ಸೊರಬ: ಭಾರತದಲ್ಲಿ ಗೇರು ಬೀಜಕ್ಕೆ ಹೆಚ್ಚು ಬೇಡಿಕೆ ಇದ್ದು ಅರ್ಧದಷ್ಟು ಉತ್ಪಾದನೆ ಇಲ್ಲದಿರುವುದು ವಿಪರ್ಯಾಸ. ರೈತರು ಆರ್ಥಿಕ ಸಬಲರಾಗಲು ಗೇರು ಕೃಷಿ ಬೆಂಬಲಿಸಬೇಕು. ನೀರಾವರಿ ಬೆಳೆಗಳಿಗೆ ಮಾನ್ಯತೆ ನೀಡದೆ ಗೇರು ಕೃಷಿಗೆ ರೈತರು ಒತ್ತು ನೀಡಬೇಕು ಎಂದು ಪುತ್ತೂರು ಗೇರು ಸಂಶೋಧನಾ ನಿರ್ದೇಶನಾಲಯದ ನಿವೃತ್ತ ವಿಜ್ಞಾನಿ ಯದುಕುಮಾರ್ ಹೇಳಿದರು.
ಪಟ್ಟಣದ ಎಪಿಎಂಸಿ ಆವರಣದಲ್ಲಿ ಕರ್ನಾಟಕ ಗೇರುಬೀಜ ಉತ್ಪಾದಕರ ಸಂಘ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ಜೆಸಿಐ ಸೊರಬ ವೈಜಯಂತಿ, ಗೇರು ಅಭಿವೃದ್ಧಿ ಮಂಡಳಿ ಪುತ್ತೂರು ಹಾಗೂ ಸೊರಬ ತೋಟಗಾರಿಕೆ ಇಲಾಖೆ ವತಿಯಿಂದ ಮಂಗಳವಾರ ಗೇರು ಬೆಳೆ ಅಭಿವೃದ್ಧಿ-ವಿಸ್ತರಣೆ ಮತ್ತು ಮಾರುಕಟ್ಟೆ ಕುರಿತು ಮಾಹಿತಿ ಕಾರ್ಯಾಗಾರದಲ್ಲಿ ಗೇರು ಕೃಷಿ ಬಗ್ಗೆ ಅವರು ಉಪನ್ಯಾಸ ನೀಡಿದರು.
ಕಡಿಮೆ ಖರ್ಚಿನಲ್ಲಿ ಹೆಚ್ಚು ಉತ್ಪಾದನೆ ಮಾಡುವ ಏಕೈಕ ಬೆಲೆ ಗೇರು ಕೃಷಿಯಾಗಿದೆ. ಮೂರ್ನಾಲ್ಕು ವರ್ಷ ಗಿಡಗಳನ್ನು ಉತ್ತಮವಾಗಿ ರಕ್ಷಿಸಿ ಬೆಳೆಸಿದ್ದಲ್ಲಿ ನಂತರ ಗೇರು ಕುಟುಂಬವನ್ನು ಬೆಳೆಸುತ್ತದೆ. ಚಿಗುರು ಹಾಗೂ ಕಾಯಿ ಬಂದಾಗ ಗೊಬ್ಬರ, ಔಷಧೋಪಚಾರ ಕ್ರಮಬದ್ದವಾಗಿ ಮಾಡಬೇಕು ಎಂದರು.
ತೋಟಗಾರಿಕ ಇಲಾಖೆ ಸಹಾಯಕ ನಿರ್ದೇಶಕ ಸೋಮಶೇಖರ್ ಮಾತನಾಡಿ, ಇತ್ತೀಚಿನ ವರ್ಷಗಳಲ್ಲಿ ಮಲೆನಾಡಿನಲ್ಲಿ ಮಳೆಯ ಪ್ರಮಾಣ ಕಡಿಮೆಯಾಗುತ್ತಿದ್ದು, ಗೇರು ಕೃಷಿಯಿಂದ ಆರ್ಥಿಕ ಅಭಿವೃದ್ಧಿ ಹೊಂದಬಹುದು. ರೈತರು ಪಾಳುಬಿದ್ದ ಜಮೀನಿನಲ್ಲಿಯೂ ಗೇರು ಕೃಷಿ ಕೈಗೊಳ್ಳಬಹುದು. ಗೇರು ಕೃಷಿಗೆ ತೋಟಗಾರಿಕೆ ಇಲಾಖೆಯಿಂದ ಆರ್ಥಿಕ ನೆರವು ನೀಡಲಾಗುವುದು ಎಂದರು.
ಎಪಿಎಂಸಿ ಅಧ್ಯಕ್ಷ ಎಲ್.ಜಿ.ರಾಜಶೇಖರ್ ಅಧ್ಯಕ್ಷತೆ ವಹಿಸಿದ್ದರು. ಜೆಸಿಐ ಸೊರಬ ವೈಜಯಂತಿ ಅಧ್ಯಕ್ಷ ಪ್ರಶಾಂತ್ ದೊಡ್ಡಮನೆ ಕಾರ್ಯಕ್ರಮವನ್ನು ನಿರ್ವಹಿಸಿದರು.
ಪುತ್ತೂರು ನವನೀತ್ ನರ್ಸರಿ ಮಾಲಿಕ ವೇಣುಗೋಪಾಲ್, ಎಪಿಎಂಸಿ ಉಪಾಧ್ಯಕ್ಷ ಜಯಶೀಲಗೌಡ, ಸದಸ್ಯರಾದ ಜೈಶೀಲಪ್ಪ, ಕಾರ್ಯದರ್ಶಿ ಶೈಲಜಾ, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಸೋಮಶೇಖರ್, ತಾಲೂಕು ರೈತ ಸಂಘದ ಅಧ್ಯಕ್ಷ ಉಮೇಶ್ ಪಾಟೀಲ, ವಾಸುದೇವರಾವ್ ಬೆನ್ನೂರು, ಶ್ರೀಧರ ನೆಮ್ಮದಿ, ಸರಸ್ವತಿ ಪ್ರಶಾಂತ ಮೇಸ್ತ್ರಿ, ಲೋಲಾಕ್ಷ್ಮಮ್ಮ ಇತರರಿದ್ದರು.
(ವರದಿ: ಮಧುರಾಮ್, ಸೊರಬ)

















