ತಲೆಯಲ್ಲಿ ಕಲೆಯ ಹೊತ್ತು ಕಡಲ ತಡಿಯಲ್ಲಿ, ಕಲೆಯ ಅಲೆಯಲ್ಲಿ ತೇಲಿ ಬಂದವಳು ಇವಳು. ಕಡಲು ಹೇಗೆ ತನ್ನ ಒಡಲಿಂದ ಅಲೆಯನ್ನು ಎತ್ತಿ ಎತ್ತಿ ದಡಕ್ಕೆಸೆಯುತ್ತದೆಯೋ, ಅಂತೆಯೇ ತನಗೊಲಿದ ಕಲೆಯಲ್ಲಿ ಎದ್ದು ಗೆದ್ದು ಗುರಿ ಸೇರುತ್ತಿರುವವಳು ಇವಳು.
ಹೌದು… ಕಡಲು ಎಂದೊಡನೆ ನೆನಪಾಗುವುದು ಜಗತ್ಪ್ರಸಿದ್ಧವಾದ ಮರವಂತೆಯ ಬೀಚ್. ಒಂದು ಕಡೆ ಸಮುದ್ರ, ಇನ್ನೊಂದು ಕಡೆ ನದಿ, ಮಧ್ಯದಲ್ಲಿ ಹಾದುಹೋಗುವಂತೆ ರಾಜ ಮಾರ್ಗ ಇಂತಹ ಪ್ರಕೃತಿಯ ಮಡಿಲಲ್ಲಿ ಹುಟ್ಟಿದವಳೇ ನಮ್ಮ ಕಡಲ ಕುಡಿ ಧನ್ವಿ ಪೂಜಾರಿ ಮರವಂತೆ.
ಇವರು ಜ್ಯೋತಿ ಮತ್ತು ಚಂದ್ರಶೇಖರ ಇವರ ಮುದ್ದಿನ ಮಗಳು. ಡಾನ್ ಬಾಸ್ಕೋ ಮೊವಾಡಿ ಶಾಲೆಯಲ್ಲಿ ಆರನೆಯ ತರಗತಿಯಲ್ಲಿ ಕಲಿಯುತ್ತಿದ್ದಾಳೆ. ಇವಳು ಕಲೆಯಲ್ಲಿ ಮಾತ್ರ ಅಲ್ಲ ಓದಿನಲ್ಲಿ ಕೂಡ ತರಗತಿಯಲ್ಲಿ ಪ್ರಥಮ, ಹಾಗಾಗಿ ಇವರು ಶಾಲೆಯ ಅಚ್ಚು ಮೆಚ್ಚಿನ ವಿದ್ಯಾರ್ಥಿ.
ಅರಿವಿನಲ್ಲಿ ಮೂಡಿದ ಕಲೆಯನ್ನು ತೊಳೆಯಬಹುದು. ಆದರೆ ಅರಿವಿನಲ್ಲಿ ಮೂಡಿದ ಕಲೆಯನ್ನು ಯಾವತ್ತೂ ಯಾರಿಂದಲೂ ತೊಳೆಯಲಾಗದು. ಅಂತಹ ಅದ್ಭುತ ಕಲೆಯನ್ನು ಸರಸ್ವತಿಯಿಂದ ವರವಾಗಿ ಪಡೆದವಳು ಇವಳು.
ನೃತ್ಯ, ಯಕ್ಷಗಾನ, ಅಭಿನಯ, ಯೋಗ, ಸ್ಕೇಟಿಂಗ್ ಭರತನಾಟ್ಯ ಮುಂತಾದ ಕಲೆಗಳಲ್ಲಿ ಪ್ರವೀಣೆಯಾಗಿರುವ ಇವಳು ಅತ್ಯದ್ಭುತವಾದ ಬಹುಮುಖ ಪ್ರತಿಭೆ. ಇದುವರೆಗೂ ಐನೂರಕ್ಕೂ ಮಿಕ್ಕಿ ನೃತ್ಯ ಪ್ರದರ್ಶನವನ್ನು ನೀಡಿದ ಹೆಮ್ಮೆ ಇವರದು. ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆದ ನೃತ್ಯ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದಿರುವ ಇವರು ಹಲವಾರು ರಾಜ್ಯಮಟ್ಟದ ಪ್ರದರ್ಶನಗಳಲ್ಲಿ ಬಹುಮಾನ ಪಡೆದಿರುವ ಹೆಮ್ಮೆ ಇವರದು.
ರವಿ ಬಸ್ರೂರು ಇವರ ಗಿರ್ಮಿಟ್ ಮತ್ತು ಪಿ. ಶೇಷಾದ್ರಿಯವರ ಮೂಕಜ್ಜಿಯ ಕನಸುಗಳು ಚಿತ್ರದಲ್ಲಿ ಭಾಗವಹಿಸಿದ ಹೆಮ್ಮೆ ಇವರದು. ಪ್ರಸ್ತುತ ಇವರು ನಮ್ಮ ಟಿವಿಯ ಕುಸಲ್ದ ಒರ್ಸ ಎನ್ನುವ ಸ್ಟ್ಯಾಂಡ್’ಅಪ್ ಕಾಮಿಡಿ ಶೋನಲ್ಲಿ ಭಾಗವಹಿಸುತ್ತಿದ್ದಾರೆ. ವೀರ ಕೇಸರಿ ಎನ್ನುವ ಚಿತ್ರದಲ್ಲಿ ಕೂಡ ಸದ್ಯದಲ್ಲೇ ಅಭಿನಯಿಸಲಿದ್ದಾಳೆ. ಕುಂದಾಪುರದ ಗೋಟ್ ಟ್ಯಾಲೆಂಟ್ ಅವಾರ್ಡ್ ಕೂಡ ಸಿಕ್ಕಿದೆ.
ಇಂತಹ ಅದ್ಭುತವಾದ ಪ್ರತಿಭೆಗೆ ಗುಜ್ಜಾಡಿ ಫ್ರೆಂಡ್ಸ್, ಇವರು ಮಯೂರ ನರ್ತಕಿ ಮತ್ತು ಕರಾವಳಿ ಯಕ್ಷಮಿತ್ರರು ಹಾಗೂ ಬಹುಮುಖ ಪ್ರತಿಭೆಗಳ ಸಂಗಮ ಇವರು ಕರಾವಳಿ ಸಿರಿ ಎನ್ನುವ ಬಿರುದನ್ನು ನೀಡಿ ಗೌರವಿಸುತ್ತಾರೆ.
ಕಲಾ ಮಾತೆಯ ಸೇವೆ ಮಾಡುತ್ತಿರುವ ಇವರು ಗೌರವದ ನೂರಾರು ಸನ್ಮಾನ ಪುರಸ್ಕಾರಗಳನ್ನು ಪಡದಿದ್ದಾರೆ. ಇವರು ಮುಕ್ತ ವಾಹಿನಿಯ ಅನ್ವೇಷಣ್ ಕಾರ್ಯಕ್ರಮ ಮತ್ತು ನಮ್ಮ ಕುಡ್ಲ ಚಾನೆಲ್’ನ ಪುಟ್ಟ ಪ್ರಪಂಚ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.
ಇವರು ಕಲಾಲೋಕದಲ್ಲಿ ಇನ್ನಷ್ಟು ಸಾಧನೆ ಮಾಡಬೇಕು ಇನ್ನಷ್ಟು ಹೆಸರನ್ನು ಮಾಡಿ ಸಾಧನೆಯ ಶಿಖರವೇರಿ ನಿಲ್ಲಬೇಕೆನ್ನುವುದು ನಮ್ಮ ಆಶಯ.
ಲೇಖನ ಮತ್ತು ಚಿತ್ರಕೃಪೆ: ಶಶಿಧರ್ ಗುಜ್ಜಾಡಿ
Discussion about this post