ಸ್ಯಾಂಡಲ್ ವುಡ್‌ನ ಎಕ್ಸ್‌ಕ್ಯೂಸ್ ಮಿ ಚಿತ್ರ ಖ್ಯಾತಿ ನಟ ಹಾಗೂ ಗಾಯಕ ಸುನೀಲ್ ರಾವ್ ಇಂದು ವೈವಾಹಿಕ ಜೀವನಕ್ಕೆ ಕಾಲಿಟ್ಟರು.
ತಮ್ಮ ಗೆಳತಿ ಹಾಗೂ ಮನ ಮೆಚ್ಚಿದ ಚೆಲುವೆ ಶ್ರೇಯಾ ಅಯ್ಯರ್ ಜೊತೆಯಲ್ಲಿ ಇಂದು ಸಪ್ತಪದಿ ತುಳಿದ ಸುನೀಲ್, ತಮ್ಮ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ.

ಮೂಲತಃವಾಗಿ ಶ್ರೇಯಾ ಅಯ್ಯರ್ ವೃತ್ತಿಯಲ್ಲಿ ಕಾಸ್ಟ್ಯೂಮ್ ಡಿಸೈನರ್ ಆಗಿದ್ದಾರೆ. ಸುನೀಲ್ ಅಭಿನಯದ ವೆಬ್ ಸೀರಿಸ್ ಗೆ ಡಿಸೈನರ್ ಆಗಿ ಕೆಲಸ ಮಾಡಿದ್ದು ಸದ್ಯ ಟಕ್ಕರ್ ಚಿತ್ರಕ್ಕೂ ಇವರೇ ವಸ್ತ್ರ ವಿನ್ಯಾಸಕಿಯಾಗಿ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ.
ಶ್ರೇಯಾ ಹಾಗೂ ಸುನೀಲ್ ರಾವ್ ಅವರಿಗೆ ವೆಬ್ ಸೀರಿಸ್ ಚಿತ್ರೀಕರಣದ ಸಮಯದಲ್ಲಿ ಪರಿಚಯವಾಗಿತ್ತು. ಪರಿಚಯ ಪ್ರೀತಿಗೆ ತಿರುಗಿ ಈಗ ಇಬ್ಬರು ಮನೆಯವರ ಒಪ್ಪಿಗೆ ಪಡೆದು ಇಂದು ದಂಪತಿಗಳಾಗಿದ್ದಾರೆ.
ಖ್ಯಾತ ಗಾಯಕಿ ಬಿ.ಕೆ. ಸುಮಿತ್ರಾ ಅವರ ಪುತ್ರ ಸುನೀಲ್ ರಾವ್, ಬಾಲ ನಟನಾಗಿ ಸಿನಿಮಾರಂಗದಲ್ಲಿ ಗುರುತಿಸಿಕೊಂಡು, ನಂತರ ಗಾಯಕನಾಗಿ ಸಿನಿಮಾ ಪ್ರೇಕ್ಷಕರ ಮನಸ್ಸು ಗೆದ್ದು, ಎರಡರಲ್ಲೂ ಸೈ ಎನಿಸಿಕೊಂಡಿದ್ದರು.

ಎಕ್ಸ್‌ಕ್ಯೂಸ್ ಮಿ ಚಿತ್ರದ ನಂತರ ವೆಬ್ ಸೀರಿಸ್ ನಲ್ಲಿ ಅಭಿನಯಿಸಿ ಮತ್ತೆ ಚಿತ್ರರಂಗದಲ್ಲಿ ಸಕ್ರೀಯವಾಗಿದ್ದಾರೆ.
ತುರ್ತು ನಿರ್ಗಮನ ಚಿತ್ರದ ಮೂಲಕ ಸುನೀಲ್ ಮತ್ತೆ ಪ್ರೇಕ್ಷಕರ ಮುಂದೆ ಬರಲಿದ್ದು, ಸ್ಯಾಂಡಲ್ ವುಡ್ ನಲ್ಲಿ ಸೆಕೆಂಡ್ ಇನ್ನಿಂಗ್‌ಸ್ ಆರಂಭಿಸುವ ಸಂಭ್ರಮದೊಂದಿಗೆ, ನೂತನ ಜೀವನಕ್ಕೂ ಇಂದು ಕಾಲಿಟ್ಟಿದ್ದಾರೆ.















