ಕಲ್ಪ ಮೀಡಿಯಾ ಹೌಸ್
ನಮ್ಮ ಸಮಾಜದಲ್ಲಿ ಹಿರಿಯರು ಅನೇಕ ಹೆಜ್ಜೆ ಗುರುತುಗಳನ್ನು ಬಿಟ್ಟು ಹೋಗಿದ್ದಾರೆ. ಅವುಗಳು ಸಂಕೇತಗಳಷ್ಟೆ. ಅದರ ಹಿಂದಿನ ಸಾಮಾಜಿಕ ಕಾಳಜಿ, ಮನುಷ್ಯ ಪ್ರೀತಿ, ಮಾನವೀಯತೆ, ಸಹಿಷ್ಣತೆ ಮುಂತಾದ ಮೌಲ್ಯಗಳನ್ನು ನಾವು ಸಾಕ್ಷಾತ್ಕರಿಸಬೇಕು.
ಇಂತಹ ನಿಟ್ಟಿನಲ್ಲಿ ಸದಾ ನಮ್ಮನ್ನು ಕಾಡುವ ಪ್ರಶ್ನೆ ನಮ್ಮ ಆಡಳಿತ ಹೊಣೆ ಹೊತ್ತವರೂ ಕೆಲವೊಮ್ಮೆ ತಮ್ಮ ಯೋಚನಾಲಹರಿಯಲ್ಲಿ ಹಳಿ ತಪ್ಪುತ್ತಾರಲ್ಲ? ಎಂಬುದೇ ಆಗಿದೆ.
ಮುಖ್ಯವಾಗಿ ಕೋವಿಡ್ ತಂದಿರುವ ಈ ಸೂಕ್ಷ್ಮ ಸನ್ನಿವೇಶ ನಮ್ಮನ್ನು ಇನ್ನಷ್ಟು ಚಿಂತೆಗೀಡು ಮಾಡಿದೆ. ಸರ್ಕಾರ ಅಳೆದೂ ತೂಗೀ ಲಾಕ್ ಡೌನ್ ಜಾರಿ ಮಾಡಿದೆ. ಆದರೆ ನಾವು ಸಾರ್ವಜನಿಕರು ಕೇವಲ ಸರ್ಕಾರವನ್ನೇ ಟೀಕಿಸದೇ ನಮ್ಮ ಪಾಲಿನ ಹೊಣೆಯನ್ನೂ ಅರಿತುಕೊಳ್ಳಬೇಕಿದೆ. ಹೀಗೇ ಯೋಚಿಸುತ್ತಿರುವಾಗ ಫಕ್ಕನೆ ನಮ್ಮ ಮತಗಳನ್ನು ಬೇಡಿ ಗೆದ್ದವರು, ಕಡಿಮೆಯಾಗಿ ಸೋತವರೂ ಈ ಕೊರೋನ ದುರಂತ ಕಾಲದಲ್ಲಿ ತಮ್ಮ ಮಾನವೀಯತೆಯನ್ನು ಮೆರೆಯುತ್ತಿರುವುದು ಸಮಾಧಾನದ ಸಂಗತಿ.
ಭದ್ರಾವತಿ ಕ್ಷೇತ್ರದ ಶಾಸಕ, ಶಾಂತಿ ಪ್ರಿಯರೆಂದು ಹೆಸರಾಗಿದ್ದಾರೆ. ಶ್ರೀ ಬಿ.ಕೆ. ಸಂಗಮೇಶ್ವರ್ ಅವರು ಈ ಸಂಕಷ್ಟ ಪರಿಸ್ಥಿತಿಯಲ್ಲಿ ಸರ್ಕಾರವನ್ನು ನೆಚ್ಚಿ ಕೂರಲಿಲ್ಲ. ಶಾಸಕ ಕ್ಷೇತ್ರಾನುದಾನವನ್ನು ಕೋವಿಡ್ ಚಿಕಿತ್ಸೆಗೆ ವಿನಿಯೋಗಿಸುತ್ತಿದ್ದಾರೆ. ನಿಜಕ್ಕೂ ಕೇವಲ ಭದ್ರಾವತಿ ಜನತೆ ಮಾತ್ರವಲ್ಲ, ಮಾನವೀಯ ಸೇವೆಯಲ್ಲಿರುವ ಎಲ್ಲರೂ ಶ್ಲಾಘಿಸಬೇಕಾದ ಸಂಗತಿ.
ಪ್ರಸಕ್ತ ಸನ್ನಿವೇಶದಲ್ಲಿ 100 ಹಾಸಿಗೆಗಳ ತಾತ್ಕಾಲಿಕ ಆಸ್ಪತ್ರೆಯನ್ನು ಭದ್ರಾವತಿ ಎಂಪಿಎಂ ಕಲ್ಯಾಣ ಮಂದಿರದಲ್ಲಿ ಸ್ಥಾಪಿಸಿ ಚಾಲನೆ ನೀಡಿದ್ದು, ಕೋವಿಡ್ ರೋಗಿಗಳು ದಾಖಲಾಗಿದ್ದಾರೆ.
ಮತ್ತೊಂದು ಮೆಚ್ಚುಗೆಯ ವಿಷಯವೆಂದರೆ ತಾಲೂಕು ಆರೋಗ್ಯಾಧಿಕಾರಿಗಳಿಗೆ ಅವರು ನೀಡಿರುವ ಸೂಚನೆ. ವೈದ್ಯರ ಕೊರತೆ ಉಂಟಾಗದಂತೆ ವೈದ್ಯರು ಹಾಗೂ ನರ್ಸ್‌ಗಳನ್ನು ಗುತ್ತಿಗೆ ಆಧಾರದಲ್ಲಿ ನೇಮಿಸಿಕೊಳ್ಳಿ. ಈ ಬಗ್ಗೆ ಸರ್ಕಾರಕ್ಕೆ ಶಿಫಾರಸ್ಸು ಮಾಡಿ. ಸರ್ಕಾರ ಶಿಫಾರಸ್ಸನ್ನು ಒಪ್ಪಿಕೊಳ್ಳದಿದ್ದಲ್ಲಿ ವೈದ್ಯರು ಮತ್ತು ಸಿಬ್ಬಂದಿಯ ಸಂಭಾವನೆಯನ್ನು ತಾವೇ ವೈಯಕ್ತಿಕವಾಗಿ ಭರಿಸುವುದಾಗಿಯೂ ಹೇಳಿದ್ದಾರೆ. ಒಟ್ಟಿನಲ್ಲಿ ಕೊರೋನಾ ಪೀಡಿತರಿಗೆ ಚಿಕಿತ್ಸೆ ನಿಲ್ಲದ ಹಾಗೆ ನೋಡಿಕೊಳ್ಳಿ ಎಂದಿರುವುದು ಸಂಗಮೇಶ್ವರ ಅವರ ಜನಪರ ಕಾಳಜಿಗೆ ಧ್ಯೋತಕವಾಗಿದೆ. ಬೆಂಗಳೂರಿನಲ್ಲಿ ಸಚಿವ ಗೋಪಾಲಯ್ಯ ನವರು ಈ ರೀತಿ ಚಿಕಿತ್ಸೆಗೆ ನೆರವಾಗಿರುವುದನ್ನು ಸ್ಮರಿಸಿಕೊಳ್ಳಬಹುದು.
ಇನ್ನು, ಶಿವಮೊಗ್ಗ ಜಿಲ್ಲಾ ಪಂಚಾಯತ್ ಸದಸ್ಯ ಶ್ರೀ ಕೆ.ಈ. ಕಾಂತೇಶ್ ಅವರೂ ಸಹ ತಂದೆಯವರಾದ ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಕೆ.ಎಸ್. ಈಶ್ವರಪ್ಪ ನವರಂತೆ ಕೋವಿಡ್ ದುರ್ಭರ ಸ್ಥಿತಿಯಲ್ಲಿ ಜನಸೇವೆಯಲ್ಲಿ ತೊಡಗಿರುವುದು.
ಕೋವಿಡ್ ಸುರಕ್ಷಾ ಪಡೆ, ಸೇವಾ ಭಾರತಿಯ ಜೊತೆಗೂಡಿ ಜನಸೇವೆಗೆ ತೊಡಗಿಸಿ ಕೊಂಡಿರುವುದು ಗಮನಾರ್ಹ. ಶಿವಮೊಗ್ಗ ನಗರಕ್ಕೆ ಸೀಮಿತವಾಗಿದ್ದರೂ ಅವರ ಯೋಚನೆಗಳು ವೈವಿಧ್ಯವಾಗಿವೆ. ಕೋವಿಡ್ ಲಕ್ಷಣಗಳಿದ್ದರೆ ಮನೆಯಿಂದಲೇ ಫೋನ್ ಮಾಡಿ ತಜ್ಞ ವೈದ್ಯರೊಂದಿಗೆ ಮಾತನಾಡಿ ಸಲಹೆ ಪಡೆಯಬಹುದು. ಔಷಧಗಳನ್ನು ಮತ್ತು ರಕ್ತ ಪರೀಕ್ಷೆ ಸ್ಯಾಂಪಲ್ ಸಂಗ್ರಹಿಸಲು ಮನೆ ಬಾಗಿಲಿಗೇ ಸ್ವಯಂಸೇವಕರು ಬರುತ್ತಾರೆ. ನಗರದಲ್ಲಿನ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ಬೆಡ್ ಲಭ್ಯತೆ ಬಗ್ಗೆ ಮಾಹಿತಿಗಳನ್ನೂ ಪಡೆಯಬಹುದು. ಮೇಲಾಗಿ ತುರ್ತು ಆಂಬುಲೆನ್ಸ್ ವಾಹನ ಸೇವೆ ಕೂಡ ಒದಗಿಸುತ್ತಾರೆ. ಅಲ್ಲದೇ, ಐಸೋಲೇಷನ್ ಕೇಂದ್ರಗಳ ಬಗ್ಗೆ ಮಾಹಿತಿಯೂ ಸಹ ಸಿಗುತ್ತದೆ. ಇಷ್ಟೆಲ್ಲ ಹಮ್ಮಿಕೊಂಡಿರುವ ಕಾಂತೇಶ್ ತಂದೆಯೆದುರೇ ಜನಾನುರಾಗಿಯಾಗುವುದರಲ್ಲಿ ಸಂಶಯವಿಲ್ಲ.
ಹಾಗೆಯೇ, ಶಿವಮೊಗ್ಗ ಕ್ಷೇತ್ರದ ಮಾಜಿ ಶಾಸಕ ಶ್ರೀ ಕೆ.ಬಿ. ಪ್ರಸನ್ನ ಕುಮಾರ್ ಅವರೂ ಕೂಡ ಸೌರಭ ಕೇರ್ಸ್ ಸಂಸ್ಥೆಯೊಂದಿಗೆ ಕೈಗೊಂಡಿರುವ ಕಾರ್ಯಗಳು.
ಕೊರೋನಾದಿಂದ ಮನೆಗಳಲ್ಲಿ ಐಸೋಲೇಷನ್ ಆಗಿರುವವರಿಗೆ ಔಷಧ ಮತ್ತು ಊಟವನ್ನು ಉಚಿತವಾಗಿ ತಲುಪಿಸುತ್ತಿದ್ದಾರೆ. ಲಸಿಕೆ ಹಾಕಿಸಿಕೊಳ್ಳಲು ಬಂದ ಅಶಕ್ತರು, ದುರ್ಬಲರು, ದಿವ್ಯಾಂಗ ಜನರಿಗೆಲ್ಲ ಉಚಿತ ವಾಹನ ವ್ಯವಸ್ಥೆ ಮಾಡಿದ್ದಾರೆ.
ಅತ್ಯಂತ ಪ್ರಮುಖವಾಗಿ ಇವರು ಕಳೆದ ಚುನಾವಣೆಯಲ್ಲಿ ಸೋತಿದ್ದರೂ ಸಹ ತಮ್ಮ ಹಿನ್ನಡೆಯನ್ನು ಲೆಕ್ಕಿಸದೇ ಜನಪರ ಕಾಳಜಿಯನ್ನು ಬಿಟ್ಟುಕೊಟ್ಟಿಲ್ಲ ಎಂಬುದು ಪ್ರಸನ್ನ ಕುಮಾರ್ ಅವರ ಮಾನವೀಯತೆಯನ್ನು ಬಿಂಬಿಸುತ್ತದೆ. ಜನರಿಂದ ಆಯ್ಕೆಯಾಗುವುದು ಒಂದು ದೊಡ್ಡ ಸಾಧನೆ. ಆದರೆ ಅದೇ ಜನಸ್ಪಂದನ ಇಟ್ಟುಕೊಂಡರೆ ಜನ ಮರೆಯುವುದಿಲ್ಲ. ಪುಣ್ಯದ ಕೆಲಸ ಯಾವತ್ತೂ ಪ್ರತಿಫಲ ನೀಡುತ್ತದೆ.
ಇದು, ಜಿಲ್ಲೆಯ ಕೆಲವು ಜನಪ್ರತಿನಿಧಿಗಳ ಮಾನವೀಯ ಮೌಲ್ಯಗಳನ್ನು ಸಾರಿದರೆ, ಶಿವಮೊಗ್ಗ, ಭದ್ರಾವತಿ, ಸಾಗರ, ಸೊರಬ ಸೇರಿದಂತೆ ವಿವಿದೆಢೆ ಲಾಕ್ ಡೌನ್’ನಿಂದ ಸಂಕಷ್ಟದಲ್ಲಿರುವ ಜನರಿಗೆ ಉಚಿತವಾಗಿ ಊಟ ನೀಡುವ ಕಾರ್ಯವನ್ನು ಹಲವು ಸಂಘ ಸಂಸ್ಥೆಗಳು ಮಾಡುತ್ತಿವೆ.
ಪ್ರಮುಖವಾಗಿ ಭದ್ರಾವತಿಯ ಜೀವಾಮೃತ ಚಾರಿಟೆಬಲ್ ಟ್ರಸ್ಟ್ ಸದಸ್ಯರು ಲಾಕ್‌ಡೌನ್ ಘೋಷಣೆಯಾದಾಗಿನಿಂದ ಪ್ರತಿನಿತ್ಯ ಅನ್ನದಾಸೋಹ ಮಾಡುತ್ತಿದ್ದಾರೆ. ಈ ಟ್ರಸ್ಟ್‌ನ ಸದಸ್ಯರು ಪ್ರತಿದಿನ ಪ್ರತಿಯೊಬ್ಬರಂತೆ ವೈಯಕ್ತಿಕವಾಗಿ ಹಣ ಖರ್ಚು ಮಾಡಿ ಆಹಾರ ವಿತರಣೆ ಮಾಡುತ್ತಿದ್ದು, ಯಾರಿಂದಲೂ ಒಂದು ರೂ. ಸಹ ಕೇಳಿಲ್ಲ ಎನ್ನುವುದು ಗಮನಾರ್ಹ ಸಂಗತಿ. ಇವರ ಈ ಕಾರ್ಯವನ್ನು ಗುರುತಿಸಿ ಒಂದೆರಡು ದಿನ ದಾನಿಗಳೂ ಸಹ ಸಹಾಯ ಮಾಡಿದ್ದಾರೆ. ಇಂತಹುದೇ ಅನ್ನದಾನವನ್ನು ಭದ್ರಾವತಿಯ ತಿರುಮಲ ಟ್ರಸ್ಟ್ ಸೇರಿದಂತೆ ಹಲವರು ಮಾಡುತ್ತಿರುವುದು ಪ್ರಶಂಸನೀಯ.
ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಗಿರೀಶ್ ಅವರ ನೇತೃತ್ವದಲ್ಲಿ ಕಳೆದ ಎರಡು ವಾರಗಳಿಂದಲೂ ನಿರಂತರವಾಗಿ ನಿರ್ಗತಿಕರಿಗೆ ಊಟ ವಿತರಣೆ ಮಾಡಲಾಗುತ್ತಿದೆ. ಭದ್ರಾವತಿಯ ಜೀವಾಮೃತ ಟ್ರಸ್ಟ್ ಸದಸ್ಯರು ಯಾರಿಂದಲೂ ಒಂದು ರೂಪಾಯಿ ಸಹಾ ಸ್ವೀಕರಿಸದೇ 9 ದಿನಗಳಿಂದ ಉಚಿತ ಊಟ ವಿತರಿಸುತ್ತಿರುವುದು ಮಾದರಿ ಕಾರ್ಯವಾಗಿದೆ. ಇಂತಹುದ್ದೇ ಕಾರ್ಯವನ್ನು ತಿರುಮಲ ಟ್ರಸ್ಟ್ ನೇತೃತ್ವದಲ್ಲಿ ಯುವಕರು ಮಾಡುತ್ತಿರುವುದು ಪ್ರಶಂಸನೀಯವಾಗಿದೆ.
ಮಾನವೀಯತೆಗೆ ಬೆಲೆಯಿಲ್ಲ ಎಂದು ಬೊಬ್ಬೆ ಹಾಕುವ ಈ ಕಾಲಘಟದಲ್ಲಿ ರಾಜಕೀಯ ಹಾಗೂ ರಾಜಕೀಯೇತರ ವ್ಯಕ್ತಿಗಳು ಸಂಕಷ್ಟದ ಸಮಯದಲ್ಲಿ ಇಂತಹ ಪುಣ್ಯದ ಕಾರ್ಯ ಮಾಡುತ್ತಿರುವುದು ಭವಿಷ್ಯದ ಸುಖೀ ದಿನಗಳಿಗೆ ಬುನಾದಿಯಾಗಲಿ ಎಂಬುದು ನಮ್ಮ ಆಶಯ…
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post