ವ್ಯಕ್ತಿಯು ಮೃತನಾದ ಕೂಡಲೇ ಪ್ರೇತ ಎನಿಸುತ್ತಾನೆ. ಪ್ರೇತತ್ವ ನಿವೃತ್ತಿಗಾಗಿ ನವ ಶ್ರಾದ್ಧಗಳನ್ನೂ ಮತ್ತು 16 ಮಾಸಿಕಗಳನ್ನೂ ಮಾಡಬೇಕು. ಈ ದಶಾಹ ವಿಧಿಯಲ್ಲಿ ಯಾವುದೇ ಕಾಲಕ್ಕೂ ನಿಷಿದ್ಧ ಪದಾರ್ಥಗಳನ್ನು ಪಿಂಡದಲ್ಲಿ ಮಿಶ್ರ ಮಾಡಬಾರದು. ಒಂದುವೇಳೆ ನಿಷಿದ್ಧ ಪದಾರ್ಥಗಳನ್ನು ಉಪಯೋಗಿಸಿದಲ್ಲಿ ಯುಗ ಪರ್ಯಂತ ಪ್ರೇತ ಜನ್ಮದಿಂದ ಮುಕ್ತಿ ಹೊಂದದೆ ಪ್ರೇತ ಜನ್ಮದಲ್ಲೇ ಕೊಳೆಯುತ್ತದೆ. ಅಲ್ಲದೆ ಪ್ರಾಯಶ್ಚಿತ್ತವೇ ಇಲ್ಲ!
”ಶ್ರಾದ್ಧ ಕರ್ಮದಲ್ಲಿ ನಿಷಿದ್ಧ ಪದಾರ್ಥಗಳು“
ಶ್ರೀ ವೇದವ್ಯಾಸ ಪ್ರಣೀತ ಶ್ರೀಮನ್ಮಹಾಭಾರತದ ಅನುಶಾಸನ ಪರ್ವದಲ್ಲಿ..
ಅಶ್ರಾದ್ಧೇ ಯಾನಿ ಧಾನ್ಯಾನಿ ಕ್ರೋಧವಾ: ಪುಲಕಾಸ್ತಾಥಾ ।
ಹಿಂಗುದ್ರವ್ಯೆಷು ಪಾಲಾಂಡುಂ ವೃಂತಕ ಲಸುನಂ ತಥಾ ।।
ಸೌಭಾಂಜನ: ಕೋವಿದಾರಸ್ತಥಾ ಗೃ೦ಜನಕಾದಯಃ ।
ಕೂಷ್ಮಾ೦ಡಜಾತ್ಯಲಾಬು೦ ಚ ಕೃಷ್ಣ೦ ಲವಣಮೇಚಚ ।।
ಇಂಗು – ಈರುಳ್ಳಿ – ಬೆಳ್ಳುಳ್ಳಿ – ಬದನೇಕಾಯಿ – ನುಗ್ಗೆಕಾಯಿ – ಕೆಂಚನಾಳದ ಕಾಯಿ – ಗಜ್ಜರಿ – ಬೂದುಗುಂಬಳ ಸೋರೆಕಾಯಿ – ಕರಿ ಉಪ್ಪು ಮುಂತಾದವುಗಳನ್ನು ಶ್ರಾದ್ಧದಲ್ಲಿ ಉಪಯೋಗಿಸಬಾರದೆಂದು ಅಖಿಲಾಂಡಕೋಟಿ ಬ್ರಹ್ಮಾಂಡನಾಯಕರಾದ ಶ್ರೀ ಭಗವಾನ್ ವೇದವ್ಯಾಸದೇವರು ಹೇಳಿದ್ದಾರೆ.
ನವ ಶ್ರಾದ್ಧವೆಂದರೆ?
ಪ್ರಥಮ – ತೃತೀಯ – ಪಂಚಮ – ಸಪ್ತಮ – ನವಮ ಹೀಗೆ 10 ದಿವಸಗಳಲ್ಲಿ ಮಾಡುವ ವಿಷಮ ಶ್ರಾದ್ಧಗಳಿಗೆ ”ನವ ಶ್ರಾದ್ಧ” ಎನ್ನುತ್ತಾರೆ. ನವ ಶ್ರಾದ್ಧ ಮಾಡದೇ ಪ್ರೇತತ್ವ ನಿವೃತ್ತಿಯಾಗುವುದಿಲ್ಲ. ನವ ಶ್ರಾದ್ಧ; ತ್ರಯಪಕ್ಷ ಶ್ರಾದ್ಧ; ಮಾಸಿಕ; ಷಣ್ಮಾಸಿಕಾ ಇವು ಮಾಡದ ಪುತ್ರನ ಪಿತೃಗಳು ಅಧೋಗತಿ ಹೊಂದುವರು. 10 ದಿನಗಳಲ್ಲಿ ಮಾಡುವ ಪ್ರೇತ ಶ್ರಾದ್ಧದಲ್ಲಿ ಪಿತೃ ಶಬ್ದ ಹೇಳದೆ ”ಪ್ರೇತ”ಯೆಂದು ಮಂತ್ರವಿಲ್ಲದೆ ಎಳ್ಳು ಹಾಕಬೇಕು. ಪ್ರೇತ ಶಬ್ದದಿಂದ” ಪಾಣಿ ಹೋಮ ಮಾಡಬೇಕು. ದಹನ ಸ್ಥಾನದಲ್ಲಿ ನೀಡಿದ ಅಸ್ಥಿಗಳನ್ನು ಹಾಲಿನಿಂದ ತೊಳೆದು ಬಿಳಿ ವಸ್ತ್ರದಿಂದ ಸುತ್ತಿ ಮಡಿಕೆಯಲ್ಲಿ ಹಾಕಿ ಭೂಮಿಯಲ್ಲಿ ಸ್ಥಾಪಿಸಬೇಕು. ನಂತರ 10 ದಿನದೊಳಗೆ ಗಂಗೆಯಲ್ಲಿ ಹಾಕಿದರೆ ಗಂಗೆಯಲ್ಲಿ ಮರಣವಾದಂತೆ. ಯಾರ ಅಸ್ಥಿಯು ಗಂಗೆಯಲ್ಲಿ ಬೀಳುವದೋ ಅವನಿಗೆ ಸ್ವರ್ಗಲೋಕ ಲಭಿಸುತ್ತದೆ.
ಮಾಸಿಕ 16:
ಆದ್ಯ – ಊನ – ದ್ವಿತೀಯಾ – ತೃತೀಯಾ – ಚತುರ್ಥ – ಪಂಚಮ – ಷಷ್ಠ – ಊನ ಷಣ್ಮಾಸಿಕ – ಸಪ್ತಮ – ಅಷ್ಟಮ – ನವಮ – ದಶಮ – ಏಕಾದಶ – ದ್ವಾದಶ – ಊನಾಬ್ಧಿಕ – ಆಬ್ಧಿಕ.
11ನೇ ದಿನ ಏಕೋದಿಷ್ಟ ಶ್ರಾದ್ಧ ಮಾಡಬೇಕು. ಈ ಶ್ರಾದ್ಧದಿಂದ ಪ್ರೇತನಿಗೆ ಯಮ ಮಾರ್ಗದಲ್ಲಿ ನಡೆಯುವ ಶಕ್ತಿ ಬರುತ್ತದೆ. ಪ್ರೇತನು ಪರವಿತ್ತಾಪಹಾರ – ಪರ ಕಲತ್ರ ಅಪಹರಣ ಮಾಡಿದ್ದರೆ ”ನವ ಶ್ರಾದ್ಧ”ದಿಂದ ಪರಿಹೃತವಾಗುತ್ತದೆ.
12ನೇ ದಿನದ ಶ್ರಾದ್ಧದಿಂದ ”ಯಂತ್ರ ನರಕ” ದಿಂದ ಬಿಡುಗಡೆ ಹೊಂದುತ್ತದೆ. ಮಾಸಿಕ ಶ್ರಾದ್ಧ ಮಾಡುವುದರಿಂದ ”ಸೂರ್ಮಿ” ಎಂಬ ನರಕದಿಂದ ಪಾರಾಗುವನು. (ಸೂರ್ಮಿ ನರಕ ಅಂದರೆ ಚೆನ್ನಾಗಿ ಕಾದಿರುವ ತಾಮ್ರದ ಸ್ತ್ರೀ ಬೊಂಬೆಯನ್ನು ಆಲಂಗಿಸುತ್ತಾ ಕಾದ ಮಂಚದ ಮೇಲೆ ಮಲಗಬೇಕು).
ತ್ರೈಪಕ್ಷಿಕ ಶ್ರಾದ್ಧದಿಂದ ”ಸಾರಮೇಯಾದನ” ಎಂಬ ನರಕದಿಂದ ಪಾರಾಗುವನು. (ಈ ನರಕದಲ್ಲಿ ಕಬ್ಬಿಣದಂತೆ ಗಟ್ಟಿಯಾಗಿ ಕೋರೆ ಹಲ್ಲುಗಳಿರುವ ”ನಾಯಿ”ಗಳು ಪ್ರೇತನ ಪೃಷ್ಠ ಮಾಂಸವನ್ನೇ ಅಪೇಕ್ಷಿಸಿ ಕಿತ್ತು ತಿನ್ನುತ್ತದೆ).
2ನೇ ಮಾಸಿಕ ಶ್ರಾದ್ಧ ”ಲೋಹಚಂಚು ಕಾಗೆ” ಗಳಿಂದ ಕಾಟವಿರುವುದಿಲ್ಲ.
3ನೇ ಮಾಸಿಕ ಶ್ರಾದ್ಧ ”ಶಾಲ್ಮಲೀ” ಮೊದಲಾದ ನರಕದಿಂದ ಪಾರು ಮಾಡುತ್ತದೆ.
4ನೇ ಮಾಸಿಕ ಶ್ರಾದ್ಧ ”ರೌರವ ನರಕ” ದಿಂದ ಮುಕ್ತರಾಗುತ್ತಾರೆ.
5ನೇ ಮಾಸಿಕ ಶ್ರಾದ್ಧ ”ಕುಂಭೀಪಾಕ” ನರಕ ಪರಿಹಾರ.
6ನೇ ಮಾಸಿಕ ಶ್ರಾದ್ಧ ”ವೈತರಣೀ” ಯಿಂದ ಬಿಡುಗಡೆ.
7ನೇ ಮಾಸಿಕ ಶ್ರಾದ್ಧ ”ಸಂವರ್ತಕ ನರಕ” ದಿಂದ ಪಾರು ಮಾಡುತ್ತದೆ.
8ನೇ ಮಾಸಿಕ ಶ್ರಾದ್ಧ ”ಸಂದಂಶ” ನರಕದಿಂದ ಪಾರು ಮಾಡುತ್ತದೆ.
9ನೇ ಮಾಸಿಕ ಶ್ರಾದ್ಧ ”ಅಗ್ನಿಕೂಟ” ಎಂಬ ನರಕದಿಂದ ಉದ್ಧಾರ ಮಾಡುತ್ತದೆ.
ಗುರು – ತಂದೆ – ತಾಯಿ – ಅನ್ನ ನೀಡಿದ ಸ್ವಾಮಿ ಇವರುಗಳಿಗೆ ದ್ರೋಹ ಮಾಡಿದವರು ಉರಿಯುತ್ತಿರುವ ಕೆಂಡ ರಾಶಿಗಳಲ್ಲಿ ಮುಳುಗುತ್ತಾರೆ. 10ನೇ ಮಾಸಿಕ ಶ್ರಾದ್ಧ ಮಾಡುವುದರಿಂದ ಇದಕ್ಕೆ ಸ್ವಲ್ಪ ತೃಪ್ತಿ.
ಗುರುಗಳು-ಹಿರಿಯರು ಬಂದಾಗ ಅವರಿಗೆ ಸಿಗದೇ ತಲೆ ಮರೆಸಿಕೊಳ್ಳುವ ವ್ಯಕ್ತಿಗಳು ಕಾದಿರುವ ಮರಳಿನಿಂದ ತುಂಬಿರುವ ನರಕದಲ್ಲಿ ಬಿದ್ದು ಸುಟ್ಟು ಬೆಂದು ಹೋಗುತ್ತಾರೆ. 12ನೇ ಮಾಸಿಕ ಶ್ರಾದ್ಧದಿಂದ ಇದಕ್ಕೆ ಮುಕ್ತಿ.
ಸಪಿಂಡೀ ಕರಣವಾಗುವ ವರೆಗೂ ಪ್ರೇತತ್ವ ಹೋಗುವುದಿಲ್ಲ” ಯಾವತ್ ಸಪಿಂಡೀತಾ ನೈವಾ ತಾವತ್ ಪ್ರೇತಃ ಸ ತಿಷ್ಠತಿ”
ಧರ್ಮಿಷ್ಠರಾಗಿದ್ದರೂ ಸಪಿಂಡೀ ಆಗದೆ ಪ್ರೇತತ್ವ ತೊಲಗದು” ಅಪಿ ಧರ್ಮ ಸಮೋಪೇತಃ ತಪಸ್ಯಾಪಿ ಸಮನ್ವಿತಃ”
ವಿಶೇಷ ವಿಚಾರ :
ಮೃತನಾಗಿ ಪ್ರೇತತ್ವವನ್ನು ಹೊಂದಿದ ಚೇತನನೂ ಮೊದಲನೆಯ ದಿನ ಸ್ಥೂಲ ದೇಹವನ್ನು ಬಿಟ್ಟು ಕೇವಲ ಸೂಕ್ಷ್ಮ ದೇಹದಿಂದ ಕೂಡಿದವನಾಗಿ ಮೊದಲಿನ 10 ದಿನಗಳಲ್ಲಿ ಕೊಡಲ್ಪಟ್ಟ ಪಿಂಡ ಬಲಿಗಳಿಂದ ಉತ್ಪನ್ನವಾದ ಪೂರ್ಣವಾದ ಪ್ರೇತ ದೇಹದಿಂದ ಕೂಡಿದವನಾಗಿ ಅತ್ಯಧಿಕವಾದ ಹಸಿವಿನಿಂದ” ಏಕೋದಿಷ್ಟ ಶಾದ್ಧಾನ್ನ”ಗಳನ್ನು ಭುಂಜಿಸಿ; 12ನೇ ದಿನವೂ ಕರ್ತೃವಿನ ಮನೆಯ ಬಾಗಿಲಲ್ಲೇ ನಿಂತು ಅವನಿಂದ ಕೊಡಬಹುದಾದ ಶ್ರಾದ್ಧನ್ನವನ್ನು ಎದುರು ನೋಡುತ್ತಿರುತ್ತದೆ.
13ನೇ ದಿನದಿಂದ ಹಗಲೂ ರಾತ್ರಿ ಸೇರಿ ಪ್ರತಿದಿನವೂ 247 ಯೋಜನಗಳಷ್ಟು ನಡೆದು ವರ್ಷದ ಕೊನೆಯಲ್ಲಿ ”ಶ್ರೀ ಯಮಧರ್ಮರಾಜ”ರ ಆಸ್ಥಾನವನ್ನು ಸೇರುತ್ತದೆ. (ಮೃತ ವ್ಯಕ್ತಿಯ ವಾಯು ಶರೀರ ನಗ್ನವಾಗಿರುತ್ತದೆ)
ಇಡೀ ವರ್ಷ ಹಸಿವು ದಾಹಗಳಿರುವುದರಿಂದ ಅವುಗಳಿಗೆ ಪುತ್ರನು ವರ್ಷಾಬ್ಧಿಕ ಪರ್ಯಂತ ಒಂದು ವರ್ಷ ಕಾಲ ಪ್ರತಿನಿತ್ಯವೂ ತಪ್ಪದೆ ಪಾತ್ರೆ ಅಥವಾ ಉದಕುಂಭ ಸಹಿತ (ಸೋದಕುಂಭ) ಶ್ರಾದ್ಧವನ್ನು ಮಾಡಲೇಬೇಕು.
ನನ್ನನ್ನು (ಪ್ರೇತ) ದುಃಖದಿಂದ ಪಾರು ಮಾಡುವ ಪುತ್ರರು ಅಥವಾ ಬಂಧುಗಳಾದರೂ ಇದ್ದಾರೆಯೇ ಎಂದು ಚಿಂತಿಸುತ್ತಾ ”ಯಮಪುರಿ”ಗೆ ಕಾಲಿಡುತ್ತದೆ.
ಆದ್ದರಿಂದ ಮೃತ ಜೀವಿಗೆ ಪುತ್ರಾದಿಗಳು ತಪ್ಪದೆ ಶ್ರದ್ಧೆಯಿಂದ ಶ್ರಾದ್ಧಾನವನ್ನೂ – ಜಲ ದಾನಗಳನ್ನು ಕೊಟ್ಟು ತಮ್ಮ ಪಿತೃಗಳನ್ನು ತೃಪ್ತಿ ಪಡಿಸಿ ಅವರ ಪರಮಾನುಗ್ರಹಕ್ಕೆ ಪಾತ್ರರಾಗುವುದು!!
Discussion about this post