ವಿಠ್ಠಲ ವಿಠ್ಠಲ ಪಾಂಡು ರಂಗಾ..
ಶೀರೂರು ಮಠದ ಪಟ್ಟದ ದೇವರು ಈಗ ಕೃಷ್ಣ ಮಠದಲ್ಲಿ ಪರ್ಯಾಯ ಶ್ರೀಗಳಿಂದ ಪೂಜೆಗೊಳ್ಳುತ್ತಿರುವುದು ಎಲ್ಲರಿಗೂ ತಿಳಿದ ವಿಚಾರ.
ಶೀರೂರು ಶ್ರೀಗಳ ಈ ಪಟ್ಟದ ದೇವರನ್ನು ಶ್ರೀಗಳು ಹಿಂದಕ್ಕೆ ಪಡೆಯಲು ಹೋದಾಗ ಉಳಿದ ಸಪ್ತ ಮಠಾಧೀಶರು ಅದನ್ನು ಹಿಂದಿರುಗಿಸಲಾಗದು ಎಂದು ಪಟ್ಟು ಹಿಡಿದರು. ಇದರಿಂದ ನೊಂದ ಶೀರೂರು ಶ್ರೀಗಳು ಕೋರ್ಟ್ ಮೊರೆಹೋಗಲು ಇನ್ನೇನು ತಯಾರಿ ಮಾಡುತ್ತಿದ್ದಂತೆ ಅಚಾನಕ್ ಆಗಿ ಹರಿಪಾದ ಸೇರಿದರು. ಅಲ್ಲಿಗೆ ದೇವರನ್ನು ಕೇಳುವ ಹಕ್ಕಿನವರು ಇಲ್ಲದಂತಾಯಿತು.
ಪಟ್ಟದ ದೇವರನ್ನು ಹಿಂದಿರುಗಿಸಲಿಲ್ಲ ಯಾಕೆ
ಮುಂದೆ ಶೀರೂರು ಮಠಕ್ಕೆ ನೂತನ ಶ್ರೀಗಳು ಬಂದರೆ ಮತ್ತೆ ಸಪ್ತಮಠಾಧೀಶರು ಪಟ್ಟದ ದೇವರನ್ನು ಕೊಡುವುದಾದರೆ ಕೊಡಬೇಕು. ಇಷ್ಟಕ್ಕೂ ಸಪ್ತಮಠದ ಯತಿಗಳು ಯಾಕೆ ದೇವರನ್ನು ಶೀರೂರು ಲಕ್ಷ್ಮೀವರ ತೀರ್ಥರಿಗೆ ಹಿಂದಿರುಗಿಸಲಿಲ್ಲ ಎಂಬುದೇ ಎಲ್ಲರ ಕುತೂಹಲ.
ಶೀರೂರು ಬಿಟ್ಟು ಉಳಿದ ಸಪ್ತ ಮಠಾಧೀಶರು ಅಹಂಕಾರದಿಂದಲೋ, ಲೋಭದಿಂದಲೋ ಪಟ್ಟದ ದೇವರನ್ನು ಹಿಂದಿರುಗಿಸದೆ ಇದ್ದುದಲ್ಲ. ಅದಕ್ಕೆ ಸಾಕಷ್ಟು ಕಾರಣಗಳಿವೆ. ಇದನ್ನು ಒಂದು ಉದಾಹರಣೆ ಸಹಿತವೇ ವಿವರಿಸಿದಾಗ ಭಕ್ತರಿಗೆ ಒಪ್ಪಿಗೆಯಾದೀತು.
ಭಾರತದ ಅತ್ಯುನ್ನತ ಪ್ರಶಸ್ತಿ ಎಂದರೆ ಭಾರತರತ್ನ ಮತ್ತು ಜ್ಞಾನ ಪೀಠ. ಈ ಪ್ರಶಸ್ತಿ ನೀಡುವುದು ಅಂತಹ ವ್ಯಕ್ತಿಗಳಿಗೆ ಮಾತ್ರ. ಇದು ವ್ಯಕ್ತಿಗೇ ಸಿಮಿತವಲ್ಲ. ಇದು ಭಾರತದ ಹೆಮ್ಮೆಯ ಪದಕ. ಇಂತಹ ಪ್ರಶಸ್ತಿ ಸಿಕ್ಕಿದ ಮೇಲೆ ಅದನ್ನು ರಕ್ಷಿಸಿಕೊಳ್ಳಲು ಆಗದಿದ್ದರೆ ಅಂದರೆ ಅದರ ಘನತೆ ಗೌರವವನ್ನು ಉಳಿಸಿಕೊಳ್ಳದಿದ್ದರೆ ಇದನ್ನು ಪ್ರಶ್ನಿಸುವ ಹಕ್ಕಿರುವುದು ಭಾರತ ಪ್ರಜೆಗಳಿಗೆ ಮಾತ್ರ.
ಈ ಸನ್ಮಾನ ಪಡೆದವರು ಬೇಡದ ದೇಶದ್ರೋಹ ಕೆಲಸ ಮಾಡಿದರೆ ಅದನ್ನು ಪ್ರಶ್ನಿಸುವ ಹಕ್ಕು ಭಾರತದ ಪ್ರಜೆಗಳಿಗೆ ಇರಬಾರದೇ? ಇದೆ. ಅದನ್ನು ಹಿಂತಿರುಗಿಸಲು ಒತ್ತಡ ಹಾಕುವ ಹಕ್ಕಿದೆ. ಯಾಕೆಂದರೆ ಆ ಸನ್ಮಾನವನ್ನು ನೀಡುವುದು ತಮ್ಮ ಪ್ರತಿನಿಧಿಗಳ ಮೂಲಕ ಭಾರತೀಯ ಪ್ರಜ್ಞಾವಂತ ಪ್ರಜೆಗಳು.
ಹಾಗೆಯೇ, ಶ್ರೀ ಮನ್ಮಧ್ವಾಚಾರ್ಯರು ಧರ್ಮದ ಉಳಿವಿಗಾಗಿ, ಸತ್ಕರ್ಮದ ಮೂಲಕ ದೇಶಕ್ಕೆ ಸೇವೆ ನೀಡುವುದಕ್ಕಾಗಿ ಅಷ್ಟಮಠಗಳ ಯತಿಗಳಿಗೆ ವಿಠಲಾದಿ ಅಷ್ಟ ದೇವರುಗಳ ಮೂರ್ತಿಯನ್ನು ಪಟ್ಟದ ದೇವರಾಗಿ ಪೂಜಿಸಲು ಪ್ರಧಾನ ಮಾಡಿದರು. ಹಾಗೆಯೇ ಗ್ರಹಸ್ಥ ದ್ವಾದಶ ಬ್ರಾಹ್ಮಣ ಕುಟುಂಬಗಳಿಗೂ ದ್ವಾದಶ ವಿಷ್ಣು ಸ್ವರೂಪದ ಮೂರ್ತಿಗಳನ್ನು ನೀಡಿ, ನಾಡಿನ ಸ್ವಾಸ್ಥ್ಯವನ್ನು ಕಾಪಾಡಲು ಆದೇಶಿಸಿದರು. ಇಂತಹ ಮೂರ್ತಿಗೆ ಅಪಮಾನವಾಗುವ ರೀತಿಯಲ್ಲಿ ನಡೆದುಕೊಂಡರೆ ಅದನ್ನು ಪ್ರಶ್ನಿಸುವ ಅಧಿಕಾರ ಅಷ್ಟಮಠದ ಯತಿಗಳಿಗಿದೆ. ಇದು ಒಳಗಿನ ವಿಚಾರ. ಈ ವಿಚಾರವನ್ನು ಸಾರ್ವಜನಿಕರಿಗೆ ನ್ಯಾಯಾಲಯದ ಮೂಲಕ ಪ್ರಶ್ನಿಸುವ ಅಧಿಕಾರವೂ ಇದೆ.
ಪಟ್ಟದ ದೇವರನ್ನು ಕಡೆಗಣಿಸಿದಂತೆ
ಯಾವಾಗ ಶೀರೂರು ಶ್ರೀಗಳು ಯತಿಧರ್ಮವನ್ನು ಉಲ್ಲಂಘನೆ ಮಾಡಿದರೋ(ಅವರೇ ಮಾಧ್ಯಮದ ಮೂಲಕ ನನಗೆ ಮಗನಿದ್ದಾನೆ ಎಂದು ಹೇಳಿದ್ದು ಎಲ್ಲರಿಗೂ ತಿಳಿದ ವಿಚಾರ. ಅಲ್ಲದೆ ಯತಿಗಳ ನಿಯಮ ಉಲ್ಲಂಘನೆಯನ್ನೂ ಮಾಡಿದ್ದೂ ಜನರಾಡಿಕೊಳ್ಳುತ್ತಿದ್ದಾರೆ. ಅಲ್ಲದೆ ಆರೋಗ್ಯವಾಗಿದ್ದಾಗಲೂ ಪಟ್ಟದ ದೇವರಿಗೆ ಪೂಜೆ ಮಾಡದೆ ಕೃಷ್ಣ ಮಠದಲ್ಲಿ ಪೂಜೆಗೆ ಇಟ್ಟರು ಎಂದರೆ ಒಂದರ್ಥದಲ್ಲಿ ಪಟ್ಟದ ದೇವರನ್ನು ಕಡೆಗಣಿಸಿದಂತೆ).
ಆಗ ಪೇಜಾವರದ ಹಿರಿಯ ಶ್ರೀಗಳು ಮನನೊಂದು ಆ ಪಟ್ಟದ ದೇವರ ವಿಚಾರದಲ್ಲಿ ಉಳಿದ ಯತಿಗಳೊಡನೆ ಚರ್ಚಿಸಿ ಒಂದು ನಿರ್ಧಾರಕ್ಕೆ ಬಂದರು. ಇದು ಶ್ರೀಗಳಲ್ಲಿ ನಾನು ಕಂಡಂತಹ ಪರಮ ಜವಾಬ್ದಾರಿಯೂ, ಧರ್ಮ ಸಂರಕ್ಷಣೆಯ ಜವಾಬ್ದಾರಿಯೂ ಆಗಿದೆ. ಆದರೆ ಅಲ್ಲಿಯೂ ಶ್ರೀಗಳು ಶೀರೂರು ಮಠಕ್ಕೆ ಕೊಡಬಾರದು ಎಂದು ಹೇಳಲಿಲ್ಲ. ಈಗಾಗಲೇ ಹರಿಪಾದ ಸೇರಿದ ಶ್ರೀ ಲಕ್ಷ್ಮೀವರ ತೀರ್ಥರಿಗೆ ಕೊಡಬೇಕಾದರೆ ಅವರು ಶಿಷ್ಯ ಸ್ವೀಕಾರ ಮಾಡಬೇಕು. ನಂತರವೇ ಕೊಡಬಹುದು ಎಂದು ಹೇಳಿದ್ದರು.
ಆದರೆ ಇವರು ಇದಕ್ಕೆ ಮೀನ ಮೇಷ ಮಾಡಿದರು. ಶಿಷ್ಯಸ್ವೀಕಾರದ ಮಾತಿಗೆ ಮನ್ನಣೆ ನೀಡದೆ, ವ್ಯಾವಹಾರಿಕವಾಗಿ ನ್ಯಾಯಾಲಯದ ಮೆಟ್ಟಿಲೇರಲು ಹೋದರು. ಇದು ವಿಠಲ ದೇವರಿಗೆ ಇಷ್ಟವಾಗಲಿಲ್ಲವೋ ಏನೊ. ಅದಕ್ಕೆ ಮೊದಲೇ ವಿಠಲದೇವರು ತಮ್ಮ ಕೋರ್ಟಿಗೆ ಶೀರೂರು ಶ್ರೀಗಳನ್ನು ಎಳೆದುಕೊಂಡೇ ಬಿಟ್ಟರು.
ಅಂತೂ ಇದನ್ನೆಲ್ಲ ನೋಡಿದಾಗ ದೇವ ನಿರ್ಣಯವೇ ಬೇರೆ ಇದೆ. ನಾವು ಹೊಡೆದಾಡಿಕೊಳ್ಳುವುದು ವ್ಯರ್ಥ. ನಾವಿರುವುದು ದೇವರ ಸೇವೆಗಾಗಿಯೇ ಹೊರತು, ದೇವರನ್ನು ಕಸಿದು ಇಟ್ಟುಕೊಳ್ಳುವುದಕ್ಕಾಗಿ ಅಲ್ಲ.
-ಪ್ರಕಾಶ್ ಅಮ್ಮಣ್ಣಾಯ, ಜ್ಯೋರ್ತಿವಿಜ್ಞಾನಂ
Discussion about this post