ಬೆಂಗಳೂರು: ಸಂಘದ ಪ್ರಭಾವದಿಂದ ತನ್ನೆಲ್ಲ ಶಕ್ತಿ,ಅರ್ಹತೆಯನ್ನು ದೇಶದ ಕೆಲಸಕ್ಕೆ ನೀಡಬೇಕೆಂದು, ರಾಜಕೀಯಕ್ಕೂ ಧುಮುಕಿ ಭಾರತರತ್ನರಾದರು ಎಂದು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ನೆನಪುಗಳನ್ನು ವಿಧಾನ ಪರಿಷತ್ ಮಾಜಿ ಸಭಾಪತಿ ಡಿ.ಎಚ್. ಶಂಕರಮೂರ್ತಿ ಮೆಲುಕು ಹಾಕಿದರು.
ನಮೋ ಭಾರತ್ ಸಂಘಟನೆ ವತಿಯಿಂದ ಗಿರಿನಗರದ ಯೋಗಶ್ರೀ ಕೇಂದ್ರದಲ್ಲಿ ಆಯೋಜಿಸಿದ್ದ ಅಜಾತಶತ್ರುವಿಗೆ ನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನವ ಭಾರತದ ನಿರ್ಮಾಣದ ಬುನಾದಿ ಎಂಬ ವಿಷಯದಲ್ಲಿ ಭಾಷಣ ನುಡಿನಮನ ನಡೆಯಿತು. ಜನಸಂಘದ ಕಾಲದಿಂದಲೂ ಅಟಲ್ ಜೀ ಅವರೊಂದಿಗೆ ಒಡನಾಟ ಹೊಂದಿದ್ದ ಡಿ.ಎಚ್. ಶಂಕರಮೂರ್ತಿಯವರು, ಅಟಲ್ ಬಿಹಾರಿ ವಾಜಪೇಯಿ ಅವರ ಆರಂಭಿಕ ಜೀವನ, ಜನ ಸಂಘದ ದಿನಗಳ ಅವರ ನೆನಪುಗಳು, ನಂತರ ಅವರೊಂದಿಗೆ ಪಕ್ಷದ ಸಂಘಟನೆಯ ಕೆಲಸದ ಸಮಯದಲ್ಲಿನ ಅವರ ರೋಚಕ ಅನುಭವಗಳನ್ನು ಹಂಚಿಕೊಂಡರು.
1984 ರ ಲೋಕಸಭಾ ಚುನಾವಣೆಯಲ್ಲಿ ಪಕ್ಷ ಹೀನಾಯ ಸೋಲನ್ನು ಅನುಭವಿಸಿದ ಸಮಯದಲ್ಲಿ ಶಿವಮೊಗ್ಗದ ಒಬ್ಬ ಹಿಂದುಳಿದ ಜಾತಿಯ ಕಾರ್ಯಕರ್ತ ಅಟಲ್ ಜಿ ಯವರ ಸೋಲಿಗೆ ಮನನೊಂದು ಆತ್ಮಹತ್ಯೆ ಮಾಡಿಕೊಂಡ ವಿಷಯ ತಿಳಿದು, ಅಟಲ್ ಜಿ ದೆಹಲಿಯಿಂದ ಆ ಕಾರ್ಯಕರ್ತನ ಮನೆಗೆ ಬಂದು, ಅವರ ಮನೆಯವರಿಗೆ ಧೈರ್ಯ ತುಂಬಿದ್ದರು ಎಂದು ಅಟಲ್ ಜೀ ಅವರ ಸರಳತೆಯ ಹಾಗೂ ಸಾಮಾನ್ಯ ಜನರಲ್ಲೊಂದಾಗುವ ಅವರ ವ್ಯಕ್ತಿತ್ವವನ್ನು ನೆನಪಿಸಿಕೊಂಡರು.
ವಾಜಪೇಯಿಯವರು ಅಂದು ರಾಜಕೀಯಕ್ಕೆ ಬರದೇ ಹೋಗಿದ್ದರೆ, ಅವರು ಒಬ್ಬ ಶ್ರೇಷ್ಠ ಕವಿಯಾಗುತ್ತಿದ್ದರು, ಅವರೊಬ್ಬ ಸಂಗೀತಗಾರರಾಗುತ್ತಿದ್ದರು, ಒಬ್ಬ ಖ್ಯಾತ ವಾಗ್ಮಿಯಾಗುತ್ತಿದ್ದರು, ಪತ್ರಿಕೋದ್ಯಮಕ್ಕೆ ಒಬ್ಬ ಮಹಾನ್ ಸಾಂಪಾದಕರಾಗುತ್ತಿದರು. ಈ ಎಲ್ಲ ಅರ್ಹತೆ ಹೊಂದಿದ್ದ ಅವರು, ಸಂಘದ ಪ್ರಭಾವದಿಂದ ತನ್ನೆಲ್ಲ ಶಕ್ತಿ,ಅರ್ಹತೆಯನ್ನು ದೇಶದ ಕೆಲಸಕ್ಕೆ ನೀಡಬೇಕೆಂದು, ರಾಜಕೀಯಕ್ಕೂ ಧುಮುಕಿ ಭಾರತರತ್ನರಾದರು ಎಂದು ತಮ್ಮ ಭಾವನಾತ್ಮಕ ನುಡಿ ನಮನವನ್ನು ಸಲ್ಲಿಸಿದರು.
ಯುವ ಚಿಂತಕ ಶ್ರೇಯಾಂಕ ಎಸ್ ರಾನಡೆ ಮಾತನಾಡಿ, ವಾಜಪೇಯಿಯವರ ವ್ಯಕ್ತಿತ್ವ, ಆದರ್ಶ, ಅವರು ಅಧಿಕಾರದಲ್ಲಿದ್ದ ಸಂದರ್ಭದ ಅವರ ಆರ್ಥಿಕ ಮತ್ತು ವಿದೇಶಿ ನೀತಿ ಹಾಗೂ, ಪ್ರಸಕ್ತ ವಿದ್ಯಮಾನಗಳ ಹಿಂದೇ ಇರುವ ಅಟಲ್ ಜೀ ಅವರ ಕೊಡುಗೆಗಳನ್ನು ಅಂಕಿ ಅಂಶಗಳೊಂದಿಗೆ ತಿಳಿಸಿದರು.
ವಾಜಪೇಯಿಯವರ 5 ವರ್ಷದ ಪೂರ್ಣಾವಧಿ ಸರ್ಕಾರ ಹಾಗೂ ಹಿಂದಿನ 13 ತಿಂಗಳ ಸರ್ಕಾರ ಇದ್ದಾಗಲೂ ಕೂಡ, ಒಂದರ ಮೇಲೊಂದರಂತೆ ಅಡೆತಡೆಗಳು ಬಂದರೂ ಎಲ್ಲವನ್ನೂ ಸಮರ್ಥವಾಗಿ ನಿಭಾಯಿಸಿದರು. ಪೊಖ್ರಾನ್ ಅಣು ಪರೀಕ್ಷೆಯ ಪರಿಣಾಮದಿಂದ ಇತರ ದೇಶಗಳು ಭಾರತದ ಮೇಲೆ ಹಾಕಿದ ನಿರ್ಬಂಧದಿಂದ ಉಂಟಾದ ವಿದೇಶಿ ವಿನಿಮಯದ ಕೊರತೆಯನ್ನು ಎದೆಗುಂದದೆ, ಜಾಗರೂಕತೆಯಿಂದ ನಿಭಾಯಿಸಿದ ಅವರ ತಂತ್ರಗಾರಿಕೆ ಹಾಗೂ ವಿದೇಶಿ ನೀತಿಯನ್ನು ವಿವರಿಸಿದರು.
ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದ ಭಾರತಕ್ಕೆ ಬದಲಾವಣೆ, ಅಭಿವೃದ್ಧಿಯ ಸ್ಪಷ್ಟ ಬುನಾದಿಯನ್ನು ಹಾಕಿಕೊಟ್ಟು ವಿಶ್ವದ ಮುಂದುವರೆದ ದೇಶಗಳ ಸಾಲಿನಲ್ಲಿ ನಿಲ್ಲಿಸಿದ ಕೀರ್ತಿ ಅಟಲ್ ಜಿಗೇ ಸಲ್ಲಬೇಕು. ಹಾಗಾಗಿ ಅಟಲ್ ಭಾರತದ ಭಾಗ್ಯವಿಧಾತ ಮತ್ತು ಭಾಗ್ಯ ಬದಲಿಸಿದ ರಾಷ್ಟ್ರನಾಯಕ ಎಂದರು.
ನವ ಭಾರತ ನಿರ್ಮಾಣದಲ್ಲಿ ಅವರ ಅವಧಿ ಮತ್ತು ಪಾತ್ರವನ್ನು ಪುನರ್ವ್ಯಾಖಾನಿಸಬೇಕಾದ ಅನಿವಾರ್ಯತೆಯಿದೆ. ಇಂತಹ ಅನೇಕ ಮೊದಲುಗಳ ಅನನ್ಯತೆ, ಅಂತಃಶಕ್ತಿ, ಅಸಾಮಾನ್ಯ ನಿರ್ಧಾರ.. ಹೀಗೆ ಭಾರತ ಎಂದೆಂದೂ ನೆನಪಿಸುವ ಅನೂಹ್ಯ ಕೃತ್ತಿಮದಿಂದ ಇತಿಹಾಸದಲ್ಲಿ ಅಟಲ್ ಸ್ಥಾನ ಅಜರಮರವಾಗಲಿದೆ. 2004 ರಲ್ಲಿ ವಾಜಪೇಯಿಯವರಿಗೆ ಎರಡನೇ ಬಾರಿ ಅಧಿಕಾರ ನೀಡದೆ ಭಾರತೀಯರು ಮಾಡಿದ ತಪ್ಪು ಮತ್ತೆ ಮರುಕಳಿಸಬಾರದು.
ನಮೋ ಭಾರತ ಸಂಘಟನೆಯ ಪರವಾಗಿ ಕಾರ್ಯಕ್ರಮದ ಕುರಿತು ವಿಘ್ನೇಶ್ ಕಾಮತ್ ಪ್ರಾಸ್ತಾವಿಕ ಭಾಷಣ ಮಾಡಿದರು. ರಾಷ್ಟ್ರ ಸಂತ ವಾಜಪೇಯಿಯವರ ಆದರ್ಶ ವ್ಯಕ್ತಿತ್ವದ ಅವಲೋಕನ ಹಾಗೂ ರಾಜಕೀಯ ಇತಿಹಾಸದಲ್ಲಿ ದೇಶ ಕಂಡ ಆಮೂಲಾಗ್ರ ಬದಲಾವಣೆ ಹಾಗೂ ಅವರ ಆಶಾವಾದದ ಕುರಿತು ಸಮಗವಾದ್ರ ನುಡಿನಮನವನ್ನು ಸಲ್ಲಿಸಿದರು.
ಸಂಘಟನೆಯ ಕಾರ್ಯಕರ್ತ ಲಕ್ಷ್ಮೀಶ ಕೆ. ಎಸ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮಕ್ಕೆ ಬಂದಿದ್ದ ಎಲ್ಲ ನಾಗರಿಕರು, ಅಟಲ್ ಜಿ ಅಭಿಮಾನಿಗಳು ಹಾಗೂ ಸಂಘಟನೆಯ ಕಾರ್ಯಕರ್ತರು ಶಾಂತಿ ಮಂತ್ರವನ್ನು ಸಾಮೂಹಿಕವಾಗಿ ಹೇಳಿ ಅಗಲಿದ ಆತ್ಮಕ್ಕೆ ಶಾಂತಿ ಕೋರಿದರು. ನಂತರ ಎಲ್ಲರೂ ಅಟಲ್ ಬಿಹಾರಿ ವಾಜಪೇಯಿ ಅವರ ಭಾವಚಿತ್ರಕ್ಕೆ ಪುಷ್ಪ ನಮನವನ್ನು ಮಾಡುವ ಮೂಲಕ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.
– ನಮೋ ಭಾರತ ಸಂಘಟನೆ
Discussion about this post