ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ನಮ್ಮ ರಾಷ್ಟ್ರದಲ್ಲಿ; ಕಾಶ್ಮೀರದಿಂದ ಕನ್ಯಾಕುಮಾರಿ, ಕಟಕ್ ನಿಂದ ಅಟಕ್ ಪರ್ಯಂತ ನೂರ ಮೂವತ್ತೈದು ಕೋಟಿ ಜನಸಂಖ್ಯೆಯಿದೆ. ಅದರಲ್ಲಿ; ತಮ್ಮ ಉದರ ಪೋಷಣೆಗಾಗಿ ಜವಾಬ್ದಾರಿಯಿಂದ ದುಡಿಯುವವರು ದುಡಿಯುತ್ತಿದ್ದಾರೆ. ಪ್ರಾಮಾಣಿಕವಾಗಿ ತೆರಿಗೆ ಕಟ್ಟುವವರು ಕಟ್ಟುತ್ತಿದ್ದಾರೆ. ರಾಷ್ಟ್ರ ಗೀತೆ, ರಾಷ್ಟ್ರ ಧ್ವಜ, ರಾಷ್ಟ್ರದ ಅಖಂಡತ್ವ ಹಾಗೂ ಸಾರ್ವಭೌಮತ್ವನ್ನು ಗೌರವಿಸುವವರು ಗೌರವಿಸುತ್ತಿದ್ದಾರೆ. ರಾಷ್ಟ್ರದ ಜಲ, ನೆಲ, ಖನಿಜ, ವನ್ಯ ಸಂಪತ್ತು, ರಾಷ್ಟ್ರದ ಆಸ್ತಿ ಪಾಸ್ತಿಗಳನ್ನು ರಕ್ಷಿಸುವವರು ರಕ್ಷಿಸುತ್ತಿದ್ದಾರೆ. ರಾಷ್ಟ್ರದ ಹಿರಿಮೆ ಗರಿಮೆಗಳನ್ನು ಎತ್ತಿ ಹಿಡಿದು ತಮ್ಮ ಕರ್ತವ್ಯ ಮಾಡುತ್ತಿರುವವರು ಮಾಡುತ್ತಲೇ ಇದ್ದಾರೆ.
ವೈವಿಧ್ಯತೆಯಲ್ಲಿ ಏಕತೆಯನ್ನು ಒಪ್ಪಿ ಅಪ್ಪಿಕೊಂಡವರಿದ್ದಾರೆ. ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಹಾಗೂ ಸಂವಿಧಾನ ಮತ್ತು ರಾಷ್ಟ್ರವೇ ಸರ್ವ ಪ್ರಥಮ ಎಂದು ಅಚಲವಾಗಿ ನಂಬಿದವರೂ ಇದ್ದಾರೆ. ಇವರೆಲ್ಲ ರಾಷ್ಟ್ರದ ಹಿತ ಹಾಗೂ ಪ್ರಗತಿಯ ಹಾದಿಯಲ್ಲಿ ಪುಷ್ಪವೃಷ್ಠಿ ಸುರಿಸುವವರು.
ಈ ಎಲ್ಲ ರಾಷ್ಟ್ರ ಭಕ್ತಿ ಹಾಗೂ ರಾಷ್ಟ್ರ ಹಿತಕ್ಕೆ ವ್ಯತಿರಿಕ್ತವಾಗಿಯೂ, ಮಾರಕವಾಗಿಯೂ ಚಿಂತಿಸುವವರ ಸಂಖ್ಯೆ ನಗಣ್ಯವಾಗಿ ಏನಿಲ್ಲ. “ಕಾಪಾಟ್ಯವುಳ್ಳ ಮಿತ್ರರಿಗಿಂತ ಮನಸ್ವಿ ದ್ವೇಷಿಸುವ ಶತ್ರುಗಳು ಲೇಸು” ಎಂಬ ಮಾತು ನಮ್ಮ ರಾಷ್ಟ್ರದೊಳಗಿರುವ ಹಿತಶತ್ರುಗಳನ್ನು ನೋಡಿಯೇ ಚಾಲ್ತಿಗೆ ಬಂದಿರಬಹುದು ಎನ್ನುವಷ್ಟು ಸಹಜವೆನಿಸುತ್ತದೆ. ರಾಷ್ಟ್ರದ ಪ್ರಗತಿಯ ಹಾದಿಯಲ್ಲಿ ಮುಳ್ಳುಕಂಟಿಗಳಾಗಿ ತಡೆಯೊಡ್ಡುವ ರಾಷ್ಟ್ರ ವಿರೋಧಿಗಳು ನಮ್ಮೊಡನಿದ್ದಾರೆ. ಸದಾ ರಾಷ್ಟ್ರ ಗೀತೆ, ರಾಷ್ಟ್ರ ಧ್ವಜ, ರಾಷ್ಟ್ರದ ಹಿರಿಮೆ ಗರಿಮೆಗಳನ್ನು ಲೇವಡಿ ಮಾಡುತ್ತ ನಿಂದಿಸುವವರೂ ಇಲ್ಲಿಯೇ ಇದ್ದಾರೆ. ಕರವಂಚಕರು, ಕಾಳ ಸಂತೆಕೋರರು, ಕಪ್ಪು ಹಣದ ಶ್ರೀಮಂತರೂ ಇದ್ದಾರೆ. ಪ್ರತ್ಯೇಕತೆಯನ್ನು ಅನುಮೋದಿಸುವ, ಮೊಸರನ್ನೇ ಕೆಸರಾಗಿ ಕಾಣುತ್ತ ನಮ್ಮ ಶತ್ರು ರಾಷ್ಟ್ರಗಳ ಗುಣಗಾನ ಮಾಡುವವರೂ ಇದ್ದಾರೆ. ನಮ್ಮ ಸೈನ್ಯ ಶತ್ರು ರಾಷ್ಟ್ರದ ಆತಂಕವಾದಿಗಳನ್ನು ಕೊಂದರೆ ಪುರಾವೆ ಕೇಳುವ ಶಕುನಿ ಸಂತಾನದವರೂ ಇದ್ದಾರೆ. ಒಳಗೊಂದು ಹೊರಗೊಂದು ಆಡುವ/ಹಾಡುವ ಅಸಹಿಷ್ಣುತೆ ಎಂದು ಬೊಬ್ಬಿಡುವ ಗೋಮುಖ ವ್ಯಾಘ್ರರೂ ಇಲ್ಲಿಯೇ ಇದ್ದಾರೆ.
ಈ ಎಲ್ಲ ನೂರ ಮೂವತ್ತೈದು ಕೋಟಿ ಸಂಖ್ಯೆಯ ಜನಸ್ತೋಮ ನಿಶೆಗೆ ನಿಶ್ಚಿಂತೆಯಿಂದ ಮಲಗಿ ಉಷೆಗೆ ಉಲ್ಲಾಸದಿಂದ ಎದ್ದು ಬದುಕು ಎಂಬ ಯಾಗವನ್ನು ನಡೆಸುತ್ತದೆ. ಹೀಗೆ ನಮ್ಮೆಲ್ಲರ ನಿರಾಳ ನಿದ್ದೆಗೂ ನೆಮ್ಮದಿಯ ಬದುಕಿಗೆ ಕಾರಣರು ನಮ್ಮ ವೀರ ಯೋಧರು. ದಿನದ ಇಪ್ಪತ್ನಾಲ್ಕು ಗಂಟೆಗಳಲ್ಲೂ ರಾಷ್ಟ್ರವನ್ನೂ ನಮ್ಮ ಜನತೆಯನ್ನೂ ಯಾವುದೇ ತಾರತಮ್ಯವಿಲ್ಲದೆ ಕಣ್ಣಿಗೆ ಎಣ್ಣೆ ಹಾಕಿಕೊಂಡು ಕಾಯುವವರು ನಮ್ಮ ಸೈನಿಕರು. “ಸ್ವಂತಕ್ಕಿಂತ ಮೊದಲು ಸೇವೆ” (Service Before Self) ಎಂಬ ಧ್ಯೇಯವಾಕ್ಯ ಹೊಂದಿದೆ ನಮ್ಮ ಭೂಸೇನೆ. ಈ ಧ್ಯೇಯ ವಾಕ್ಯದ ಅಕ್ಷರಾಕ್ಷಾರಗಳನ್ನೂ ಸೇವಾ ಮಂತ್ರವಾಗಿ ಪರಿಪಾಲಿಸಿಕೊಂಡು ತಮ್ಮ ಜೀವಕ್ಕಿಂತ ಮೊದಲು ಸೇವೆ ಎಂಬುದನ್ನು ಸ್ಪಷ್ಟವಾಗಿ ಸಾಬೀತು ಪಡಿಸುತ್ತ ಬಂದಿದೆ ನಮ್ಮ ಸೇನೆ. ಯುದ್ಧದ ಸಂದರ್ಭವೇ ಇರಲಿ, ಪ್ರಾಕೃತಿಕ ವಿಕೋಪಗಳ ಸನ್ನಿವೇಶವೇ ಎದುರಾಗಲಿ ನಾಗರಿಕರನ್ನು ತಮ್ಮ ಪ್ರಾಣದ ಹಂಗು ತೊರೆದು ರಕ್ಷಿಸುವ ಸೈನಿಕರೇ ನಮ್ಮ ನಿಜಾರ್ಥದ ಸ್ಟಾರ್ ಅಥವಾ ಹಿರೋಗಳು.
ಯುದ್ಧ, ಪ್ರವಾಹ, ಭೂಕಂಪ, ಸುನಾಮಿ, ಮೇಘಸ್ಪೋಟಗಳಂತ ತುರ್ತುಸಮಯದಲ್ಲಿ ನಾಡಿನ ರಕ್ಷಣೆಗೆ ಧಾವಿಸುತ್ತಾರೆ ಸೈನಿಕರು. ಸವಾಲುಗಳನ್ನೇ ಅನುಕೂಲವನ್ನಾಗಿ ಪರಿವರ್ತಿಸಿಕೊಂಡು, ಊರು, ಹೆತ್ತವರವನ್ನೂ, ಕೈಡಿದ ಮಡದಿ, ಮುದ್ದಿನ ಮಕ್ಕಳನ್ನು ಮರೆತು ನಾಡಿನ ಸೇವೆ ಮಾಡುವ ಸೈನಿಕರ ತ್ಯಾಗ, ಬಲಿದಾನಗಳನ್ನು ವಿವರಿಸಲು ಸಾಧ್ಯವೇ?
ದೇಶದ ಪ್ರಜೆಗಳು ಶಾಂತಿ, ನೆಮ್ಮದಿಯಿಂದ ಬದುಕುವುದರ ಹಿಂದೇ ನಮ್ಮ ಸೈನಿಕರ ಅಪಾರವಾದ ಶ್ರಮವಿದೆ. ಶಿವಮೂರ್ತಿ ಹೆಚ್. ಎನ್ನುವ ಕವಿ ಹೀಗೆ ಹೇಳುತ್ತಾರೆ;
ಗಡಿಯಾರ ಗಂಟೆ ಪರಿವೆಯಿಲ್ಲದೆ ದುಡಿಯುವರು
ಗಡಿಯಲಿ ಗಡಿಬಿಡಿಯಾಗದೆ ಗಡಿ ಕಾಯುವರು
ಗುಂಡು ಮದ್ದುಗಳ ಭಯವಿಲ್ಲದ ಧೈರ್ಯವಂತರು
ಗಂಡೆದೆಯ ಕಲಿಗಳು ನಮ್ಮ ಹೆಮ್ಮೆಯ ಸೈನಿಕರು
ನಮ್ಮ ಸೈನಿಕರ ಶ್ರಮ ಹಾಗೂ ಉದ್ದೇಶವನ್ನು ಸಾರುವ ಈ ಮಾತುಗಳು ಅಕ್ಷರಶಃ ನಿಜವಲ್ಲವೇ?
ಇಪ್ಪತ್ತೆರಡು ವರ್ಷಗಳ ಕಾಲ ಸೈನ್ಯದಲ್ಲಿದ್ದು ದೇಶಸೇವೆ ಮಾಡಿ, ಸ್ವಯಂ ನಿವೃತ್ತಿ ಪಡೆದು ಪ್ರಸ್ತುತ ಅಗ್ನಿ ಶಾಮಕದಳದಲ್ಲಿ ಸೇವೆ ಸಲ್ಲಿಸುತ್ತಿರುವ ಜಯ ಮೂಲ್ಯರು, ನವಯುವಕರು ಸೈನ್ಯ ಸೇರಬೇಕೆಂದು ಪ್ರೇರೇಪಿಸುತ್ತಾರೆ. ನಮ್ಮ ದೇಶದಲ್ಲಿ ಇತರ ದೇಶಗಳಂತೆ ಖಡ್ಡಾಯವಾಗಿ ಸೈನ್ಯ ಸೇರಬೇಕೆಂಬ ನಿಯಮವಿಲ್ಲ. ತರುಣರು ಸ್ವಯಂ ಸ್ಪೂರ್ತಿಯಿಂದ ಸೇನೆ ಸೇರುವುದು ದೇಶ ಸೇವೆ ಮಾಡುವ ಉದ್ದೇಶದಿಂದ ಮಾತ್ರ.
ಜಯ ಮೂಲ್ಯರು ತಮ್ಮ ಪದವಿ ಪೂರ್ವ ಶಿಕ್ಷಣ ಪೂರೈಸಿ 1985 ರಲ್ಲಿ ಭಾರತೀಯ ಭೂಸೇನೆಯಲ್ಲಿ ಪ್ರವೇಶ ಪಡೆದವರು. ಒಂದು ವರ್ಷದ ಕಠಿಣ ತರಬೇತಿಯ ನಂತರ ಜಮ್ಮು ಕಾಶ್ಮೀರದಲ್ಲಿ ಯುದ್ಧ ವಾಹನದ ಚಾಲಕರಾಗಿ ನಿಯುಕ್ತಿಗೊಂಡವರು. ಆಗ ಕಮಾಂಡಿಂಗ್ ಆಫೀಸರ್ ಆಗಿದ್ದವರು ಕರ್ನಲ್ ವಿ. ಕೆ. ಆನಂದ್. 1992 ರಲ್ಲಿ ವಿಶೇಷ ಹಾಗೂ ಭಾರಿ ವಾಹನ ಚಾಲನಾ ಪರವಾನಿಗೆ ನೀಡಿ ಪದ್ಧೊನ್ನತಿ ನೀಡಲಾಯಿತು. ರಷ್ಯನ್ ನಿರ್ಮಿತಿಯ ಎಡಗೈ ಚಾಲನೆಯ ಭಾರಿ ವಾಹನ ‘ Kraz’ ನಲ್ಲಿ ರಷ್ಯನ್ ಉತ್ಪಾದಿತ ‘130 ಎಂ. ಎಂ. ಮೀಡಿಯಂ ಗನ್’ನ್ನು ಎಳೆಯ (Towing)ಬೇಕಿತ್ತು. ಇವರಿದ್ದ ತುಕಡಿ (unit) 70 ಮಧ್ಯಮ ರೆಜಿಮೆಂಟ್. ಸುಮಾರು 350 ಸೈನಿಕರಿದ್ದ ತುಕಡಿ. ಬಿಡುವಿನ ವೇಳೆಯಲ್ಲಿ ಹೊರಾಂಗಣ ಆಟಗಳನ್ನು ಆಡುವ ಅವಕಾಶವಿತ್ತು. ಕಾಲೇಜಿನಲ್ಲಿ ವಾಲಿಬಾಲ್ ಆಡುತ್ತಿದ್ದುದರಿಂದ ಜಯ ಅವರು ಅದರಲ್ಲಿಯೇ ಮುಂದುವರಿದರು. ಆಗ ಇವರ ಕಮಾಂಡಿಂಗ್ ಆಫೀಸರ್ ಕ್ರೀಡೆಗೆ ಬಹಳ ಮಹತ್ವ ಕೊಡುತ್ತಿದ್ದ ಕರ್ನಲ್ ಎಂ. ಎಸ್. ಸಿದ್ದು. ಇವರ ವಾಲಿಬಾಲ್ ಆಟದ ಸ್ಪೂರ್ತಿಯನ್ನು ಮೆಚ್ಚಿ ಪದ್ಧೊನ್ನತಿ ನೀಡಿ ಹವಲ್ದಾರ್ ಹುದ್ದೆಗೆ ನಿಯುಕ್ತಿಗೊಳಿಸಿದರು. ಈ ದಿನ ನನ್ನ ಜೀವನದ ಮರೆಯಲಾರದ ದಿನ ಎನ್ನುತ್ತಾರೆ ಜಯ ಅವರು.
ಸೈನಿಕ ಭಾಷೆಯಲ್ಲಿ ಆಪತ್ತು ಎದುರಾದಾಗ ನಡೆಸುವ ಕಾರ್ಯಾಚರಣೆಗಳನ್ನು ಅಪರೇಷನ್ ಎಂದು ಕರೆಯಲಾಗುತ್ತದೆ. ಜಯ ಅವರ ಸೇವಾವಧಿಯಲ್ಲಿ ರಕ್ಷಕ್, ಪರಾಕ್ರಮ್ ಹಾಗೂ ವಿಜಯ್ ಎಂಬ ಮೂರು ಅಪರೇಷನ್ ಗಳು ನಡೆದಿದ್ದವು. ಎಲ್ಲರಿಗೂ ಗೊತ್ತಿರುವಂತೆ 1999 ರಲ್ಲಿ ಪಾಕಿಸ್ತಾನವು ಕಾರ್ಗಿಲ್ ಬೆಟ್ಟ ಪ್ರದೇಶವನ್ನು ಆಕ್ರಮಿಸಿದಾಗ ನಡೆದದ್ದು ಅಪರೇಷನ್ ‘ವಿಜಯ್. ಕಾರ್ಗಿಲ್ ಕಡೆಯಿಂದ ಭೀಕರವಾದ ಯುದ್ಧ ನಡೆಯುತ್ತಿತ್ತು. ಆಗ ಜಯ ಅವರು ರಾಜಸ್ಥಾನದಲ್ಲಿ ಸೇವೆಯಲ್ಲಿದ್ದರು. ಯುದ್ಧಕ್ಕಾಗಿ ರಾಜಸ್ಥಾನ್ ಗಡಿಯನ್ನು ಮುಚ್ಚುವಂತೆ ಮೇಲಾಧಿಕಾರಿಗಳಿಂದ ಆದೇಶ ಬಂದಿತ್ತು. ಆ ಕೂಡಲೇ ರಾಜಸ್ಥಾನದ ಗಂಗಾನಗರ ಎಂಬ ಜಾಗದಲ್ಲಿ ಗಡಿ ಪ್ರದೇಶದಿಂದ ಕೇವಲ 8 ಕೀ. ಮೀ. ಅಂತರದಲ್ಲಿ ನೆಲದಡಿ ಬಂಕರ್ ನಿರ್ಮಿಸಿ ಸಮರ ಸನ್ನದ್ಧರಾಗಿದ್ದವರು.
ಒಂದು ರಾತ್ರಿ 10.30 ಕ್ಕೆ ಗುಪ್ತ ಸಂದೇಶ ಬಂತು. ಕೇವಲ ಹತ್ತು ನಿಮಿಷಗಳಲ್ಲಿ ಯುದ್ಧಾರಂಭ ಎಂದು. ಆ ಸಮಯದಲ್ಲಿ ವೈಯುಕ್ತಿಕವಾಗಿ ಜಯ ಅವರಿಗಾಗಲೀ ಇತರ ಸೈನಿಕರಿಗಾಗಲೀ ಊರು, ಮನೆ, ಮಡದಿ, ಮಕ್ಕಳು, ಬಂಧುಗಳ ಯೋಚನೆ ಬರಲೇ ಇಲ್ಲ. ಆದಿಕವಿ ಪಂಪನ ಕಾಲದಲ್ಲಿ ಯುದ್ಧವೆಂದರೆ ಸೈನಿಕರ ಭುಜಗಳು ಯುದ್ಧೋನ್ಮತೆಯಿಂದ ಕುಣಿಯುತ್ತಿದ್ದವಂತೆ. ಅದೇ ರೀತಿ ಭಾರತೀಯ ಸೈನಿಕರಿಗೆ ಯುದ್ಧೋನ್ಮತೆ ಉಂಟಾಗುತ್ತದೆ ಎನ್ನುತ್ತಾರೆ ಅವರು. ಯುದ್ಧ ಆಗಲೇ ಬೇಕು. ಶತ್ರು ದೇಶವನ್ನು ಹೊಡೆದುರುಳಿಸಬೇಕು ಎಂಬುದೇ ಭಾರತೀಯ ಸೈನಿಕರ ಮನದಾಳದ ಬಯಕೆ. ನಾವೊಂದು ಯೋಚಿಸಿದರೆ ದೈವ ಬೇರೊಂದು ಯೋಚಿಸಿತು ಎಂಬಂತೆ ಶತ್ರು ರಾಷ್ಟ್ರದ ವಂಚಕ ಪ್ರಧಾನಿ ಜ. ಮುಶ್ರಫ್ ವಿಶ್ವಸಂಸ್ಥೆ ಹಾಗೂ ಅಮೆರಿಕಾದ ಅಧ್ಯಕ್ಷರುಗಳ ಕಾಲಿಗೆ ಬಿದ್ದು ಗೋಗರೆದು ಬೇಡಿಕೊಂಡ. ತತ್ಪರಿಣಾಮವಾಗಿ ಯುದ್ದ ನಿಂತು ಹೋಯಿತು. ಪಾಕಿಸ್ತಾನ ಆಕ್ರಮಿಸಿದ ಪ್ರದೇಶವನ್ನು ರಿಕ್ತಗೊಳಿಸಿ ಹಿಂತಿರುಗಿ ಹೊರಟು ಹೋಯಿತು. ಈ ಯುದ್ಧದಲ್ಲಿ ಪಾಕಿಸ್ತಾನ ಹೀನಾಯವಾಗಿ ಸೋತು ಸುಣ್ಣವಾಗಿ ಹೋಗಿತ್ತು.
ಜಯ ಅವರು ಸೈನಿಕ ನೆಲೆಯಲ್ಲಿ ಕಾರ್ಯಾಚರಿಸುವಾಗ ರೋಚಕವಾದ ಅನುಭವಗಳನ್ನು ಅನುಭವಿಸಿದವರು. ಹೆಚ್ಚು ಕಾಲ ಜಮ್ಮು ಕಾಶ್ಮೀರದಲ್ಲಿ ಸೇವೆ ಸಲ್ಲಿಸಿದವರು. ಪ್ರಪಂಚದ ಅತಿ ಎತ್ತರದ ಭೂಮಾರ್ಗ ಇರುವುದು ಕರ್ದುಂಗ್ಲ ಶಿಖರದಲ್ಲಿ. (K. Top) ಇಲ್ಲಿ ವಾಹನ ಚಲಾಯಿಸುದೇ ಒಂದು ಸವಾಲು. ಅತ್ಯಂತ ಅಪಾಯ ಕೂಡ. ಒಂದಿಂಚು ಅತ್ತಿತ್ತವಾದರೂ ಸಾವು ಖಚಿತ. ಇಲ್ಲಿಯ ತಾಪಮಾನ ಮೈನಸ್ 15 ಡಿಗ್ರಿಯಿಂದ ಮೈನಸ್ 40 ಡಿಗ್ರಿ ಸೆಲ್ಸಿಯಸ್. ಕರ್ದುಂಗ್ಲ ಶಿಖರದ ಎತ್ತರ ಸಮುದ್ರ ಮಟ್ಟದಿಂದ 18,380 ಅಡಿಗಳು. ಉಸಿರಾಟಕ್ಕೆ ಆಮ್ಲಜನಕದ ಕೊರತೆಯುಂಟಾಗುತ್ತದೆ. ನಯನ ಮನೋಹರವಾದ ಪ್ರಕೃತಿ. ರೋಮಾಂಚಕ ದೃಶ್ಯ. ಮರಗಿಡ ಹುಲ್ಲು ಪೊದೆ ಏನೂ ಬೆಳೆಯದ ಹಿಮ ಶಿಖರಗಳು. ಎಲುಬು ಕೊರೆಯುವ ಚಳಿ. ಜಯ ಅವರು ಇಪ್ಪತ್ತೆರಡು ವರ್ಷ ಸೈನ್ಯದಲ್ಲಿ ದುಡಿದು ತಾಯಿ ಭಾರತಿಯ ಸೇವೆ ಮಾಡಿ 2007ರಲ್ಲಿ ಸ್ವಯಂ ನಿವೃತ್ತಿ ಹೊಂದಿರುವರು.
ಕೆಳ ಮಧ್ಯಮ ವರ್ಗದ ಕುಟುಂಬದಿಂದ ಬಂದ ಜಯ ಅವರು ಮೂಲತಃ ಕಾಪು ತಾಲೂಕಿನ ಕುತ್ಯಾರಿನವರು. ಶ್ರೀಮತಿ ಗಿರಿಜ ಹಾಗೂ ಶ್ರೀ ಸೇಸ ಮೂಲ್ಯರ ಎರಡನೆಯ ಮಗ. ಶಿರ್ವ ವಿದ್ಯಾವರ್ಧಕ ಸಂಘದ ಆಡಳಿತಕ್ಕೊಳಪಟ್ಟ ವಿದ್ಯಾಸಂಸ್ಥೆಗಳಾದ ಕುತ್ಯಾರು ವಿದ್ಯಾದಾಯಿನಿ ಹಿರಿಯ ಪ್ರಾಥಮಿಕ ಶಾಲೆ, ಹಿಂದೂ ಪ್ರೌಢ ಶಾಲೆ ಹಾಗೂ ಹಿಂದೂ ಪದವಿ ಪೂರ್ವ ಕಾಲೇಜಿನಲ್ಲಿ ವ್ಯಾಸಂಗ ಮಾಡಿದವರು. ಇವರ ಬಾಳ ಸಂಗಾತಿ ಶ್ರೀಮತಿ ಆಶಾಲತಾ. ದಂಪತಿಗಳಿಗೆ ಇಬ್ಬರು ಸುಪುತ್ರಿಯರು. ಅಂಜನಾ ಮತ್ತು ಸುಧೀಕ್ಷ. ದೊಡ್ಡವಳು ಇಂಜಿನಿಯರಿಂಗ್ ವಿದ್ಯಾರ್ಥಿ. ಚಿಕ್ಕವಳು ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ. ಸೈನ್ಯದಲ್ಲಿ ಇಪ್ಪತ್ತೆರಡು ವರ್ಷಗಳ ಪರ್ಯಂತ ದುಡಿದು ಸ್ವಯಂ ಸೇವಾ ನಿವೃತ್ತಿ ಪಡೆದ ನಂತರ ರಾಜ್ಯ ಸರಕಾರದ ಸಂಸ್ಥೆಯಾದ ಅಗ್ನಿಶಾಮಕ ದಳ ಕಾರ್ಕಳ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಪ್ರಸ್ತುತ ತೆಳ್ಳಾರಿನಲ್ಲಿ ವಾಸವಾಗಿದ್ದಾರೆ. ಸೈನ್ಯದ ಶಿಸ್ತನ್ನು ಜೀವನದಲ್ಲೂ ಅಳವಡಿಸಿಕೊಂಡಿರುವ ಜಯ ಅವರದು ಸುಖಿ ಸಂಸಾರ. ಹಲವು ಸಂಘ ಸಂಸ್ಥೆಗಳು ಹಾಗೂ ಮಾಧ್ಯಮ ಜಯ ಅವರ ಸೇವೆಯನ್ನು ಗುರುತಿಸಿವೆ. ಅವರ ಭವಿತವ್ಯದ ಬಾಳು ಸಂಸಾರಿಕ ಒಲುಮೆಯಿಂದ ಸಾಗಲಿ.
Get In Touch With Us info@kalpa.news Whatsapp: 9481252093
Discussion about this post