ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಮಾರಕ ಕೊರೋನಾ ವೈರಸ್ ನಿಯಂತ್ರಣಕ್ಕಾ ಭಾರತ ಸರ್ಕಾರ ಘೋಷಿಸಿರುವ ಲಾಕ್ ಡೌನ್ ನಿಯಮಾವಳಿಗಳನ್ನು ಉಲ್ಲಂಘಿಸಿದರೆ ಅಂತಹವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪಾಲಿಕೆ ಆಯುಕ್ತ ಚಿದಾನಂದ ವಟಾರೆ ಎಚ್ಚರಿಕೆ ನೀಡಿದ್ದಾರೆ.
ಈ ಕುರಿತಂತೆ ಆದೇಶ ಹೊರಡಿಸಿರುರ ಅವರು, ಭಾರತ ಸರ್ಕಾರವು ಕೊರೋನಾ ವೈರಸ್ ಸಾಂಕ್ರಾಮಿಕ ರೋಗವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿದೆ. ಈ ರೋಗದ ನಿಯಂತ್ರಣ ಕ್ರಮವಾಗಿ ಸಂಭವಿಸಬಹುದಾದ ಅನಾಹುತಗಳನ್ನು ತಡೆಗಟ್ಟಲು ಜಿಲ್ಲಾದ್ಯಂತ ಲಾಕ್‌ಡೌನ್ ಘೋಷಿಸಲಾಗಿದೆ. ಈ ಅವಧಿಯಲ್ಲಿ ಸಾರ್ವಜನಿಕರು ಸಾರ್ವಜನಿಕ ಸ್ಥಳ ಹಾಗೂ ಕೆಲಸ ನಿರ್ವಹಿಸುವ ಸ್ಥಳಗಳಲ್ಲಿ ಕಡ್ಡಾಯವಾಗಿ ಮುಖಕವಚ ಧರಿಸಬೇಕು. ಎಲ್ಲಾ ಸ್ಥಳದಲ್ಲಿಯೂ ಕಡ್ಡಾಯವಾಗಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು ಎಂದಿದ್ದಾರೆ.
ಯಾವುದೇ ಸಂಘ-ಸಂಸ್ಥೆ ಅಥವಾ ಸಾರ್ವಜನಿಕ ಸ್ಥಳದಲ್ಲಿ 5 ಅಥವಾ 5ಕ್ಕಿಂತ ಹೆಚ್ಚು ಜನರು ಸೇರುವುದನ್ನು ನಿರ್ಬಂಧಿಸಲಾಗಿದೆ. ಎಲ್ಲಾ ಸಾರ್ವಜನಿಕ ಸ್ಥಳ ಹಾಗೂ ಕೆಲಸ ನಿರ್ವಹಿಸುವ ಸ್ಥಳಗಳಲ್ಲಿ ಉಗುಳುವುದು ದಂಡದೊಂದಿಗೆ ಶಿಕ್ಷಾರ್ಹ ಅಪರಾಧವಾಗಿರುತ್ತದೆ. ಅಲ್ಲದೆ ಗುಟ್ಕಾ, ತಂಬಾಕು ಮತ್ತು ಮದ್ಯ ಮಾರಾಟ ನಿಷೇಧಿಸಿದೆ. ಇವುಗಳು ಸೇವಿಸಿ ಉಗುಳುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಎಲ್ಲಾ ಸ್ಮಾರ್ಟ್ ಫೋನ್ ಹೊಂದಿರುವವರು ಆರೋಗ್ಯ ಸೇತು ಆ್ಯಪ್‌ನ್ನು ಬಳಸುವಂತೆ ಅವರು ಸೂಚಿಸಿದ್ದಾರೆ.
ರೋಗೋದ್ರೇಕ ನಿಯಂತ್ರಣಕ್ಕಾಗಿ ಸರ್ಕಾರ ಹೊರಡಿಸಿರುವ ಆದೇಶಗಳನ್ನು ಉಲ್ಲಂಘಿಸಿದಲ್ಲಿ ನಿಯಮಾನುಸಾರ ಕಾನೂನು ಕ್ರಮಕ್ಕೆ ಶಿಫಾರಸ್ಸು ಮಾಡಲಾಗುವುದಲ್ಲದೇ ಶಿಕ್ಷೆ ಹಾಗೂ ದಂಡ ವಿಧಿಸಲಾಗುವುದು. ಸಾರ್ವಜನಿಕ ಸ್ಥಳ ಹಾಗೂ ಕೆಲಸ ನಿರ್ವಹಿಸುವ ಸ್ಥಳಗಳಲ್ಲಿ ಉಗುಳಿದಲ್ಲಿ ಮೊದಲ ಅಪರಾಧಕ್ಕೆ ರೂ.500/-, ಎರಡನೇ ಅಪರಾಧಕ್ಕೆ ರೂ.1,000/-, ತಂಬಾಕು, ಗುಟ್ಕಾ ಹಾಗೂ ಮದ್ಯ ಮಾರಾಟ ಮತ್ತು ಉಗುಳುವುದಕ್ಕೆ ಮೊದಲ ಅಪರಾಧಕ್ಕೆ ರೂ.500/-, ಎರಡನೇ ಅಪರಾಧಕ್ಕೆ ರೂ.1,000/-, ಹಾಗೂ ಸಾರ್ವಜನಿಕ ಸ್ಥಳ ಹಾಗೂ ಕೆಲಸ ನಿರ್ವಹಿಸುವ ಸ್ಥಳಗಳಲ್ಲಿ ಮುಖ ಕವಚ ಧರಿಸದಿರುವುದಕ್ಕೆ ಮೊದಲ ಅಪರಾಧಕ್ಕೆ ರೂ.100/-, ಎರಡನೇ ಅಪರಾಧಕ್ಕೆ ರೂ.200/- ದಂಡ ವಿಧಿಸಲಾಗುತ್ತದೆ.
Get in Touch With Us info@kalpa.news Whatsapp: 9481252093
















