ನವದೆಹಲಿ: 2019ರ ಲೋಕಸಭಾ ಚುನಾವಣೆಯ ದಿನಾಂಕ ಹಾಗೂ ವೇಳಾಪಟ್ಟಿಯಲ್ಲಿ ಮಾರ್ಚ್ ಮೊದಲ ವಾರದಲ್ಲಿ ಘೋಷಣೆ ಮಾಡುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.
ಈ ಕುರಿತಂತೆ ರಾಷ್ಟಿಯ ಮಾಧ್ಯಮವೊಂದು ಇಂದು ವರದಿ ಮಾಡಿದ್ದು, ಚುನಾವಣೆಗೆ ಸಂಬಂಧಿಸಿದಂತೆ ಆಯೋಗ ಈಗಾಗಲೇ ಹಲವು ಸುತ್ತಿನ ಮಹತ್ವದ ಸಭೆಗಳನ್ನು ನಡೆಸಿದ್ದು, ಯಾವ ಯಾವ ರಾಜ್ಯಗಳಲ್ಲಿ ಎಷ್ಟು ಹಂತಗಳಲ್ಲಿ ಮತದಾನದ ಅಗತ್ಯವಿದೆ ಎಂಬ ಕುರಿತಾಗಿ ನಿನ್ನೆ ಚರ್ಚಿಸಲಾಗಿದೆ ಎಂದು ಹೇಳಲಾಗಿದೆ.
ಭದ್ರತಾ ಪಡೆಗಳ ಲಭ್ಯತೆ, ಚುನಾವಣಾ ಪ್ರಕ್ರಿಯೆಗೆ ಅಗತ್ಯತೆಗಳ ಸಿದ್ದತೆಯಲ್ಲಿ ಆಯೋಗ ನಿರತವಾಗಿ, ಭಾರೀ ಕಸರತ್ತು ನಡೆಸುತ್ತಿದ್ದು, ಚುನಾವಣೆಯ ವೇಳಾಪಟ್ಟಿಯನ್ನು ಮಾರ್ಚ್ ಮೊದಲ ವಾರದಲ್ಲಿ ಪ್ರಕಟಿಸಲು ಆಯೋಗ ನಿರ್ಧರಿಸಿದೆ ಎಂದು ವರದಿಯಾಗಿದೆ.
ಪ್ರಸಕ್ತ ಲೋಕಸಭೆಯ ಅವಧಿ ಜೂನ್ 3ರಂದು ಮುಕ್ತಾಯವಾಗಲಿದ್ದು, ಅಷ್ಟರೊಳಗೆ ಚುನಾವಣೆ ನಡೆದು ಫಲಿತಾಂಶ ಪ್ರಕಟಗೊಳ್ಳಬೇಕಿದೆ.
ಈ ವರ್ಷ ಆಂಧ್ರಪ್ರದೇಶ, ಒಡಿಶಾ, ಸಿಕ್ಕಿಂ ಹಾಗೂ ಅರುಣಾಚಲ ಪ್ರದೇಶ ವಿಧಾನಸಭೆಗಳಿಗೂ ಸಹ ಚುನಾವಣೆ ನಡೆಯಬೇಕಿದ್ದು, ಲೋಕಸಭಾ ಚುನಾವಣೆಯೊಟ್ಟಿಗೇ ಮತದಾನ ನಡೆಸಲು ಆಯೋಗ ಚಿಂತಿಸಿದೆ ಎನ್ನಲಾಗಿದೆ.
ಇನ್ನು, ಜಮ್ಮು ಕಾಶ್ಮೀರ ವಿಧಾನಸಭೆಯ ವಿಸರ್ಜನೆಯಾಗಿದ್ದು ಆರು ತಿಂಗಳ ಒಳಗಾಗಿ ಆ ರಾಜ್ಯದಲ್ಲೂ ಸಹ ಚುನಾವಣೆ ನಡೆಯಬೇಕಿದೆ. ಹೀಗಾಗಿ, ಲೋಕಸಭೆ ಚುನಾವಣೆ ಜೊತೆಯಲ್ಲಿಯೇ ಕಣಿವೆ ರಾಜ್ಯಕ್ಕೂ ಚುನಾವಣೆ ನಡೆಸುವ ಸಾಧ್ಯತೆಯಿದೆ.
Discussion about this post