ಹಾಸನ: ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ವಿಚಾರ ಭಾರೀ ವಿವಾದಕ್ಕೆ ಕಾರಣವಾಗಿರುವ ಬೆನ್ನಲ್ಲೇ, ಹಾಸನ ಕ್ಷೇತ್ರದಲ್ಲಿ ತಮ್ಮ ಇನ್ನೊಬ್ಬ ಮೊಮ್ಮಗ ಪ್ರಜ್ವಲ್ ಸ್ಪರ್ಧೆಯನ್ನು ಅಧಿಕೃತವಾಗಿ ಎಚ್.ಡಿ. ದೇವೇಗೌಡರು ಘೋಷಿಸಿದ್ದಾರೆ.
ಹಾಸನದ ಮೂಡಲಹಿಪ್ಪೆ ಗ್ರಾಮದಿಂದ ಜೆಡಿಎಸ್ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿದ ದೇವೇಗೌಡರು, ಮೂಡಲಹಿಪ್ಪೆ ಗ್ರಾಮದಲ್ಲಿರುವ ಚನ್ನಕೇಶವ ದೇವಾಲಯಕ್ಕೆ ಮೊಮ್ಮಗ ಪ್ರಜ್ವಲ್ ರೇವಣ್ಣ, ಪುತ್ರ ರೇವಣ್ಣ, ಸೊಸೆ ಭವಾನಿ ರೇವಣ್ಣ, ಪಕ್ಷದ ಶಾಸಕರ ಜೊತೆ ಆಗಮಿಸಿ ನಾಮಪತ್ರವನ್ನು ಇಟ್ಟು ಪೂಜೆ ಸಲ್ಲಿಸಿದರು.
ಈ ವೇಳೆ ವೇದಿಕೆಯಲ್ಲಿ ಮಾತನಾಡಿದ ಅವರು ನಾನು ಈ ಬಾರಿ ಹಾಸನದಿಂದ ಸ್ಪರ್ಧಿಸದೇ ಇರಲು ನಿರ್ಧರಿಸಿದ್ದು, ನನ್ನ ಮೊಮ್ಮಗ ಪ್ರಜ್ವಲ್ ರೇವಣ್ಣಗೆ ಕ್ಷೇತ್ರವನ್ನು ಬಿಟ್ಟುಕೊಟ್ಟಿದ್ದೇನೆ ಎಂದರು.
ಎಲ್ಲರೂ ತಮ್ಮ ವಿರುದ್ಧ ಕುಟುಂಬ ರಾಜಕಾರಣದ ಆರೋಪ ಮಾಡುತ್ತಾರೆ. ಇದರಿಂದ ನಮ್ಮ ಕುಟುಂಬ ಬಹಳಷ್ಟು ನೊಂದಿದೆ ಎಂದು ವೇದಿಕೆಯಲ್ಲೇ ದೇವೇಗೌಡರು ಕಣ್ಣೀರು ಹಾಕಿದರು. ಇದನ್ನು ಕಂಡ ರೇವಣ್ಣ ಕಣ್ಣೀರ ಕೋಡಿ ಹರಿಸಿದರೆ, ಅವರ ಪುತ್ರ ಪ್ರಜ್ವಲ್ ಸಹ ತಾತ, ಅಪ್ಪನನ್ನೇ ಅನುಸರಿಸಿ ಅತ್ತರು.
Discussion about this post