ಕಲ್ಪ ಮೀಡಿಯಾ ಹೌಸ್ | ದಾವಣಗೆರೆ |
ಜನರ ಬಳಿಗೆ ಸರ್ಕಾರವೇ ತಲುಪುವುದೇ ಜನಪರ ಸರ್ಕಾರ. ಈ ನಿಟ್ಟಿನಲ್ಲಿ ಜನರ ಮನೆ ಬಾಗಿಲಿಗೆ ಪಡಿತರ ಅಕ್ಕಿ, ಗೋಧಿ ಸೇರಿದಂತೆ ಆಹಾರಧಾನ್ಯವನ್ನು ತಲುಪಿಸುವ ಜನಸೇವಕ’ ಯೋಜನೆ ಜನವರಿ 26 ರಿಂದ ರಾಜ್ಯದಾದ್ಯಂತ ಜಾರಿಗೆ ಬರಲಿದೆ. ಮೊದಲ ಹಂತದಲ್ಲಿ ಬೆಂಗಳೂರು ಭಾಗದ 28 ವಿಧಾನಸಭಾ ಕ್ಷೇತ್ರಗಳಲ್ಲಿ ಬರುವ ನ.1 ರಂದು ಜಾರಿಗೊಳ್ಳಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದರು.
ಜಿಲ್ಲೆಯ ನ್ಯಾಮತಿ ತಾಲ್ಲೂಕು ಸುರಹೊನ್ನೆ ಗ್ರಾಮದಲ್ಲಿ ಜಿಲ್ಲಾಧಿಕಾರಿಗಳ ನಡೆ-ಹಳ್ಳಿಯ ಕಡೆ, ಗ್ರಾಮವಾಸ್ತವ್ಯ ಕಾರ್ಯಕ್ರಮಕ್ಕೆ ಚಾಲನೆ, ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ, ಶಂಕುಸ್ಥಾಪನೆ ಸೇರಿದಂತೆ ಸರ್ಕಾರದ ವಿವಿಧ ಯೋಜನೆಗಳ ಸವಲತ್ತುಗಳನ್ನು ಫಲಾನುಭವಿಗಳಿಗೆ ವಿತರಿಸುವ ಸಮಾರಂಭದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಸರ್ಕಾರ ವಿಧಾನಸೌಧದಲ್ಲಿದೆ ಎಂದು ಅಂದುಕೊಳ್ಳುವ ಕಾಲವಿತ್ತು. ಆದರೆ, ಜನರಿಗೋಸ್ಕರ, ಜನರ ಬಳಿಗೇ ಸರ್ಕಾರ ತಲುಪಿದಾಗಲೇ ಅದು ಜನಪರ ಸರ್ಕಾರ ಎನಿಸಿಕೊಳ್ಳಲು ಸಾಧ್ಯ. ಜನರಿರುವ ಕಡೆ ಅಭಿವೃದ್ಧಿ ತಲುಪಿದಾಗಲೇ ಪ್ರಜಾಪ್ರಭುತ್ವ ಯಶಸ್ವಿಯಾಗಲು ಸಾಧ್ಯ, ಆಗ ಮಾತ್ರ ವಿವಿಧ ಸೌಲಭ್ಯಗಳಿಗಾಗಿ ಜನರು ಸರ್ಕಾರಿ ಕಚೇರಿಗೆ ಅಲೆದಾಡುವುದು ತಪ್ಪುತ್ತದೆ. ಈ ದಿಸೆಯಲ್ಲಿ ಪಡಿತರ ಅಕ್ಕಿ ಸೇರಿದಂತೆ ರೇಷನ್ ಅನ್ನು ಫಲಾನುಭವಿಗಳ ಮನೆ ಬಾಗಿಲಿಗೆ ತಲುಪಿಸುವ ಜನಸೇವಕ’ ಯೋಜನೆಯನ್ನು ಜ. 26 ರಿಂದ ರಾಜ್ಯದಾದ್ಯಂತ ಜಾರಿಗೊಳಿಸಲು ಸರ್ಕಾರ ಉದ್ದೇಶಿಸಿದೆ. ಮೊದಲ ಹಂತದಲ್ಲಿ ಬೆಂಗಳೂರು ಭಾಗದ 28 ವಿಧಾನಸಭಾ ಕ್ಷೇತ್ರಗಳಲ್ಲಿ ಬರುವ ನ.1 ರಿಂದ ಚಾಲನೆ ನೀಡಲಾಗುವುದು. ಎಲ್ಲ ಬಗೆಯ ಪ್ರಮಾಣಪತ್ರಗಳು ಗ್ರಾಮ ಪಂಚಾಯತ್ ಮಟ್ಟದಲ್ಲಿ ಸಿಗುವಂತಾಗಬೇಕು, ಇದಕ್ಕಾಗಿ ಜನರು ತಾಲೂಕು, ಜಿಲ್ಲಾ ಮಟ್ಟದ ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಲು, ಎಲ್ಲ ಸೇವೆಗಳು ಪ್ರತಿ ಗ್ರಾಮ ಮಟ್ಟದಲ್ಲಿ ಜನರ ಮನೆಬಾಗಿಲಿಗೆ ತಲುಪಿಸುವ ಕಾರ್ಯ ಆರಂಭಿಸಲಾಗುವುದು ಎಂದು ಹೇಳಿದರು.
ಜನರ ಬದುಕು ಹಸನಾಗಲು ಸರ್ಕಾರ ಜನರ ಮನೆಬಾಗಿಲಿಗೆ ತಲುಪಬೇಕು, ಇದುವರೆಗೂ ಮಧ್ಯವರ್ತಿಗಳು ಜನರ ರಕ್ತಹೀರಿ ಸೌಲಭ್ಯ ಕೊಡಿಸಲು ಮುಂದಾಗುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ. ಇನ್ನು ಮುಂದೆ ಸ್ವಚ್ಛ, ದಕ್ಷ, ಜನಪರ ಆಡಳಿತ ಕೊಡುತ್ತೇವೆ. ಗಾಂಧೀಜಿಯವರ ಗ್ರಾಮರಾಜ್ಯದ ಪರಿಕಲ್ಪನೆಯಿಂದ ಹಿಡಿದು, ಅಟಲ್ ಬಿಹಾರಿ ವಾಜಪೇಯಿ ಅವರ ಗ್ರಾಮ ಸ್ವರಾಜ್ಯದ ಕಲ್ಪನೆಯನ್ನು ಸಾಕಾರಗೊಳಿಸಲು ಯೋಜನೆ ರೂಪಿಸುತ್ತೇವೆ. ಮುಂದಿನ ಒಂದೂವರೆ ವರ್ಷದೊಳಗೆ 04 ಲಕ್ಷ ಮನೆಗಳನ್ನು ನಿರ್ಮಿಸುವ ಸಂಕಲ್ಪ ಮಾಡಿದ್ದೇವೆ, ಇದು ಕೇವಲ ಘೋಷಣೆಯಲ್ಲ, ಇದಕ್ಕೆ ಬೇಕಿರುವ ಅನುದಾನವನ್ನೂ ಕೂಡ ಮೀಸಲಿಡುತ್ತೇವೆ ಎಂದರು.
ಸ್ಲಂ ಪ್ರದೇಶಗಳಲ್ಲಿ ಈ ವರ್ಷ 1 ಲಕ್ಷ ಮನೆ ನಿರ್ಮಿಸಲು ಮಂಜೂರಾತಿ ನೀಡಿ, ಹಣ ಬಿಡುಗಡೆ ಕೂಡ ಮಾಡುತ್ತೇವೆ. ಜಲಜೀವನ್ ಮಿಷನ್ ಯೋಜನೆಯಡಿ ಮನೆ ಮನೆಗಳಿಗೆ ಶುದ್ಧ ನೀರು ತಲುಪಿಸಲು 2 ಸಾವಿರ ಕೋಟಿ ರೂ. ಬಿಡುಗಡೆ ಮಾಡಿದ್ದೇವೆ. 750 ಗ್ರಾಮಗಳನ್ನು ಗುಡಿಸಲು ಮುಕ್ತವಾಗಿಸಲು ಕ್ರಮ ವಹಿಸಿದ್ದು, 75 ಸಾವಿರ ಮಕ್ಕಳಿಗೆ ಕೌಶಲ್ಯ ತರಬೇತಿ ನೀಡಿ, ಉದ್ಯೋಗ ದೊರಕುವಂತೆ ಮಾಡಲು ಸಂಕಲ್ಪ ಮಾಡಿದ್ದೇವೆ. ರಾಜ್ಯದ 180 ಐಟಿಐ ಕಾಲೇಜುಗಳನ್ನು ಮೇಲ್ದರ್ಜೆಗೇರಿಸಲು ಕ್ರಮ ವಹಿಸಿದ್ದು, ಉಳಿದ ಎಲ್ಲ ಐಟಿಐ ಹಾಗೂ ಪಾಲಿಟೆಕ್ನಿಕ್ಗಳನ್ನೂ ಕೂಡ ಮೇಲ್ದರ್ಜೆಗೇರಿಸಲಾಗುವುದು ಎಂದರು.
ಅಂತಾರಾಷ್ಟ್ರೀಯ ಮಟ್ಟದಲ್ಲಿ ನಮ್ಮ ವಿದ್ಯಾರ್ಥಿಗಳು ಶಿಕ್ಷಣದಲ್ಲಿ ಸ್ಪರ್ಧೆ ನಡೆಸಲು ಅನುವಾಗುವಂತೆ, ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರಾಜ್ಯದಲ್ಲಿ ಈ ವರ್ಷ ಅನುಷ್ಠಾನಗೊಳಿಸಲಾಗಿದೆ. ರಾಜ್ಯದ ಪ್ರತಿ ರೈತ, ಕೂಲಿಕಾರರ ಬದುಕು ಹಸನಾದಾಗ ಮಾತ್ರ ರಾಜ್ಯ ಅಭಿವೃದ್ಧಿಯಾಗುತ್ತದೆ, ಅಲ್ಲದೆ ಆದಾಯವೂ ಹರಿದು ಬರುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದರು. ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ, ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ಅವರ ಮನವಿಯಂತೆ ನ್ಯಾಮತಿ ಪಟ್ಟಣದಲ್ಲಿ ತಾಲ್ಲೂಕು ಮಟ್ಟದ ವಿವಿಧ ಇಲಾಖೆಗಳು ಒಂದೇ ಸೂರಿನಡಿ ಕೆಲಸ ಮಾಡುವಂತಾಗಲು ಸಾಮಥ್ರ್ಯ ಸೌಧ (ಮಿನಿವಿಧಾನಸೌಧ) ಮಂಜೂರು ಮಾಡಲಾಗುವುದು ಎಂದು ಇದೇ ವೇಳೆ ಪ್ರಕಟಿಸಿದರು.
ಕಾರ್ಯಕ್ರಮದಲ್ಲಿ ಕಂದಾಯ ಸಚಿವ ಆರ್. ಅಶೋಕ್, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ, ಸಂಸದ ಡಾ. ಜಿ.ಎಂ. ಸಿದ್ದೇಶ್ವರ್, ಮಾತನಾಡಿದರು.
ಶಾಸಕರುಗಳಾದ ಮಾಡಾಳ್ ವಿರೂಪಾಕ್ಷಪ್ಪ, ಪ್ರೊ. ಲಿಂಗಣ್ಣ, ಎಸ್.ವಿ. ರಾಮಚಂದ್ರ, ದಾವಣಗೆರೆ ಮಹಾನಗರಪಾಲಿಕೆ ಮಹಾಪೌರ ಎಸ್.ಟಿ. ವೀರೇಶ್, ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಜಿಪಂ ಸಿಇಒ ಡಾ. ವಿಜಯ ಮಹಾಂತೇಶ್, ಎಸ್’ಪಿ ಸಿ.ಬಿ. ರಿಷ್ಯಂತ್, ಸುರಹೊನ್ನೆ ಗ್ರಾ.ಪಂ. ಅಧ್ಯಕ್ಷ ಹಾಲೇಶಪ್ಪ, ಉಪಾಧ್ಯಕ್ಷೆ ರುಕ್ಮೀಣಿಯಮ್ಮ ಮುಂತಾದ ಗಣ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಂಗವಾಗಿ ಮುಖ್ಯಮಂತ್ರಿಗಳು 26 ಘನತ್ಯಾಜ್ಯ ವಿಲೇವಾರಿ ವಾಹನಗಳ ಉದ್ಘಾಟನೆ ನೆರವೇರಿಸಿದರು. ಅಲ್ಲದೆ ಸಮಾರಂಭದ ಆವರಣದಲ್ಲಿ ವಿವಿಧ ಇಲಾಖೆಗಳಿಂದ ನಿರ್ಮಿಸಲಾಗಿದ್ದ ವಸ್ತುಪ್ರದರ್ಶನ ಮಳಿಗೆಗಳನ್ನು ಕೂಡ ಉದ್ಘಾಟಿಸಿದರು. ವಿವಿಧ ಇಲಾಖೆಗಳ ಮೂಲಕ ಹಲವು ಯೋಜನೆಗಳಡಿ ಫಲಾನುಭವಿಗಳಿಗೆ ಸವಲತ್ತುಗಳನ್ನು ಇದೇ ಸಂದರ್ಭದಲ್ಲಿ ವಿತರಣೆ ಮಾಡಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post