ನವದೆಹಲಿ: ಕೇಂದ್ರ ಚುನಾವಣಾ ಆಯೋಗ ಇಂದು ಸಂಜೆ 5 ಗಂಟೆಗೆ ಪತ್ರಿಕಾಗೋಷ್ಠಿ ನಡೆಸಲಿದ್ದು, 2019ರ ಸಾರ್ವತ್ರಿಕ ಚುನಾವಣೆಯನ್ನು ಘೋಷಣೆ ಮಾಡಲಿದೆಯೇ ಎಂಬ ಸಾಧ್ಯತೆಯನ್ನು ತೆರೆದಿಟ್ಟಿದೆ.
ಮುಖ್ಯ ಚುನಾವಣಾ ಆಯುಕ್ತರು ಸುದ್ದಿಗೋಷ್ಠಿಯಲ್ಲಿ ಮಾತನಾಡಲಿದ್ದಾರೆ ಎಂದು ಹೇಳಲಾಗಿದ್ದು, ಲೋಕಸಭಾ ಚುನಾವಣೆಯ ವೇಳಾಪಟ್ಟಿಯನ್ನು ಘೋಷಣೆ ಮಾಡಲಿದ್ದಾರೆ ಎಂದು ಹೇಳಲಾಗಿದೆ.
ಲೋಕಸಭಾ ಚುಣಾವಣೆಯ ಜೊತೆಗೆ ಆಂಧ್ರ ಪ್ರದೇಶ, ಒಡಿಶಾ, ಸಿಕ್ಕಿಂ, ಅರುಣಾಚಲ ಪ್ರದೇಶ ರಾಜ್ಯಗಳ ವಿಧಾನ ಸಭಾ ಚುಣಾವಣೆ ನಡೆಯುವ ಸಾಧ್ಯತೆಯಿದೆ. ಇದರೊಂದಿಗೆ ರಾಷ್ಟ್ರಪತಿ ಆಳ್ವಿಕೆಯಿರುವ ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿ ಮೇಯಲ್ಲಿ ರಾಷ್ಟ್ರಪತಿ ಆಳ್ವಿಕೆ ಮುಕ್ತಾಯವಾಗುವುದರಿಂದ ಅಲ್ಲಿ ಕೂಡಾ ಚುಣಾವಣೆ ನಡೆಯುವ ಸಾಧ್ಯತೆಯಿದೆ. ಆದರೆ ಭದ್ರತಾ ಕಾರಣಗಳಿಂದ ಜಮ್ಮು ಕಾಶ್ಮೀರದಲ್ಲಿ ಏಕಕಾಲಕ್ಕೆ ಲೋಕಸಭಾ ಮತ್ತು ವಿಧಾನಸಭೆ ಚುಣಾವಣೆ ನಡೆಯುವ ಸಾಧ್ಯತೆ ಕಡಿಮೆ ಎಂದು ಹೇಳಲಾಗುತ್ತಿದೆ.
ಇನ್ನು, ಲೋಕಸಭಾ ಚುನಾವಣೆ ಘೋಷಣೆಯಾಗುವ ಹಂತದಲ್ಲಿರುವ ಬೆನ್ನಲ್ಲೇ ಚುನಾವಣಾ ಆಯೋಗ ಒಂದೊಂದೇ ಬಿಗಿ ನಿಲುವುಗಳನ್ನು ತಳೆಯುತ್ತಿದೆ. ಇದರ ಭಾಗವಾಗಿ ಚುನಾವಣಾ ಪ್ರಚಾರಕ್ಕೆ ಭಾರತೀಯ ಸೇನೆ ಹಾಗೂ ಸೈನಿಕರ ಭಾವಚಿತ್ರಗಳನ್ನು ಯಾವುದೇ ರಾಜಕೀಯ ಪಕ್ಷಗಳು ಬಳಸುವಂತಿಲ್ಲ ಎಂದು ಆದೇಶ ಹೊರಡಿಸಿದೆ.
ಈ ಕುರಿತಂತೆ ಎಲ್ಲ ರಾಜ್ಯಗಳ ಆಯೋಗ ಹಾಗೂ ಮುಖ್ಯಕಾರ್ಯದರ್ಶಿಗಳಿಗೆ ಪತ್ರ ಬರೆದಿರುವ ಆಯೋಗ, ಭದ್ರತಾ ಪಡೆಗಳು ರಾಜಕೀಯ ವ್ಯವಸ್ಥೆ, ಭದ್ರತೆಯ ರಕ್ಷಕರಾಗಿದ್ದು, ಆಧುನಿಕ ಪ್ರಜಾಪ್ರಭುತ್ವದಲ್ಲಿ ತಟಸ್ಥ ಪಾಲುದಾರರಾಗಿದ್ದಾರೆ. ಆದ್ದರಿಂದಾಗಿ ರಾಜಕೀಯ ಪಕ್ಷಗಳು ಹಾಗೂ ಮುಖಂಡರು ಯಾವುದೇ ಕಾರಣಕ್ಕೂ ಪ್ರಚಾರದ ಸಂದರ್ಭದಲ್ಲಿ ಸೇನೆಯ ಹಾಗೂ ಸೈನಿಕರ ಚಿತ್ರಗಳನ್ನು ಬಳಸುವಂತಿಲ್ಲ ಎಂದು ಸೂಚಿಸಿದೆ.
ಅಲ್ಲದೇ, ಎಲ್ಲ ರಾಜಕೀಯ ಪಕ್ಷಗಳಿಗೂ ಪತ್ರ ಬರೆದಿರುವ ಆಯೋಗ ತಮ್ಮ ಅಭ್ಯರ್ಥಿಗಳಿಗೆ ಸಲಹೆ ಹಾಗೂ ಸೂಚನೆ ನೀಡುವಂತೆ ಆಯೋಗ ಆದೇಶಿಸಿದೆ.
Discussion about this post