ಕಲ್ಪ ಮೀಡಿಯಾ ಹೌಸ್ | ಧರ್ಮಸ್ಥಳ |
ಶ್ರೀ ಸಂಸ್ಥಾನ ಗೋಕರ್ಣ ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿಯವರು ವಿಶೇಷ ನಾಯಕತ್ವದ ಲಕ್ಷಣ ಹೊಂದಿದ್ದಾರೆ. ಅವರು ಧರ್ಮಸ್ಥಳ ಕ್ಷೇತ್ರದ ಮೇಲಿನ ವಿಶೇಷ ಅಭಿಮಾನದಿಂದ ವಿದ್ವಾಂಸರನ್ನು ಕ್ಷೇತ್ರಕ್ಕೆ ಕಳಿಸುವ ಪ್ರೀತಿ ತೋರಿದ್ದಾರೆ. ಅವರ ವಿಶೇಷ ಆಶೀರ್ವಾದ ಹಾಗೂ ಅನುಗ್ರಹದಿಂದ ಕಷ್ಟದಿಂದ ಪಾರಾಗಿ ಕೊನೆಗೆ ಜಯ ಸಿಗಬಹುದು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅಭಿಪ್ರಾಯಪಟ್ಟಿದ್ದಾರೆ.
ಶ್ರೀ ಕ್ಷೇತ್ರ ಧರ್ಮಸ್ಥಳದ ಪ್ರವಚನ ಮಂಟಪದಲ್ಲಿ ಶ್ರೀ ರಾಮಚಂದ್ರಾಪುರ ಮಠದ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿಗಳ ಅನುಗ್ರಹದೊಂದಿಗೆ ಹವ್ಯಕ ಮಹಾಮಂಡಲದ ಶಿಷ್ಯ ವೃಂದ ಹಾಗು ವಿದ್ವಾಂಸರಿಂದ ಶ್ರೀ ಮಂಜುನಾಥ ಸ್ವಾಮಿಗೆ ನಡೆದ ರುದ್ರಾನುಷ್ಠಾನ ಸಮರ್ಪಣೆ ಕಾರ್ಯಕ್ರಮದ ಬಳಿಕ ಅವರು ಮಾತನಾಡಿದರು.
ಶ್ರೀಗಳು ವಯಸ್ಸಿನಲ್ಲಿ ಕಿರಿಯವರಾದರೂ, ಶಂಕರಾಚಾರ್ಯರಂತೆ ಕಿರಿಯ ವಯಸ್ಸಿನಲ್ಲೇ ಹಲವಾರು ವಿಶೇಷ ಸಾಧನೆಗಳನ್ನು ಮಾಡಿದ್ದಾರೆ. ಈ ಹಿಂದೆ ಅವರ ಮೇಲೂ ಅನೇಕ ಆಪಾದನೆಗಳನ್ನು ಮಾಡಲಾಗಿತ್ತು, ಅನೇಕ ರೀತಿಯಲ್ಲಿ ಹಿಂಸೆಯನ್ನು ನೀಡಲಾಗಿತ್ತು. ಆದರೆ ಸತ್ಯದಿಂದ ಅದೆಲ್ಲವನ್ನೂ ಎದುರಿಸಿದರು. ಇಂದು ಧರ್ಮಸ್ಥಳದ ಮೇಲೂ ಅನೇಕ ರೀತಿಯಲ್ಲಿ ಅಪಪ್ರಚಾರವನ್ನು ಮಾಡಲಾಗುತ್ತಿದೆ. ಶ್ರೀಗಳ ಪರವಾಗಿ ವೇದಜ್ಞರಾದ ನೀವೆಲ್ಲರೂ ಬಂದು ಆಶೀರ್ವಾದ ಮಾಡಿದ್ದೀರಿ ಸಂತೋಷವಾಗಿದೆ ಎಂದರು.
ಹವ್ಯಕ ಮಹಾಮಂಡಲದ ವತಿಯಿಂದ ಡಾ. ಹೆಗ್ಗಡೆ ಹಾಗೂ ಡಾ. ಹೇಮಾವತಿ ಹೆಗ್ಗಡೆ ಅವರನ್ನು ಗೌರವಿಸಲಾಯಿತು. ಡಿ.ಹರ್ಷೇಂದ್ರ ಕುಮಾರ್ ಉಪಸ್ಥಿತರಿದ್ದರು.ಧರ್ಮಸ್ಥಳದಲ್ಲಿ ಪ್ರವಚನ ಮಂಟಪದಲ್ಲಿ ಹವ್ಯಕ ಮಹಾಮಂಡಲದ 550 ಕ್ಕೂ ಮಿಕ್ಕಿದ ಶಿಷ್ಯ ವೃಂದದವರು ಹಾಗೂ ವಿದ್ವಾಂಸರು ಧರ್ಮಸ್ಥಳಕ್ಕೆ ಆಗಮಿಸಿ ಪವಿತ್ರ ತೀರ್ಥ ಕ್ಷೇತ್ರ ಹಾಗೂ ಹೆಗ್ಗಡೆಯವರ ಬಗ್ಗೆ ಅಪಪ್ರಚಾರ ನಿವಾರಣೆಯಾಗಿ ಮನಃಶಾಂತಿ, ನೆಮ್ಮದಿ ನೆಲೆಸಲಿ ಎಂದು ದೇವಸ್ಥಾನದಲ್ಲಿ ರುದ್ರಾನುಷ್ಠಾನ ಸಮರ್ಪಣೆ ಬಳಿಕ ಪ್ರವಚನ ಮಂಟಪದಲ್ಲಿ ರುದ್ರಪಾರಾಯಣ ಸೇವೆಯನ್ನು ಶ್ರದ್ಧಾ-ಭಕ್ತಿಯಿಂದ ಮಾಡಿದರು.
ಘನಪಾಠಿ ಪಳ್ಳತ್ತಡ್ಕ ಶಂಕರನಾರಾಯಣ ಭಟ್ಟ, ರಾಮಚಂದ್ರಾಪುರ ಮಠದ ಶಾಸ್ತ್ರಿಗಳಾದ ಘನಪಾಠಿ ಸುಚೇತನ ಶಾಸ್ತ್ರಿ, ಹವ್ಯಕ ಮಹಾಮಂಡಲದ ಅಧ್ಯಕ್ಷ ಹರಿಪ್ರಸಾದ್ ಪೆರಿಯಪ್ಪು, ಕಾರ್ಯದರ್ಶಿ ಮಹೇಶ್ ಚಟ್ನಳ್ಳಿ, ಮಾತೃವಿಭಾಗದ ಅಧ್ಯಕ್ಷರಾದ ದೇವಿಕಾ ಶಾಸ್ತ್ರಿ ಮುಂತಾದವರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post