ಪಿತೃ ಪಕ್ಷ ಬಂತೆಂದರೆ ಕಾಗೆಗಳದ್ದೇ ನೆನಪಾಗುವುದು. ಕನ್ಯಾ ಮಾಸದ ಬಹುಳವು ಪಿತೃಪಕ್ಷ ಮಹಾಲಯ ಶ್ರಾದ್ಧದ ಪಕ್ಷ. ರವಿ ಚಂದ್ರರು ಬಹಳ ಹತ್ತಿರ ಬರುವ ಇದೊಂದು ಖಗೋಳ ನಿಯಮ. ರವಿಚಂದ್ರರ ಮದ್ಯೆ ಇರುವ ಅವಕಾಶ, ಆಕಾಶ (space spectrum) ಸ್ವರ್ಗ ಲೋಕವಾಗುತ್ತದೆ. ಗತಿಸಿದವರು ಕಾಯ ಬಿಟ್ಟು ಊರ್ಧ್ವ ಲೋಕ ಪ್ರಯಾಣ ಮಾಡುತ್ತಾರೆ. ಇದರಲ್ಲಿ ಬೇರೆ ಬೇರೆ ಯಾನ ಮಾರ್ಗಗಳಿವೆ. ಇಲ್ಲಿ ಪಿತೃಯಾನ ಮಾರ್ಗ ವಿಶೇಷವನ್ನು ತಿಳಿಸುತ್ತಿದ್ದೇನೆ.
ಮನುಷ್ಯನ ಮೃತಿಯ ನಂತರ ನಮ್ಮ ವೇದೋಕ್ತ ಸಂಪ್ರದಾಯಾನುಸಾರ ಔರ್ಧ್ವ ದೈಹಿಕ ಸಂಸ್ಕಾರಗಳಾಗಬೇಕು. ಇದರಲ್ಲಿ ಅಗ್ನಿ ದಗ್ಧ ಮತ್ತು ಅನಗ್ನಿದಗ್ಧ ಎಂಬ ಎರಡು ರೂಪಗಳಿವೆ. ಅಂದರೆ ದಹನ ಅಥವಾ ದಫನ ಕ್ರಿಯೆ. ಸುಮನೆ ಕಳೇಬರವನ್ನು ಸುಟ್ಟರೆ, ಹೂತರೆ ಕೇವಲ dispose ಆಗುತ್ತದೆಯಷ್ಟೆ. ಅದಕ್ಕೆ ಸಂಬಂಧಿಸಿದ ಸಂಸ್ಕಾರ ಕ್ರಿಯೆಗಳ ಮೂಲಕ ಗತಿಸಿದ ಕಾಯಗಳಿಗೆ ವ್ಯವಸ್ಥೆ ಆಗಬೇಕು.
ಲೌಕಿಕಾಗ್ನಿಯಲ್ಲಿ ದಹಿಸಿದ ನಂತರ ದಶದಿನಗಳಲ್ಲಿ ತರ್ಪಣಾದಿಗಳು ನಡೆಯಬೇಕು. ಹತ್ತನೇ ದಿನ ಧರ್ಮೋದಕ, ಹನ್ನೊಂದನೆಯ ದಿನ ವೃಷಸರ್ಗ ಹೋಮದ ಮೂಲಕ ಏಕೋದ್ಧಿಷ್ಟ ಶ್ರಾದ್ಧ, ಹನ್ನೆರಡನೆಯ ದಿನ ಸಪಿಂಡೀಕರಣಾದಿಗಳು ನಡೆಯುತ್ತದೆ. ಈ ಮಧ್ಯ ಮೃತನ ಯಾನದ ಪ್ರೀತ್ಯರ್ಥ ದಾನ ಕರ್ಮಾದಿಗಳು ಇವೆ. ಹದಿಮೂರನೆಯ ದಿನ ವೈಕುಂಠ ಸಮಾರಾಧನೆ ಮಾಡಿ ಮಂತ್ರಾಕ್ಷತೆ ನಡೆಯುತ್ತದೆ. ಇಲ್ಲಿಗೆ ಗತಿಸಿದವರ ಮೊದಲ ಹಂತದ ಯಾನ ಪ್ರಕ್ರಿಯೆ ಮುಗಿಯುತ್ತದೆ.
ನಂತರ 27, 30, 40 ನೆಯ ದಿನಗಳಲ್ಲಿ ಪಿಂಡ ಪ್ರಧಾನ ಸಹಿತ ಮಾಸಿಕಗಳು ನಡೆದು, ನಂತರ ಪ್ರತೀ ತಿಂಗಳೂ ಮಾಸಿಕ ಶ್ರಾದ್ಧ ನಡೆಯುತ್ತದೆ. ಗತಿಸಿದ ಒಂದು ವರ್ಷ ಪೂರ್ಣವಾಗುವಾಗ ಮೃತರ ಉದ್ಧಿಷ್ಯ ವರ್ಷಾಂತಿಕ ನಡೆಯುತ್ತದೆ. ಪಿತೃಗಳ ಒಂದು ದಿವಸ ನಮಗೆ ಒಂದು ವರ್ಷ ಲೆಕ್ಕಾಚಾರ. ಇಷ್ಟು ಸಂಸ್ಕಾರ ನಡೆದ ಬಳಿಕ ಸಾಂವತ್ಸರಿಕ ಶ್ರಾದ್ಧ ಮಾಡಬೇಕು. ಇದರ ಜತೆಗೆ ಈ ಕನ್ಯಾಮಾಸದ ಬಹುಳ ಪಕ್ಷದಲ್ಲಿ ಮಹಾಲಯ ಶ್ರಾದ್ಧವನ್ನು ಮಾಡುತ್ತಾರೆ.
ಯಾರು ಮಾಡಬೇಕು:
ಲೆಕ್ಕ ಪ್ರಕಾರದಲ್ಲಿ ಅರ್ಹತೆಯುಳ್ಳವರು ಪ್ರತಿಯೊಬ್ಬರೂ ಮಾಡಬೇಕು. ಅದು ಸಾಧ್ಯವಾದರೆ ತಾಯಿ ಬದಲಾದ ಹಾಗೆ ಆ ವ್ಯಕ್ತಿಯು ಮಾಡಲೇ ಬೇಕು. ಅಂದರೆ ಒಂದು ತಾಯಿಯಲ್ಲಿ ನಾಲ್ಕು ಗಂಡು ಮಕ್ಕಳಿದ್ದರೆ ಒಬ್ಬ ಮಾಡಿದರೂ ಉಭಯ ಕುಲ ಪಿತೃಗಳಿಗೆ ತೃಪ್ತಿಯಾಗುತ್ತದೆ. ಆ ಮಕ್ಕಳ ಮಕ್ಕಳ ಕಾಲಕ್ಕಾಗುವಾಗ ಮಾತೃ ವರ್ಗ ಬೇರೆಯಾಗುತ್ತದೆ. ಹಾಗಾಗಿ ಆ ಮೊದಲ ನಾಲ್ಕು ಗಂಡು ಮಕ್ಕಳ ಸಂತತಿಯವರಿಗೆ ಉಭಯ ಕುಲಗಳು ಬೇರೆ ಬೇರೆ ಆಗಿರುವುದರಿಂದ ಅವರು ಬೇರೆ ಬೇರೆಯಾಗಿ ಮಾಡಬೇಕಾಗುತ್ತದೆ. ಆಗ ಸ್ವರ್ಗ ಸೇರಿದ ಪ್ರತಿಯೊಂದು ಪಿತೃಗಳಿಗೆ ತೃಪ್ತಿಯಾಗುತ್ತದೆ.
ಎಲ್ಲಿರುವರು ಪಿತೃಗಳು:
ಇಲ್ಲಿ ಮೂರು ಸ್ಥರಗಳಿವೆ. ವಸು-ರುದ್ರ-ಆದಿತ್ಯ ಎಂಬ ಮೂರು ಪಿತೃ ಪೀಠಗಳಿವೆ. ಆದಿತ್ಯದ ನಂತರ ಸ್ವರ್ಗ ಲೋಕ. ಸ್ವರ್ಗ ಲೋಕದ ಸುಖ ಅನುಭವಿಸಿದ ನಂತರ ಮರ್ತ್ಯ ಲೋಕದಲ್ಲಿ ಜನನವಾಗುವ ಕಾರಣಕ್ಕಾಗಿ, ಉತ್ತಮ ಆಯುರೋಗ್ಯ ಪೂರ್ಣ ಕಾಯ ಲಭಿಸಲಿ ಎಂದೇ ಮಾಡುವ ಶ್ರಾದ್ಧ ಕರ್ಮವಿದು. ಗತಿಸಿದ ಪಿತೃಗಳು ಇನ್ಯಾವುದೋ ಕುಟುಂಬದಲ್ಲೋ, ಅನ್ಯ ಜಾತಿಯಲ್ಲೋ, ಅನ್ಯ ಕೋಮಿನಲ್ಲೋ ಜನಿಸುವುದಿಲ್ಲ. ಅವರು ಮತ್ತೆ ಅದೇ ಕುಟುಂಬದಲ್ಲೇ ಹುಟ್ಟುತ್ತಾರೆ. ಅದಕ್ಕಾಗಿಯೇ ಇಷ್ಟೆಲ್ಲ ಸಂಸ್ಕಾರ ಮಾರ್ಗಗಳು.
ಯಾರು ಪಿತೃ ಕಾರ್ಯ ಮಾಡುವುದಿಲ್ಲವೋ ಅವರು ಪಿತೃ ಶಾಪಕ್ಕೊಳಗಾಗಿ, ಹೇಳಲಾಗದಂತಹ ಕಷ್ಟಗಳನ್ನು ಅನುಭವಿಸುತ್ತಾರೆ ಎಂದು ಶಾಸ್ತ್ರ ವಚನ.‘ತಸ್ಮತ್ ಶಾಸ್ತ್ರ ಪ್ರಮಾಣೇಶು’ ಎಂಬಂತೆ ನಮಗೆ ಅದು ಹೌದೋ ಅಲ್ಲವೋ, ಸತ್ಯವೋ ಸುಳ್ಳೋ ಎಂದು ವಿಮರ್ಷೆ ಮಾಡುವ ಅಧಿಕಾರವಿಲ್ಲ. ಯಾಕೆಂದರೆ ಋಷಿ ಮುನಿ ಪ್ರಾಜ್ಞರು ಏನೆಲ್ಲಾ ಸಂಶೋಧನೆ ಮಾಡಬೇಕೋ ಅದನ್ನೆಲ್ಲ ಮಾಡಿ ಶಾಸ್ತ್ರ ಮಾಡಿದ್ದಾರೆ. ಇನ್ನೇನೂ ಸಂಶೋಧನೆಗೆ ಉಳಿದಿಲ್ಲ. ಇನ್ನೇನಾದರೂ ಈ ಬಗ್ಗೆ ಹೇಳಬೇಕು ಎಂದರೆ ಅದು ಕುಹಕ ಮಾತ್ರ ಅಥವಾ ಪಾಷಂಡೀ ವಾದ ಮಾತ್ರ.
ಯಾವ ಯಾವ ಪಿತೃಗಳು ಮತ್ತು ಪಿತೃ ಲೋಕ?
ಮೊದಲನೆಯದ್ದು ಪಿತೃ
ಎರಡನೆಯದ್ದು ಪಿತಾಮಹ
ಮೂರನೆಯದ್ದು ಪ್ರಪಿತಾಮಹ.
ಅದೇ ರೀತಿ ಮಾತುಃ ಮಾತಾಮಹಿ, ಪ್ರಪಿತಾಮಹಿ ಇರುತ್ತಾರೆ. ಅಲ್ಲದೆ ಮಹಾಲಯ ಶ್ರಾದ್ಧದಲ್ಲಿ ಉಭಯ ಕುಲ ಪಿತೃಗಳೆಂದರೆ ತಾಯಿಯ ಭಾಗ.
ಮಾತಸ್ಯ ಪಿತು ಪಿತಾಮಹ ಪ್ರಪಿತಾಮಹ; ಮಾತಸ್ಯ ಮಾತು ಮಾತಾಮಹಿ ಪ್ರಪಿತಾಮಹಿ ಬರುತ್ತಾರೆ. ಇನ್ನೇನಾದರೂ ಉಳಿದಿದ್ದರೆ ಜ್ಯೇಷ್ಠಾದಿ ಕನಿಷ್ಠಾದಿ ಉಭಯ ಕುಲ ಪಿತೃ ದೇವತೆಗಳ ಒಂದು ಕ್ಷೇತ್ರಕ್ಕೂ ಪಿಂಡ ಪ್ರಧಾನವಾಗುತ್ತದೆ. ಇಷ್ಟಲ್ಲದೆ ಬಂಧುಗಳು, ರಕ್ತ ಸಂಬಂಧಿಗಳಿಗೂ ಪಿಂಡ ಇಡಬೇಕು. ಸೋದರ ಮಾವ, ಅತ್ತೆ, ಜ್ಯೇಷ್ಟ ಕನಿಷ್ಟ ಪಿತೃಗಳು, ಜ್ಯೇಷ್ಟ ಕನಿಷ್ಟ ಮಾತೃ ವರ್ಗಗಳಿಗೂ ಮಹಾಲಯದಲ್ಲಿ ಪಿಂಡ ಪ್ರಧಾನ ಆಗುತ್ತದೆ.
ಇಲ್ಲಿಗೇ ಋಣ ಮುಗಿಯೋದಿಲ್ಲ. ನಮಗಾಗಿ ಹೋರಾಡಿದ ಸೈನಿಕರು, ಸೇವಕರುಗಳಿಗೆಲ್ಲ ಪಿಂಡ ಇಡುತ್ತಾರೆ. ಅನ್ನದಾತ ರೈತನ ಋಣವೂ ಇರುತ್ತದೆ. ಅರಣ್ಯ ಯೋಧರು(forest) ನಗರ ಯೋಧರು(police) ಗೂ ಬೇರೆ ಬೇರೆ ಅರ್ಥದಲ್ಲಿ ಪಿಂಡ ಪ್ರಧಾನ ಇದೆ. ವಿದ್ಯುದಾಘಾತ(ಆಗ ಸಿಡಿಲು ಮಿಂಚಾದರೆ, ಈಗ ಕರೆಂಟ್ ಲೈನ್ ಮ್ಯಾನ್ ಎನ್ನಬಹುದು), ಸಿಂಹ ವ್ಯಾಘ್ರಗಳಿಂದ ಹತರಾದವರಿಗೆ, ಪ್ರಾಣಿ ಪಕ್ಷಿಗಳಿಗೆಲ್ಲ ಬಲಿ(ಒಂದು ರೀತಿಯ ಬಲಿ ಪಿಂಡ) ನೀಡುವ ಸಂಪ್ರದಾಯವಿದೆ. ಅಂದರೆ ನಾವೆಲ್ಲ ಅವರ ಋಣದಲ್ಲಿದ್ದೇವೆ ಎಂದರ್ಥ. ಅಲ್ಲದೆ ಅವರೆಲ್ಲರ ಉದ್ಧಾರದ ಜವಾಬ್ದಾರಿಗಳು ನಮಗಿದೆ ಎಂದರ್ಥ. ಇದು ಸತ್ಯವೋ ಸುಳ್ಳೋ ಎಂದು ಅಡ್ಡ ಮಾತನಾಡುವವರು, ಮೂಢನಂಬಿಕೆಯವರು ಒಂದು ಸಲ ಈ ಚಿಂತನೆ ಮಾಡಿ. ಇದೊಂದು ಕೃತಜ್ಞತೆ(gratitude) ಸಲ್ಲಿಸುವಂತಹ ಎಂಬಂತಹ ವಿಧಾನ(concept) ಆಗಿದೆ.
ನಿತ್ಯ ಶ್ರಾದ್ಧ, ಮಾಸಿಕ ಶ್ರಾದ್ಧ, ಸಾಂವತ್ಸರಿಕ ಶ್ರಾದ್ಧಗಳೆಂಬ ಮೂರು ವಿಧಗಳ ಸಮಾರೋಪವೇ ಸರ್ವಪಿತೃ ಮಹಾಲಯ ಶ್ರಾದ್ಧ. ಶ್ರಾದ್ಧದಲ್ಲೂ ಕ್ಷಣ ಕ್ರಿಯತಾಂ ಎಂಬ ಶಬ್ಧ ಪ್ರಯೋಗವಿದೆ. ಕ್ಷಣ ಕ್ಷಣಕ್ಕೂ ನಮ್ಮ ಪಿತೃಗಳು ತೃಪ್ತರಾದರೆ, ಮುಂದೆ ಅದೇ ಪಿತೃಗಳು ನಮ್ಮಲ್ಲಿ ಜನಿಸುತ್ತಾರೆ ಎಂಬ ನಂಬಿಕೆಯಲ್ಲ. ಇದು ಜನ್ಮಾನು ಜನ್ಮ ಪುನರ್ಜನ್ಮ ಸಿದ್ಧಾಂತ. ನಾವು ಈ ಸಂಸ್ಕಾರ ಮಾಡಲಿ ಬಿಡಲಿ, ಜನಿಸುವುದಂತೂ ನಿಶ್ಚಿತ. ಆದರೆ ಜನಿಸುವವರು ಉತ್ತಮ ಸಂಸ್ಕಾರಯುತರಾಗಿ, ಆಯುರಾಗ್ಯ ಪೂರ್ಣವಾಗಿರಲಿ ಎಂಬುದು ನಮ್ಮ ಉದ್ಧೇಶ. ಶ್ರಾದ್ಧ ಕೊನೆಯಲ್ಲಿ ಸ್ವರ್ಗಂ ಗಚ್ಛತು ಪಿತರಃ ಎಂಬ ಮಂತ್ರವಿದೆ ಮತ್ತೆ ಸ್ವರ್ಗಕ್ಕೆ ಹೋಗಿ ಎಂಬಾರ್ಥ.
ಕೊನೆಯದ್ದಾಗಿ ಕಾಗೆಯ ವಿಚಾರಕ್ಕೆ ಬರೋಣ. ಕಾಗೆ ನಾವಿಡುವ ವಾಯಸ ಬಲಿ(ಕೆಲವರು ಎಡೆ ಅಂತಾರೆ) ತಿನ್ನುವುದು ಪಿತೃಗಳೆಂದಲ್ಲ. ಅದು ಪಿತೃಗಳಿಗೆ ಸಲ್ಲಿಸಿದ ವಿಧಿವಿಧಾನಗಳ ಶೇಷವನ್ನು ವಾಯುತತ್ವದ ವಾಯಸಗಳು ತಿನ್ನಲಿ ಎಂದರ್ಥ. ಸುಪರ್ಣಂ ವಾಯಸಂ ಎಂದೇ ಕರೆದಿದ್ದಾರೆ. ಸುಪರ್ಣ ಎಂದರೆ ಗರುಡ ಎಂಬರ್ಥ ಇದ್ದರೂ, ಸುಪರ್ಣಂ ವಾಯಸಂ ಎಂದರೆ ಗಂಡು ಕಾಗೆ ಎಂದರ್ಥ. ಎಲೈ ವಾಯಸಗಳೇ ನಮ್ಮ ಪಿತೃಗಣ ಶೇಷವನ್ನು ನೀವೂ ತಿಂದು ತೃಪ್ತರಾಗಿ ಎಂದರ್ಥ.
ಯಾವ ಸಂಪ್ರದಾಯ ಪಿತೃಗಳಿಗೆ ತೃಪ್ತಿ ಪಡಿಸುವುದಿಲ್ಲವೋ ಅಂತವರೇ ಇಂದು ಐಸಿಸ್ ಮುಂತಾದ ಅಮಾನವೀಯ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡವರಾಗುತ್ತಾರೆ.
ಸ್ವರ್ಗಂ ಗಚ್ಛತು ಪಿತರಃ
Discussion about this post