ಬೆಂಗಳೂರು: ರಾಜ್ಯದ ಖ್ಯಾತ ಸಂಸ್ಕೃತಿ ಚಿಂತಕ ಡಾ.ಗುರುರಾಜ ಪೋಶೆಟ್ಟಿಹಳ್ಳಿ ಸೇರಿದಂತೆ ಹಲವರಿಗೆ ಶ್ರೀಕೃಷ್ಣ ಮುಖ್ಯಪ್ರಾಣ ಧಾರ್ಮಿಕ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಯಲಹಂಕದ ಶ್ರೀರಾಘವೇಂದ್ರ ಸ್ವಾಮಿ ಮಠದಲ್ಲಿ ಆಯೋಜಿಸಲಾಗಿದ್ದ ಲೋಕಕಲ್ಯಾಣಾರ್ಥ ವ್ಯಾಸ-ದಾಸ-ಸಾಹಿತ್ಯಗಳ ಪ್ರೋಷ್ಠಪದಿ ಶ್ರೀಮದ್ಭಾಗವತ ಅಭಿಯಾನ ಮತ್ತು ರುಕ್ಮಿಣಿ ಕಲ್ಯಾಣೋತ್ಸವ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಈ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ವಹಿಸಿ ಮಾತನಾಡಿದ ತಂಬಿಹಳ್ಳೀ ಮಾಧವತೀರ್ಥ ಸಂಸ್ಥಾನದ ಶ್ರೀ ವಿದ್ಯಾಸಿಂಧು ಮಾಧವತೀರ್ಥ ಶ್ರೀಪಾದಂಗಳವರು, ಭಗವಂತನಾದ ಶ್ರೀ ವೇದವ್ಯಾಸ ರೂಪಿ ಪರಮಾತ್ಮನು ತಾನೇ ಸ್ವತಃ ರಚಿಸಿದ ಮಹಾನ್ ಗ್ರಂಥ. ಇದು ದೇವಲೋಕದ ಅಮೃತಕ್ಕಿಂತಲು ಮಿಗಿಲು. ಈ ಭಾಗವತ ಶ್ರವಣ, ಪಾರಾಯಣದ ಫಲ ಗಂಗಾ ನದಿ ಸ್ನಾನಕ್ಕಿಂತಲು ಮಿಗಿಲು. ಗಂಗಾನದಿಯ ಸ್ನಾನ ಮಿಂದವರ ಪಾಪವನ್ನು ತೊಳೆದರೆ, ಶ್ರೀ ಮದ್ ಭಾಗವತ ಸಂಸಾರದ ಜಿಡ್ಡು ನಾಶಪಡಿಸಿ ನಮಗೆಲ್ಲ ಪಾಪವನ್ನು ಲೇಪನ ವಿಲ್ಲದಂತೆ ಮಾಡುವದು ಎಂದರು.
ಗಂಗಾನದಿಯನ್ನು ನಮ್ಮ ಅವಶ್ಯಕತೆ ಬೇಕಾದಷ್ಟು ಶೇಖರಣೆ ಮಾಡಲು ಒಂದು ಪಾತ್ರೆ ಬೇಕು. ಆದರೆ ಈ ಭಾಗವತಕ್ಕೆ ಸಂಗ್ರಹ ಮಾಡಲು ನಮ್ಮ ತಲೆ ಎನ್ನುವ ಪಾತ್ರೆ ಮಾತ್ರ ಸಾಕು. ಶ್ರೀಮದ್ ಭಾಗವತವನ್ನು ರಚಿಸಿದವರು ಶ್ರೀವೇದವ್ಯಾಸರು. ರಚನೆಯನ್ನು ಮಾಡಿದ ಸ್ಥಳ ಶಮ್ಯಾಪ್ರಾಸ.(ಸರಸ್ವತಿ ಮತ್ತು ಅಲಕನಂದಾ(ಗಂಗಾದೇವಿ ಇನ್ನೊಂದು ಹೆಸರು) ನದೀ ಸಂಗಮದ ಸ್ಥಳ.)ಇದನ್ನು ಶ್ರೀವೇದವ್ಯಾಸ ರಿಂದ ಕೇಳಿದವರು ಗಂಗಾಧರ ನಾದ ಶ್ರೀಶುಕ ಮುನಿಗಳು. ಅವರು ಉಪದೇಶ ಮಾಡಿದ್ದು ಪರೀಕ್ಷಿತ ರಾಜನಿಗೆ ಗಂಗಾನದಿಯ ತಟದಲ್ಲಿ. ಹಾಗಾಗಿ ಪರಮ ಪವಿತ್ರ ವಾದುದು ಈ ಭಾಗವತ ಪುರಾಣ. ಇದನ್ನು ಯಾರು ಹೇಳುವರೊ ಮತ್ತು ಯಾರು ಕೇಳುವರೊ ಮತ್ತು ಯಾರು ಹೇಳಿಸುವರೊ, ಈ ಮೂವರನ್ನು ಪಾವನಗೊಳಿಸಿ ಉದ್ದಾರ ಮಾಡುತ್ತದೆ. ಇಂತಹ ಪರಮ ಮಂಗಳಕರವಾದ ಭಾಗವತ ವನ್ನು ವಿಶೇಷವಾಗಿ ಪಾರಾಯಣ ಮತ್ತು ಶ್ರವಣವನ್ನು ಮಾಡೋಣ. ಭಗವಂತನ ಅನುಗ್ರಹಕ್ಕೆ ಪಾತ್ರರಾಗಲು ಪ್ರಯತ್ನ ಪಡೋಣ ಎಂದು ಅಭಿಪ್ರಾಯಪಟ್ಟರು.
ಇದೇ ಸಂದರ್ಭದಲ್ಲಿ ಶ್ರೀ ಕಲ್ಲಾಪುರ ಪವಮಾನಚಾರ್ಯರಿಂದ ವ್ಯಾಸ ಸಾಹಿತ್ಯದ ‘‘ಶ್ರೀಮದ್ಭಾಗವತದ ದಶಮ ಸ್ಕಂದದ ಬಗ್ಗೆ ಪ್ರವಚನ ಹಾಗೂ ವಿದ್ವಾನ್ ಡಾ. ರಾಯಚೂರು ಶೇಷಗಿರಿದಾಸ್ ಅವರಿಂದ ದಾಸ ಸಾಹಿತ್ಯದ ಗಾನಸಿರಿಯೊಂದಿಗೆ ಶ್ರೀಮದ್ಭಾಗವತ ದಶಮ ಸ್ಕಂದ ಹಾಗೂ ರುಕ್ಮಿಣಿ ಕಲ್ಯಾಣೋತ್ಸವ ನಡೆಯಿತು.
ದಶಮಾನೋತ್ಸವದ ಅಂಗವಾಗಿ ಸನಾತನ ಸಂಸ್ಕೃತಿ ಪ್ರಸರಣದಲ್ಲಿ ನಿರತ ವಿದ್ವಾಂಸ, ವಾಗ್ಮಿ ಕಲ್ಲಾಪುರ ಪವಮಾನಾಚಾರ್ಯ, ದಾಸ ಸಾಹಿತ್ಯ ಗಾಯನ ಕ್ಷೇತ್ರದ ವಿದ್ವಾನ್ ರಾಯಚೂರು ಶೇಷಗಿರಿದಾಸ್ ಮತ್ತು ಸಂಸ್ಕೃತಿ ಚಿಂತಕ ಡಾ.ಗುರುರಾಜ ಪೋಶೆಟ್ಟಿಹಳ್ಳಿ, ಶಿಕ್ಷಣ ಕ್ಷೇತ್ರದ ಶ್ರೀಮತಿ ಶೈಲ ಹಾಗೂ ವೇದಾಧ್ಯಯನ ಮತ್ತು ಸಂಶೋಧನೆ ಕ್ಷೇತ್ರದ ಆರ್ .ಅರುಣ್ ಕುಮಾರ್ ರವರಿಗೆ ’ಶ್ರೀಕೃಷ್ಣ ಮುಖ್ಯಪ್ರಾಣ ಧಾರ್ಮಿಕ ರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸಮಾರಂಭದಲ್ಲಿ ಯಲಹಂಕದ ಗುರುರಾಜ ಸೇವಾ ಸಮಿತಿಯ ಅಧ್ಯಕ್ಷ ಜಿ.ವಿ. ಪ್ರಭಾಕರ ರಾವ್ ಮತ್ತು ಪಂಚಮುಖಿ ಮುಖ್ಯ ಪ್ರಾಣ ಸೇವಾ ಟ್ರಸ್ಟ್ ಕಾರ್ಯದರ್ಶಿ ಜ.ಸೂ. ಶ್ರೀನಾಥ್ ಉಪಸ್ಥಿತರಿದ್ದರು.
Discussion about this post