ಯಾವುದೇ ಪಕ್ಷವನ್ನು ಮುನ್ನಡೆಸಲು ಉತ್ತಮ ನಡವಳಿಕೆ, ಸಂಘಟನಾಶಕ್ತಿ, ಮಾತುಗಾರಿಕೆ, ತಾರ್ಕಿಕ ಕೌಶಲ ಇತ್ಯಾದಿ ಮುಖ್ಯ. ಈ ಹಿನ್ನೆಲೆಯಲ್ಲಿ ನೋಡುವುದಾದರೆ ಸದ್ಯ ಪ್ರಸ್ತಾಪಿತವಾಗಿರುವ ಹೆಸರುಗಳೆಂದರೆ ಮಧು ಬಂಗಾರಪ್ಪ ಮತ್ತು ದತ್ತ
ಎರಡನ್ನೂ ಪಕ್ಷದ ಆಯಾಮದಿಂದಲೇ ಪರಿಶೀಲನೆ ಮಾಡುವುದು ಒಳಿತು. ಮಧು ಬಂಗಾರಪ್ಪ, ಒಮ್ಮೆ ಶಾಸಕರಾಗಿ ಅನುಭವವಿದೆ. ಪಕ್ಷ ಸಂಘಟನೆಯ ಬಗ್ಗೆ ತೀವ್ರತರ ಮನೋಧರ್ಮ ಕಂಡುಬರುವುದಿಲ್ಲ. ಏಕೆಂದರೆ ಅವರು ಶಾಸಕರಾಗುವ ಹೊತ್ತಿನಲ್ಲಿ ತಂದೆಯವರ ನೆರಳು ಅಧಿಕವಾಗಿತ್ತು. ಕೌಟುಂಬಿಕ ಅನುಕಂಪ ಅಗಾಧವಾಗಿತ್ತು.
ಶಾಸಕರಾಗಿದ್ದ ಅವಧಿಯಲ್ಲಿ ಜನಾನುರಾಗಿಯಾಗಿ ಶ್ರಮಿಸಿದ್ದಾರೆ. ಅದು ಸೊರಬದ ಜನತೆಗೆ ಮಾತ್ರ ಸೀಮಿತ. ಜನರ ಪ್ರೀತಿ ಗಳಿಸುವಲ್ಲಿ ಅವರಿಗೆ ಫುಲ್ ಮಾರ್ಕ್ಸ್ ಸಿಗುತ್ತದೆ. ಆದರೆ ಅದು ಸೊರಬದ ವ್ಯಾಪ್ತಿ ದಾಟಲು ಅಸಮರ್ಥವಾಯಿತೆನ್ನಬಹುದು.
ಬಂಗಾರಪ್ಪನವರ ಜನಪ್ರಿಯತೆ ಸಾರ್ಥಕವಾಗಿ ಒಂದು ಸಲ ಈರ್ವರು ಪುತ್ರರಿಗೂ ಫಲ ನೀಡಿದೆ. ಆದರೆ ನಂತರದ ಅವಧಿಗೆ ಸ್ವಸಾಮರ್ಥ್ಯವನ್ನು ತೋರಿ ಚುನಾವಣೆ ಎದುರಿಸುವ ಸಂಪ್ರದಾಯಕ್ಕೆ ಬದ್ಧರಾಗಿರಬೇಕು. ಅಂತಹ ಸಾಮರ್ಥ್ಯ ಮಧು ಅವರಿಗೆ ಇತ್ತು. ಆದರೆ ಮೋದಿ ಹವಾದಲ್ಲಿ ತೇಲಿ ಹೋಯಿತು.
ಹೀಗಾಗಿ ಅವರ ಜಾರಿದ ಭವಿಷ್ಯವನ್ನು ಹಿಡಿತಕ್ಕೆ ತರುವ ನಿಟ್ಟಿನಲ್ಲಿ ಮೈತ್ರಿ ರಾಜಕೀಯ ಸನ್ನಿವೇಶ ಬಳಸಿಕೊಳ್ಳಲು ಹವಣಿಸಿದ್ದುದು ಉಚಿತವೇ. ಆದರೆ ಮತ್ತೆ ಮೋದಿ ಹವಾ ಎದುರು ಲೋಕಸಭೆಯ ಉಪಚುನಾವಣೆ ಮತ್ತು ಸಾರ್ವತ್ರಿಕ ಚುನಾವಣೆಯಲ್ಲಿ ಮಧು ಅವರನ್ನು ಅಗ್ನಿ ಪರೀಕ್ಷೆಗೊಳಪಡಿಸಲಾಯಿತು.
ಮತದಾರರು ಬಹಳ ಜಾಣರು. ಸ್ಥಳೀಯ ಸಂಸ್ಥೆಗಳಿಗೆ, ವಿಧಾನಸಭೆಗೆ ಹಾಗೂ ಲೋಕಸಭೆಗೆ ಯಾವ ಯಾವ ಪಕ್ಷಗಳನ್ನು ಬೆಂಬಲಿಸಬೇಕು ಎಂಬ ಪ್ರಜ್ಞಾಧಾರಕರು.
ಕಾಂಗ್ರೆಸ್’ಗೆ ಸ್ವಯಂಕೃತಾಪರಾಧದಿಂದ ಅಭ್ಯರ್ಥಿಗಳ ಕೊರತೆ, ಜೆಡಿಎಸ್’ಗೆ ಹೊಳೆಯಲ್ಲಿ ಸಿಕ್ಕ ಹುಲ್ಲುಕಡ್ಡಿಯಂತೆ ಸಿಕ್ಕರು ಮಧು. ಆದರೆ ಮತದಾರ ಬೇರೆಯ ವರಸೆ ತೋರಿಸಿದ. ಇದಕ್ಕೆ ರಾಜಕೀಯ ಪಕ್ಷಗಳು ಮುತ್ಸದ್ದಿಗಳು(?) ಹಣ, ಹೆಂಡ ಆಕರ್ಷಣೆ ಅಂತ ಮಾಮೂಲಿ ಹಣೆಪಟ್ಟಿ ಕೊಡುವುದು ರೂಢಿಯಾಗಿ ಬಿಟ್ಟಿದೆ.
ಏನೇ ಇರಲಿ ಜೆಡಿಎಸ್’ಗೆ ಅಧ್ಯಕ್ಷ ಪಟ್ಟ ನೀಡುವ ಮಾನದಂಡದಲ್ಲಿ ಮಧು ಕೊಂಚ ಮತ್ತೆ ನಿರಾಸೆ ಹುಟ್ಟಿಸುತ್ತಾರೆ ಎನ್ನಬಹುದು. ಅವರು ರಾಜ್ಯಮಟ್ಟದಲ್ಲಿ ಇನ್ನೂ ಹೆಸರು ಗಳಿಸಬೇಕಿದೆ. ನೋಡೌಟ್, ಅವರು ಮಾನವೀಯ ಸಂಬಂಧಗಳನ್ನು ಚೆನ್ನಾಗಿ ಸ್ಥಾಪಿಸುವ ಕೌಶಲಿಗ. ಆದರೆ ಸದ್ಯ ಜೆಡಿಎಸ್’ಗೆ ಹಿಂದುಳಿದ ವರ್ಗಗಳ ಅಭ್ಯರ್ಥಿ ಹೆಡ್ ಆಗಬೇಕೆಂಬ ವಾಂಛೆ ಹಿಂದೆ ಎಂದೂ ವ್ಯಕ್ತಪಟ್ಟಿರಲಿಲ್ಲ. ಸಾಮರ್ಥ್ಯವಿರುವ ವಿಶ್ವನಾಥ್ ಅವರನ್ನೇ ಮೂಲೆಗುಂಪು ಮಾಡಿದ ಇಂದಿನ ಪರಿಸ್ಥಿತಿಯಲ್ಲಿ ಯಾವುದೇ ಅಭ್ಯರ್ಥಿಗೂ ಅದೇ ಗತಿ ಎಂಬುದು ನಿಸ್ಸಂಶಯ.
ಮಧು ಅವರಿಗೆ ರಾಜಕೀಯ ಪುನರ್ಜನ್ಮ ಕೊಡುವುದೇ ಆದರೆ ಅವರನ್ನು ತಕ್ಷಣ ವಿಧಾನ ಪರಿಷತ್ತಿಗೆ ನಾಮ ನಿರ್ದೇಶನ ಅಥವಾ ಆಯ್ಕೆ ಮಾಡುವ ಬುದ್ಧಿವಂತಿಕೆ ತೋರಿಸಿದರೆ ದೇವೇಗೌಡರ ಹಿರಿತನಕ್ಕೆ ಹೊಳಪು ಬರುತ್ತದೆ. ಆದ್ದರಿಂದ ಮಧು ಅವರು ಮುಂದೊಂದು ದಿನ ಪಟ್ಟಕ್ಕೆ ಕೂರಬಹುದು. ಈಗ ಪಕ್ವರಾಗಿಲ್ಲ.
ಮುಂದಿನ ಆಯ್ಕೆ ಯಾರು?
ಇದಕ್ಕೆ ಉತ್ತರ ಹುಡುಕುವಲ್ಲಿ ತುಸು ಬೌದ್ಧಿಕ ಕಸರತ್ತೇ ಬೇಕಿದೆ. ದತ್ತರವರು ದೀರ್ಘಕಾಲ ರಾಜಕೀಯದಲ್ಲಿ ಹಿರಿಯ ಗೌಡರ ಆಪ್ತವಲಯದಲ್ಲಿ ಬೆರೆತವರು. ಮೊದಲಿಗೇ ಯಾವುದೇ ಸ್ಥಾನಮಾನಕ್ಕೆ ಆಸೆ ಪಡದೇ ನಿಷ್ಠರಾಗಿ ತಮ್ಮ ರಾಜಕೀಯದ ಮಹತ್ವದ ವರ್ಷಗಳನ್ನು ತೇಯ್ದವರಾಗಿದ್ದಾರೆ.
ತಾನಾಗೇ ಹಿರಿಯ ಗೌಡರ ಆತ್ಮೀಯತೆಯ ಧ್ಯೋತಕವಾಗಿ ವಿಧಾನ ಪರಿಷತ್ತು ಪ್ರವೇಶಿಸಿದರು. ಸದನದಲ್ಲಿ ವಾಗ್ಮಿಗಳಾಗಿ ಜನರ ಸಮಸ್ಯೆಗಳನ್ನು ಚರ್ಚಿಸಿದ್ದಾರೆ. ವಕ್ತಾರರಾಗಿ ಪಕ್ಷದ ಇಮೇಜನ್ನು ಕುಂದು ಗೆಡಿಸದೇ ಕಾಯ್ದವರು. ಮೇಲಾಗಿ ಭಾಷೆ ಮತ್ತು ಸಾಹಿತ್ಯದಲ್ಲಿ ಪರಿಜ್ಞಾನವುಳ್ಳ ಮೇಧಾವಿ. ಅವರು ಎಂಎಲ್ ಸಿ ಆಗಿ ಸಿಕ್ಕ ಅವಕಾಶವನ್ನು ದುಂದುಗೆಡಿಸದೇ ಪಕ್ಷದ ಬೆಳೆವಣಿಗೆ ಮತ್ತು ವ್ಯಾಪಕ ಜನಾಭಿಪ್ರಾಯ ಒಲಿದು ಬರುವಂತೆ ಪ್ರಯತ್ನಿಸಿದವರು.
ಸರಳ ಹಾಗೂ ನೇರ ಬದುಕಿನಿಂದಾಗಿ ಪಾರದರ್ಶಕವಾದ ನಡೆಗಳ ಫಲಿತಾಂಶವೇ ಅವರನ್ನು ಕಡೂರು ಕ್ಷೇತ್ರದ ಶಾಸಕರನ್ನಾಗಿಸಿತು, ಇದೆಲ್ಲ ಇತಿಹಾಸ.
ಆದರೆ ಇತಿಹಾಸ ಮರೆತವ ಭವಿಷ್ಯ ರೂಪಿಸಿಕೊಳ್ಳಲಾರ. ಈಗ ದತ್ತ ಅವರು ಮತ್ತೊಮ್ಮೆ ಚುನಾವಣೆಯಲ್ಲಿ ಜಾತೀಯ ಮಸೆತಕ್ಕೆ ಸಿಕ್ಕು ವಿಫಲರಾದರು. ಆ ಸೋಲು ಅವರ ಸೇವೆಗಲ್ಲ, ಜನರ ತಪ್ಪು ಆಲೋಚನೆಗಷ್ಟೆ.
ಪ್ರತಿಯೊಬ್ಬರ ಮನೆ ಮನಕ್ಕೆ ತಲುಪುತ್ತಿದ್ದ ದತ್ತಣ್ಣ ಸೋತರು ಎಂಬ ಸಂಗತಿ ಇಡೀ ಜೆಡಿಎಸ್’ಗೆ ಅಚ್ಚರಿ. ಹೊಳಪು ಕಳೆದುಕೊಂಡ ಈಗಿನ ಅಲ್ಪಮತದ ಸಂಕೇತವಾಗಿರಬಹುದು. ಈಗ ಮತ್ತೆ ದತ್ತಣ್ಣನವರಿಗೆ ಜೆಡಿಎಸ್ ಪ್ರಚಾರ ಸಮಿತಿ ಅಧ್ಯಕ್ಷಗಿರಿಯಿದೆ.
ಅವರ ಬುದ್ಧಿಮತ್ತೆಗೆ ಸವಾಲಾದ ಈ ಸ್ಥಾನವನ್ನು ಅವರು ಬಳಸಲಿಲ್ಲವೆ? ಲೋಕಸಭೆಗೆ ಕೇವಲ ಒಂದೇ ಅಭ್ಯರ್ಥಿ ಆಯ್ಕೆ. ಇದು ಪಕ್ಷದ ಒಟ್ಟು ನೀತಿಯ ಬಗ್ಗೆ ಆದ ವಿಫಲತೆ ಹೊರತು ಪ್ರಚಾರ ಸಮಿತಿಯ ಕ್ಷಮತೆಯನ್ನು ಸಂದೇಹಿಸುವಂತಿಲ್ಲ. ಏಕೆಂದರೆ ಅಭ್ಯರ್ಥಿ ಮತ್ತು ಕ್ಷೇತ್ರ ಈ ಎರಡೂ ಹೊಂದಾಣಿಕೆಯಾಗದಿರುವ ಬಗ್ಗೆ ಚುನಾವಣೋತ್ತರ ಮೈತ್ರಿ ಪಕ್ಷಗಳ ನಾಯಕರ ಕಚ್ಚಾಟಗಳನ್ನು ದೊಡ್ಡ ಕಾರಣವನ್ನಾಗಿ ನೋಡಬೇಕಾಗುತ್ತದೆ.
ಈಗ ಅನುಭವದ ಹಿನ್ನೆಲೆಯಲ್ಲಿ ದತ್ತಣ್ಣ ಪಕ್ಷ ಸಂಘಟನೆಯಲ್ಲಿ ನವೀನ ಚಟುವಟಿಕೆಯನ್ನೇ ಪಾದಯಾತ್ರೆ ಸ್ವರೂಪದಲ್ಲಿ ಕೈಗೊಂಡಿದ್ದಾರೆ. ಇದೊಂದು ಅವರ ಅವಿರತ ಸೃಜನಶೀಲ ಮನಸ್ಸಿಗೆ ಹಿಡಿದ ಕನ್ನಡಿ. ರಾಜ್ಯವ್ಯಾಪೀ ತಲಸ್ಪರ್ಶಿ, ಭಾವಸ್ಪರ್ಶಿ ಮತ್ತು ಬಹುಸ್ಪರ್ಶಿ ಆಲೋಚನೆ ಯಾವುದೇ ಪಕ್ಷದ ಸಂಘಟನಕಾರನಿಗೆ ಮಾದರಿಯಾಗುವಂತಿದೆ. ಈ ನಿಟ್ಟಿನಲ್ಲಿ ವೈಎಸ್’ವಿ ದತ್ತ ಅವರು ಪ್ರಸ್ತುತ ರಾಜ್ಯ ಜೆಡಿಎಸ್ ಸಾರಥ್ಯ ವಹಿಸಲು ಸೂಕ್ತರಾಗಿದ್ದಾರೆ. ಮಧು ಅವರು ಬಹು ಆಯಾಮದಲ್ಲಿ ತಮ್ಮನ್ನೇ ತಾವು ಬೆಳೆಸಿಕೊಳ್ಳಬೇಕಿದೆ. ದತ್ತ ಅವರು ಅಂತಹ ಆಯಾಮಗಳಲ್ಲಿ, ಪರೀಕ್ಷೆಗಳಲ್ಲಿ ತೇರ್ಗಡೆಯಾಗಿದ್ದಾರೆ.
ದತ್ತಣ್ಣ ಅವರು ಕಡೂರು ಶಾಸಕರಾಗಿದ್ದಾಗ ಹರಿಜನ ಕೇರಿಯಲ್ಲಿ ಸ್ಚಚ್ಛತಾ ಆಂದೋಲನದ ಸಂಕೇತವಾಗಿ ಶೌಚಾಲಯ ಸ್ವಚ್ಛತೆಯನ್ನ ಕೈಗೊಂಡಿದ್ದಿದು ಸುದ್ದಿಯಾಗಿತ್ತು. ಅಂದರೆ ಶಾಸಕ ಸಾರ್ವಜನಿಕ ಸ್ವತ್ತಾಗಿ ಕಾರ್ಯತತ್ಪರನಾಗಬೇಕು ಎಂಬುದನ್ನ ತಮ್ಮ ನಡವಳಿಕೆಯಲ್ಲೇ ತೋರಿಸಿದ್ದರು.ಅವರ ಬಗ್ಗೆ ಜನಜನಿತವಾದ ಸಂಗತಿಯೆಂದರೆ. ಕ್ಷೇತ್ರದ ಯಾರೇ ಆಗಲಿ ಮೊಬೈಲ್ ಮೂಲಕ ಸಂಪರ್ಕಿಸಿದರೆ ಅದು ಮಿಸ್ಡ್ ಕಾಲ್ ಆದಮೇಲೆ ತಾವೇ ಪ್ರತಿಯಾಗಿ ಉತ್ತರಿಸುತ್ತಿದ್ದರು. ಯಾವ ಶಾಸಕರು ಈ ರೀತಿ ಸ್ಪಂದಿಸುತ್ತಿದ್ದಾರೆ ನಾವು ಭೂತಗನ್ನಡಿ ಹಿಡಿದು ನೋಡಬೇಕು.
ಹೀಗಾಗಿ ದತ್ತ ಅವರು ಅಧ್ಯಕ್ಷ ಸ್ಥಾನಕ್ಕೆ ಅರ್ಹರು ಎಂಬುದನ್ನು ಜೆಡಿಎಸ್ ಪಕ್ಷ ಮನಗಾಣುವಂತಾಗಲಿ ಎಂದು ಹಾರೈಸೋಣ.
ಸಂಪಾದಕೀಯ: ಡಾ.ಸುಧೀಂದ್ರ
Discussion about this post