ಶಿವಮೊಗ್ಗ: ಹಿರಿಯ ನಾಗರಿಕರಿಗೆ ಸೂಕ್ತ ಆರೈಕೆ ನೀಡುವುದು ಇಂದು ಅವಶ್ಯಕವಾಗಿದೆ ಎಂದು ಖ್ಯಾತ ವೈದ್ಯ ಡಾ. ಎನ್.ಎಲ್. ನಾಯಕ್ ಕರೆ ನೀಡಿದರು.
ನಗರದ ಸುಬ್ಬಯ್ಯ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಹಿರಿಯ ನಾಗರಿಕರ ನೂತನ ಸಮಾಲೋಚನಾ ಕೊಠಡಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹಿರಿಯ ನಾಗರಿಕರು ಇಂದು ಹಲವಾರು ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ತಮ್ಮ ಸಂಪೂರ್ಣ ಜೀವನವನ್ನು ಮಕ್ಕಳಿಗಾಗಿಯೇ ಸವೆಸುವ ಅವರು ನಂತರ ಮಕ್ಕಳಿಂದಲೇ ತಾತ್ಸಾರಕ್ಕೊಳಗಾಗಿ ವೃದ್ದಾಶ್ರಮವನ್ನು ಸೇರುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಸುಬ್ಬಯ್ಯ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯಲ್ಲಿ ಹಿರಿಯ ನಾಗರಿಕರಿಗೆಂದೇ ವಿಶೇಷವಾಗಿ ಸಮಾಲೋಚನಾ ಕೊಠಡಿ ಪ್ರಾರಂಭಿಸಿದ್ದು ಅವರ ಕಾಳಜಿಯನ್ನು ತೋರಿಸುತ್ತಿದೆ ಎಂದು ಶ್ಲಾಘಿಸಿದರು.
ಸುಬ್ಬಯ್ಯ ವೈದ್ಯಕೀಯ ಮಹಾವಿದ್ಯಾಲಯದ ವೈದ್ಯಕೀಯ ನಿರ್ದೇಶಕ ಡಾ. ಎಸ್. ನಾಗೇಂದ್ರ ಮಾತನಾಡಿ, ಸಮಾಜದಲ್ಲಿ ಹಿರಿಯ ನಾಗರಿಕರ ಸ್ಥಾನವನ್ನು ಯಾರೂ ಸಹ ತುಂಬಲು ಸಾಧ್ಯವಿಲ್ಲ. ನಮ್ಮ ಪ್ರತಿಯೊಂದು ಹೆಜ್ಜೆಯಲ್ಲೂ ಹಿರಿಯರ ಆಶೀರ್ವಾದ ಹಾಗೂ ಸಲಹೆಗಳು ಇರಬೇಕು ಆಗ ಮಾತ್ರ ನಾವು ಪ್ರಾರಂಭಿಸಿದ ಕೆಲಸ ಸುಸೂತ್ರವಾಗಿ ನಡೆಯುತ್ತದೆ. ಹಿರಿಯ ನಾಗರಿಕರ ಆರೋಗ್ಯದ ಕಡೆ ಇಂದು ಹೆಚ್ಚಿನ ಗಮನ ಹರಿಸುವ ಅಗತ್ಯವಿದೆ ಎಂದರು.










Discussion about this post