1. ಗಾಳಿ:
ಮೊದಲ ಅವಶ್ಯಕತೆ. ಆ ಗಾಳಿ ಸೇವನೆಯನ್ನು ನಾವು ಮೂಗಿನ ಮಟ್ಟದಲ್ಲಿ ಮಾಡುತ್ತಿರುವುದರಿಂದ ಸಂಪೂರ್ಣ ಶ್ವಾಸಕೋಶದ ಸಾಮರ್ಥ್ಯವನ್ನು ಬಳಸಲು ಸಾಧ್ಯವಾಗುತ್ತಿಲ್ಲ. ಉಸಿರನ್ನು ದೀರ್ಘವಾಗಿ ತೆಗೆದುಕೊಂಡು ದೀರ್ಘವಾಗಿ ಹೊರಹಾಕುವಾಗ ಅಂತಹ ಉಸಿರಾಟ ಪ್ರಕ್ರಿಯೆಯಲ್ಲಿ ಶ್ವಾಸಕೋಶಗಳಿಂದ ಗಾಳಿಯ ಬಳಕೆ ಸಂಪೂರ್ಣವಾಗಿ ಆಗಿ ಅದರಿಂದ ದೊರೆತ ಆಮ್ಲಜನಕದಿಂದ ರಕ್ತಶುದ್ಧೀಕರಣವಾಗುತ್ತದೆ. ಜೊತೆಗೆ ಶ್ವಾಸಕೋಶಗಳೂ ಬಲಿಷ್ಟವಾಗಿ, ಜೀರ್ಣಕ್ರಿಯೆಯೂ ಚೆನ್ನಾಗಿ ಆಗಿ ದೇಹದ ಪ್ರತಿಯೊಂದು ಜೀವಕೋಶಗಳಿಗೂ ಆಮ್ಲಜನಕದ ಸರಬರಾಜು ಚೆನ್ನಾಗಿ ಆಗುತ್ತದೆ. ಜಡತ್ವ ಹೋಗಲಾಡಿಸಲ್ಪಟ್ಟು ಶರೀರ ಚುರುಕಾಗುತ್ತದೆ.
2. ನೀರು
ನಮ್ಮ ಎರಡನೆಯ ಅವಶ್ಯಕತೆ ಬಾಹ್ಯ ಶುದ್ಧಿಗೆ ನೀರು ಅಗತ್ಯವಿದ್ದ ಹಾಗೇ ಆಂತರಿಕ ಶುದ್ಧಿಗೂ ಅಷ್ಟೇ ಅಗತ್ಯ. 7ಮೀಟರ್ ಉದ್ದದ ಜೀರ್ಣಾಂಗವ್ಯೂಹದ ಶುದ್ಧಿಗೆ ಕನಿಷ್ಠ 3-4 ಲೀಟರ್ ನೀರಿನ ಅಗತ್ಯವಿದೆ.
ಬ್ರಾಹ್ಮಿಮುಹೂರ್ತದಲ್ಲಿ 1 ಲೀಟರ್ ಉಗುರುಬೆಚ್ಚಗಿನ ನೀರನ್ನು ಸೇವಿಸುವುದರಿಂದ (ಜಲಚಿಕಿತ್ಸೆ) ಕಿಡ್ನಿಕಲ್ಲು, ಮೈಗ್ರೇನ್, ಇತ್ಯಾದಿ ಹಲವು ಕಾಯಿಲೆಗಳಿಗೆ ಚಿಕಿತ್ಸೆ.
ಅಷ್ಟೆಲ್ಲಾ ಅಲ್ಲಾ ಉಗುರುಬೆಚ್ಚಗಿನ ನೀರನ್ನು ಆಹಾರಕ್ಕೆ ಕನಿಷ್ಠ 30-45 ನಿಮಿಷ ಮೊದಲು ಹಾಗೂ ಆಹಾರ ಸೇವನೆಯ ಎರಡುಗಂಟೆಯ ನಂತರವೇ ಮತ್ತೆ ನೀರು ಸೇವನೆಯನ್ನು ನಿಯಮಿತವಾಗಿ ಪಾಲಿಸಿದರೆ ಅಸಿಡಿಟಿ, ಅಲ್ಸರ್, ಹೊಟ್ಟೆಯುಬ್ಬರದಂತಹ ಅನೇಕ ಸಮಸ್ಯೆಗಳನ್ನು ತಡೆಗಟ್ಟಬಹುದು. (ಅತಿಬಿಸಿಯ, ಅತಿತಣ್ಣಗಿನ ನೀರಿನ ಸೇವನೆ ಬೇಡ). ಆಹಾರ ಸೇವನೆಯ ಎರಡುಗಂಟೆಯ ನಂತರ ನೀರನ್ನು ಸೇವಿಸಿದಾಗ ಸಣ್ಣ ಕರುಳಿನಲ್ಲಿ ಆಹಾರ ಹೀರುವಿಕೆಯು ಸಮರ್ಪಕವಾಗುತ್ತದೆ.
3. ಆಹಾರ
ಮೂರನೆಯ ಅತ್ಯವಶ್ಯಕ ವಸ್ತು. ಆದರೂ ಇಂದು ಹಸಿವೆಯಿಂದ ಸಾಯುವವರಿಗಿಂತ ಉಂಡು ಸತ್ತವರ ಸಂಖ್ಯೆ ಹೆಚ್ಚುತ್ತಿದೆ. ಆದ್ದರಿಂದ ಆಹಾರ ಸೇವನೆ ಹಿತ-ಮಿತವಾಗಿ ಋತುವಿಗನುಗುಣವಾಗಿರಲಿ.
ಮಾಂಸಾಹಾರಿಗಳಾದರೆ ಮೀನು ಮತ್ತು ನೀಳ ಮಾಂಸಗಳನ್ನು ಮಾತ್ರ ಸೇವಿಸಿ. ಕೂಲ್ ಡ್ರಿಂಕ್‌ಸ್ ಇನ್ನಿತರ ಕೃತಕ ಪೇಯಗಳಲ್ಲಿ ಪಾಸ್ಪಾರಿಕ್, ಕಾರ್ಬಾಲಿಕ್, ಬೆನ್‌ಸೋಯಿಕ್ ಇನ್ನಿತರ ಆಸಿಡ್‌ಗಳಿದ್ದು ಇದರ ಪಿಎಚ್ 1.5 ಇದ್ದು ದಂತ ಕುಳಿಯನ್ನುಂಟುಮಾಡುವುದಷ್ಟೇ ಅಲ್ಲಾ ಹಲವು ದೈಹಿಕ ಕಾಯಿಲೆಗಳನ್ನು ಉಂಟು ಮಾಡುತ್ತದೆ.
ಜಂಕ್ ಫುಡ್ ಬೊಜ್ಜನ್ನುಂಟು ಮಾಡುವುದರ ಜೊತೆಗೆ ಮಧುಮೇಹ, ಏರು ರಕ್ತದೊತ್ತಡ, ಹೃದಯದ ಕಾಯಿಲೆ, ಕ್ಯಾನ್ಸರ್ ವರೆಗಿನ ದೈಹಿಕ ಕಾಯಿಲೆಗಳ ಸರಮಾಲೆಯನ್ನೇ ಉಂಟು ಮಾಡುತ್ತದೆ. ಪ್ರಕೃತಿದತ್ತ ಆಹಾರಗಳು ನಿಮ್ಮ ಆಹಾರ ಸೇವನೆಯ ಶೇ. 50 ರಷ್ಟು ಭಾಗವಾದರೂ ಆಗಿರಲಿ. (ಆಹಾರ ಸೇವನೆಯ ನಿಯಮಗಳನ್ನು ಮುಂದೆ ತಿಳಿಸಲಾಗಿದೆ)
4. ದೈಹಿಕ ಚಟುವಟಿಕೆ
ನಾಲ್ಕನೆಯದು, ಅತ್ಯಂತ ಮುಖ್ಯವಾದುದು. ಆಧುನಿಕ ಜಗತ್ತಿನಲ್ಲಿ ಹೆಚ್ಚಿನ ಕೆಲಸಗಳೆಲ್ಲವೂ ಯಾಂತ್ರೀಕೃತವಾಗಿ (ಗ್ರೆûಂಡಿಂಗ್, ಮಿಕ್ಸರ್, ವಾಷಿಂಗ್ ಮಿಷನ್) ದೈಹಿಕ ಚಟುವಟಿಕೆ ಕಡಿಮೆಯಾಗುತ್ತಿದೆ. ಆದ್ದರಿಂದ ಹೆಚ್ಚಿನವರಿಗೆ ಅಂದರೆ ದಿನನಿತ್ಯದ ಕೆಲಸವನ್ನು ಸ್ವತಃ ಅವರೇ ಮಾಡಿಕೊಳ್ಳದೇ ಇರುವವರಿಗೆ ನಿತ್ಯವೂ ಕನಿಷ್ಠ 40-60 ನಿಮಿಷ ವಾಕಿಂಗ್, ಸ್ವಿಮ್ಮಿಂಗ್, ಜಾಗಿಂಗ್, ಡ್ಯಾನ್ಸಿಂಗ್, ಯೋಗಾಸನ, ಏರೋಬಿಕ್‌ಸ್, ಇತ್ಯಾದಿ ಮಾಡಬಹುದು.
ಯೋಗಾಸನಕ್ಕೂ ವ್ಯಾಯಾಮಕ್ಕೂ ಇರುವ ವ್ಯತ್ಯಾಸಗಳೇನು?
ಯೋಗ ದಿನಾಚರಣೆಯ ಸಂದರ್ಭದಲ್ಲಿ ಯೋಗಾಸನಕ್ಕೂ, ವ್ಯಾಯಾಮಕ್ಕೂ ಇರುವ ವ್ಯತ್ಯಾಸವನ್ನು ತಿಳಿದಿರಬೇಕು. ವ್ಯಾಯಾಮದಲ್ಲಿ ಶರೀರ, ಉಸಿರು ಹಾಗೂ ಮನಸ್ಸಿಗೆ ಸಂಬಂಧವಿಲ್ಲ. ಆದರೆ ಯೋಗಾಸನದಲ್ಲಿ ದೈಹಿಕ ಕಸರತ್ತಿನ ಜೊತೆಗೆ ಶರೀರ, ಉಸಿರಾಟ ಹಾಗೂ ಮನಸ್ಸು ಎಲ್ಲವನ್ನು ಪರಿಗಣಿಸಲಾಗುತ್ತದೆ. ಬೇರೆ ವ್ಯಾಯಾಮಗಳ ಪ್ರೇರಣೆ, ಪ್ರದರ್ಶನ, ಕೀರ್ತಿ, ಸ್ಪರ್ಧೆ, ಹೋರಾಟ ಮಿಕ್ಕೆಲ್ಲವನ್ನು ಮೀರಿಸುವುದು ಇತ್ಯಾದಿ ಆಗಿದ್ದರೆ ಯೋಗಾಭ್ಯಾಸ ಸ್ಪರ್ಧೆ ಇಲ್ಲದ್ದು ಹಾಗೂ ವ್ಯಕ್ತಿಗತವಾದದ್ದು. ಯೋಗಾಭ್ಯಾಸದ ಗುರಿ ದೃಢತೆ, ಅರ್ಹತೆ, ಮಾನಸಿಕ ಸ್ಥಿರತೆ ಹಾಗೂ ಸಮಗ್ರ ವ್ಯಕ್ತಿತ್ವದ ಬೆಳವಣಿಗೆ. ವ್ಯಾಯಾಮದಿಂದ ದೇಹಕ್ಕೆ ದಣಿವು, ಆಯಾಸವಾಗಿ ಬೆವರಿದರೆ ಯೋಗಾಸನದಿಂದ ದೇಹಕ್ಕೆ ಹೊಸಚೈತನ್ಯ ದೊರಕುತ್ತದೆ.
ಪತಂಜಲಿ ಮಹರ್ಷಿಗಳು ಹೇಳುವ ಹಾಗೆ ‘‘ಸ್ಥಿರಂ ಸುಖಂ ಆಸನಂ’’ ಎಂದರೆ ಯಾವುದಾದರೊಂದು ಭಂಗಿಯಲ್ಲಿ ಸಾಧಕನು ದೀರ್ಘಕಾಲದವರೆಗೆ ದೃಢವಾಗಿ ಹಾಗೂ ಸುಖಕರವಾಗಿರುವುದೇ ಯೋಗಾಸನ. ಯೋಗಸಾನಗಳಿಗೆ ಪೂರ್ವ ಸಿದ್ಧತೆಗೆ ಅವಶ್ಯವಿದೆ ಹಾಗೂ ಕಲಿಕೆಯ ಹಂತದಲ್ಲಿ ಉತ್ತಮ ಗುರುವಿನ ಮಾರ್ಗದರ್ಶನ ಅತ್ಯವಶ್ಯ.
ವ್ಯಾಯಾಮದಲ್ಲಿ ಸ್ವಯಂಚಾಲಿತ ಸ್ನಾಯುಗಳಿಗೆ ವಿಶೇಷ ರಕ್ತಪರಿಚಲನೆಯಾಗುವುದು. ಆದರೆ ಯೋಗಾಸನದಲ್ಲಿ ಮುಖ್ಯ ಒಳ ಅಂಗಗಳಿಗೆ ರಕ್ತಸಂಚಾರ ಹೆಚ್ಚಿ ಅವುಗಳ ಕಾರ್ಯಕ್ಷಮತೆ ಹೆಚ್ಚುತ್ತದೆ. ಯೋಗಾಸನದಲ್ಲಿ ಸ್ನಾಯುಗಳನ್ನು ವಿಶ್ರಾಂತಗೊಳಿಸಿ ಎಳೆಯಬೇಕಾಗಿರುವುದರಿಂದ ಸ್ನಾಯುಗಳು ಮೃದುವಾಗಿ ಸ್ಥಿತಿಸ್ಥಾಪಕತ್ವವನ್ನು ಗಳಿಸಿ ಹೆಚ್ಚಿನ ಕ್ಷಮತೆಯನ್ನು ಪಡೆಯುತ್ತವೆ. ಯೋಗಾಸನ ಕೀಲುಗಳ ಮೇಲು ಅತ್ಯುತ್ತಮ ಪರಿಣಾಮ ಬೀರುತ್ತವೆ. ಬೆನ್ನೆಲುಬನ್ನು ಸುಸ್ಥಿತಿಗೆ ತರುತ್ತದೆ. ಗುರುತ್ವಾಕರ್ಷಣ ಶಕ್ತಿಯ ಅಡ್ಡಪರಿಣಾಮಗಳನ್ನು ಸರಿಪಡಿಸುತ್ತದೆ. ನಿರ್ನಾಳ ಗ್ರಂಥಿಗಳ ಸಾಮರಸ್ಯವನ್ನು ಕಾಪಾಡಿ ರಕ್ತಪರಿಚಲನೆಯನ್ನು ಸುಸ್ಥಿತಿಯಲ್ಲಿಡುತ್ತದೆ.
Also Read: ಡಾ. ವೀಣಾಭಟ್ ಹೇಳುತ್ತಾರೆ: ಜನರಿಗೆ ಆರೋಗ್ಯ ಎಂದರೇ ಗೊತ್ತಿಲ್ಲ!
https://kalpa.news/dr-veena-bhatt-says-people-do-not-know-what-is-health/
5. ನಿಯಮಿತ ಮಲಮೂತ್ರ ವಿಸರ್ಜನೆ
ಇಂದು ಹೆಚ್ಚಿನ ಮಂದಿಗೆ ಆಹಾರ ಒಳತುರುಕುವ ಚಿಂತೆಯೇ ಹೊರತು ಮಲವಿಸರ್ಜನೆಯ ಬಗ್ಗೆ ಇಲ್ಲಾ. ಇದರಿಂದ ಮಲಬದ್ಧತೆಯಿಂದ ಹಿಡಿದು ಕ್ಯಾನ್ಸರ್‌ವರೆಗಿನ ಹಲವು ರೋಗಗಳಿಗೆ ಇದು ದಾರಿ ಮಾಡಿಕೊಡುತ್ತದೆ. ದಿನಕ್ಕೆ ಕನಿಷ್ಠ ಎರಡು ಬಾರಿಯಾದರೂ ಮಲವಿಸರ್ಜನೆ ಮಾಡುವುದರಿಂದ ಶರೀರ ಉಲ್ಲಾಸದಿಂದಿರುತ್ತದೆ.
6. ನಿದ್ರೆ
Time to sleep is a time to heal ಎನ್ನುವ ಹಾಗೆ ನಿದ್ರೆಯಲ್ಲಿ ನಮ್ಮ ಶರೀರದ ಜೀವಕೋಶಗಳು ಮರುಚೈತನ್ಯವನ್ನು ಪಡೆಯುತ್ತವೆ. ಇಂದು ಹೆಚ್ಚಿನ ದೀರ್ಘಕಾಲಿಕ ರೋಗಗಳಿಗೆ ನಿದ್ರಾಹೀನತೆಯೇ ಕಾರಣವಾಗಿದೆ. ಮನುಷ್ಯನಿಗೆ ಕನಿಷ್ಠ 6 ತಾಸುಗಳ ಉತ್ತಮ ನಿದ್ರೆಯ ಅವಶ್ಯಕತೆ ಇದೆ.
7. ಧನಾತ್ಮಕ ಚಿಂತನೆ
ಧನಾತ್ಮಕ ಚಿಂತನೆಯಿಂದ ಮನುಷ್ಯನ ಆತ್ಮವಿಶ್ವಾಸ ಹೆಚ್ಚಿ ಆರೋಗ್ಯ ಸುಧಾರಿಸುತ್ತದೆ. ಅದೇ ಋಣಾತ್ಮಕ ಚಿಂತನೆಯಿಂದ ನಿದ್ರಾಹೀನತೆಯಿಂದ ಹಿಡಿದು ಹಲವು ಮನೋದೈಹಿಕ ಕಾಯಿಲೆಗೆ ಎಡೆಮಾಡಿಕೊಡುತ್ತದೆ.
(ವೀಣಾ ಭಟ್ ಪ್ರಕಾರ ದೈನಂದಿನ ಚಟುವಟಿಕೆ ಹೀಗಿರಬೇಕು: ನಾಳೆ ಓದಿ)
Discussion about this post