ಕಲ್ಪ ಮೀಡಿಯಾ ಹೌಸ್ | ವಿಶೇಷ ಲೇಖನ: ಸಚಿನ್ ಪಾರ್ಶ್ವನಾಥ್ |
ಅದು ಗಂಡಕಿ ನದಿಯ ತೀರ. ತೇಲಿ ಬರುವ ತಣ್ಣನೆಯ ಗಾಳಿ ಅಂದು ಸಂಭ್ರಮ ಹೊತ್ತು ತಂದಿತ್ತು. ವೈಶಾಲಿಯ ಒಡೆಯನ ಮನದನ್ನೆ ಹದಿನಾರು ಸುಂದರ ಸ್ವಪ್ನಗಳ ಕಂಡಿದ್ದಳು. ಅರಮನೆಯ ಪಂಡಿತರ ಭಿನ್ನವಿಸಲಾಗಿ ಮಾತೆಯ ಒಡಲಿನಲ್ಲಿ ಜಗವಾಳೋ ಅಹಿಂಸೆಯ ಪ್ರಭು ಜನಿಸಲಿದ್ದಾರೆ, ಆ ಕನಸುಗಳೆಲ್ಲವೂ ಆ ಪುಣ್ಯ ಕ್ಷಣದ ಸೂಚನೆ ಎಂದರು. ಮೊದಲೇ ಮಹಾರಾಜ, ಈಗ ಇಂತಹ ಸುದ್ದಿ, ಕೇಳಬೇಕೇ? ಇಡೀ ದೇಶವೇ ಬಣ್ಣ ಕಟ್ಟಿ ಆಡಂಬರ ಹೊತ್ತು ನಿಂತಿತು. ಎಲ್ಲೆಡೆ ಸಂಭ್ರಮ. ಅದು ಹೇಗೆ ನವಮಾಸಗಳನ್ನು ಜೀಕಿದರೋ ತಿಳಿಯದು.
ಅದಾಗಲೇ ಹಿಂದಿನ ತೀರ್ಥಂಕರರಾದ ಪಾರ್ಶ್ವನಾಥರು ಜನಿಸಿ ಸರಿ ಸುಮಾರು ಮೂರು ಶತಮಾನಗಳು ಕಳೆದಿದ್ದವು. ವೈಶಾಲಿಯ ರಾಜದಂಪತಿಗಳೀರ್ವರೂ ಪಾರ್ಶ್ವನಾಥ ತೀರ್ಥಂಕರರ ಪರಮ ಭಕ್ತರಾಗಿದ್ದರು. ಅಂತಹ ಕುಟುಂಬದಲ್ಲಿ ಧರ್ಮದ ಮುಂದಿನ ಪ್ರತಿನಿಧಿ ಜನಿಸುತ್ತಿದ್ದರು. ಅಂದು ಚೈತ್ರ ಶುಕ್ಲ ತ್ರಯೋದಶಿ. ಈಗಿನ ಬಿಹಾರದ ಕುಂದಲಪುರದಲ್ಲಿ ಮಹಾರಾಜ ಸಿದ್ದಾರ್ಥ ಮತ್ತು ಮಹಾರಾಣಿ ತ್ರಿಶಲಾದೇವಿಯರ ಸುಪುತ್ರನಾಗಿ ವರ್ಧಮಾನರ ಜನುಮವಾಯಿತು.
ಈ ಶಿಶು ಗರ್ಭಲಂಕಾರ ಮಾಡಿದ ಕ್ಷಣದಿಂದ ದೇಶವು ಅನನ್ಯ ಅಭಿವೃದ್ಧಿ ಹೊಂದುತ್ತಿದೆ ಆದ್ದರಿಂದ ರಾಜಕುವರನಿಗೆ ವರ್ಧಮಾನ ಎಂದು ನಾಮಕರಣ ಮಾಡಿ ಎಂದು ಮಹಾರಾಜರು ಆನಂದದಿಂದ ಸೂಚಿಸಿದರು. ಬಾಲ್ಯವೂ ಸಹ ಅನ್ಯರಂತೆ ಇರದೇ ಧೈರ್ಯ, ನಿಸ್ವಾರ್ಥ ಎದ್ದು ಕಾಣುತ್ತಿದ್ದವು. ಜ್ಞಾನದ ಪ್ರತಿರೂಪವಾಗಿದ್ದ ಬಾಲಕನಿಗೆ ಸ್ವಯಂ ಇಂದ್ರನೇ ಬಂದು ಆಚಾರ್ಯರಾದರು. ವರ್ಷಗಳು ಉರುಳಿ ವರ್ಧಮಾನರು ಯೌವ್ವನದ ಹಂತ ತಲುಪಿದಾಗ ರಾಜಕುಲದಲ್ಲಿ ಸಂತಸವೇನೋ ಊರ್ಜಿಸಿತು. ಆದರೆ ತರುಣನೊಳಗೆ ವೈಚಾರಿಕತೆಯ ಹಸಿವು ಮುಗಿಲು ಮುಟ್ಟಿತ್ತು. ಭೌತಿಕ ಜಗತ್ತನು ಮೀರಿ ಎಲ್ಲಾ ನೋವು ಮತ್ತು ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಹುಡುಕಿ ಹೋಗುವ ಆಸಕ್ತಿ ತನ್ಮೂಲಕ ಹೆಚ್ಚಿತ್ತು. ಸ್ವರ್ಣ ಶರೀರಿಯ ಮನದನ್ನೆಯಾಗಲು ಕನ್ಯಾಮಣಿಗಳ ಪ್ರಸ್ತಾಪ ಬರತೊಡಗಿದವು. ಅಂತೆಯೇ ವರ್ಧಮಾನರು ಯಶೋಧೆಯನ್ನು ವಿವಾಹವಾದರು. ನಂತರದಲ್ಲಿ ಪುತ್ರಿ ಪ್ರಿಯದರ್ಶಿನಿಯ ಜನನವಾಯಿತು. ಸುಂದರ ರಾಜಸಂಸಾರ, ರಾಜ್ಯ, ಪ್ರಜೆಗಳು ಇವೆಲ್ಲವನ್ನೂ ಮೀರಿ ಅಲೌಕಿಕತೆಯ ಕಡೆಗೆ ಸದಾಕಾಲ ಯುವರಾಜನ ಗಮನ.
ಕೊನೆಗೂ ಅಣ್ಣ ನಂದಿವರ್ಧನ ಅಣತಿ ಪಡೆದು ಮೋಕ್ಷ ಅರಸಿ ಹೊರಟರು. ಅಪರಿಚಿತ ಸಾಮಾನ್ಯನಿಗೆ ಏನೆಲ್ಲಾ ಕಷ್ಟಗಳು ಎದುರಾಗುತ್ತಾವೋ ಅದರ ನೂರು ಪಟ್ಟು ಹಿಂಸೆ ನೋವುಗಳನ್ನು ಎದುರಿಸಿದರು. ಕಾಲಡಿಯ ನೆಲಕ್ಕೆ ಪಾದ ಸೋಕಿಸದ ರಾಜಪುತ್ರ ಬರಿಗಾಲಿನಲ್ಲಿ ದೇಶವನ್ನು ಸುತ್ತಿದರು. ಜನರು ಇವರನ್ನು ಮಾಟಗಾರನಂತೆ, ಕಳ್ಳನಂತೆ, ಗುಪ್ತಚರನಂತೆ ಅಷ್ಟೆ ಏಕೆ ಮರುಳನಂತೆ ನೋಡಿ ನಾನಾ ತರಹದ ಶಿಕ್ಷೆ ನೀಡಿದರು. ಅನ್ನ, ನೀರು, ನಿದ್ರೆ, ಬಟ್ಟೆಗಳ ತೊರೆದ ಜಿನಾಸಕ್ತನಿಗೆ ಯಾವ ಗೋಜು? ಅದೆಲ್ಲಾ ತಾಕಲೂ ಇಲ್ಲ. ಹೀಗೆ ಹನ್ನೆರಡು ವರ್ಷಗಳು ಬೇಕಾಯಿತು. ಬಿಹಾರದ ಜೃಂಬಿಕದಲ್ಲಿ ಕೇವಲಜ್ಞಾನ ಪ್ರಾಪ್ತವಾಯಿತು. ವರ್ಧಮಾನರು ಮಹಾವೀರರಾದರು. ಇಂದಿನ ಸ್ಥಿತಿ ಹೇಗಿದೆ ಎಂದರೆ ಮಹಾವೀರರ ಬೋಧನೆಗಳು ಯಾರದೋ ಹೇಳಿಕೆಗಳಾಗಿವೆ, ಅವರ ಇತಿಹಾಸವನ್ನು ಸಂಕ್ಷಿಪ್ತಗೊಳಿಸಿ, ಒಂದಿಡೀ ಧರ್ಮದ ಐತಿಹಾಸಿಕ ಮಹತ್ವವನ್ನು ತೆರೆ ಮರೆಗೆ ಸರಿಸಲಾಗಿದೆ. ಭಗವಾನರ ಸಂಪೂರ್ಣ ಚರಿತೆ, ಬೋಧನೆ ಮತ್ತು ಪರಿಣಾಮಗಳನ್ನು ಸಧ್ಯದಲ್ಲೇ ತಿಳಿಸುವ ಪ್ರಯತ್ನ ನಡೆಯಲಿದೆ. ಮಹಾವೀರ ಜಯಂತಿಯ ಶುಭಾಶಯಗಳು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post