಗಾಗ ನೀಡುವ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸೋಣ. ದೇಶ ಈ ಯುದ್ಧವನ್ನು ಗೆಲ್ಲಬೇಕಾದರೆ ನಿಮ್ಮೆಲ್ಲರ ಸಂಪೂರ್ಣ ಸಹಕಾರ, ಸಹಭಾಗಿತ್ವ ಬೇಕು. ನಮಗೆ ಸಂಪೂರ್ಣ ವಿಶ್ವಾಸವಿದೆ. ಎಲ್ಲವೂ ಶುಭಾಂತ್ಯವಾಗಲಿದೆ.
-ಶ್ರೀ ಡಿ.ವಿ. ಸದಾನಂದ ಗೌಡ, ಕೇಂದ್ರ ಸಚಿವ
Get in Touch With Us info@kalpa.news Whatsapp: 9481252093
Discussion about this post