ನಾವಿಂದು ದೈಹಿಕ, ಮಾನಸಿಕ ಒತ್ತಡದಿಂದ ಜೀವನಶೈಲಿ ಸಂಬಂಧ ಕಾಯಿಲೆಗಳಿಂದ ಬಳಲುತ್ತಿದ್ದೇವೆ. ಕೇವಲ ಆಸ್ಪತ್ರೆ, ಔಷಧ, ವೈದ್ಯರಿಂದಲೇ ಆರೋಗ್ಯ ಸುಧಾರಣೆಯಾಗುತ್ತದೆಂದು ನಂಬಿದರೆ ಅದು ತಪ್ಪು ಕಲ್ಪನೆ. ಆದ್ದರಿಂದ ಪ್ರತಿಯೊಬ್ಬರೂ ಉತ್ತಮ ಜೀವನಶೈಲಿ ಅಳವಡಿಸಿಕೊಳ್ಳಲು ಈ ಕೆಳಗಿನ ಸೂತ್ರಗಳನ್ನು ಅಳವಡಿಸಿಕೊಂಡರೆ ಉತ್ತಮ ಆರೋಗ್ಯ ನಿಮ್ಮದಾಗುವುದೆಂದು ಆಶಿಸುತ್ತೇನೆ.
- ರಾತ್ರಿ ಬೇಗ ಮಲಗಿ ಬೆಳಿಗ್ಗೆ ಬೇಗ ಏಳಿ
- ರಾತ್ರಿ ಕನಿಷ್ಟ 6 ಗಂಟೆ ನಿದ್ರೆ ಅವಶ್ಯ. ಹಗಲು ನಿದ್ರೆಬೇಡ, ಅತಿ ಅಗತ್ಯವಿದ್ದಲ್ಲಿ ಮದ್ಯಾಹ್ನ 15 ನಿಮಿಷ ವಿಶ್ರಾಂತಿ ಸಾಕು.
- ಬ್ರಾಹ್ಮಿಮುಹೂರ್ತದಲ್ಲೆದ್ದು (5-5.45ರೊಳಗೆ) ಕನಿಷ್ಠ 650 ಮಿ.ಲೀಟರ್ ನಿಂದ 1.2 ಲೀಟರ್ ಉಗುರು ಬೆಚ್ಚಗಿನ ನೀರನ್ನು ನಿಧಾನವಾಗಿ ಕುಡಿಯಿರಿ.
- ಎದ್ದ ತಕ್ಷಣ ಬೆಡ್ ಕಾಫಿ ಅಥವಾ ಟೀ ಬೇಡ. ಎದ್ದು 2 ಘಂಟೆಯೊಳಗೆ ಯಾವುದಾದರೂ ಹಣ್ಣನ್ನು ಅಥವಾ ಬ್ರೇಕ್ ಫಾಸ್‌ಟ್ ಸೇವಿಸಿ.
- ಊಟಕ್ಕೆ ಅಥವಾ ತಿಂಡಿಗೆ ಕನಿಷ್ಟ ಅರ್ಧ ಗಂಟೆ ಮೊದಲು ನೀರು ಕುಡಿಯುವುದನ್ನು ನಿಲ್ಲಿಸಿ. ನಂತರ 2 ತಾಸು ಬಿಟ್ಟು ಕುಡಿಯಿರಿ. ಆಹಾರದ ಜೊತೆಗೆ ನೀರು ಕುಡಿಯಲೇಬೇಡಿ. ಮಾತನ್ನು ಆಡಬೇಡಿ.
- ಯಾವುದೇ ಕಾರಣಕ್ಕೂ ಬೆಳಗಿನ ಉಪಾಹಾರವನ್ನು ತಪ್ಪಿಸಬೇಡಿ. ಕಾಫಿ, ಟೀ ಕುಡಿಯಲೇಬೇಕಿದ್ದರೆ ತಿಂಡಿ ನಂತರ ಕನಿಷ್ಟ ಒಂದುವರೆ ಗಂಟೆ ಬಿಟ್ಟು ಕುಡಿಯಿರಿ.
- ಬೆಳಗಿನ ಉಪಹಾರದಲ್ಲಿ ಮಾಮೂಲಿ ಇಡ್ಲಿ, ದೋಸೆ, ಉಪ್ಪಿಟ್ಟು ಇತ್ಯಾದಿಗಳ ಜೊತೆಗೆ ಯಾವುದಾದರೊಂದು ಋತುವಿಗನುಗುಣವಾದ ತಾಜಾಹಣ್ಣು, ತರಕಾರಿ ಸಲಾಡ್, ಸ್ವಲ್ಪ ಒಣಹಣ್ಣುಗಳಿರಲಿ. ಜೊತೆಗೆ ಮೊಳಕೆ ಕಾಳುಗಳಿರಲಿ. ಅಂದರೆ 8 ಘಂಟೆಯೊಳಗೆ ಬೆಳಗಿನ ತಿಂಡಿ, ರಾತ್ರಿ 8 ಘಂಟೆಯೊಳಗೆ ರಾತ್ರಿಯ ಲಘುಬೋಜನ, ಮಧ್ಯಾಹ್ನ 1-2 ಗಂಟೆಯೊಳಗೆ ಮಾಡಿ. ಇದರಲ್ಲಿ ಮುದ್ದೆ/ರೊಟ್ಟಿ/ಚಪಾತಿ, ಅನ್ನಾ, ಸಾರು, ಪಲ್ಯ, ಕೋಸಂಬರಿ, ಇತ್ಯಾದಿ ಒಳಗೊಂಡಿರಲಿ. 3 ದೊಡ್ಡ ಆಹಾರಕ್ಕಿಂತ 5 ಬಾರಿ ಮಧ್ಯಮ ಅಥವಾ ಸಣ್ಣ ಆಹಾರ ಸೇವಿಸಬೇಕು. ಅಂದರೆ ಬೆಳಗ್ಗೆ 11 ಗಂಟೆಗೆ ಮತ್ತು ಸಂಜೆ 5 ಗಂಟೆಗೆ ಲಘು ತಿಂಡಿ ಅಥವಾ ಹಣ್ಣುಗಳನ್ನು ಸೇವಿಸಿ. ಜ್ಯೂಸ್ ಬದಲು ಹಲ್ಲಿರುವವರಿಗೆ ಹಣ್ಣುಸೇವನೆಲೇಸು. ಕರಿದ-ಹುರಿದ, ಕುರುಕಲು ಜಂಕ್ ಫುಡ್ ಸೇವನೆ ಸಾಧ್ಯವಾದಷ್ಟು ಕಡಿಮೆಮಾಡಿ.
- ಸೇವಿಸುವ ಆಹಾರವನ್ನು ನಿಧಾನವಾಗಿ ಅಗಿದು ಅಗಿದು (ಕನಿಷ್ಠ 20-25 ಬಾರಿ) ಸೇವಿಸಿ. ನಿಮ್ಮ ಬಾಯಲ್ಲೇ ಹಲ್ಲುಗಳಿರುವುದೇ ಹೊರತು, ಹೊಟ್ಟೆಯಲ್ಲಲ್ಲ. ಇದರಿಂದ ಜೀರ್ಣಕ್ರಿಯೆ ಸುಲಲಿತವಾಗಿ ಆಗಿ ಮಲಬದ್ಧತೆಯಾಗುವುದಿಲ್ಲ, ಜೊತೆಗೆ ಬೊಜ್ಜು ಬರುವುದಿಲ್ಲ.
- ರಾತ್ರಿ ಊಟವಾಗಿ 2 ಗಂಟೆಯ ನಂತರ ನಿದ್ದೆ ಮಾಡಿ. ಅಂದರೆ 8 ಗಂಟೆಗೆ ಊಟ ಮಾಡಿ 10 ಗಂಟೆಗೆ ನಿದ್ದೆ ಮಾಡಿ. ಮಧ್ಯೆ ಸ್ವಲ್ಪ ದೈಹಿಕ ಚಟುವಟಿಕೆ ಇರಲಿ.
- ನಿಮ್ಮ ಆಹಾರದಲ್ಲಿ 5 ಬಿಳಿ ವಿಷಗಳು ಅಂದರೆ, ಸಕ್ಕರೆ, ಮೈದಾ, ಬಿಳಿಅಕ್ಕಿ, ಉಪ್ಪು, ಸಂಸ್ಕರಿಸದೇ ಇರುವ ಹಾಲು (ಹಾಲಿನ ಬದಲು ಕಡೆದ ಮಜ್ಜಿಗೆ ಸೇವನೆ ಅತ್ಯುತ್ತಮ) ಇವುಗಳನ್ನು ಸಾಧ್ಯವಾದಷ್ಟು ಕಡಿಮೆ ಬಳಸಿ. ಈಗಾಗಲೇ ನೀವು ಬಳಸುತ್ತಿರುವ ಆಹಾರಗಳಿಂದ ಹಲವು ರಾಸಾಯನಿಕಗಳು ನಿಮ್ಮ ಶರೀರವನ್ನು ಸೇರುತ್ತಿವೆ. ಅದರ ಜೊತೆಗೆ ನೀವು ಕೃತಕ ಬಣ್ಣ, ಪ್ರಿಸರ್ವೇಟಿವ್‌ಸ್ ಇನ್ನಿತರ ರಾಸಾಯನಿಕಗಳನ್ನು ಸೇವಿಸದಿರಿ. ಆದಷ್ಟು ಕಡಿಮೆ ಫ್ರಿಡ್‌ಜ್ ಬಳಕೆ ಮಾಡಿ. ತಂಪು ಪಾನಿಯಗಳು, ಇನ್ನಿತರ ರೆಡಿಮೇಡ್ ಪಾನಿಯಗಳು ಬೇಡ. ನಿಮ್ಮ ಆಹಾರದಲ್ಲಿ ಧನಾತ್ಮಕ ಆಹಾರ ಅಂದರೆ ಹೆಚ್ಚು ಹೆಚ್ಚು ಪ್ರಕೃತಿದತ್ತ ಹಣ್ಣು, ತರಕಾರಿ ಸೇವನೆ ಇರಲಿ.
- ದಿನದಲ್ಲಿ ಕನಿಷ್ಟ 3-4 ಲೀಟರ್ ನೀರು ಸೇವನೆ ಅಗತ್ಯ. ಯಾಕೆಂದರೆ 7 ಮೀಟರ್ ಉದ್ದದ ಜೀರ್ಣಾಂಗ ವ್ಯೂಹದ ಶುದ್ಧತೆಗಾಗಿ ಕನಿಷ್ಠ 4 ಲೀಟರ್ ನೀರು ಅಗತ್ಯ. ರಾತ್ರಿ 7 ಗಂಟೆಗೆ ನೀರು ಕುಡಿಯುವುದನ್ನು ನಿಲ್ಲಿಸಿ, ಇಲ್ಲವಾದಲ್ಲಿ ಪದೇ-ಪದೇ ನಿದ್ರಾ ಭಂಗವಾಗುತ್ತದೆ.
- ನೀರು ಆಹಾರಕ್ಕಿಂತ ನಮಗೆ ಹೆಚ್ಚು ಶಕ್ತಿ ಸಿಗುವುದು ಉಸಿರಾಡುವ ಗಾಳಿಯಿಂದ (ಶೇ.54ರಷ್ಟು). ಆದ್ದರಿಂದ ದೀರ್ಘವಾಗಿ ಉಸಿರಾಡಲು ಪ್ರಯತ್ನಿಸಿ.
- ಸುಮ್ಮನೆ ಕುಳಿತಾಗ ಜಪತಪಾದಿಗಳನ್ನು ಮಾಡುವಾಗ ದೀರ್ಘ ಉಸಿರಾಡುವುದನ್ನು ರೂಡಿಸಿಕೊಳ್ಳಿ. ಮನಸ್ಸು ತಹಬದಿಗೆ ಬಂದು ಆರೋಗ್ಯವು ಸುಧಾರಿಸುತ್ತದೆ.
- ಕಷ್ಟಪಟ್ಟು ಬೆವರು ಸುರುಸುವಿಕೆ ಇಂದು ಮಾಯವಾಗಿದೆ. ಎಲ್ಲವೂ ಕೇವಲ ಎರಡು ಬೆರಳಿನಿಂದ ನಿಯಂತ್ರಿಸಲ್ಪಡುತ್ತದೆ. ಆದ್ದರಿಂದ ಸಾಧ್ಯವಾದಷ್ಟು ನಿಮ್ಮ ದಿನನಿತ್ಯದ ಚಟುವಟಿಕೆಗಳನ್ನು ಮಾಡಲು ಪ್ರಯತ್ನಿಸಬೇಕು. ಇಲ್ಲದಿದ್ದಲ್ಲಿ ಕನಿಷ್ಟ 1 ಗಂಟೆಗಳ ಕಾಲ ವಾಕಿಂಗ್, ಸ್ವಿಮ್ಮಿಂಗ್, ಜಾಗಿಂಗ್, ಯೋಗ, ಡ್ಯಾನ್ಸಿಂಗ್ ಇತ್ಯಾದಿಗಳನ್ನು ಮಾಡಬೇಕು. ಎಲ್ಲರೂ ಒಟ್ಟಿಗೆ ಸೇರಿ ಸ್ನೇಹಿತರೊಂದಿಗೆ ಮಾಡುವ ವ್ಯಾಯಾಮ ಅಥವಾ ಯೋಗಾಭ್ಯಾಸಗಳನ್ನು ಹೆಚ್ಚು ದಿನ ಮುಂದುವರೆಸಬಹುದು.
- ಇಂದು ಮಲವಿಸರ್ಜನೆ ಸರಿಯಾಗಿ ಆಗದೆ ಹೆಚ್ಚಿನ ಜನರು ಅಜೀರ್ಣದಿಂದ ಹಿಡಿದು ಕ್ಯಾನ್ಸರ್ ವರೆಗಿನ ಹಲವು ರೋಗಗಳಿಂದ ಬಳಲುತ್ತಿದ್ದಾರೆ. ಆದ್ದರಿಂದ ದಿನಾಲು ಕನಿಷ್ಟ ಒಂದರಿಂದ ಎರಡು ಬಾರಿಯಾದರು ಮಲವಿಸರ್ಜನೆ ಮಾಡಿದರೆ ಶರೀರ ಹಗುರವಾಗಿ ರೋಗಮುಕ್ತವಾಗುವುದು. ಇದಕ್ಕೆ ಸರಿಯಾದ ನಾರು-ನೀರಿನ ಸೇವನೆ ಅತಿಮುಖ್ಯ.
- ನಿದ್ರಾಹೀನತೆಯಿಂದ ಇಂದು ಹಲವು ರೋಗಗಳು ಬರುತ್ತಿರುವುದರಿಂದ ದಿನಾಲು ಕನಿಷ್ಠ 6-8 ತಾಸು ನಿದ್ರೆ ಅಗತ್ಯ. ನಿದ್ರಾಭಂಗ ಉಂಟುಮಾಡುವ, ನಕಾರಾತ್ಮಕ ಆಹಾರವಾದ ಕಾಫಿ, ಟೀ ಸೇವನೆ ಕಡಿಮೆಮಾಡಿ.
- ಮಧ್ಯಪಾನ, ಧೂಮಪಾನ ಇನ್ನಿತರ ದುಶ್ಚಟಗಳಿಂದ ದೂರವಿರಿ.
- ಧನಾತ್ಮಕ ಚಿಂತನೆಯಿಂದ, ಪರೋಪಕಾರದಿಂದ, ಅಧ್ಯಾತ್ಮಿಕ ಚಿಂತನೆಗಳಿಂದ, ಸಜ್ಜನರ ಸಂಗದಿಂದ, ಮನಸ್ಸು ಸಂತುಲತೆಯಿಂದಿದ್ದಾಗ ಆರೋಗ್ಯ ಸುಧಾರಿಸುವುದು.
ನಾವು ಆಯ್ದುಕೊಂಡ ಜೀವನ ಅಪೇಕ್ಷಿಸುವುದನ್ನು ನಾವು ಕೈಗೊಳ್ಳಬಹುದಾದರೆ ಅದೇ ಆರೋಗ್ಯ. ಆದರೆ ಇಂದಿನ ಕಲಿಯುಗದಲ್ಲಿ ನಾವು ಮನುಷ್ಯರು ಮಾತ್ರ ಬೇರೆ ಜೀವಿಗಳಿಗಿಂತ ಭಿನ್ನವಾಗಿ ಪ್ರಕೃತಿಗೆ ವಿರುದ್ಧವಾಗಿ ಜೀವಿಸುತ್ತಿದ್ದೇವೆ. ಇದೇ ನಮ್ಮ ಅನಾರೋಗ್ಯದ ಗುಟ್ಟು. ಆದ್ದರಿಂದ ನಾವು ಪರಿಸರವನ್ನು ಪೋಷಿಸಿ ಪ್ರಕೃತಿನಿಯಮಗಳಿಗನುಗುಣವಾಗಿ ಜೀವನ ನಡೆಸಿ ಒಳ್ಳೆಯ ಗಾಳಿ, ಒಳ್ಳೆಯ ನೀರು, ಒಳ್ಳೆಯ ಆಹಾರ ಇವುಗಳನ್ನು ಪಡೆದು ಉತ್ತಮ ದೈಹಿಕ ಚಟುವಟಿಕೆಯೊಂದಿಗೆ ಧನಾತ್ಮಕ ಚಿಂತನೆಯನ್ನು ರೂಢಿಸಿಕೊಂಡು ಉತ್ತಮ ಆರೋಗ್ಯ ಪಡೆಯೋಣ.
-ಡಾ॥ವೀಣಾ ಭಟ್,
ಸ್ತ್ರೀರೋಗ ತಜ್ಞರು,
ಮಹಿಳಾ ಆರೋಗ್ಯವೇದಿಕೆ ಅಧ್ಯಕ್ಷರು,
ಐಎಂಎ ಭದ್ರಾವತಿ ಹಾಗೂ
ಕನ್ನಡ ಸಾಹಿತ್ಯ ಪರಿಷತ್ ಉಪಾಧ್ಯಕ್ಷರು
Discussion about this post