ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಕೊರೋನಾ ವಿರುದ್ಧದ ಹೋರಾಟದಲ್ಲಿ ವೈದ್ಯರು, ನರ್ಸ್‌ಗಳು, ಪೊಲೀಸರು, ಆಶಾ ಕಾರ್ಯಕರ್ತೆರು ಸೇರಿದಂತೆ ಹಲವು ಸಾವಿರಾರು ಮಂದಿ ತಮ್ಮ ಜೀವವನ್ನೇ ಪಣಕ್ಕಿಟ್ಟು ತೊಡಗಿಸಿಕೊಂಡಿದ್ದಾರೆ. ಇವರುಗಳ ಕುರಿತು ಸಾಲು ಸಾಲು ಮೆಚ್ಚುಗೆಯ ಮಾತುಗಳು ಎಲ್ಲೆಡೆಯಿಂದ ಬರುತ್ತಲೇ ಇವೆ. ಆದರೆ, ಈ ಹೋರಾಟದ ಭಾಗವಾದ ಸ್ವಚ್ಚತೆ ಕಾಪಾಡುವ ಶ್ರೇಷ್ಠ ಕಾರ್ಯ ಮಾಡುತ್ತಿರುವ ಪೌರ ಕಾರ್ಮಿಕರ ಕುರಿತು ಯಾರೂ ಹೇಳುವುದಿಲ್ಲ. ಹೀಗಾಗಿ, ಇಂತಹ ವಿಚಾರವನ್ನು ತಿಳಿಸುವ ಪುಟ್ಟ ಪ್ರಯತ್ನ ಈ ಲೇಖನ..
ಬೆಂಗಳೂರಿನ ಬನಶಂಕರಿ 3 ನೆಯ ಹಂತದ ಗುರುದತ್ತ ಬಡಾವಣೆಯ ಅಚ್ಚು ಮೆಚ್ಚಿನ ವೀರ ಮಹಿಳೆಯರು ಇವರು ಸ್ವಚ್ಚತೆಯ ಹರಿಕಾರರು ಜಯಮ್ಮ ಮತ್ತು ಪರಿಮಳ. ಬಿಬಿಎಂಪಿಯ ಆರ್’ಆರ್ ನಗರ ವಾರ್ಡ್ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಇವರು ಲಾಕ್’ಡೌನ್’ನಿಂದ ವಾಹನಗಳ ಸಮಸ್ಯೆಯಾದರೂ ನಿತ್ಯ ಕೆಲಸಕ್ಕೆ ಹಾಜರಾಗುತ್ತಿದ್ದಾರೆ.
ಲಾಕ್’ಡೌನ್ ಹಿನ್ನೆಲೆಯಲ್ಲಿ ರಾಜ್ಯದ ಕೋಟ್ಯಂತರ ಜನರು ಮನೆಯಲ್ಲಿದ್ದಾರೆ, ಸ್ವಚ್ಚತೆ ಕಾಪಾಡಬೇಕಾದ ಇವರು ಕರ್ತವ್ಯ ನಿರ್ವಹಿಸಲೇಬೇಕಿದೆ.
ಬೆಂಗಳೂರಿನಲ್ಲಿ ಒಟ್ಟು 17 ಸಾವಿರ ಪೌರ ಕಾರ್ಮಿಕರಿದ್ದಾರೆ. ಕೊರೋನಾ ವೈರಸ್ ಸಾಂಕ್ರಾಮಿಕ ರೋಗವಾಗಿದ್ದು, ಇದನ್ನು ತಡೆಯಲು ಸ್ವಚ್ಚತೆಯೇ ಪ್ರಮುಖ ಅಸ್ತ್ರವಾಗಿದೆ. ಕೊರೋನಾ ಭೀತಿ – ಭಯ ನಮಗೂ ಇದೆ. ಆದರೆ ಕೆಲಸ ಬಿಡೋಕಾಗಲ್ಲ ಎನ್ನುತ್ತಾರೆ 55 ರ ಹರೆಯದ ಜಯಮ್ಮ ಮತ್ತು ಅವರಿಗೆ ಬೆಂಬಲ ನೀಡುವ ಅವರಿಗಿಂತ ಚಿಕ್ಕವರಾದ ಪರಿಮಳ.
ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಜೊತೆ ಮಾತನಾಡುತ್ತಾ ಅವರು ನಮಗೆ ಬಿಬಿಎಂಪಿ ಅವರು ಮಾಸ್ಕ್, ಗ್ಲೌಸ್, ಬೂಟು ಮತ್ತು ಸ್ಯಾನಿಟೈಸರ್ ಬಾಟ್ಲಿ ಕೊಟ್ಟಿದ್ದಾರೆ ಮತ್ತು ಅದನ್ನು ಕೆಲಸ ಮಾಡೋವಾಗ ಹಾಕ್ಕೋಬೇಕು ಅಂತ ಹೇಳಿದ್ದಾರೆ ಎನ್ನುತ್ತಾರೆ ಪರಿಮಳ!!
ದೂರ ನಿಂತ್ಕೊಂಡು ಕಸ ಹಾಕಿಸಿಕೊಳ್ತೀವಿ. ಆದರೆ ಯಾರ ಮನೇಲಿ ಯಾರಿಗೆ ಕೊರೋನಾ ಇದೆ ಅಂತಾ ಗೊತ್ತಿಲ್ಲ, ಅವರು ಕಸ ತರ್ತಾರೆ ನಾವು ಇಸ್ಕೋತೀವಿ. ನಮ್ಮ ರಿಸ್ಕ್ ನಮಗೆ ಎನ್ನುತ್ತಾರೆ.
ನಗರದ ನಾನಾ ಭಾಗಗಳಲ್ಲಿ ಸ್ವಚ್ಛತೆ ಮಾಡುವ ಈ ಜೋಡಿ ಬನಶಂಕರಿ 3 ನೇ ಹಂತದ ಗುರುದತ್ತ ಬಡಾವಣೆಯ ಸಮಸ್ತ ನಿವಾಸಿಗಳಿಗೆ ಅಚ್ಚು – ಮೆಚ್ಚು, ಕಾರಣ ಇವರ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುವ ಇವರ ಬಗ್ಗೆ ಅಪಾರ ಗೌರವ-ಪ್ರೀತಿ-ಅಭಿಮಾನ.
ಇವರಿಗೆ ಬಡಾವಣೆಯಲ್ಲಿ ಹಲವು ನಿವಾಸಿಗಳು ಕಾಫೀ-ಟೀ ಕುಡಿಯಲು ನೀಡುತ್ತಾರೆ ಅವರ ಮೇಲಿನ ಅಭಿಮಾನದಿಂದ!!
ಸದಾ ನಗರದ ಸ್ವಚ್ಛತೆ ಕಾಪಾಡುವ ಜಯಮ್ಮ ಮತ್ತು ಪರಿಮಳ ಇವರನ್ನು ಸಿಲಿಕಾನ್ ಸಿಟಿಯ ವೀರ ಮಹಿಳೆಯರು – ಸ್ವಚ್ಚತೆಯ ಹರಿಕಾರರು ಎಂದರೆ ಅತಿಶಯೋಕ್ತಿಯಲ್ಲ!
Get in Touch With Us info@kalpa.news Whatsapp: 9481252093
Discussion about this post