ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬಳ್ಳಾರಿ: ಬಳ್ಳಾರಿಯಲ್ಲಿ ಬ್ಯಾಡಗಿ ಮಾದರಿಯಲ್ಲಿ ಮೆಣಸಿನಕಾಯಿ ಮಾರುಕಟ್ಟೆ ತೆರೆಯುವ ಬಗ್ಗೆ ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಅವರ ಜೊತೆ ಹಾಗೂ ಬ್ಯಾಡಗಿ ಮೆಣಸಿನಕಾಯಿ ವರ್ತಕರ ಜೊತೆ ಚರ್ಚಿಸಿ ಸಾಧಕ ಬಾಧಕಗಳನ್ನು ನೋಡಿಕೊಂಡು ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಹೇಳಿದ್ದಾರೆ.
ಕೊರೊನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ರಾಜ್ಯದ ಕೃಷಿ ಮತ್ತು ರೈತರ ಸ್ಥಿತಿಗತಿ ಸಮಸ್ಯೆಗಳ ಕುರಿತು ಜಿಲ್ಲಾ ಪ್ರವಾಸದ ಮೂಲಕ ಪರಿಶೀಲನೆ ನಡೆಸುತ್ತಿರುವ ಸಚಿವರು ಇಂದು ಸಂಜೆ ಬಳ್ಳಾರಿಗೆ ಭೇಟಿ ನೀಡಿ, ಇಲ್ಲಿನ ಕೃಷಿ, ತೋಟಗಾರಿಕೆ, ರೈತ ಮುಖಂಡರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳ ಜೊತೆ ಸಭೆ ನಡೆಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಿಗ್ಗೆ 7 ರಿಂದ ಸಂಜೆ 7 ರವರೆಗೆ ಕೃಷಿಗೆ ಸಂಬಂಧಿಸಿದ ಚಟುವಟಿಕೆಗಳನ್ನು ನಡೆಸಬಹುದು, ಉಪಕರಣಗಳ ಮಾರಾಟ, ದುರಸ್ಥಿ ಅಂಗಡಿಯನ್ನು ಸಾಮಾಜಿಕ ಅಂತರ ಕಾಯ್ದುಕೊಂಡು ತೆರೆಯಬಹುದಾಗಿದೆ.ಇದಕ್ಕೆ ಯಾವುದೇ ನಿರ್ಬಂಧವಿಲ್ಲ ಎಂದು ಸ್ಪಷ್ಟಪಡಿಸಿದರು.
ರೈತರು ಬೆಳೆದ ಹೂಗಳು ಧಾರ್ಮಿಕ ಕಾರ್ಯಗಳಿಗೆ ಸಭೆ ಸಮಾರಂಭ, ಪೂಜಾಕಾರ್ಯಗಳು ಸೇರಿದಂತೆ ಹಲವಕ್ಕೆ ಬಳಸಲ್ಪಡುತ್ತಿತ್ತು. ಆದರೆ ಕೊರೊನಾ ಲಾಕ್’ಡೌನ್‌ನಿಂದಾಗಿ ಸಾಮೂಹಿಕ ಕಾರ್ಯಕ್ರಮಗಳು ನಡೆಯುತ್ತಿಲ್ಲ. ಹೂ ಬೆಳೆಗಾರರ ಸಮಸ್ಯೆ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು ಎಂದು ಭರವಸೆ ನೀಡಿದರು.
ಕೇರಳ ಹೊರತುಪಡಿಸಿ ಉಳಿದೆಲ್ಲಾ ರಾಜ್ಯಗಳಿಗೆ ಹೋಗಲು ಕೃಷಿ ಮುಕ್ತ ಮಾರುಕಟ್ಟೆ ಕೃಷಿ ಚಟುವಟಿಕೆಗಳಿಗೆ ಕರ್ನಾಟಕ ಸರ್ಕಾರ ಅವಕಾಶ ಕಲ್ಪಿಸಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿರುವ ಹಾಪ್’ಕಾಮ್ಸ್‌ಗಳ ಅಂಗಡಿಗಳನ್ನು ಸದ್ಬಳಕೆ ಮಾಡಿಕೊಳ್ಳಲು ಅಧಿಕಾರಿಗಳು ಸಹಕರಿಸಬೇಕು ಎಂದು ಸೂಚಿಸಿದರು.
(ವರದಿ: ಕೃಷಿ ಸಚಿವರ ಮಾಧ್ಯಮ ಕಾರ್ಯದರ್ಶಿ)
Get in Touch With Us info@kalpa.news Whatsapp: 9481252093
















