ರಶ್ಮಿಕಾ ಮಂದಣ್ಣ ಹಾಗೂ ತಮ್ಮ ನಿಶ್ಚಿತಾರ್ಥ ರದ್ದಾಗಿದೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಫೇಸ್ ಬುಕ್‌ನಲ್ಲಿ ಮೌನ ಮುರಿದಿರುವ ರಕ್ಷಿತ್ ಶೆಟ್ಟಿ, ಎಲ್ಲರೂ ಆಕೆಯನ್ನು ದೂಷಿಸುವುದನ್ನು ನಾನು ಗಮನಿಸಿದ್ದೇನೆ, ದಯವಿಟ್ಟು ಆಕೆಗೆ ಶಾಂತಿಯಿಂದ ಇರಲು ಬಿಡಿ ಎಂದಿದ್ದಾರೆ.
ಬೇರೆ ವಿಷಯಗಳ ಕುರಿತು ಗಮನ ಹರಿಸಬೇಕಿರುವುದರಿಂದ ಸಾಮಾಜಿಕ ಜಾಲತಾಣದಿಂದ ದೂರ ಇರುತ್ತೇನೆ ಎಂದು ಹೇಳಿದೆ. ಆದರೆ ಕಳೆದ ಕೆಲವು ದಿನಗಳಿಂದ ಕೇಳಿಬರುತ್ತಿರುವ ಸುದ್ದಿಗಳು ನಾನು ಸಾಮಾಜಿಕ ಜಾಲತಾಣಕ್ಕೆ ಮತ್ತೆ ಬರಬೇಕಾಯಿತು ಎಂದಿದ್ದಾರೆ.
ರಶ್ಮಿಕಾ ಅವರ ಬಗ್ಗೆ ಈಗಾಗಲೇ ನಿರ್ದಿಷ್ಟ ಅಭಿಪ್ರಾಯ ರೂಪುಗೊಂಡಿದೆ. ಅಭಿಪ್ರಾಯ ರೂಪುಗೊಳ್ಳುವ ರೀತಿಯಲ್ಲೇ ಕೆಲವೊಂದು ಸಂಗತಿಗಳನ್ನು ತೋರಿಸಲಾಗಿದೆ. ಆದ್ದರಿಂದ ನಾನು ಯಾರನ್ನೂ ಸಹ ದೂಷಿಸುವುದಿಲ್ಲ. ನಾವು ನೋಡಿದ್ದನ್ನೇ, ಕೇಳಿದ್ದನ್ನೇ ನಿಜ ಎಂದು ನಂಬುತ್ತೇವೆ. ಆದರೆ ಅದೇ ಸತ್ಯ ಆಗಿರಬೇಕೆಂದೇನು ಇಲ್ಲ. ಮತ್ತೊಂದು ದೃಷ್ಟಿಕೋನದಿಂದ ಯೋಚನೆ ಮಾಡದೇಯೇ ನಾವು ನಿರ್ಧಾರಕ್ಕೆ ಬಂದುಬಿಡುತ್ತೇವೆ ಎಂದಿದ್ದಾರೆ.
ರಶ್ಮಿಕಾ ಮಂದಣ್ಣ ಅವರನ್ನು ನಾನು 2 ವರ್ಷಗಳಿಂದ ನೋಡಿದ್ದೇನೆ, ಅವರೇನೆಂದು ನಿಮ್ಮೆಲ್ಲರಿಗಿಂತ ನನಗೆ ಚೆನ್ನಾಗಿ ಗೊತ್ತು. ದಯವಿಟ್ಟು ಅವರ ಬಗ್ಗೆ ಕಪೋಲಕಲ್ಪಿತ ಸುದ್ದಿಗಳನ್ನು ನಿಜ ಎಂದು ನಂಬಬೇಡಿ. ಅವರನ್ನು ಶಾಂತಿ ಇಂದ ಇರಲು ಬಿಡಿ. ಶೀಘ್ರವೇ ಈ ಎಲ್ಲ ಗೊಂದಲಗಳೂ ಕೊನೆಯಾಗಲಿವೆ, ನಿಜ ಏನೆಂದು ತಿಳಿಯಲಿದೆ, ಮಾಧ್ಯಮಗಳಲ್ಲಿನ ಕಪೋಲಕಲ್ಪಿತ ಸುದ್ದಿಗಳನ್ನು ನಂಬಬೇಡಿ ಎಂದು ರಕ್ಷಿತ್ ಶೆಟ್ಟಿ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.
ಇನ್ನು, ಸದ್ಯ ಹರಿದಾಡುತ್ತಿರುವ ಯಾವುದೇ ಸುದ್ದಿಗಳನ್ನು ನಂಬಬೇಡಿ. ಈ ಕುರಿತು ಸದ್ಯದಲ್ಲೇ ನಾನು ನಿಮಗೇ ಸ್ಪಷ್ಟನೆ ಕೊಡುತ್ತೇನೆ ಎಂದೂ ಸಹ ತಿಳಿಸಿದ್ದಾರೆ.















