ಭದ್ರಾವತಿ: ಸೈನಿಕರ ಪರಿಶ್ರಮದಿಂದಾಗಿ ದೇಶವಾಸಿಗಳು ನೆಮ್ಮದಿಯ ಜೀವನ ಸಾಗಿಸಲು ಸಾಧ್ಯವಾಗಿದೆ ಎಂದು ಶಾಸಕ ಬಿ.ಕೆ. ಸಂಗಮೇಶ್ ಹೇಳಿದರು.
ನ್ಯೂಟೌನ್’ನಲ್ಲಿರುವ ಬಂಟರ ಭವನದಲ್ಲಿ ಏರ್ಪಡಿಸಿದ್ದ ತಾಲೂಕು ಮಾಜಿ ಸೈನಿಕರ ಸಂಘದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಸೇನೆಯಲ್ಲಿ ಸೇವೆ ಸಲ್ಲಿಸಿದ ನಂತರವೂ ಸಹ ಈ ರೀತಿ ಸಂಘ ಸ್ಥಾಪನೆ ಮಾಡಿಕೊಂಡು ಸಮಾಜದ ಒಳಿತಿಗಾಗಿ ಮಾಜಿ ಸೈನಿಕರು ಮುಂದಾಗಿರುವುದು ಸಂತಸದ ಸಂಗತಿ. ಊರಿನ ಅಭಿವೃದ್ಧಿಗೆ ಅಗತ್ಯವಾದ ಸಲಹೆ ಸೂಚನೆ ಜೊತೆಗೆ ವ್ಯವಸ್ಥೆಯಲ್ಲಿ ಕಂಡುಬರುವ ಅಂಕುಡೊಂಕು ಲೋಪದೋಷಗಳನ್ನೂ ಸಹ ಸಂಘದ ಸದಸ್ಯರು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರುವ ಕೆಲಸ ಮಾಡಿ ಎಲ್ಲರ ಒಳಿತಿಗಾಗಿ ಕೆಲಸ ಮಾಡಲಿ ಎಂದರು.
ನಗರಸಭೆ ವತಿಯಿಂದ ನಿರ್ಮಿಸಲು ಉದ್ದೇಶಿಸಿರುವ ವಸತಿ ಸಮುಚ್ಛಯದಲ್ಲಿ ನಿವೃತ್ತ ಸೈನಿಕರಿಗೆ 100 ಮನೆಗಳನ್ನು ಕೊಡಲಾಗುವುದು, ಅಗತ್ಯವಿರುವವರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಜಿಲ್ಲಾ ಉಪವಿಭಾಗಾಧಿಕಾರಿ ಟಿ.ವಿ. ಪ್ರಕಾಶ್, ಸೈನ್ಯದಲ್ಲಿ ಸಾಮಾನ್ಯ ಸಿಪಾಯಿಯಾಗಿ ಸೇವೆಸಲ್ಲಿಸಿ ನಿವೃತ್ತರಾಗಿ ಬಂದನಂತರ ಸಾಮಾನ್ಯ ನಾಗರಿಕನಾಗಿ ಬದುಕು ಕಟ್ಟಿಕೊಳ್ಳುವಲ್ಲಿ ಅವರು ಅನುಭವಿಸುವ ಆರ್ಥಿಕ ಮುಗ್ಗಟ್ಟಿನ ಬವಣೆ ಅನುಭವಿಸಿದವರಿಗಷ್ಠೇ ಅದನ್ನು ಅರಿಯಲು ಸಾಧ್ಯ ಎಂದು ಸೈನ್ಯದಲ್ಲಿ ಸೇವೆ ಸಲ್ಲಿಸುವಾಗ ತಮಗಾದ ಅನುಭವವನ್ನು ಹಂಚಿಕೊಂಡು ಮಾತನಾಡಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಸಂಘದ ಗೌರವಾಧ್ಯಕ್ಷ ನಿವೃತ್ತ ಎಡಿಸಿ ಡಾ. ಮೇಜರ್ ವಿಕ್ರಮ್ ಎಸ್. ಕೆದ್ಲಾಯ್, ಸೇನೆಯಲ್ಲಿ ಸೈನಿಕರಿಗೆ ಭಾರತವೇ ಮನೆ ಇಲ್ಲಿರುವವರೆಲ್ಲರೂ ಬಂಧುಗಳೆ ಸೇನೆಯಲ್ಲಿ ಮಾತ್ರ ಜಾತಿ, ಮತಗಳ ಭೇಧವಿಲ್ಲದೆ ಎಲ್ಲರೂ ಒಂದುಎಂಬ ಭಾವನೆಯಿಂದ ಬಾಳುವ ಮನಸ್ಥಿತಿ ಬೆಳೆಸಲಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ದಿವಂಗತ ಸೈನಿಕರಿಗೆ ಮೌನಾಚರಣೆ ಮೂಲಕ ಗೌರವ ಸಲ್ಲಿಸಿ ನಂತರ ಅವರ ಪರಿವಾರದವರಿಗೆ ಸನ್ಮಾನ ಮಾಡಲಾಯಿತು. ಉಚಿತ ರಕ್ತ ತಪಾಸಣೆ ಹಾಗೂ ರಕ್ತದಾನ ಶಿಬಿರ ನಡೆಸಲಾಯಿತು.
ವೇದಿಕೆಯಲ್ಲಿ ಸಂಘದ ಅಧ್ಯಕ್ಷ ಅಶೋಕ್, ಉಪಾಧ್ಯಕ್ಷ ದಿನೇಶ್ ಕುಮಾರ್, ನಗರಸಭಾ ಆಯುಕ್ತ ಮನೋಹರ್, ತಹಶೀಲ್ದಾರ್ ಸೋಮಶೇಖರ್, ನಿವೃತ್ತ ಎಎಂಸಿ ಡಾ.ಮೇಜರ್ ಯು.ಜೆ. ವೈದ್ಯ, ನಿವೃತ್ತ ಒಐಸಿ ಕಮಾಂಡರ್ ಬಿ. ಮಂಜುನಾಥ, ನಿವೃತ್ತ ಎಎಂಸಿ ಡಾ.ಪಿ.ಕೆ. ಲಕ್ಷ್ಮೀ, ಹೇಮಾವತಿ ವಿಶ್ವನಾಥ್ ಹಾಗೂ ಸಂಘದ ಕಾರ್ಯದರ್ಶಿ ವಿನೋದ್ ಪೂಜಾರಿ ಅವರುಗಳು ಉಪಸ್ಥಿತರಿದ್ದರು. ಮಹಿಳಾ ಸಮಾಜದವರು ಪ್ರಾರ್ಥಿಸಿ, ವೆಂಕಟೇಶ್ ಸ್ವಾಗತಿಸಿದರು.
(ವರದಿ: ಆರ್.ವಿ. ಕೃಷ್ಣ, ಭದ್ರಾವತಿ)
Get In Touch With Us info@kalpa.news Whatsapp: 9481252093, 94487 22200
Discussion about this post