ಕಲ್ಪ ಮೀಡಿಯಾ ಹೌಸ್ | ಧಾರವಾಡ |
ಧಾರವಾಡದ ನಗರ ಸಾರಿಗೆಯ ನೂತನ ಸಿಬಿಟಿ ಬಸ್ ನಿಲ್ದಾಣ ನಿರ್ಮಾಣ ಕಾಮಗಾರಿಗೆ ರಾಜ್ಯ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ Ramalinga Reddy ಅವರು ಧಾರವಾಡ ಸಿಬಿಟಿ ಆವರಣದಲ್ಲಿ ಶಂಕು ಸ್ಥಾಪನೆ ನೆರವೇರಿಸಿ, ಭೂಮಿ ಪೂಜೆ ಮಾಡಿದರು.
ನಂತರ ಅವರು ಮಾತನಾಡಿ, ಧಾರವಾಡ ನಗರ ಸಾರಿಗೆಯ ಸಿಬಿಟಿ ಬಸ ನಿಲ್ದಾಣಕ್ಕೆ ಅಗತ್ಯವಿರುವ ನೂತನ ಕಟ್ಟಡವನ್ನು 13.11 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಧಾರವಾಡ ಸಿಬಿಟಿ ಬಹಳ ಹಳೆಯದಾದ ಕಟ್ಟಡಗಳನ್ನು ಹೊಂದಿದೆ. ಈಗ ಈ ನಿಲ್ದಾಣವನ್ನು ಮೇಲ್ದರ್ಜೆಗೆ ಏರಿಸಲಾಗುತ್ತಿದೆ. ಒಂದು ವರ್ಷದ ಅವಧಿಯಲ್ಲಿ ನಿಲ್ದಾಣದ ಕಾಮಗಾರಿ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚನೆ ಕೊಟ್ಟಿದ್ದೇನೆ ಎಂದು ಸಚಿವರು ತಿಳಿಸಿದರು.
ನಗರ ಸಾರಿಗೆ ಸೇರಿದಂತೆ ರಾಜ್ಯದ ಅನೇಕ ಕಡೆಗಳಲ್ಲಿ ಹೆಚ್ಚುವರಿ ಬಸ್‍ಗಳ ಖರೀದಿ ಮಾಡಲಾಗುತ್ತಿದ್ದು, ಇದರಿಂದ ಬಸ್‍ಗಳ ಕೊರತೆ ನೀಗಲಿದೆ. ಅಂದಾಜು 50 ವರ್ಷಗಳ ಹಳೆಯದಾದ ಧಾರವಾಡದ ಸಿಬಿಟಿಯನ್ನು ಇದೀಗ ಮೇಲ್ದರ್ಜೆಗೆ ಏರಿಸಲಾಗುತ್ತಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
Also read: ಬೋಳಮಾನದೊಡ್ಡಿ ಏತ ನೀರಾವರಿ ಯೋಜನೆಯ ಕಾರ್ಯಸಾಧ್ಯತಾ ವರದಿ ಸಲ್ಲಿಕೆ: ಸಚಿವ ಭೋಸರಾಜು
13.11 ಕೋಟಿ ರೂ.ಗಳಲ್ಲಿ ಧಾರವಾಡ ನಗರ ಸಾರಿಗೆ ಬಸ್ ನಿಲ್ದಾಣ ನಿರ್ಮಾಣ ಕಾಮಗಾರಿ, 23.48 ಕೋಟಿ ರೂ.ಗಳಲ್ಲಿ ಹುಬ್ಬಳ್ಳಿ ಗೋಕುಲ ರಸ್ತೆಯ ಬಸ್ ನಿಲ್ದಾಣವನ್ನು ಮೇಲ್ದರ್ಜೆಗೇರಿಸುವ ಕಾಮಗಾರಿ ಕೈಗೊಳ್ಳಲಾಗುತ್ತಿದೆ.
ಧಾರವಾಡ ನಗರ ಸಾರಿಗೆ ಬಸ್ ನಿಲ್ದಾಣ ಕಾಮಗಾರಿಯಲ್ಲಿ ಮುಖ್ಯ ಕಟ್ಟಡ, ಮಹಿಳೆಯರಿಗೆ ವಿಶ್ರಾಂತಿ ಗೃಹ, ಮಹಿಳೆಯರಿಗೆ, ಪುರುಷರಿಗೆ ಪ್ರತ್ಯೇಕವಾಗಿ ಶೌಚಾಲಯ, ಆವರಣದಲ್ಲಿ ಕಾಂಕ್ರೀಟ್ ಅಳವಡಿಸುವುದು, ಬಸ್‍ಗಳ ನಿಲುಗಡೆಗೆ 4 ಅಂಕಣ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ (ಆರ್.ಓ.ಪ್ಲಾಂಟ್), ವಿದ್ಯುತ್ ಕೆಲಸ, ಪ್ರಯಾಣಿಕರಿಗೆ ಕುಳಿತುಕೊಳ್ಳಲು ಆಸನದ ವ್ಯವಸ್ಥೆ, ಮುಖ್ಯ ಕಟ್ಟಡದ ನೆಲಹಾಸುಗೆ ಗ್ರಾನೈಟ್ ಅಳವಡಿಸುವುದು, ಉಪಹಾರ ಗೃಹ ಮತ್ತು ವಾಣಿಜ್ಯ ಮಳಿಗೆಗಳು, ಸಿಬ್ಬಂದಿ ವಿಶ್ರಾಂತಿ ಕೊಠಡಿ ಹಾಗೂ ಸಂಚಾರ ನಿಯಂತ್ರಣಾ ಕೊಠಡಿ, ಮೊದಲನೇ ಮಹಡಿಯಲ್ಲಿ ಕಛೇರಿ ಉಪಯೋಗಕ್ಕಾಗಿ ಕೊಠಡಿ ನಿರ್ಮಾಣ ಮಾಡಲಾಗುವುದು ಎಂದು ಅವರು ಹೇಳಿದರು.
ಕಾರ್ಮಿಕ ಸಚಿವರು ಹಾಗೂ ಧಾರವಾಡ ಉಸ್ತುವಾರಿ ಸಚಿವರಾದ ಸಂತೋಷ ಎಸ್. ಲಾಡ್ ಅವರು ಮಾತನಾಡಿದರು. ಶಾಸಕ ಎನ್.ಎಚ್.ಕೋನರಡ್ಡಿ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ಭರತ್ ಎಸ್. ಸೇರಿದಂತೆ ವಿವಿಧ ಅಧಿಕಾರಿಗಳು, ಸಾರ್ವಜನಿಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post