ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಸನಿಹದಲ್ಲಿದ್ದೇವೆ. ಈ ಹಿನ್ನೆಲೆಯಲ್ಲಿ ಯೋಗ ದಿನದಲ್ಲಿ ಯಾಕೆ ಪಾಲ್ಗೊಳ್ಳಬೇಕು ಎನ್ನುವಷ್ಟೇ ಮಹತ್ವ ದೈಹಿಕ ಆರೋಗ್ಯ ಹಾಗೂ ಅದಕ್ಕಾಗಿ ಮಾಡಬೇಕಾದ್ದೇನು ಎಂಬುದರ ಕುರಿತಾಗಿಯೂ ತಿಳಿಯಬೇಕಾದ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಉತ್ತಮ ಆರೋಗ್ಯಕ್ಕಾಗಿ ಏನು ಮಾಡಬಹುದು ಎಂಬುದನ್ನು ಪ್ರಖ್ಯಾತ ವೈದ್ಯೆ ಡಾ. ವೀಣಾಭಟ್ ಇಂದಿನಿಂದ ನಾಲ್ಕು ದಿನ ಕಲ್ಪ ನ್ಯೂಸ್‌ನಲ್ಲಿ ಬರೆಯುತ್ತಾರೆ.
ನಾವೆಲ್ಲರೂ ಇಂದು ನಾಲ್ಕನೆಯ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಸಂಭ್ರಮದ ಹೊಸ್ತಿಲಲ್ಲಿದ್ದೇವೆ. ಪ್ರತಿವರ್ಷದಂತೆ ಎಲ್ಲೆಡೆ ಯೋಗಸ್ಪರ್ಧೆಗಳು, ಶಿಬಿರಗಳು, ಪ್ರಚಾರ, ಪ್ರದರ್ಶನ, ಘೋಷಣೆ, ಭಾಷಣಗಳು ನಡೆಯುತ್ತಿವೆ. ಯೋಗದ ಸಾರ, ಮಹತ್ವ ಮತ್ತು ಪ್ರಯೋಜನಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ಉನ್ನತ ಮಟ್ಟಕ್ಕೇರಲು ಇದೊಂದು ಸುಸಂದರ್ಭ.
ಇತ್ತೀಚೆಗೆ ಇದರ ಜೊತೆಗೆ ತಳಕು ಹಾಕಿಕೊಂಡಿರುವ ವ್ಯಾಪಾರೀಕರಣವು, ಯೋಗದ ಹೆಸರಿನಲ್ಲಿ ಹಣಪ್ರತಿಷ್ಠೆಗಳಿಸುವ ಮಾರ್ಗಗಳೆಲ್ಲಾ ಕಣ್ಣಿಗೆ ರಾಚುತ್ತದೆ. ಏನೇ ಇರಲಿ ಯೋಗದ ಬಗ್ಗೆ ಜಾಗೃತಿ ಮೂಡಿಸಲು ಯೋಗ ದಿನಾಚರಣೆಯು ಒಂದು ಸುಸಂದರ್ಭ. ಎಲ್ಲದರ ಹಿಂದಿನ ಉದ್ದೇಶ ಉತ್ತಮ ಆರೋಗ್ಯ ಹೊಂದುವುದೇ ಆಗಿದೆ. ಈ ಬಾರಿಯ ಘೋಷವಾಕ್ಯವೂ ಕೂಡ ಕಳೆದ ವರ್ಷದ ಹಾಗೆ ‘‘ಆರೋಗ್ಯಕ್ಕಾಗಿ ಆದ್ಯತೆ’’ ಎನ್ನುವುದೇ ಆಗಿದೆ.
‘‘ಶರೀರ ಮಾಧ್ಯಮಂ, ಖಲುಧರ್ಮಸಾಧನಂ’’ ಎನ್ನುವ ಹಾಗೆ ಆರೋಗ್ಯ ಮನುಷ್ಯನ ಮೂಲಭೂತ ಹಕ್ಕು. ಅದನ್ನು ದಾನವಾಗಿ ಅಥವಾ ಎರವಲಾಗಿ ಪಡೆಯಲಿಕ್ಕೂ ಸಾಧ್ಯವಿಲ್ಲ. ಸ್ವಪ್ರಯತ್ನ ಹಾಗೂ ಸಾಧನೆಯಿಂದಲೇ ಪಡೆಯಬಹುದು. ಇಂದು ಅನಾರೋಗ್ಯದ ಬಗ್ಗೆ ಹೆಚ್ಚು ಅಧ್ಯಯನ ಆಗಿದೆಯೇ ಹೊರತು ಆರೋಗ್ಯದ ಬಗ್ಗಲ್ಲ.
ಹಾಗಾದರೆ ಆರೋಗ್ಯ ಎಂದರೇನು?
ಆರೋಗ್ಯಕ್ಕೆ ಹಲವು ವ್ಯಾಖ್ಯೆಗಳಿದ್ದರು ವಿಶ್ವಆರೋಗ್ಯಸಂಸ್ಥೆಯ ಪ್ರಕಾರ ‘‘ಆರೋಗ್ಯವೆಂದರೆ ಕೇವಲ ರೋಗವಿಲ್ಲದಿರುವುದು ಎಂದಷ್ಟೇ ಅರ್ಥವಲ್ಲ, ಇದೊಂದು ಪರಿಪೂರ್ಣ ದೈಹಿಕ, ಮಾನಸಿಕ, ಸಾಮಾಜಿಕ ಹಾಗೂ ಅಧ್ಯಾತ್ಮಿಕ ಸುಖಾನುಭವ ಅಥವಾ ಉತ್ಕೃಷ್ಟ ಸ್ಥಿತಿ’’.
ವಿಶ್ವ ಔಷಧ ಸಂಸ್ಥೆಯ ಪ್ರಕಾರ ‘‘ಬೆಳಿಗ್ಗೆ ಎದ್ದಾಗ ಕೆಲಸ ಮಾಡಲು ಆಸಕ್ತಿ ಹಾಗೂ ಬೇರೆಯವರಿಗೆ ಸಹಾಯ ಮಾಡುವ ಮನಃಸ್ಥಿತಿ’’ ಇದ್ದರೆ ಅದೇ ಆರೋಗ್ಯವೆನಿಸಿಕೊಳ್ಳುತ್ತವೆ. (Enthusiasm to work and to be compassionate with others) ಶರೀರದ ಎಲ್ಲಾ ಅವಯವಗಳು ಉಚ್ಛಮಟ್ಟದಲ್ಲಿ ಜೀವಕ್ರಿಯೆಯನ್ನು ನಡೆಸಿ ಸಮಗ್ರ ಶರೀರವು ತನ್ನಲ್ಲಿರುವ ಚೇತನ ಶಕ್ತಿಯನ್ನು ಉಪಯೋಗಿಸಿ ನಿಸರ್ಗದ ಜೊತೆ ಸಮತೋಲನ ಕಾಪಾಡಿಕೊಂಡರೆ ವ್ಯಕ್ತಿ ಸಂಪೂರ್ಣ ಆರೋಗ್ಯದಿಂದಿದ್ದಾನೆ ಎಂದು ಪರಿಗಣಿಸಲಾಗುತ್ತದೆ. ಆರೋಗ್ಯ ಪಡೆಯುವ ಹೋರಾಟದಲ್ಲಿ ಮನುಷ್ಯನು ಹಲವಾರು ಕ್ರಿಮಿ-ಕೀಟ, ರೋಗಾಣುಗಳ ಜೊತೆಗೆ, ಭೌತರಾಸಾಯನಿಕ ವಸ್ತುಗಳು, ಇನ್ನಿತರ ಹಾನಿಕಾರಿ ವೈರಿಗಳ ಮೇಲೆ ತನ್ನ ಮೇಲ್ಮೈಯನ್ನು ಸಾಧಿಸಬೇಕಾಗಿದೆ.
ಆದರೆ ಆರೋಗ್ಯವೇನೆಂದು ಗೊತ್ತಿರುವುದು ಹಾಗಿರಲಿ, ಹೆಚ್ಚಿನವರಿಗೆ ತಮ್ಮ ಕಾಯಿಲೆಗಳಿಗೆ ಕಾರಣಗಳೇ ಗೊತ್ತಿಲ್ಲ. ಅನಾರೋಗ್ಯಕ್ಕೆ ಕಾರಣ ಅನುವಂಶೀಯ, ತಪ್ಪು ಆಹಾರ ಸೇವನೆ, ವಿಶ್ರಾಂತಿಯ ಕೊರತೆ, ವೈಯಕ್ತಿಕ ಹಾಗೂ ಪರಿಸರ ಸ್ವಚ್ಛತೆಯ ಕೊರತೆಯಿಂದ, ರೋಗಾಣುಗಳ ದಾಳಿಯಿಂದ ಕುಂದುವ ರೋಗನಿರೋಧಕ ಶಕ್ತಿಯಿಂದ, ಗಾಳಿ-ನೆಲ-ಜಲ ಮಾಲಿನ್ಯದಿಂದ, ಧೂಮಪಾನ-ಮಧ್ಯಪಾನ ಚಟದಿಂದಾಗುವ ಅಂಗಾಂಗಗಳ ಹಾನಿಯಿಂದ ಎಂಬ ಅರಿವೇ ಇರುವುದಿಲ್ಲ. ಇದರ ಜೊತೆಗೆ ಕಾಯಿಲೆಗಳ ಸ್ವರೂಪದ ಬಗ್ಗೆಯೂ ತಿಳಿದುಕೊಳ್ಳದೆ ಮಾಟ-ಮಂತ್ರ ಇನ್ನಿತರ ಮೂಢನಂಬಿಕೆಗಳಿಗೆ ಜೋತುಬಿದ್ದು ಹಣಕಳೆದುಕೊಳ್ಳುವವರು ಬಹಳಷ್ಟಿದ್ದಾರೆ.
ರೋಗದ ಆರಂಭದಲ್ಲೇ ಚಿಕಿತ್ಸೆ ತೆಗೆದುಕೊಳ್ಳದೆ ಉಲ್ಬಣಗೊಂಡಾಗ ಹೆಚ್ಚು ವೆಚ್ಚಮಾಡಿ ಹಣ ಕಳೆದುಕೊಳ್ಳುವವರು ಬಹಳಷ್ಟಿದ್ದಾರೆ. ಹೈಟೆಕ್ ಆಸ್ಪತ್ರೆಗಳೂ ಹೆಚ್ಚೆಚ್ಚು ತೆರೆದುಕೊಳ್ಳುತ್ತಿವೆ, ವೈದ್ಯಕೀಯ ಕ್ಷೇತ್ರದಲ್ಲಿಂದು ಸಾಕಷ್ಟು ಪ್ರಗತಿಯಾಗಿ ಪರಿಣಾಮಕಾರಿ ಔಷಧ ಹಾಗೂ ಚಿಕಿತ್ಸಾ ಕ್ರಮಗಳು ಲಭ್ಯವಿದ್ದರೂ ಹಲವು ರೋಗಿಗಳ ಸ್ಥಿತಿ ಇಂದಿಗೂ ಚಿಂತಾಜನಕವೇ. ಒಂದೆಡೆ ನಾವು ಸಾಂಕ್ರಾಮಿಕ ಸೋಂಕು ಜಾಡ್ಯಗಳನ್ನು, ಪರಾವಲಂಭಿ ಸೋಂಕುಗಳನ್ನು, ಅಪೌಷ್ಠಿಕತೆ ಇತ್ಯಾದಿಗಳನ್ನು ಜಯಿಸುತ್ತಿದ್ದೇವೆ ಎಂದು ಭಾವಿಸಿದ್ದೇವೆ.
ಆದರೆ ಇಂದಿನ ಹೆಚ್ಚುತ್ತಿರುವ ನಗರೀಕರಣ ಹಾಗೂ ಕಾರ್ಯದೊತ್ತಡ, ಫಾಸ್‌ಟ್ಫುಡ್ ಸೇವನೆ, ಕಡಿಮೆ ದೈಹಿಕ ಚಟುವಟಿಕೆ, ಜೊತೆಜೊತೆಗೆ ಒತ್ತಡದ ಬದುಕಿನೊಂದಿಗೆ ಹೆಚ್ಚುತ್ತಿರುವ ಧೂಮಪಾನ, ಮಧ್ಯಪಾನ, ಇನ್ನಿತರ ದುಶ್ಚಟಗಳು ಇವೆಲ್ಲಾ ಸೇರಿಕೊಂಡು ಇಂದು ಜೀವನಶೈಲಿ ಸಂಬಂಧ ಕಾಯಿಲೆಗಳಾದ ಮಧುಮೇಹ, ಹೃದ್ರೋಗ, ಏರುರಕ್ತದೊತ್ತಡ, ಕ್ಯಾನ್ಸರ್, ಬೊಜ್ಜು, ಇತ್ಯಾದಿ ರೋಗಗಳನ್ನು ಹೆಚ್ಚಿಸುತ್ತಿದೆ.
ಇದಕ್ಕೆಲ್ಲಾ ಒಟ್ಟಾರೆ ಕಾರಣ ಮನುಷ್ಯನು ನಿಸರ್ಗದ ನಿಯಮಗಳನ್ನು ಧಿಕ್ಕರಿಸಿ, ಕೊನೆಗೆ ನಿಸರ್ಗವನ್ನೂ ನಾಶಪಡಿಸುತ್ತಿರುವುದೇ ಆಗಿದೆ. ಜನಸಾಮಾನ್ಯರಂತೂ ಹೆಚ್ಚುತ್ತಿರುವ ವೈದ್ಯಕೀಯ ಸಂಕಷ್ಟಗಳನ್ನು ಎದುರಿಸಲಾಗದೆ ತೊಳಲಾಡುತ್ತಿದ್ದಾರೆ.
ಜೀವನವೆಂದರೆ ಕೇವಲ ಬದುಕುವುದಲ್ಲ. ಆರೋಗ್ಯ ಪೂರ್ಣವಾಗಿ ಜೀವಿಸುವುದು. ಆರೋಗ್ಯವಂತಹ ಶರೀರದಲ್ಲಿ ಸಮವಾದ ಉಷ್ಣತೆಯಲ್ಲಿದ್ದು, ಹಗುರತೆ ಆರಾಮದ ಅನುಭವವಿದ್ದು, ಉತ್ತಮ ಹಸಿವು, ಆಳವಾದ ನಿದ್ದೆ, ಸಂತೋಷ, ಸರಿಯಾದ ಶಾರೀರಿಕ ಕ್ರಿಯೆಗಳು, ಕಾಲಕಾಲಕ್ಕೆ ಮಲಮೂತ್ರ ವಿಸರ್ಜನೆಯಾಗಿ ದೇಹಾಲಸ್ಯ ಇಲ್ಲದಿರುವುದೇ ಆಗಿದೆ. ಒಟ್ಟಾರೆ ಹೇಳುವುದಾದರೆ ನಾವು ಆಯ್ದುಕೊಂಡ ಜೀವನ ಅಪೇಕ್ಷಿಸುವುದನ್ನು ನಾವು ಕೈಗೊಳ್ಳಬಹುದಾದರೆ ಅದೇ ಆರೋಗ್ಯ. Prevention is better than cure (ನಿವಾರಣೆಗಿಂತ ನಿರ್ಬಂಧವೇ ಲೇಸು) ಎನ್ನುವ ಹಾಗೆ ರೋಗಬಂದ ಮೇಲೆ ರೋಗದ ಜೊತೆ ಸೆಣಸಾಡುವುದಕ್ಕಿಂತ ಕೆಲವು ಜೀವನಶೈಲಿಯ ಸರಳ ಸೂತ್ರಗಳನ್ನು ಅನುಸರಿಸಿ, ಪ್ರಕೃತಿಯ ಬೇರೆಜೀವಜಂತುಗಳ ಹಾಗೆ ನಿಸರ್ಗದ ನಿಯಮಗಳನ್ನು ಅನುಸರಿಸಿ, ನಿಸರ್ಗ ನಿಯಮಗಳ ಆಜ್ಞಾಧಾರಕನಾಗಿದ್ದರೆ, ರೋಗಗಳ ಆಗಮನವನ್ನೇ ತಡೆಗಟ್ಟಬಹುದು.
(ಉತ್ತಮ ಆರೋಗ್ಯಕ್ಕೆ ಏಳು ಅಂಶಗಳು: ನಾಳೆ ಓದಿ)
ಲೇಖಕರು: ಡಾ.ವೀಣಾ ಭಟ್, ಸ್ತ್ರೀರೋಗ ತಜ್ಞರು,
ಮಹಿಳಾ ಆರೋಗ್ಯವೇದಿಕೆ ಅಧ್ಯಕ್ಷರು,
ಐಎಂಎ ಭದ್ರಾವತಿ
ಕನ್ನಡ ಸಾಹಿತ್ಯ ಪರಿಷತ್ ಉಪಾಧ್ಯಕ್ಷರು
Discussion about this post