ಗೋವತ್ಸ ದ್ವಾದಶಿ
ತಿಥಿ: ಆಶ್ವಯುಜ ಕೃಷ್ಣ ದ್ವಾದಶಿ
ಇತಿಹಾಸ: ಸಮುದ್ರಮಂಥನದಿಂದ ಐದು ಕಾಮಧೇನುಗಳು ಉತ್ಪನ್ನವಾದವು ಎನ್ನುವ ಕಥೆ ಇದೆ. ಇದು ಅವುಗಳಲ್ಲಿ `ನಂದಾ’ ಎನ್ನುವ ಹೆಸರಿನ ಕಾಮಧೇನುವಿಗೆ ಸಂಬಂಧಿಸಿದ ವ್ರತವಾಗಿದೆ.
ಉದ್ದೇಶ: ಈ ಜನ್ಮ ಮತ್ತು ಮುಂದಿನ ಅನೇಕ ಜನ್ಮಗಳಲ್ಲಿನ ಮನೋಕಾಮನೆಗಳು ಪೂರ್ಣವಾಗಬೇಕು ಮತ್ತು ಪೂಜೆಯನ್ನು ಮಾಡುತ್ತಿರುವ ಆಕಳ ಶರೀರದ ಮೇಲೆ ಎಷ್ಟು ರೋಮಗಳು (ಕೂದಲುಗಳು) ಇವೆಯೋ ಅಷ್ಟು ವರ್ಷಗಳ ಕಾಲ ಸ್ವರ್ಗದಲ್ಲಿ ಸ್ಥಾನ ಸಿಗಬೇಕೆಂದು ಈ ಹಬ್ಬವನ್ನು ಆಚರಿಸುತ್ತಾರೆ.
ಹಬ್ಬವನ್ನು ಆಚರಿಸುವ ಪದ್ಧತಿ: ಈ ದಿನ ಮುತ್ತೈದೆಯರು ಒಪ್ಪೊತ್ತು ಊಟ ಮಾಡಿ ಬೆಳಗ್ಗೆ ಅಥವಾ ಸಾಯಂಕಾಲ ಕರುಸಮೇತವಿರುವ ಆಕಳ ಪೂಜೆಯನ್ನು ಮಾಡುತ್ತಾರೆ.
ಗೋವತ್ಸದ್ವಾದಶಿಯ ಮಹತ್ವ
ಆಕಳಿನ ಪೂಜೆಯನ್ನು ಮಾಡಿ ಅವಳಲ್ಲಿರುವ ಸಾತ್ತ್ವಿಕ ಗುಣಗಳನ್ನು ಸ್ವೀಕರಿಸುವುದು: ಭಾರತೀಯ ಸಂಸ್ಕೃತಿಯಲ್ಲಿ ಆಕಳಿಗೆ ತುಂಬಾ ಮಹತ್ವವಿದೆ. ಅವಳನ್ನು ಮಾತೆಯೆಂದು ಸಂಬೋಧಿಸಲಾಗುತ್ತದೆ. ಅವಳು ಸಾತ್ತ್ವಿಕಳಾಗಿರುವುದರಿಂದ ಅವಳ ಪೂಜೆಯನ್ನು ಮಾಡಿ ಎಲ್ಲರೂ ಅವಳ ಸಾತ್ತ್ವಿಕ ಗುಣಗಳನ್ನು ಸ್ವೀಕರಿಸುವುದಿರುತ್ತದೆ. ತನ್ನ ಸಹವಾಸದಿಂದ ಇತರರನ್ನು ಪಾವನ ಗೊಳಿಸುವ, ತನ್ನ ಹಾಲಿನಿಂದ ಸಮಾಜ ವನ್ನು ಬಲಿಷ್ಠಗೊಳಿಸುವ, ಕೃಷಿಗಾಗಿ ತನ್ನ ಸೆಗಣಿಯಿಂದ ಗೊಬ್ಬರವನ್ನು ನೀಡುವ, ಕೃಷಿಗೆ ಉಪಯುಕ್ತವಾದ ಎತ್ತುಗಳಿಗೆ ಜನ್ಮ ನೀಡುವ, ಶ್ರೀಕೃಷ್ಣನಿಗೆ ಪ್ರಿಯವಾಗಿರುವ ಹಾಗೂ ಎಲ್ಲ ದೇವತೆಗಳು ತನ್ನಲ್ಲಿ ವಾಸಿಸುವಂತಹ ಯೋಗ್ಯತೆಯಿರುವ ಗೋಮಾತೆಯನ್ನು ಈ ದಿನದಂದು ಪೂಜೆ ಮಾಡಬೇಕು. ಎಲ್ಲಿ ಗೋಮಾತೆಯ ಸಂರಕ್ಷಣೆ ಮತ್ತು ಸಂವರ್ಧನೆಯಾಗುತ್ತದೆಯೋ ಹಾಗೂ ಪೂಜ್ಯ ಭಾವದಿಂದ ಅವಳನ್ನು ಪೂಜಿಸಲಾಗುತ್ತದೆಯೋ, ಅಲ್ಲಿನ ವ್ಯಕ್ತಿಗಳು, ಆ ಸಮಾಜ ಮತ್ತು ಆ ರಾಷ್ಟ್ರದ ಸಮೃದ್ಧಿಯು ನಿಶ್ಚಿತವಾಗಿ ಆಗುತ್ತದೆ. ಇಂತಹ ಗೋಮಾತೆಯನ್ನು ಅವಳ ಕರುಗಳ ಸಹಿತ ಪೂಜಿಸಿ ದೀಪೋತ್ಸವವನ್ನು (ದೀಪಾವಳಿಯನ್ನು) ಆಚರಿಸಬೇಕು.
ನರಕ ಚತುರ್ದಶಿ:
ಇತಿಹಾಸ: ಶ್ರೀಮದ್ಭಾಗವತ ಪುರಾಣದಲ್ಲಿ ಹೀಗೊಂದು ಕಥೆಯಿದೆ ? ಹಿಂದೆ ಪ್ರಾಗ್‍ಜ್ಯೋತಿಷಪುರ ಎಂಬಲ್ಲಿ ಭೌಮಾಸುರ ಅಥವಾ ನರಕಾಸುರನೆಂಬ ಒಬ್ಬ ಬಲಾಢ್ಯ ರಾಕ್ಷಸನು ರಾಜ್ಯವನ್ನಾಳುತ್ತಿದ್ದನು. ಅವನು ದೇವತೆಗಳಿಗೆ ಮತ್ತು ಮಾನವರಿಗೆ ಬಹಳ ತೊಂದರೆ ಗಳನ್ನು ಕೊಡತೊಡಗಿದನು. ಈ ದುಷ್ಟದೈತ್ಯನು ಸ್ತ್ರೀಯರನ್ನು ಪೀಡಿಸತೊಡಗಿದನು. ಅವನು ತಾನು ಜಯಿಸಿ ತಂದಿದ್ದ 16000 ವಿವಾಹಯೋಗ್ಯ ರಾಜಕನ್ಯೆಯರನ್ನು ಸೆರೆವಾಸದಲ್ಲಿಟ್ಟು ಅವರೊಂದಿಗೆ ವಿವಾಹವಾಗುವ ಹುನ್ನಾರವನ್ನು (ಯುಕ್ತಿಯನ್ನು) ಮಾಡಿದ್ದನು. ಇದರಿಂದ ಎಲ್ಲ ಕಡೆಗಳಲ್ಲಿಯೂ ಹಾಹಾಕಾರವೆದ್ದಿತು. ಶ್ರೀಕೃಷ್ಣನಿಗೆ ಈ ವೃತ್ತಾಂತವು ತಿಳಿದ ಕೂಡಲೇ ಅವನು ಸತ್ಯಭಾಮೆಯೊಂದಿಗೆ ಬಂದು ನರಕಾಸುರನೊಂದಿಗೆ ಯುದ್ಧವನ್ನು ಮಾಡಿ ನರಕಾಸುರನನ್ನು ವಧಿಸಿದನು ಮತ್ತು ಆ ರಾಜಕನ್ಯೆಯರನ್ನು ಮುಕ್ತಗೊಳಿಸಿದನು. ಸಾಯುವಾಗ ನರಕಾಸುರನು ಕೃಷ್ಣನಲ್ಲಿ `ಇಂದಿನ ತಿಥಿಗೆ ಯಾರು ಮಂಗಲಸ್ನಾನವನ್ನು ಮಾಡುತ್ತಾರೆಯೋ, ಅವರಿಗೆ ನರಕದ ತೊಂದರೆಯಾಗದಿರಲಿ’ ಎಂಬ ವರವನ್ನು ಬೇಡಿದನು ಮತ್ತು ಕೃಷ್ಣನು ಆ ವರವನ್ನು ಕೊಟ್ಟನು. ಅಂದಿನಿಂದ ಆಶ್ವಯುಜ ಕೃಷ್ಣ ಚತುರ್ದಶಿಯು ನರಕ ಚತುರ್ದಶಿಯೆಂದು ಪರಿಗಣಿಸಲ್ಪಟ್ಟಿತು ಮತ್ತು ಜನರು ಆ ದಿನ ಸೂರ್ಯೋದಯಕ್ಕೆ ಮೊದಲು ಎದ್ದು ಅಭ್ಯಂಗಸ್ನಾನವನ್ನು ಮಾಡತೊಡಗಿದರು. ಚತುರ್ದಶಿಯಂದು ಬೆಳಗಿನ ಜಾವದಲ್ಲಿ ನರಕಾಸುರನನ್ನು ವಧಿಸಿ ಅವನ ರಕ್ತದ ತಿಲಕವನ್ನು ಹಣೆಯ ಮೇಲೆ ಇಟ್ಟುಕೊಂಡು ಶ್ರೀಕೃಷ್ಣನು ಮನೆಗೆ ಬಂದ ಕೂಡಲೇ ತಾಯಂದಿರು ಅವನನ್ನು ಆಲಿಂಗಿಸಿಕೊಂಡರು. ಸ್ತ್ರೀಯರು ಆರತಿ ಎತ್ತಿ ತಮ್ಮ ಆನಂದವನ್ನು ವ್ಯಕ್ತಪಡಿಸಿದರು.’
ಹಬ್ಬವನ್ನು ಆಚರಿಸುವ ಪದ್ಧತಿ
ಅ. ಆಕಾಶದಲ್ಲಿ ನಕ್ಷತ್ರಗಳಿರುವಾಗ ಬ್ರಾಹ್ಮೀಮಹೂರ್ತದಲ್ಲಿ ಅಭ್ಯಂಗಸ್ನಾನವನ್ನು ಮಾಡುತ್ತಾರೆ. ಉತ್ತರಣೆಯ ಗೆಲ್ಲಿನಿಂದ ತಲೆಯಿಂದ ಕಾಲುಗಳವರೆಗೆ ಮತ್ತು ಪುನಃ ಕಾಲುಗಳಿಂದ ತಲೆಯವರೆಗೆ ನೀರನ್ನು ಸಿಂಪಡಿಸಿಕೊಳ್ಳುತ್ತಾರೆ. ಇದಕ್ಕಾಗಿ ಬೇರಿರುವ ಉತ್ತರಣೆಯನ್ನು ಉಪಯೋಗಿಸುತ್ತಾರೆ.
ಯಮತರ್ಪಣ :
ಅಭ್ಯಂಗಸ್ನಾನದ ನಂತರ ಅಪಮೃತ್ಯುವಿನ ನಿವಾರಣೆಗಾಗಿ ಯಮತರ್ಪಣವನ್ನು ಮಾಡಬೇಕೆಂದು ಹೇಳಲಾಗಿದೆ. ಯಮತರ್ಪಣದ ವಿಧಿಯನ್ನು ಪಂಚಾಂಗದಲ್ಲಿ ಕೊಟ್ಟಿರುತ್ತಾರೆ. ಅದರಂತೆ ವಿಧಿಯನ್ನು ಮಾಡಬೇಕು. ಅನಂತರ ತಾಯಿಯು ಮಕ್ಕಳಿಗೆ ಆರತಿಯನ್ನು ಎತ್ತುತ್ತಾಳೆ. ನರಕಾಸುರನ ವಧೆಯ ಪ್ರತೀಕವೆಂದು ಕೆಲವರು (ಮಹಾಲಿಂಗನ ಬಳ್ಳಿಯ) ಹಿಂಡ್ಲಚ್ಚಿ ಕಾಯಿಯನ್ನು ಕಾಲಿನಿಂದ ಜಜ್ಜಿ ಕಾಲಿನಿಂದಲೇ ಬಿಸಾಡುತ್ತಾರೆ. ಇನ್ನೂ ಕೆಲವರು ಅದರ ರಸವನ್ನು (ರಕ್ತವನ್ನು) ನಾಲಗೆಗೆ ಹಚ್ಚಿಕೊಳ್ಳುತ್ತಾರೆ.
ಮಧ್ಯಾಹ್ನ ಬ್ರಾಹ್ಮಣರಿಗೆ ಭೋಜನವನ್ನು ನೀಡಿ ವಸ್ತ್ರದಾನ ಮಾಡುತ್ತಾರೆ.
ಪ್ರದೋಷಕಾಲದಲ್ಲಿ ದೀಪದಾನ ಮಾಡುತ್ತಾರೆ. ಪ್ರದೋಷವ್ರತವನ್ನು ತೆಗೆದುಕೊಂಡವರು ಪ್ರದೋಷಪೂಜೆ ಮತ್ತು ಶಿವಪೂಜೆಯನ್ನು ಮಾಡುತ್ತಾರೆ.
ಲಕ್ಷ್ಮೀಪೂಜೆ (ಆಶ್ವಯುಜ ಅಮಾವಾಸ್ಯೆ)
1. ಲಕ್ಷ್ಮೀಪೂಜೆ : ಸಾಮಾನ್ಯವಾಗಿ ಅಮಾವಾಸ್ಯೆಯನ್ನು ಅಶುಭದಿನವೆಂದು ಪರಿಗಣಿಸಲಾಗುತ್ತದೆ; ಆದರೆ ಈ ಅಮಾವಾಸ್ಯೆಯು ಅದಕ್ಕೆ ಅಪವಾದವಾಗಿದೆ. ಈ ದಿನವು ಶುಭದಿನವೆಂದು ಮನ್ನಣೆ ಪಡೆದಿದೆ; ಆದರೆ ಅದು ಎಲ್ಲ ಕಾರ್ಯಗಳಿಗಲ್ಲ. ಆದುದರಿಂದ ಈ ದಿನವನ್ನು ಶುಭದಿನ ಎನ್ನುವುದಕ್ಕಿಂತ ಆನಂದದ ದಿನ ಎನ್ನುವುದೇ ಯೋಗ್ಯವಾಗಿದೆ.
ಇತಿಹಾಸ : ಈ ದಿನ ಶ್ರೀವಿಷ್ಣುವು ಲಕ್ಷ್ಮೀಸಹಿತ ಎಲ್ಲ ದೇವತೆಗಳನ್ನು ಬಲಿಚಕ್ರವರ್ತಿಯ ಸೆರೆಮನೆಯಿಂದ ಮುಕ್ತಗೊಳಿಸಿದನು. ಅನಂತರ ಆ ಎಲ್ಲ ದೇವತೆಗಳು ಕ್ಷೀರಸಾಗರದಲ್ಲಿ ಹೋಗಿ ಮಲಗಿದರು ಎನ್ನುವ ಕಥೆ ಇದೆ.
ಹಬ್ಬವನ್ನು ಆಚರಿಸುವ ಪದ್ಧತಿ : ಈ ದಿನ `ಪ್ರಾತಃಕಾಲದಲ್ಲಿ ಮಂಗಲಸ್ನಾನ ಮಾಡಿ ದೇವರ ಪೂಜೆ, ಮಧ್ಯಾಹ್ನ ಪಾರ್ವಣಶ್ರಾದ್ಧ ಹಾಗೂ ಬ್ರಾಹ್ಮಣಭೋಜನ ಮತ್ತು ಪ್ರದೋಷಕಾಲದಲ್ಲಿ ಎಲೆ-ಬಳ್ಳಿಗಳಿಂದ ಶೃಂಗರಿಸಿದ ಮಂಟಪದಲ್ಲಿ ಲಕ್ಷ್ಮೀ, ಶ್ರೀವಿಷ್ಣು ಮುಂತಾದ ದೇವತೆಗಳು ಮತ್ತು ಕುಬೇರನ ಪೂಜೆಯನ್ನು ಮಾಡುತ್ತಾರೆ. ಇವು ಈ ದಿನದ ವಿಧಿಗಳಾಗಿವೆ.
ಲಕ್ಷ್ಮೀಯ ಪೂಜೆಯನ್ನು ಮಾಡುವಾಗ ಒಂದು ಚೌರಂಗದ ಮೇಲೆ ಅಕ್ಷತೆಗಳಿಂದ ಅಷ್ಟದಳ ಕಮಲ ಅಥವಾ ಸ್ವಸ್ತಿಕವನ್ನು ಬಿಡಿಸಿ ಅದರ ಮೇಲೆ ಲಕ್ಷ್ಮೀಯ ಮೂರ್ತಿಯನ್ನು ಸ್ಥಾಪಿಸುತ್ತಾರೆ. ಕೆಲವು ಕಡೆಗಳಲ್ಲಿ ಕಲಶದ ಮೇಲೆ ತಾಮ್ರದ ತಟ್ಟೆಯನ್ನಿಟ್ಟು ಅದರ ಮೇಲೆ ಲಕ್ಷ್ಮೀಯ ಮೂರ್ತಿಯನ್ನು ಇಡುತ್ತಾರೆ. ಕಲಶದ ಮೇಲೆ ಲಕ್ಷ್ಮೀಯ ಸಮೀಪದಲ್ಲಿಯೇ ಕುಬೇರನ ಪ್ರತಿಮೆಯನ್ನು ಇಡುತ್ತಾರೆ. ಅನಂತರ ಲಕ್ಷ್ಮೀ ಮತ್ತು ಇತರ ದೇವತೆಗಳಿಗೆ ಲವಂಗ, ಏಲಕ್ಕಿ ಮತ್ತು ಸಕ್ಕರೆಯನ್ನು ಹಾಕಿ ತಯಾರಿಸಿದ ಹಸುವಿನ ಹಾಲಿನ ಖವೆಯ ನೈವೇದ್ಯವನ್ನು ಅರ್ಪಿಸುತ್ತಾರೆ. ಕೊತ್ತಂಬರಿ, ಬೆಲ್ಲ, ಭತ್ತದ ಅರಳು, ಬತ್ತಾಸು ಇತ್ಯಾದಿ ಪದಾರ್ಥಗಳನ್ನು ಲಕ್ಷ್ಮೀಗೆ ಅರ್ಪಿಸಿ ನಂತರ ಅವುಗಳನ್ನು ಆಪ್ತೇಷ್ಟರಿಗೆ ಹಂಚುತ್ತಾರೆ. ನಂತರ ಕೈಯಲ್ಲಿನ ದೀವಟಿಗೆಯಿಂದ ಪಿತೃಗಳಿಗೆ ಮಾರ್ಗದರ್ಶನ ಮಾಡುತ್ತಾರೆ. (ಕೈಯಲ್ಲಿನ ದೀವಟಿಗೆಯನ್ನು ದಕ್ಷಿಣ ದಿಕ್ಕಿಗೆ ತೋರಿಸಿ ಪಿತೃಗಳಿಗೆ ಮಾರ್ಗದರ್ಶನ ಮಾಡುತ್ತಾರೆ.) ಬ್ರಾಹ್ಮಣರಿಗೆ ಮತ್ತು ಇತರ ಹಸಿದ ವರಿಗೆ ಊಟವನ್ನು ಕೊಡುತ್ತಾರೆ. ರಾತ್ರಿ ಜಾಗರಣೆ ಮಾಡುತ್ತಾರೆ. ಆಶ್ವಯುಜ ಅಮಾವಾಸ್ಯೆಯ ರಾತ್ರಿ ಲಕ್ಷಿ ಯು ಎಲ್ಲೆಡೆಗೆ ಸಂಚರಿಸಿ ತನ್ನ ನಿವಾಸಕ್ಕಾಗಿ ಯೋಗ್ಯ ಸ್ಥಾನವನ್ನು ಹುಡುಕುತ್ತಾಳೆ ಎಂದು ಪುರಾಣದಲ್ಲಿ ಹೇಳಲಾಗಿದೆ. ಎಲ್ಲಿ ಸ್ವಚ್ಛತೆ, ಶೋಭೆ ಇರುತ್ತದೆಯೋ ಅಲ್ಲಿ ಅವಳು ಆಕರ್ಷಿತಳಾಗುತ್ತಾಳೆ. ಅಲ್ಲದೆ ಯಾವ ಮನೆಯಲ್ಲಿ ಚಾರಿತ್ರ್ಯವುಳ್ಳ, ಕರ್ತವ್ಯದಕ್ಷ, ಸಂಯಮವುಳ್ಳ, ಧರ್ಮನಿಷ್ಠ ದೇವಭಕ್ತರು ಮತ್ತು ಕ್ಷಮಾಶೀಲ ಪುರುಷರು ಹಾಗೂ ಗುಣವತಿ ಮತ್ತು ಪತಿವ್ರತಾ ಸ್ತ್ರೀಯರು ಇರುತ್ತಾರೆಯೋ ಅಲ್ಲಿ ವಾಸಿಸಲು ಲಕ್ಷ್ಮೀಯು ಇಷ್ಟಪಡುತ್ತಾಳೆ.’
ಈ ಪೂಜೆಯಲ್ಲಿ ಕೊತ್ತಂಬರಿ ಮತ್ತು ಭತ್ತದ ಅರಳನ್ನು ಅರ್ಪಿಸುತ್ತಾರೆ. ಇದಕ್ಕೆ ಕಾರಣವೇನೆಂದರೆ ಕೊತ್ತಂಬರಿಯು (ಧನಿಯಾ) ಧನವಾಚಕ ಶಬ್ದವಾಗಿದೆ ಮತ್ತು ಅರಳು ಸಮೃದ್ಧಿಯ ಪ್ರತೀಕವಾಗಿವೆ. ಸ್ವಲ್ಪ ಭತ್ತಗಳನ್ನು ಹುರಿದರೂ ಕೈತುಂಬಾ ಅರಳುಗಳಾಗುತ್ತವೆ. ಲಕ್ಷ್ಮೀಯ ಸಮೃದ್ಧಿಯಿರಬೇಕೆಂದು ಸಮೃದ್ಧಿಯ ಪ್ರತೀಕವಾಗಿರುವ ಅರಳನ್ನು ಅರ್ಪಿಸುತ್ತಾರೆ.
ಶ್ರೀ ಸರಸ್ವತಿದೇವಿಯ ಪೂಜೆ : ಆನಂತರ ಕಲಾಪ್ರೇಮಿ ಜನರಿಗೆ ಪ್ರಿಯವಾಗಿರುವ ಹಂಸವಾಹಿನಿ, ಜ್ಞಾನಸ್ವರೂಪಿಣಿ, ಜ್ಞಾನಿಯರಿಗೆ ವಿದ್ಯಾದಾನವನ್ನು ಮಾಡುವ ಮತ್ತು ಬಂದಿರುವ ಲಕ್ಷ್ಮೀಯನ್ನು ಯೋಗ್ಯರೀತಿಯಲ್ಲಿ ಉಪಯೋಗಿಸಲು ವಿವೇಕವನ್ನು ಜಾಗೃತಗೊಳಿಸುವ ಶ್ರೀಸರಸ್ವತಿ ದೇವಿಯ ಪೂಜೆಯನ್ನು ಮಾಡಬೇಕು.
ಅಲಕ್ಷ್ಮೀಯ ನಿರ್ಮೂಲನ
ಮಹತ್ವ : ಗುಣಗಳನ್ನು ನಿರ್ಮಾಣ ಮಾಡಿದರೂ ದೋಷಗಳು ನಾಶವಾಗ ಬೇಕು; ಆಗಲೇ ಗುಣಗಳಿಗೆ ಮಹತ್ವವು ಬರುತ್ತದೆ. ಇಲ್ಲಿ ಲಕ್ಷ್ಮೀಪ್ರಾಪ್ತಿಯ ಉಪಾಯವಾಯಿತು, ಹಾಗೆಯೇ ಅಲಕ್ಷಿ ಯ ನಾಶವೂ ಆಗಬೇಕು. ಇದಕ್ಕಾಗಿ ಈ ದಿನದಂದು ಹೊಸ ಪೊರಕೆಯನ್ನು ಖರೀದಿಸುತ್ತಾರೆ. ಅದಕ್ಕೆ `ಲಕ್ಷ್ಮೀ’ ಎನ್ನುತ್ತಾರೆ.
ಕೃತಿ: `ನಡುರಾತ್ರಿಯಲ್ಲಿ ಹೊಸ ಪೊರಕೆಯಿಂದ ಕಸಗುಡಿಸಿ ಅದನ್ನು ಮೊರದಲ್ಲಿ ತುಂಬಿ ಹೊರಗೆ ಹಾಕಬೇಕು’ ಎಂದು ಹೇಳಲಾಗಿದೆ. ಇದಕ್ಕೆ `ಅಲಕ್ಷ್ಮೀ (ಕಸ, ದಾರಿದ್ರ್ಯ) ನಿರ್ಮೂಲನ’ ಎನ್ನುತ್ತಾರೆ. ಸಾಮಾನ್ಯವಾಗಿ ರಾತ್ರಿ ಸಮಯದಲ್ಲಿ ಕಸವನ್ನು ಗುಡಿಸುವುದಿಲ್ಲ ಅಥವಾ ಹೊರಗೆ ಹಾಕುವುದಿಲ್ಲ. ಕೇವಲ ಈ ರಾತ್ರಿ ಮಾತ್ರ ಹಾಗೆ ಮಾಡುವುದಿರುತ್ತದೆ. ಕಸ ಗುಡಿಸುವಾಗ ಮೊರ ಮತ್ತು ದಿಮಡಿಯನ್ನು (ಚರ್ಮದ ವಾದ್ಯವನ್ನು) ಬಾರಿಸಿ ಅಲಕ್ಷ್ಮಿ ಯನ್ನು ಓಡಿಸುತ್ತಾರೆ.
ಶ್ರೀ ವಿನೋದ್ ಕಾಮತ್, ಸನಾತನ ಸಂಸ್ಥೆ.
ಸಂಪರ್ಕ ಕ್ರಮಾಂಕ : 9342599299
Discussion about this post