ಕಲ್ಪ ಮೀಡಿಯಾ ಹೌಸ್ | ಧಾರವಾಡ |
ಪ್ರಯಾಣದ ಟಿಕೇಟ್ ಹೊಂದಿದ್ದರೂ ಸಹ ವಿಮಾನ ನಿಲ್ದಾಣ ಪ್ರವೇಶಿಸಲು ಪ್ರಯಾಣಿಕರೊಬ್ಬರಿಗೆ ನಿರಾಕರಿಸಿದ ಹಿನ್ನೆಲೆಯಲ್ಲಿ ಸೇವಾ ನ್ಯೂನ್ಯತೆಯಾಗಿದೆ ಎಂದು ತೀರ್ಪು ನೀಡಿರುವ ಗ್ರಾಹಕರ ನ್ಯಾಯಾಲಯ ಸ್ಪೈಸ್ ಜೆಟ್ ಕಂಪೆನಿಗೆ ದಂಡ ವಿಧಿಸಿದೆ.
ಏನಿದು ಘಟನೆ?
ಮಾಳಾಪುರದ ಶಕೀಲ್, ಶೌಕತ್ ಅಲಿ ಮುಲ್ಲಾ ಹಾಗೂ ಮಹ್ಮದ್ ಮಾವಜಾನ್ ಎನ್ನುವವರು ಹೈದರಾಬಾದ್’ನಿಂದ ಬೆಳಗಾವಿಗೆ ಪ್ರಯಾಣಿಸಲು ಸ್ಪೈಸ್ ಜೆಟ್ ವಿಮಾನದ ಟಿಕೇಟ್ ಬುಕ್ ಮಾಡಿದ್ದರು. ಈ ವಿಮಾನ ನಿಗದಿತ ದಿನಾಂಕದಂದು ಮಧ್ಯಾಹ್ನ 1-30 ಗಂಟೆಗೆ ಹೊರಡುವುದಿತ್ತು. ದೂರುದಾರರು ವಿಮಾನ ಹೊರಡುವ 1 ತಾಸು 15 ನಿಮಿಷಗಳ ಮೊದಲೇ ವಿಮಾನ ನಿಲ್ದಾಣಕ್ಕೆ ಆಗಮಿಸಿದರೂ ಅಲ್ಲಿನ ಕರ್ತವ್ಯ ನಿರತ ಸೆಕ್ಯುರಿಟಿ ದೂರುದಾರರಿಗೆ ವಿಮಾನ ನಿಲ್ದಾಣದಲ್ಲಿ ಪ್ರವೇಶಿಸಲು ನಿರಾಕರಿಸಿದ್ದರು. ದೂರುದಾರರು ಎಷ್ಟೇ ವಿನಂತಿಸಿದರೂ ಸದರಿ ವಿಮಾನ ನಿಲ್ದಾಣದ ಸಿಬ್ಬಂದಿ ಪ್ರಯಾಣಿಕರು ವಿನಂತಿಯನ್ನು ನಿರ್ಲಕ್ಷಿಸಿದ್ದಾರೆ. ಕಾರಣ ಸ್ಪೈಸ್ ಜೆಟ್ ಕಂಪೆನಿಯವರು ಗ್ರಾಹಕರ ರಕ್ಷಣಾ ಕಾಯಿದೆ ಅಡಿ ದೂರುದಾರರಿಗೆ ಸೇವಾ ನ್ಯೂನ್ಯತೆ ಎಸಗಿರುತ್ತಾರೆ ಎಂದು ಧಾರವಾಡ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ದೂರು ಸಲ್ಲಿಸಿದ್ದರು.
ಈ ದೂರಿನ ಬಗ್ಗೆ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ ಭೂತೆ ಸದಸ್ಯರಾದ ವಿಶಾಲಾಕ್ಷಿ ಬೋಳಶೆಟ್ಟಿ ಮತ್ತು ಪ್ರಭು ಹಿರೇಮಠ ಅವರು ದೂರುದಾರರು ವಿಮಾನ ಹೊರಡುವ 75 ನಿಮಿಷಗಳ ಮೊದಲೇ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಆದರೂ ಅಲ್ಲಿನ ಕರ್ತವ್ಯ ನಿರತ ಸಿಬ್ಬಂದಿ ದೂರುದಾರರಿಗೆ ವಿಮಾನ ನಿಲ್ದಾಣದಲ್ಲಿ ಪ್ರವೇಶ ನಿರಾಕರಿಸಿರುವುದು ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಎಂದು ಆಯೋಗ ಅಭಿಪ್ರಾಯ ಪಟ್ಟು ತೀರ್ಪು ನೀಡಿದೆ.
Also read: ರಾಜ್ಯದಾದ್ಯಂತ ಸಂಚರಿಸಲಿದೆ ಪ್ರದಕ್ಷಿಣಂ-ವಿವೇಕ ರಾಜ್ಯ ಪರಿಕ್ರಮ? ಏನಿದು ಯಾತ್ರೆ?
ಈ ಹಿನ್ನೆಲೆಯಲ್ಲಿ ಸ್ಪೈಸ್ ಜೆಟ್ ಕಂಪೆನಿಯು ದೂರುದಾರರಿಗೆ ಅವರು ಸಂದಾಯ ಮಾಡಿದ ಏರ್ ಟಿಕೇಟ್ ಪೂರ್ತಿ ಶುಲ್ಕ ರೂ.8,457 ಮತ್ತು ಅವರು ಅನುಭವಿಸಿದ ಅನಾನುಕೂಲ, ಮಾನಸಿಕ ತೊಂದರೆ ಮತ್ತು ಹಾನಿಗಾಗಿ ರೂ.50,000 ಗಳ ಪರಿಹಾರ ಜೊತೆಗೆ ಪ್ರಕರಣದ ಖರ್ಚು ರೂ.5,000 ಗಳನ್ನು 30 ದಿನಗಳ ಒಳಗಾಗಿ ಕೊಡಲು ಆಯೋಗ ಆದೇಶಿಸಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post