ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ #KSEshwarappa ಅವರು ಚುನಾವಣಾ ರಾಜಕೀಯ ನಿವೃತ್ತಿ ಘೋಷಿಸಿದ ಬೆನ್ನಲ್ಲೇ ನಗರ ಕ್ಷೇತ್ರದ ಅಭ್ಯರ್ಥಿ ಆಯ್ಕೆಯ ಕಸರತ್ತು ಮುಂದುವರೆದಿದ್ದು, ಯಾರಾಗಲಿದ್ದಾರೆ ಅಭ್ಯರ್ಥಿ ಎನ್ನುವುದು ಕ್ಷಣ ಕ್ಷಣಕ್ಕೂ ಕುತೂಹಲ ಕೆರಳಿಸುತ್ತಿದೆ.
ಕೆ.ಈ. ಕಾಂತೇಶ್
ಈಶ್ವರಪ್ಪ ಅವರು ನಿವೃತ್ತಿ ಘೋಷಿಸಿದ ನಂತರ ಅವರ ಅಭಿಮಾನಿಗಳಲ್ಲಿ ಆಕ್ರೋಶ ಭುಗಿಲೆದ್ದಿದ್ದು, ಈಶ್ವರಪ್ಪರನ್ನೇ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಬೇಕು. ತಪ್ಪಿದಲ್ಲಿ ಅವರ ಪುತ್ರ ಕೆ.ಈ. ಕಾಂತೇಶ್ #KEKanteesh ಅವರಿಗೇ ಟಿಕೇಟ್ ನೀಡಬೇಕು ಎಂದು ನಿರಂತರವಾಗಿ ಕೂಗು ಕೇಳಿಬಂದಿದೆ.
ಕಾಂತೇಶ್ ಅವರಿಗೆ ಟಿಕೇಟ್ ನೀಡುವಂತೆ ವಿವಿಧ ಸಮುದಾಯದ ಪ್ರಮುಖರು ಆಗ್ರಹಿಸಿದ್ದು, ಪಾಲಿಕೆ ಬಿಜೆಪಿ ಸದಸ್ಯರು ನಿನ್ನೆ ರಾತ್ರಿ ಬೆಂಗಳೂರಿನಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಮನವಿ ಮಾಡಿದ್ದಾರೆ.
ಇನ್ನೊಂದೆಡೆ ಈ ಕುರಿತಂತೆ ಈಶ್ವರಪ್ಪ ಹಾಗೂ ಕಾಂತೇಶ್ ಜೊತೆಯಲ್ಲಿ ಯಡಿಯೂರಪ್ಪ ಇಂದು ಮುಂಜಾನೆ ಮಾತುಕತೆ ನಡೆಸಿದ್ದಾರೆ ಎಂದು ಹೇಳಲಾಗಿದ್ದು, ಏನು ಚರ್ಚೆಯಾಗಿದೆ ಎನ್ನುವುದು ಇನ್ನೂ ನಿಗೂಢವಾಗಿದೆ.
ಆಯನೂರು ಮಂಜುನಾಥ್
ಇದೇ ವೇಳೆ, ಟಿಕೇಟ್ ಸಿಗದಿದ್ದರೆ ಪಕ್ಷ ತೊರೆಯುವುದಾಗಿ ಎಚ್ಚರಿಕೆ ನೀಡಿರುವ ಎಂಎಲ್’ಸಿ ಆಯನೂರು ಮಂಜುನಾಥ್ ಅವರ ಹೆಸರೂ ಸಹ ಮುಂಚೂಣಿಯಲ್ಲಿದೆ.
ಪ್ರಮುಖವಾಗಿ ಆಯನೂರು ಮಂಜುನಾಥ್ ಪರ ಬಿ.ಎಸ್. ಯಡಿಯೂರಪ್ಪ ಬ್ಯಾಟಿಂಗ್ ಮಾಡಿದ್ದು, ಇದಕ್ಕೆ ಮನ್ನಣೆ ಹಾಕುವ ಸಾಧ್ಯತೆಯಿದೆ ಎನ್ನಲಾಗಿದೆ.
ಎಸ್. ದತ್ತಾತ್ರಿ
ಇನ್ನು, ಬ್ರಾಹ್ಮಣ ಸಮುದಾಯದ ಮುಖಂಡ ಎಸ್. ದತ್ತಾತ್ರಿ ಅವರ ಹೆಸರೂ ಸಹ ಚಾಲ್ತಿಯಲ್ಲಿದ್ದು, ಇವರಿಗೆ ಅವಕಾಶ ನೀಡಿದಲ್ಲಿ ಬ್ರಾಹ್ಮಣ ಮತಗಳ ಕ್ರೋಢಿಕರಣ ಆಗಬಹುದು ಎಂಬ ಚಿಂತನೆ ನಡೆದಿದೆ.
ಸರಳ ವ್ಯಕ್ತಿತ್ವದ ದತ್ತಾತ್ರಿ ಕಾರ್ಯಕರ್ತರು ಹಾಗೂ ಜನರೊಂದಿಗೆ ನೇರವಾಗಿ ಬೆರೆಯುವ ವ್ಯಕ್ತಿತ್ವದವರು. ಬಿಜೆಪಿಯಲ್ಲಿ ಹಲವು ಹುದ್ದೆಗಳನ್ನು ಯಶಸ್ವಿಯಾಗಿ ನಿರ್ವಹಿಸಿರುವ ದತ್ತಾತ್ರಿ, ಸರ್ಕಾರದಲ್ಲೂ ಸಹ ವಿವಿಧ ಹುದ್ದೆಗಳನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ.
ಡಾ.ಧನಂಜಯ ಸರ್ಜಿ
ಇನ್ನು, ಆರ್’ಎಸ್’ಎಸ್ ಮೂಲದ ಡಾ.ಧನಂಜಯ ಸರ್ಜಿ ಅವರು ಕೆಲವು ತಿಂಗಳ ಹಿಂದೆ ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ವೈದ್ಯಕೀಯ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡುವ ಜೊತೆಯಲ್ಲಿ ಸಾಮಾಜಿಕ ಕ್ಷೇತ್ರದಲ್ಲಿ ತಮ್ಮದೇ ಆದ ಕೊಡುಗೆ ನೀಡಿದ್ದಾರೆ.
ಸಂಘ ಪರಿವಾರದ ಹಿನ್ನೆಲೆಯಲ್ಲಿ ಬೆಳೆದುಬಂದ ಧನಂಜಯ ಸರ್ಜಿ ಅವರಿಗೆ ಟಿಕೇಟ್ ನೀಡುವ ವಿಚಾರವೂ ಸಹ ಸದ್ಯ ಚರ್ಚೆಯಲ್ಲಿದೆ ಎಂದು ತಿಳಿದುಬಂದಿದೆ.
ಹರಿಕೃಷ್ಣ
ಇನ್ನು, ಸಭ್ಯ ಹಾಗೂ ಪ್ರಾಮಾಣಿಕ ರಾಜಕಾರಣಿ ಎಂದು ಹೆಸರು ಗಳಿಸಿರುವ ಮಾಜಿ ಎಂಎಲ್’ಸಿ ಭಾನುಪ್ರಕಾಶ್ ಪುತ್ರ ಹರಿಕೃಷ್ಣ ಅವರ ಹೆಸರೂ ಸಹ ಮುಂಚೂಣಿಯಲ್ಲಿದ್ದು, ಈ ಬಗ್ಗೆ ಚರ್ಚೆ ನಡೆದಿದೆ ಎಂದು ವರದಿಯಾಗಿದೆ.
ಒಟ್ಟಿನಲ್ಲಿ ಇಂದಿನಿಂದ ನಾಮಪತ್ರ ಸಲ್ಲಿಕೆ ಆರಂಭವಾಗುತ್ತಿದ್ದು, ಶಿವಮೊಗ್ಗ ನಗರ ಕ್ಷೇತ್ರಕ್ಕೆ ಯಾರು ಬಿಜೆಪಿ ಅಭ್ಯರ್ಥಿ ಯಾರಾಗುತ್ತಾರೆ ಎಂಬುದು ಮಾತ್ರ ಬಾರೀ ಕುತೂಲಹಕ್ಕೆ ಕಾರಣವಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post