ಕಲ್ಪ ಮೀಡಿಯಾ ಹೌಸ್ | ಧಾರವಾಡ |
ಗ್ರಾಹಕರೊಬ್ಬರಿಂದ ಮುಂಗಡ ಹಣ ಪಡೆದು ಫ್ಲಾಟ್ ನೀಡದ ಬಿಲ್ಡರ್’ವೊಬ್ಬರಿಗೆ ಗ್ರಾಹಕ ಆಯೋಗ 11 ಲಕ್ಷದ 8 ಸಾವಿರದ 80 ರೂಪಾಯಿ ದಂಡ ವಿಧಿಸಿರುವ ಘಟನೆ ನಡೆದಿದೆ.
ಘಟನೆ ಹಿನ್ನೆಲೆ:
ಹಳೆ ಹುಬ್ಬಳ್ಳಿಯ ಹತ್ತಿರದ ಮಗಜಿಕೊಂಡಿ ನಿವಾಸಿ ಡಾ. ಗೀತಾ ಜೋಡಂಗಿ ಎಂಬುವವರು ಹುಬ್ಬಳ್ಳಿಯ ಪೃಥ್ವಿ ಬಿಲ್ಡರ್ಸ್ ಹಾಗೂ ಡೆವಲರ‍್ಸ್ ಅವರಿಂದ ಗಾಮನಗಟ್ಟಿ ಗ್ರಾಮದಲ್ಲಿ ನೂತನವಾಗಿ ಅಭಿವೃದ್ಧಿಪಡಿಸುತ್ತಿರುವ ಗಾಮನಗಟ್ಟಿ ಲೇಔಟ್’ನಲ್ಲಿ 11 ಲಕ್ಷ 49 ಸಾವಿರದ 885 ರೂಪಾಯಿಗಳಿಗೆ ಪ್ಲಾಟ ನಂ.65ನ್ನು ಖರೀದಿಸಿದ್ದರು.
ಈ ಬಗ್ಗೆ ಉಭಯತರ ಮಧ್ಯ ಖರೀದಿ ಒಪ್ಪಂದ ಪತ್ರ ಆಗಿತ್ತು. ಖರೀದಿದಾರರು ಒಟ್ಟು ರೂ.11 ಲಕ್ಷ 8 ಸಾವಿರದ 80 ರೂಪಾಯಿಗಳನ್ನು ಮುಂಗಡವಾಗಿ ಪಾವತಿಸಿದ್ದರು. ಆದರೆ ಡೆವಲರ‍್ಸ್ ಅವರು ಖರೀದಿ ಕರಾರು ಒಪ್ಪಂದದAತೆ ನಿವೇಶನಗಳನ್ನು ಅಭಿವೃದ್ಧಿಪಡಿಸುವಲ್ಲಿ ವಿಫಲರಾಗಿದ್ದು ಮತ್ತು ಖರೀದಿ ಪತ್ರ ಮಾಡಿಕೊಟ್ಟಿರಲಿಲ್ಲ. ಒಂದಿಲ್ಲೊಂದು ನೆಪ ಹೇಳಿ ಖರೀದಿ ಪತ್ರ ಬರೆದುಕೊಡದೇ ಬಿಲ್ಡರ್ ಸತಾಯಿಸಿ ಸೇವಾ ನ್ಯೂನ್ಯತೆ ಎಸಗಿ ಮೋಸ ಮಾಡಿದ್ದಾರೆ ಎಂದು ದೂರುದಾರ ಬಿಲ್ಡರ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರನ್ನು ಸಲ್ಲಿಸಿದ್ದರು.
ಈ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷರಾದ ಈಶಪ್ಪ ಭೂತೆ ಹಾಗೂ ವಿಶಾಲಾಕ್ಷಿ ಬೋಳಶೆಟ್ಟಿ, ಪ್ರಭು ಹಿರೇಮಠ ಸದಸ್ಯರು ದೂರುದಾರರಿಂದ ಮುಂಗಡವಾಗಿ ಪಡೆದ ಹಣವನ್ನು ಡೆವಲಪರವರು ತಮ್ಮ ವೈಯಕ್ತಿಕ ಅಭಿವೃದ್ಧಿಗಾಗಿ ಉಪಯೋಗಿಸಿಕೊಂಡು ದೂರುದಾರನಿಗೆ ನಿವೇಶನ ಅಭಿವೃದ್ದಿಪಡಿಸಿ ಖರೀದಿ ಪತ್ರ ನೋಂದಣಿ ಮಾಡಿಕೊಡದೇ ಇರುವುದು ಗ್ರಾಹಕರ ರಕ್ಷಣಾ ಕಾಯಿದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಎಂದು ಆಯೋಗ ಅಭಿಪ್ರಾಯಪಟ್ಟು ತೀರ್ಪು ನೀಡಿದೆ. ಅದಕ್ಕಾಗಿ ದೂರುದಾರರಿಂದ ಪಡೆದ ರೂ.11 ಲಕ್ಷದ 8ಸಾವಿರದ 80 ರೂಪಾಯಿಗಳ ಮೇಲೆ ಶೇ.8 ರಂತೆ ಬಡ್ಡಿ ಲೆಕ್ಕ ಹಾಕಿ ತೀರ್ಪು ಆದ 2 ತಿಂಗಳ ಒಳಗಾಗಿ ಹಣ ಸಂದಾಯ ಮಾಡುವಂತೆ ಹಾಗೂ ಮಾನಸಿಕ ತೊಂದರೆಗೆ ರೂ. 50,000 ಪರಿಹಾರ ಮತ್ತು ಪ್ರಕರಣದ ಖರ್ಚು ವೆಚ್ಚ ರೂ.10,000 ಗಳನ್ನು ಕೊಡುವಂತೆ ಆಯೋಗ ತನ್ನ ತೀರ್ಪಿನಲ್ಲಿ ಹೇಳಿದೆ.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















