ಭದ್ರಾವತಿ: ಸಾರ್ವಜನಿಕ ಆಸ್ಪತ್ರೆಯಲ್ಲಿ ತಾಲೂಕು ಬಿಜೆಪಿ ಘಟಕದ ವತಿಯಿಂದ ರೈತರಿಗೆ ತೆಂಗಿನಸಸಿ ಹಾಗೂ ಒಳರೋಗಿಗಳಿಗೆ ಹಣ್ಣು ಬ್ರೆಡ್ಡು ವಿತರಿಸುವ ಮೂಲಕ ಶುಕ್ರವಾರ ಸಂಸದ ಬಿ.ವೈ. ರಾಘವೇಂದ್ರ ಅವರ 46 ನೇ ಹುಟ್ಟುಹಬ್ಬ ಆಚರಿಸಿಕೊಂಡರು.
ತಾಪಂ ಸದಸ್ಯ ಕೆ.ಮಂಜುನಾಥ್ ಮಾತನಾಡಿ ಕಳೆದ ಹತ್ತು ವರ್ಷಗಳಿಂದಲೂ ಬಿ.ವೈ. ರಾಘವೇಂದ್ರ ಅವರ ಹುಟ್ಟುಹಬ್ಬವನ್ನುಪಕ್ಷದ ವತಿಯಿಂದ ಆಚರಿಸಿಕೊಂಡು ಬರಲಾಗುತ್ತಿದೆ. ಈ ಹಿಂದೆ ಅಭಿಮಾನಿಗಳಿಂದ ರಕ್ತದಾನ, ತರಂಗಶಾಲೆ ಮಕ್ಕಳಿಗೆ ಸಮವಸ್ತ್ರ ವಿತರಣೆ, ವಿವಿಧ ಶಾಲಾ ಮಕ್ಕಳಿಗೆ ಪುಸ್ತಕ ಪರಿಕರಗಳನ್ನು ವಿತರಣೆ ಮಾಡಿಕೊಂಡು ಬರಲಾಗಿದೆ. ಈ ಬಾರಿ ವಿಶೇಷವಾಗಿ ರೈತರಿಗೆ ತೆಂಗಿನ ಸಸಿಗಳನ್ನು ವಿತರಿಸಲಾಗುತ್ತಿದೆ.
ತಾಲೂಕು ಪಂಚಾಯತಿ ಅನುದಾನದಲ್ಲಿ ದೊರೆಯುವ ಸಸಿಗಳೊಂದಿಗೆ ಮತ್ತಷ್ಟು ಸಸಿಗಳನ್ನು ಅರಳಿಹಳ್ಳಿ, ವೀರಾಪುರ ಹಾಗೂ ಕೊಮಾರನಹಳ್ಳಿ ಗ್ರಾಮದ ರೈತರಿಗೆ ಉಚಿತವಾಗಿ 500 ಕ್ಕೂ ಅಧಿಕ ತೆಂಗಿನ ಸಸಿಗಳನ್ನು ವಿತರಣೆ ಮಾಡುವ ಚಿಂತನೆ ನಡೆದಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಕೃಪಾಶೀರ್ವಾದಿಂದ ಸಂಸದರಾಗಿರುವ ಬಿ.ವೈ.ರಾಘವೇಂದ್ರ ರವರ ರಾಜಕೀಯ ಜೀವನ ಮತ್ತಷ್ಟು ಅಭಿವೃದ್ದಿ ಕಾರ್ಯಗಳನ್ನು ಮಾಡಲೆಂದು ಅಭಿಮಾನಿ ಬಳಗದವತಿಯಿಂದ ಜನ್ಮ ದಿನಾಚರಣೆ ಆಚರಿಸಲಾಗುತ್ತಿದೆ ಎಂದರು.
ಪಕ್ಷದ ಮುಖಂಡ ಪ್ರವೀಣ್ ಪಟೇಲ್ ಮಾತನಾಡಿ ರಾಜ್ಯ ಹಾಗೂ ಜಿಲ್ಲೆಗೆ ಬಂದೆರೆಗಿರುವ ಅತಿವೃಷ್ಟಿಯಿಂದಾಗಿ ಹಾನಿಗೊಳಗಾದ ಪ್ರದೇಶಗಳಿಗೆ ಸಂಸದರು ಭೇಟಿ ನೀಡಿ ಅವರ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಮುಂದಾಗಿದ್ದರು. ಅದೇ ರೀತಿ ಇಲ್ಲಿನ ಕಾರ್ಖಾನೆಗಳನ್ನು ಉಳಿಸಿಕೊಳ್ಳುವ ಪ್ರಯತ್ನದಲ್ಲಿ ತೊಡಗಿದ್ದು ಅಭಿವೃದ್ದಿಗೊಳಿಸುವುದರಲ್ಲಿ ಕ್ಷೇತ್ರದ ಜನತೆಗೆ ಯಾವುದೆ ಅನುಮಾನ ಬೇಡ ಎಂದರು.
ಮುಖಂಡರಾದ ಜಿ. ಆನಂದಕುಮಾರ್, ವಿ. ಕದಿರೇಶ್, ಬಿ.ಕೆ.ಶ್ರೀನಾಥ್, ಧರ್ಮಪ್ರಸಾಧ್, ಎನ್. ವಿಶ್ವನಾಥ್ ರಾವ್, ರಾಮನಾಥ್ ಬರ್ಗೆ, ರಾಮಣ್ಣ, ಸರಸ್ವತಿ ಸೇರಿದಂತೆ ಮುಂತಾದವರಿದ್ದರು.
(ವರದಿ: ಆರ್.ವಿ. ಕೃಷ್ಣ, ಭದ್ರಾವತಿ)
Discussion about this post